ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ನಿರ್ಮಿಸಿರುವ ʻಎಲ್ರ ಕಾಲೆಳಿಯತ್ತೆ ಕಾಲʼ ಚಿತ್ರಕ್ಕೆ ಸುಜಯ್ ಶಾಸ್ತ್ರಿ ನಿರ್ದೇಶನ ಮಾಡಿದ್ದು, ಇದು ಚಂದನ್ ಶೆಟ್ಟಿ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ ಸಿನಿಮಾ. 90ರ ಕಾಲಘಟ್ಟದ ರೆಟ್ರೊ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರವು ಏಪ್ರಿಲ್ 17ರಂದು ಬಿಡುಗಡೆಯಾಗುತ್ತಿದ್ದು, ಸದ್ಯ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಚಂದನ್ ಶೆಟ್ಟಿ ಈ ಸಿನಿಮಾವನ್ನು ಒಪ್ಪಿಕೊಂಡಿದ್ದೇಕೆ?
"ನಾನು ಈ ಸಿನಿಮಾದಲ್ಲಿ ನಟಿಸುವುದಕ್ಕೆ ಮುಖ್ಯ ಕಾರಣ, ಇದರ ಕಥೆ. ನಿಜಕ್ಕೂ ಇದೊಂದು ಅದ್ಭುತವಾದ ಕಥೆ. ಇಂತಹ ಚಿತ್ರವನ್ನು ದಯವಿಟ್ಟು ಎಲ್ಲರೂ ನೋಡಿ ಗೆಲ್ಲಿಸಬೇಕು. ನಾಯಕನಾಗಿ ಇದು ನನಗೆ ಮೊದಲ ಚಿತ್ರವಾಗಿದೆ. ನಾನು ಮೊದಲು ಒಪ್ಪಿದ್ದು ಇದೇ ಸಿನಿಮಾವನ್ನು. ಸುಜಯ್ ಶಾಸ್ತ್ರಿ, ರಾಜಗುರು ಹೊಸಕೋಟೆ ಅವರೆಲ್ಲಾ ರಂಗಭೂಮಿ ಹಿನ್ನೆಲೆಯವರು. ಅವರು ಒಂದು ರೀತಿ ಶಾಲೆ ಇದ್ದ ಹಾಗೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಟ್ರೇಲರ್‌ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಕ್ಕಿದೆ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವ ಒಂದೊಳ್ಳೆ ಚಿತ್ರವಿದು. ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಮಾಡಿರುವ ಈ ಕನ್ನಡ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ" ಎನ್ನುತ್ತಾರೆ ಚಂದನ್ ಶೆಟ್ಟಿ.
Chandan Shetty-Niveditha: ಬಾಹ್ಯ ಸೌಂದರ್ಯಕ್ಕಿಂತ ಅವರ ಮನಸ್ಸನ್ನು ಪ್ರೀತಿಸಿಬೇಕು: ಚಂದನ್ ಶೆಟ್ಟಿ ನೇರ ಮಾತು
ರಾಜಗುರು ಹೊಸಕೋಟೆ ಬರೆದಿರುವ ಸ್ಕ್ರಿಪ್ಟ್ ಇದು
"ಮೊದಲಿಗೆ ಕೇಳಿದನ್ನೆಲ್ಲಾ ಕೊಟ್ಟು ಒಂದೊಳ್ಳೆ ಚಿತ್ರ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಧನ್ಯವಾದಗಳು. ರಿಯಾಲಿಟಿ ಶೋವೊಂದರಲ್ಲಿ ಚಂದನ್ ಶೆಟ್ಟಿ ಅವರನ್ನು ನೋಡಿದ ನನಗೆ ನಮ್ಮ ಕಥೆಗೆ ಇವರು ಸೂಕ್ತ ನಾಯಕ ಅಂತ ಅನಿಸಿತು. ನಂತರ ಚಂದನ್ ಶೆಟ್ಟಿ ಅವರಿಗೆ ನನ್ನ ಗೆಳೆಯ ರಾಜಗುರು ಹೊಸಕೋಟೆ ಬರೆದಿರುವ ಕಥೆ ಹೇಳಿದೆ. ಅವರು ಅಭಿನಯಿಸಲು ಒಪ್ಪಿದರು. ಚಿತ್ರೀಕರಣಕ್ಕೂ ಮುನ್ನ ಪೂರ್ವತಯಾರಿ ನೀಡಲಾಯಿತು. ಈ ಚಿತ್ರಕ್ಕಾಗಿ ಚಂದನ್ ಶೆಟ್ಟಿ ಬಹಳ ಶ್ರಮ ಪಟ್ಟಿದ್ದಾರೆ. ನಾಯಕಿ ಅರ್ಚನಾ ಕೊಟ್ಟಿಗೆ ಸಹ ಉತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲರ ಮನಸ್ಸಿಗೂ ಹತ್ತಿರವಾಗುವಂತಹ ಕಥೆಯನ್ನು ರಾಜಗುರು ಹೊಸಕೋಟೆ ಬರೆದಿದ್ದಾರೆ" ಎಂದು ಹೇಳುತ್ತಾರೆ ನಿರ್ದೇಶಕ ಸುಜಯ್ ಶಾಸ್ತ್ರಿ.
Chandan Shetty-Niveditha: ಅಮ್ಮ ಕಾಲ್ ಮಾಡಿ ಕಣ್ಣೀರು ಹಾಕ್ತಾರೆ: ಚಂದನ್ ಶೆಟ್ಟಿ ಭಾವುಕ
ಈ ಸಿನಿಮಾಕ್ಕೆ ಪ್ರವೀಣ್ - ಪ್ರದೀಪ್ ಸಂಗೀತವನ್ನು ನೀಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಚಂದನ್ ಶೆಟ್ಟಿ, ಅರ್ಚನಾ ಕೊಟ್ಟಿಗೆ ಜೊತೆಗೆ ಸುಜಯ್ ಶಾಸ್ತ್ರಿ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ. ಮಂಜು ಪಾವಗಡ, ಮಾಹಂತೇಶ್, ಅನಂತ ಪದ್ಮನಾಭ, ತಾರಾ, ರಾಕೇಶ್ ಪೂಜಾರಿ ಮುಂತಾದವರು ಬಣ್ಣ ಹಚ್ಚಿದ್ದಾರೆ.