418 Movie Trailer: ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಬಂದ ನಟಿ ಚೈತ್ರಾ ಆಚಾರ್; ರೂಮ್ ನಂ. 418ರಲ್ಲಿ ಅಂಥದ್ದೇನಿದೆ?
418 Movie Trailer: ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ʻ418ʼ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಚೈತ್ರಾ ಆಚಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತನ್ ನಾಡಗೌಡ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್ 23ರಂದು ಐದು ಭಾಷೆಗಳಲ್ಲಿ ತೆರೆಕಾಣಲಿದೆ.
-
ಬಹುನಿರೀಕ್ಷಿತ ಹಾರರ್-ಥ್ರಿಲ್ಲರ್ ‘418’ ಚಿತ್ರದ ಕನ್ನಡ ಹಾಗೂ ಹಿಂದಿ ಆವೃತ್ತಿಯ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದೆ. ʻಕೆಜಿಎಫ್ʼ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಕೀರ್ತನ್ ನಾಡಗೌಡ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಡಿ ಖ್ಯಾತ ನಿರ್ಮಾಪಕರಾದ ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಈ ಸಸ್ಪೆನ್ಸ್-ಹಾರರ್ ಚಿತ್ರಕ್ಕೆ ಭರ್ಜರಿ ಬಂಡವಾಳ ಹೂಡಿದ್ದಾರೆ.
ಗಮನಸೆಳೆದ ಟ್ರೇಲರ್!
"ಆ ಮನೆಯೊಳಗೆ ಒಂದು ಹಕ್ಕಿಯೂ ಕಾಲಿಟ್ಟಿಲ್ಲ" ಎಂಬ ವಾಚ್‌ಮನ್‌ನ ಸಂಭಾಷಣೆಯೊಂದಿಗೆ ಟ್ರೇಲರ್ ಆರಂಭವಾಗಲಿದ್ದು, ಆರಂಭದಿಂದಲೇ ಭಯ ಹುಟ್ಟಿಸುವ ಎಲಿಮೆಂಟ್ಸ್ ಈ ಟ್ರೇಲರ್‌ನಲ್ಲಿವೆ. ಮೊದಲಾರ್ಧವು ವಾಸ್ತವ ಮತ್ತು ಕಲ್ಪನೆಗಳ ನಡುವಿನ ಸೈಕಲಾಜಿಕಲ್ ಥ್ರಿಲ್ಲರ್‌ನಂತೆ ಸಾಗಿದರೆ, ದ್ವಿತೀಯಾರ್ಧದಲ್ಲಿ ಸೂಪರ್‌ನ್ಯಾಚುರಲ್ ಹಾಗೂ ಹಾರರ್ ಅಂಶಗಳ ಭಯಾನಕ ಸಮ್ಮಿಶ್ರಣದೊಂದಿಗೆ ತಿರುವು ಪಡೆದುಕೊಳ್ಳುತ್ತದೆ.
ಯಾವುದೇ ಅನಗತ್ಯ ಹಾಸ್ಯ ಅಥವಾ ಕಮರ್ಷಿಯಲ್ ಮಸಾಲೆಗಳಿಗೆ ಅವಕಾಶ ನೀಡದೆ, ನಿರ್ದೇಶಕ ಕೀರ್ತನ್ ನಾಡಗೌಡ ಪ್ರತಿಯೊಂದು ದೃಶ್ಯದಲ್ಲೂ ಪ್ರೇಕ್ಷಕರ ಎದೆಬಡಿತ ಹೆಚ್ಚಿಸುವಂತೆ ಗಂಭೀರವಾಗಿ ಕಥೆಯನ್ನು ನಿರೂಪಿಸಲಿದ್ದಾರೆ ಎಂಬುದು ಈ ಟ್ರೇಲರ್‌ನಿಂದ ಗೊತ್ತಾಗುತ್ತಿದೆ.
ಚೈತ್ರಾ ಆಚಾರ್ ಲುಕ್‌ಗೆ ಭಾರಿ ಮೆಚ್ಚುಗೆ
ವಿಶೇಷವಾಗಿ ನಟಿ ಚೈತ್ರಾ ಆಚಾರ್ ಅವರ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಭಯಾನಕ ಲುಕ್ ಟ್ರೇಲರ್‌ನ ಪ್ರಮುಖ ಹೈಲೈಟ್ ಆಗಿ ಮೂಡಿಬಂದಿದೆ. ದೇವಿಕಾಳ ಗೆಜ್ಜೆ ಶಬ್ದದ ದೃಶ್ಯ ನೋಡುಗರಲ್ಲಿ ನಿಜವಾದ ನಡುಕ ಹುಟ್ಟಿಸುತ್ತದೆ. ಉಳಿದಂತೆ ಸೂರ್ಯ ರಾಜ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ ಹಾಗೂ ಶಶಾಂಕ್ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾಂತ್ರಿಕವಾಗಿಯೂ ಚಿತ್ರ ಉನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದ್ದು, ದಿನೇಶ್ ದಿವಾಕರ್ ಅವರ ಕ್ಯಾಮೆರಾ ಕೈಚಳಕ ಎದ್ದು ಕಾಣುತ್ತದೆ. ವೆಂಕಿ ಜಿಜಿ ಅವರ ರೋಮಾಂಚಕ ಹಿನ್ನೆಲೆ ಸಂಗೀತವು ಟ್ರೇಲರ್‌ಗೆ ಬಲ ತುಂಬಿದ್ದರೆ, ಉಲ್ಲಾಸ್ ಹೈದೂರ್ ಅವರ ಕಲಾ ನಿರ್ದೇಶನ ಪ್ರತಿಯೊಂದು ಫ್ರೇಮ್‌ಗೂ ಜೀವಂತಿಕೆ ತಂದಿದೆ.
ಅಕ್ಟೋಬರ್ 23ರಂದು ಬಿಡುಗಡೆ
ಹಾರರ್ ಮತ್ತು ನಿಗೂಢ ಕಥಾಹಂದರದ ಸಿನಿಮಾಗಳನ್ನು ಇಷ್ಟಪಡುವ ಚಿತ್ರಪ್ರೇಮಿಗಳಿಗೆ ‘418’ ಸಿನಿಮಾ ಹೊಸ ಅನುಭವ ನೀಡುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧಗೊಂಡಿರುವ ಈ ಚಿತ್ರವು ಅಕ್ಟೋಬರ್ 23 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.