ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಅವರನ್ನು ಮೊದಲ ಬಾರಿಗೆ ಹೀರೋ ಮಾಡಿದ್ದು ನಿರ್ದೇಶಕ ಸುಜಯ್ ಶಾಸ್ತ್ರಿ. ʻಎಲ್ರ ಕಾಲೆಳಿಯತ್ತೆ ಕಾಲʼ ಚಿತ್ರದ ಮೂಲಕ ಹೀರೋ ಆದ ಚಂದನ್, ಆ ಸಿನಿಮಾ ತೆರೆಗೆ ಬರುವುದಕ್ಕೂ ಮುನ್ನವೇ ಬೇರೆ ಬೇರೆ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದರು. ಇದೀಗ ಮೊದಲು ಒಪ್ಪಿಕೊಂಡಿದ್ದ ʻಎಲ್ರ ಕಾಲೆಳಿಯತ್ತೆ ಕಾಲʼ ತೆರೆಗೆ ಬಂದಿದೆ. ಈ ಸಿನಿಮಾ ಹೇಗಿದೆ? ಮುಂದೆ ಓದಿ.
ʻಎಲ್ರ ಕಾಲೆಳಿಯತ್ತೆ ಕಾಲʼ ಕಥೆ ಏನು?
ನಿರ್ದೇಶಕ ಸುಜಯ್ ಶಾಸ್ತ್ರಿ ರೆಟ್ರೋ ಕಾಲಘಟ್ಟದಲ್ಲಿ ಈ ಸಿನಿಮಾವನ್ನು ನಿರೂಪಣೆ ಮಾಡಿದ್ದಾರೆ. ಇಡೀ ಕಥೆಯು ಇದ್ನೋಡು ಎಂಬ ಊರಿನಲ್ಲಿ ನಡೆಯುತ್ತದೆ. ಆ ಊರಿಗೆ ಆಚಾನಕ್ ಆಗಿ ಬರುವ ವಿಜಯ್ (ಚಂದನ್ ಶೆಟ್ಟಿ), ಅಲ್ಲಿಯೇ ಕೆಲ ದಿನಗಳ ಕಾಲ ಇರಬೇಕಾಗುತ್ತದೆ. ಆ ಊರಿನಲ್ಲಿ ಸಮಯವೇ ತೋರಿಸುವುದಿಲ್ಲ. ಅರ್ಥಾತ್, ಇದ್ನೋಡು ಊರಿನಲ್ಲಿ ಯಾರ ಗಡಿಯಾರ ನಡೆಯುವುದಿಲ್ಲ. ದೇವಸ್ಥಾನದ ಗಂಟೆ, ಬಿಸಿಲನ್ನು ನೋಡಿಕೊಂಡು ಸಮಯವನ್ನು ತಿಳಿದುಕೊಳ್ಳುತ್ತಿರುತ್ತಾರೆ ಆ ಊರಿನ ಜನ. ಇದು ವಿಜಯ್‌ಗೆ ಸಾಕಷ್ಟು ವಿಚಿತ್ರ ಎನಿಸುತ್ತದೆ. ಅಲ್ಲದೆ, ಆ ಊರಿನಿಂದ ಆದಷ್ಟು ಬೇಗ ಜಾಗ ಮಾಡಿ, ತನ್ನೂರು ಬೆಂಗಳೂರಿಗೆ ಹೋಗಿ ಸೇರಿಕೊಳ್ಳಬೇಕು ಅಂತ ವಿಜಯ್ ಯೋಚಿಸುತ್ತಿರುತ್ತಾನೆ. ಆದರೆ ಅದು ಕೂಡ ಸಾಧ್ಯವಾಗೋದಿಲ್ಲ.
Chandan Shetty : ವಯಸ್ಸಾದ ಮೇಲೆ ಒಂಟಿತನ ಕಾಡುತ್ತೆ; ಎರಡನೇ ಮದುವೆ ಬಗ್ಗೆ ಚಂದನ್ ಶೆಟ್ಟಿ ಮಾತು
ಅಂದುಕೊಂಡ ಸಮಯಕ್ಕೆ ಇದ್ನೋಡು ಊರಿನಿಂದ ವಿಜಯ್ ಏಕೆ ಹೊರಗೆ ಹೋಗಲು ಸಾಧ್ಯವಾಗೋದಿಲ್ಲ? ಅಷ್ಟಕ್ಕೂ ಆ ಊರಿನಲ್ಲಿ ಯಾಕೆ ಗಡಿಯಾರ ನಡೆಯೋದಿಲ್ಲ ಎಂಬುದೇ ಕೂತೂಹಲ. ಅದೆಲ್ಲದಕ್ಕೂ ಕ್ಲೈಮ್ಯಾಕ್ಸ್‌ನಲ್ಲಿ ಉತ್ತರವಿದೆ. ಈ ಥರದ ವಿಚಿತ್ರ, ವಿಭಿನ್ನ ಕಥೆಯೊಂದನ್ನು ಕಾಮಿಡಿ ಝಲಕ್‌ನೊಂದಿಗೆ ತೋರಿಸಿದ್ದಾರೆ ನಿರ್ದೇಶಕ ಸುಜಯ್.
ಮೇಕಿಂಗ್ ಹೇಗಿದೆ?
ಸಿನಿಮಾವನ್ನು ರೆಟ್ರೋ ಕಾಲಘಟ್ಟದಲ್ಲಿ ಕಟ್ಟಿಕೊಡುವುದರಲ್ಲಿ ಸುಜಯ್ ಭಾಗಶಃ ಗೆದ್ದಿದ್ದಾರೆ. ಅದಕ್ಕೆ ಛಾಯಾಗ್ರಹಕ ವಿಶ್ವಜಿತ್ ರಾವ್ ಅವರ ಎಫರ್ಟ್ ಜಾಸ್ತಿಯೇ ಇದೆ. ಜೊತೆಗೆ ಪ್ರವೀಣ್ - ಪ್ರದೀಪ್ ಅವರ ಹಿನ್ನೆಲೆ ಸಂಗೀತವು ಈ ಚಿತ್ರಕ್ಕೊಂದು ಆಸ್ತಿ ಆಗಿದೆ. ಇನ್ನು, ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವುದು ರಾಜ್‌ಗುರು ಹೊಸಕೋಟೆ. ಕಥೆಯಲ್ಲಿ ಹೊಸತನವಿದೆಯಾದರೂ, ಚಿತ್ರಕಥೆಯಲ್ಲಿ ಇನ್ನಷ್ಟು ತಾಜಾತನ ಇರಬೇಕಿತ್ತು. ಜೊತೆಗೆ ಸಾಕಷ್ಟು ಮಂದಿ ಹಾಸ್ಯ ಕಲಾವಿದರಿದ್ದರೂ, ಕಾಮಿಡಿಗೆ ಏನೋ ಕೊರತೆ ಎಂಬ ಫೀಲ್ ಮೂಡುತ್ತದೆ. ಒಂದಷ್ಟು ಕಾಮಿಡಿ ಪಂಚಿಂಗ್ ಸಂಭಾಷಣೆಯನ್ನು ಸೇರಿಸಿದ್ದರೆ, ಇನ್ನಷ್ಟು ಮಜಾವಾಗಿರುತ್ತಿತ್ತು ʻಎಲ್ರ ಕಾಲೆಳಿಯತ್ತೆ ಕಾಲʼ. ಬರವಣಿಗೆಯು ಇನ್ನಷ್ಟು ಪಕ್ವತೆಯಿಂದ ಕೂಡಿದಿದ್ದರೆ ಚೆನ್ನಾಗಿರುತಿತ್ತು. ಎಲ್ಲಾ ಕಲಾವಿದರನ್ನು ಉತ್ತಮವಾಗಿಯೇ ದುಡಿಸಿಕೊಂಡಿದ್ದಾರೆ ನಿರ್ದೇಶಕ ಸುಜಯ್.
ʻಎಲ್ರ ಕಾಲೆಳಿಯತ್ತೆ ಕಾಲʼ ಸಿನಿಮಾ ಟ್ರೇಲರ್ ರಿಲೀಸ್; ಈ ಚಿತ್ರದಲ್ಲಿ ಚಂದನ್ ಶೆಟ್ಟಿ ನಟಿಸಲು ಕಾರಣ ಇಲ್ಲಿದೆ!
ಚಂದನ್ ಶೆಟ್ಟಿ ನಟನೆ ಹೇಗಿದೆ?
ಚಂದನ್ ಶೆಟ್ಟಿಗೆ ಇದು ಮೊದಲ ಸಿನಿಮಾವಾದರೂ, ಉತ್ತಮವಾಗಿಯೇ ನಟಿಸುವ ಪ್ರಯತ್ನ ಮಾಡಿದ್ದಾರೆ. ಇದ್ನೋಡು ಊರಿನಲ್ಲಿ ಸಿಲುಕಿ ಒದ್ದಾಡುವ ಯುವಕನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅರ್ಚನಾ ಕೊಟ್ಟಿಗೆ ಅವರ ಅಭಿನಯದ ಎಂದಿನಂತೆ ಸಹಜತೆಯಿಂದ ಕೂಡಿದೆ. ಹೀರೋ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಜಯ್ ಶಾಸ್ತ್ರಿ, ಕಾಮಿಡಿ ಅಲ್ಲಲ್ಲಿ ತುಸು ಓವರ್ ಎನಿಸುತ್ತದೆ. ರಾಕೇಶ್ ಪೂಜಾರಿ ಇದ್ದಷ್ಟು ಹೊತ್ತು ನಗಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಮಂಜು ಪಾವಗಡ, ಮಂಡ್ಯ ರಮೇಶ್, ತಾರಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
Movie: ಎಲ್ರ ಕಾಲೆಳಿಯತ್ತೆ ಕಾಲ
Release Date: ಏ.24, 2026
Language: ಕನ್ನಡ
Genre: ಡ್ರಾಮಾ, ಕಾಮಿಡಿ
Director: ಸುಜಯ್ ಶಾಸ್ತ್ರಿ
Cast: ಚಂದನ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ತಾರಾ ಅನುರಾಧ, ಸುಜಯ್ ಶಾಸ್ತ್ರಿ, ರಾಕೇಶ್ ಪೂಜಾರಿ, ಮಂಜು ಪಾವಗಡ, ಮಂಡ್ಯ ರಮೇಶ್,
Rating: 3/5