ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳುನಾಡು ರಾಜಕಾರಣದಲ್ಲಿ ʻಸೀಟಿʼ ಊದಿಕೊಂಡೇ ಸುನಾಮಿ ಎಬ್ಬಿಸಿದ ನಟ ವಿಜಯ್; ‌ʻದಳಪತಿʼ ಗೆಲುವಿಗೆ ಸಂಭ್ರಮಿಸಿದ ಚಿತ್ರರಂಗ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ 'ಟಿವಿಕೆ' ಪಕ್ಷವು ಐತಿಹಾಸಿಕ ಗೆಲುವು ಸಾಧಿಸುತ್ತಿರುವ ಬೆನ್ನಲ್ಲೇ ಭಾರತೀಯ ಚಿತ್ರರಂಗ ಸಂಭ್ರಮಿಸುತ್ತಿದೆ. ಮೊದಲ ಪ್ರಯತ್ನದಲ್ಲೇ ಅಧಿಕಾರದ ಗದ್ದುಗೆ ಏರುತ್ತಿರುವ ನಟ ವಿಜಯ್ ಅವರಿಗೆ ಮೆಗಾಸ್ಟಾರ್ ಚಿರಂಜೀವಿ, ಕಮಲ್ ಹಾಸನ್, ಸೂರ್ಯ ಮತ್ತು ನಾನಿ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ತಮಿಳುನಾಡು ಚುನಾವಣೆಯಲ್ಲಿ ಟಿವಿಕೆ ಪಕ್ಷವು ಭರ್ಜರಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಇಷ್ಟು ದಿನ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ ನಟ ʻದಳಪತಿʼ ವಿಜಯ್, ಈಗ ಚುನಾವಣಾ ಕಣದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ತಮಿಳುನಾಡಿನ ಚುನಾವಣಾ ಕಣದಲ್ಲಿ ಸುನಾಮಿ ಎಬ್ಬಿಸಿದ್ದಾರೆ. ರಾಜಕೀಯಕ್ಕೆ ಕಾಲಿಟ್ಟ ಮೊದಲ ಪ್ರಯತ್ನದಲ್ಲೇ ಸ್ವಂತವಾಗಿ ಸರ್ಕಾರ ರಚಿಸುವತ್ತ ವಿಜಯ್ ಹೆಜ್ಜೆ ಹಾಕುತ್ತಿರುವುದಕ್ಕೆ ಚಿತ್ರರಂಗದ ಗಣ್ಯರು ಸೋಶಿಯಲ್‌ ಮೀಡಿಯಾ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಶುಭ ಹಾರೈಸಿದ ಕಮಲ್‌ ಹಾಸನ್

ಡಿಎಂಕೆ ಜೊತೆ ಕೈಜೋಡಿಸಿರುವ ನಟ ಕಮಲ್‌ ಹಾಸನ್ ಅವರು, ದಳಪತಿ ವಿಜಯ್‌ಗೆ ಶುಭ ಹಾರೈಸಿದ್ದಾರೆ. "ವಿಜಯಶಾಲಿ ತಮಿಳಗ ವೆಟ್ರಿ ಕಳಗಂ ನಾಯಕ ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ನನ್ನ ಅಭಿನಂದನೆಗಳು. ಅವರು ಜನರ ವಿಶ್ವಾಸವನ್ನು ಗಳಿಸಿದ್ದಾರೆ ಮತ್ತು ತಮ್ಮ ಮೊದಲ ಚುನಾವಣೆಯಲ್ಲಿಯೇ ಅದ್ಭುತ ಗೆಲುವು ಸಾಧಿಸಿದ್ದಾರೆ. ಅವರ ಸಾರ್ವಜನಿಕ ಸೇವೆಯು ಅಭಿವೃದ್ಧಿ ಹೊಂದಲಿ ಎಂದು ನನ್ನ ಶುಭಾಶಯಗಳು" ಎಂದು ಕಮಲ್‌ ಹಾಸನ್‌ ತಿಳಿಸಿದ್ದಾರೆ.

ʻಮೆಗಾ ಸ್ಟಾರ್‌ʼ ಚಿರಂಜೀವಿ ಏನಂದ್ರು?

ಪ್ರೀತಿಯ ವಿಜಯ್‌, ನಿಮ್ಮ ಮೊದಲ ಚುನಾವಣೆಯಲ್ಲಿ ಈ ಅತ್ಯುತ್ತಮ ಮತ್ತು ಅರ್ಹವಾದ ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವು ನಿರಂತರ ಉತ್ಸಾಹ ಮತ್ತು ಉದ್ದೇಶದಿಂದ ಸ್ಫೂರ್ತಿ, ನಾಯಕತ್ವ ಮತ್ತು ಸೇವೆಯನ್ನು ಮುಂದುವರಿಸಲಿ. ತಮಿಳುನಾಡು ರಾಜ್ಯ ಮತ್ತು ಅದರ ಜನರಿಗೆ ನಿಮ್ಮ ಸಾರ್ವಜನಿಕ ಸೇವೆಗಾಗಿ ನನ್ನ ಶುಭಾಶಯಗಳು" ಎಂದು ತೆಲುಗು ನಟ ಚಿರಂಜೀವಿ ಹೇಳಿದ್ದಾರೆ. ಅವರ ಸೋದರಳಿಯ, ನಟ ಸಾಯಿ ಧರಮ್‌ ತೇಜ್‌ ಅವರು, "ವಿಸಿಲ್ ಪೋಡು ವಿಜಯ್ ಅಣ್ಣ. ಇದು ನಿಮ್ಮ ಸಂಕಲ್ಪ ಮತ್ತು ಶ್ರಮಕ್ಕೆ ಸಿಕ್ಕ ಐತಿಹಾಸಿಕ ಗೆಲುವು. ಒಬ್ಬ ನಟ ಅಥವಾ ದೇವರಿಗಿಂತ ಮಿಗಿಲಾಗಿ ಜನ ಪ್ರೀತಿಯಿಂದ ಎಲ್ಲ ಅಂದಾಜುಗಳನ್ನು ತಲೆಕೆಳಗೆ ಮಾಡಿದಾಗ ಸಿಗುವ ಆನಂದವೇ ಬೇರೆ. ತಮಿಳುನಾಡು ಜನರು ಬಯಸಿದ ಬದಲಾವಣೆಯನ್ನು ನೀವು ತರುತ್ತೀರಿ ಎಂದು ಆಶಿಸುತ್ತೇನೆ" ಎಂದು ಟ್ವೀಟ್‌ ಮಾಡಿದ್ದಾರೆ.

ʻಮೆಗಾ ಸ್ಟಾರ್‌ʼ ಟ್ವೀಟ್



ನಾನಿ ಮಾಡಿದ ಟ್ವೀಟ್‌ನಲ್ಲಿ ಏನಿದೆ?

ವಿಜಯ್‌ಗೆ ಅಭಿನಂದನೆ ಸಲ್ಲಿಸಿರುವ ತೆಲುಗು ನಟ ನಾನಿ, ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್‌ಗೆ ಸಿಕ್ಕ ಗೆಲುವನ್ನು ಉಲ್ಲೇಖಿಸಿದ್ದಾರೆ. "ವಿಜಯ್ ಸರ್, ನಿಮಗೆ ಅಭಿನಂದನೆಗಳು. ಮೊದಲು ನಿಮ್ಮ ಬಗ್ಗೆ ಸಂದೇಹ ವ್ಯಕ್ತಪಡಿಸಿದರು, ಆದರೆ ನೀವು ವಿಜೇತರಾಗಿ ನಿಂತಿದ್ದೀರಿ. ನಮ್ಮ ಮನೆಯಲ್ಲಿ (ಆಂಧ್ರಪ್ರದೇಶ) ನಡೆದದ್ದು ಈಗ ಪಕ್ಕದ ಮನೆಯಲ್ಲಿ (ತಮಿಳುನಾಡು) ನಡೆಯುತ್ತಿದೆ. ಅಂಡರ್‌ಡಾಗ್ ಗೆಲ್ಲುವುದೇ ಅಸಲಿ ಸಿನಿಮಾ ಅಥವಾ ಅಸಲಿ ರಾಜಕೀಯ ಅಂದುಕೊಳ್ಳಬೇಕಾ? ತಮಿಳುನಾಡು ಜನರು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ" ಎಂದು ನಾನಿ ಹೇಳಿದ್ದಾರೆ.

TVK: ಮೊದಲ ಸಿನಿಮಾದಲ್ಲೇ ನಟ ವಿಜಯ್ ಭವಿಷ್ಯ ನಿರ್ಧಾರವಾಗಿತ್ತಾ? ʻದಳಪತಿʼ ಲೆಕ್ಕಾಚಾರದ ಮುಂದೆ ಎಲ್ಲವೂ ಉಲ್ಟಾಪಲ್ಟಾ!

"ತಮ್ಮ ಮೊದಲ ಚುನಾವಣಾ ಸ್ಪರ್ಧೆಯಲ್ಲೇ ಜನರಲ್ಲಿ ಅಗಾಧವಾದ ಪ್ರಭಾವ ಬೀರಿ ಈ ಗೆಲುವು ಸಾಧಿಸಿದ್ದಕ್ಕಾಗಿ ವಿಜಯ್ ಅವರಿಗೆ ಅಭಿನಂದನೆಗಳು. ನೀವು ಚಿತ್ರೋದ್ಯಮದಿಂದ ಬಂದವರು ಎಂಬುದು ಮತ್ತಷ್ಟು ಸಂತೋಷ ತಂದಿದೆ, ನಿಮ್ಮ ಸಾರ್ವಜನಿಕ ಸೇವೆ ಬೆಳಗಲಿ ಎಂದು ಹಾರೈಸುತ್ತೇನೆ ಸರ್.."‌ ಎಂದು ನಟ ಶಿವಕಾರ್ತಿಕೇಯನ್‌ ಹೇಳಿದರೆ, "ಇದೊಂದು ವೈರಲ್ ಕ್ರಾಂತಿ. ಜನರೇ ಸರ್ವೋಚ್ಚ ಎಂದು ನೀವು ನಿರೂಪಿಸಿದ್ದೀರಿ" ಎಂದು ನಟಿ ವರಲಕ್ಷ್ಮಿ ಶರತ್‌ಕುಮಾರ್ ಹೇಳಿದ್ದಾರೆ. ಸಂಗೀತ ನಿರ್ದೇಶಕ ಜಿ ವಿ ಪ್ರಕಾಶ್‌ ಕುಮಾರ್‌, "ಇಂತಹ ಗೆಲುವು ಹಿಂದೆಂದೂ ಕಂಡಿಲ್ಲ, ಮುಂದೆಯೂ ಬರಲಿಕ್ಕಿಲ್ಲ" ಎಂದು ಕೊಂಡಾಡಿದ್ಧಾರೆ.

ನಟ ಸೂರ್ಯ ಅವರ ಟ್ವೀಟ್



ವಿಜಯ್ ಮೇಲೆ ತಮಿಳುನಾಡು ನಂಬಿಕೆ ಇಟ್ಟಿದೆ

"ಜನರ ಪ್ರೀತಿ ಮತ್ತು ಬೆಂಬಲ ಪಡೆಯುವುದು ಒಂದು ಆಶೀರ್ವಾದ. ನನ್ನ ಸ್ನೇಹಿತ ವಿಜಯ್ ಮೇಲೆ ತಮಿಳುನಾಡು ಅಪಾರ ನಂಬಿಕೆ ಇಟ್ಟಿದೆ. ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿರುವ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ನಟ ಸೂರ್ಯ ಹೇಳಿದರೆ, ತೆಲುಗು ನಟ ವಿಜಯ್‌ ದೇವರಕೊಂಡ, "ವಿಜಯ್‌ ಅವರೇ, ತಮಿಳುನಾಡಿನ ಜನರು ಮತ ಚಲಾಯಿಸಲು ಮತ್ತು ತಮ್ಮ ಪರವಾಗಿ ನಿಲ್ಲಲು ಬಲವಾಗಿ ಬಂದಿದ್ದಕ್ಕಾಗಿ ನನ್ನ ಮೆಚ್ಚುಗೆ ಮತ್ತು ಅಭಿನಂದನೆಗಳು. ತಮಿಳುನಾಡಿನ ಎಲ್ಲಾ ಜನರು ಮತ್ತು ಹೊಸ ಮುಖ್ಯಮಂತ್ರಿಗೆ ಎಲ್ಲಾ ಸಮೃದ್ಧಿ ಮತ್ತು ಸಾಮೂಹಿಕ ಬೆಳವಣಿಗೆಯನ್ನು ಹಾರೈಸುತ್ತೇನೆ. ತಮಿಳು ರಾಜಕೀಯದ ಈ ಹೊಸ ಹಂತ, ಹೊಸ ಮುಖವನ್ನು ನೋಡಲು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.