TVK: ಮೊದಲ ಸಿನಿಮಾದಲ್ಲೇ ನಟ ವಿಜಯ್ ಭವಿಷ್ಯ ನಿರ್ಧಾರವಾಗಿತ್ತಾ? ʻದಳಪತಿʼ ಲೆಕ್ಕಾಚಾರದ ಮುಂದೆ ಎಲ್ಲವೂ ಉಲ್ಟಾಪಲ್ಟಾ!
Tamil Nadu Election Results 2026: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಅವರ 'ಟಿವಿಕೆ' ಪಕ್ಷ ಅಭೂತಪೂರ್ವ ಜಯಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಬಾಲ್ಯದ 'ವೆಟ್ರಿ' ಸಿನಿಮಾದಿಂದ ಆರಂಭವಾದ ಅವರ ವಿಜಯಯಾನ, ಇಂದು ಮುಖ್ಯಮಂತ್ರಿ ಗದ್ದುಗೆಯವರೆಗೆ ಬಂದು ನಿಂತಿದೆ. ತಮಿಳು ರಾಜಕಾರಣದ ಹೊಸ ಯುಗದ ಆರಂಭವಾಗಿದೆ.
-
ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶವನ್ನೇ ಅಚ್ಚರಿಗೆ ನೂಕಿದೆ. ತಮ್ಮ ಹೊಸ ಪಕ್ಷವನ್ನು ಅಡಳಿತಕ್ಕೆ ತರುವಲ್ಲಿ ನಟ ದಳಪತಿ ವಿಜಯ್ ಬಹುತೇಕ ಸಫಲರಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ. ಆದರೆ, ನಿಮಗೆ ಗೊತ್ತೇ ವಿಜಯ್ ಅವರಿಗೆ ʻವಿಜಯʼ ಎಂಬುದು ಮೊದಲ ಸಿನಿಮಾದಿಂದಲೇ ಸಿಕ್ಕಿತ್ತು.
ʻವೆಟ್ರಿʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ
ತಮಿಳಿನಲ್ಲಿ ʻವೆಟ್ರಿʼ ಎಂದರೆ, ವಿಜಯ ಎಂದರ್ಥ. ನಟ ವಿಜಯ್ ಅವರ ಮೊದಲ ಸಿನಿಮಾದ ಹೆಸರು ಕೂಡ ʻವೆಟ್ರಿʼ. ಆ ಚಿತ್ರದಲ್ಲಿ ವಿಜಯ್ ಅವರು ಬಾಲನಟರಾಗಿ ಕಾಣಿಸಿಕೊಂಡಿದ್ದರು. ವಿಜಯ್ ತಂದೆ ಎಸ್ ಎ ಚಂದ್ರಶೇಖರ್ ನಿರ್ದೇಶಿಸಿದ್ದ ʻವೆಟ್ರಿʼ ಸಿನಿಮಾದಲ್ಲಿ ಹೀರೋ ಆಗಿದ್ದವರು ವಿಜಯಕಾಂತ್. ಅವರ ಹೆಸರಿನಲ್ಲಿಯೂ ʻವಿಜಯʼ ಇರುವುದು ಕಾಕತಾಳೀಯ. ಆ ಸಿನಿಮಾದಲ್ಲಿ ವಿಜಯಕಾಂತ್ ಅವರ ಬಾಲ್ಯದ ಪಾತ್ರವನ್ನು ನಟ ವಿಜಯ್ ನಿರ್ವಹಿಸಿದ್ದರು. ಬಾಲ್ಯದಲ್ಲೇ ವೆಟ್ರಿಯನ್ನು ಜೊತೆಗಿಟ್ಟುಕೊಂಡೇ ಬಂದರು ವಿಜಯ್. ಇನ್ನು, ವಿಜಯ್ ಅವರ ಪಾರ್ಟಿ ಹೆಸರಿನಲ್ಲಿಯೂ (ತಮಿಳಗ ವೆಟ್ರಿ ಕಳಗಂ) ವೆಟ್ರಿ ಇರೋದನ್ನು ಗಮನಿಸಬಹುದು.
Vijay-Trisha: ವಿಚ್ಛೇದನ ಪ್ರಕರಣದ ನಡುವೆ ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!
1984ರಲ್ಲಿ ತೆರೆಕಂಡ ʻವೆಟ್ರಿʼ ನಂತರ ಮತ್ತೊಂದಿಷ್ಟು ಸಿನಿಮಾಗಳಲ್ಲಿ ವಿಜಯ್ ಬಾಲನಟರಾಗಿ ಕಾಣಿಸಿಕೊಂಡರು. ಆ ಎಲ್ಲಾ ಸಿನಿಮಾಗಳನ್ನು ವಿಜಯ್ ಅವರ ತಂದೆ ಎಸ್ ಎ ಚಂದ್ರಶೇಖರ್ ಅವರೇ ನಿರ್ದೇಶನ ಮಾಡಿದ್ದರು. ತಮ್ಮ ಮಗನನ್ನು ಹೇಗಾದರೂ ಮಾಡಿ ನಟನನ್ನಾಗಿ ಕಾಲಿವುಡ್‌ನಲ್ಲಿ ನೆಲೆ ನಿಲ್ಲಸಬೇಕು ಎಂಬುದು ಅವರ ಆದಮ್ಯ ಆಸೆ ಆಗಿತ್ತು. 1992ರಲ್ಲಿ ತೆರೆಕಂಡ ʻನಾಳಯ ತೀರ್ಪುʼ ಸಿನಿಮಾದ ಮೂಲಕ ಮಗನನ್ನು ಹೀರೋ ಕೂಡ ಮಾಡಿದರು. ಅಂದು ವಿಜಯ್ ಮೊದಲ ಸಿನಿಮಾಗೆ ʻನಾಳೆಯ ತೀರ್ಪುʼ ಎಂದು ಹೆಸರಿಡಲಾಗಿತ್ತು. ಇಂದು ತಮಿಳುನಾಡಿನ ರಾಜಕಾರಣದ ತೀರ್ಪು ಏನಾಗಿದೆ ಎಂಬುದನ್ನು ಇಡೀ ದೇಶವೇ ನೋಡುತ್ತಿದೆ. ಇದೆಲ್ಲವನ್ನು ಕಾಕತಾಳೀಯ ಎನ್ನಬಹುದು.
ಕಾಲಿವುಡ್‌ನ ಜನಪ್ರಿಯ ನಟ ವಿಜಯ್
90ರ ದಶಕದಲ್ಲಿ ವಿಜಯ್ ಕಾಲಿವುಡ್‌ನ ಬೇಡಿಕೆಯ ನಟರಾಗಿ ಬೆಳೆದರು. ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್ ಅವರಂತಹ ದೊಡ್ಡ ದೊಡ್ಡ ಸ್ಟಾರ್‌ಗಳ ನಡುವೆಯೂ ವಿಜಯ್ ತಮ್ಮದೇ ಆದ ಸ್ಥಾನವನ್ನು ಭದ್ರ ಮಾಡಿಕೊಂಡರು. 2000ರ ನಂತರ ತಮ್ಮ ಓರೆಗೆಯ ನಟರಾದ ಸೂರ್ಯ, ವಿಕ್ರಮ್, ಅಜಿತ್ ಮುಂತಾದವರ ಜೊತೆಗೆ ಪೈಪೋಟಿ ಮಾಡುತ್ತಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಅದರಲ್ಲೂ ಕಳೆದ 15 ವರ್ಷಗಳಲ್ಲಿ ವಿಜಯ್ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದ ರೀತಿ ಅಮೋಘ.
ರಾಜಕೀಯದ ಬಗ್ಗೆ ತುಟಿಬಿಚ್ಚಿದವರಲ್ಲ!
ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಹಿರಂಗವಾಗಿ ರಾಜಕೀಯಕ್ಕೆ ಬರುವ ಸೂಚನೆ ನೀಡಿದರು. ಆದರೆ, ಪಕ್ಷ ಸ್ಥಾಪಿಸಲಿಲ್ಲ, ರಾಜಕಾರಣಕ್ಕೆ ಬರಲೇ ಇಲ್ಲ. ಕಮಲ್ ಹಾಸನ್ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷ ಸ್ಥಾಪಿಸಿ, ಚುನಾವಣಾ ಅಖಾಡಕ್ಕಿಳಿದು ಮಣ್ಣು ಮುಕ್ಕಿದರು. ಆದರೆ ವಿಜಯ್ ಅವರ ಹಾದಿ ಮಾತ್ರ ಬೇರೆಯದೇ ರೀತಿಯಲ್ಲಿತ್ತು. ಸಣ್ಣ ಸುಳಿವು ಕೂಡ ನೀಡದೇ ಅಖಾಡಕ್ಕೆ ದೊಡ್ಡದಾಗಿ ಬಂದರು. ವಿಜಯ್ ರಾಜಕೀಯಕ್ಕೆ ಬರುತ್ತಾರೆ ಎಂಬ ಗುಲ್ಲೆದ್ದರೂ, ಬಹಿರಂಗವಾಗಿ ಹೇಳಿಕೆ ನೀಡುವುದರಲಿ, ಆ ಬಗ್ಗೆ ಸಣ್ಣ ಪ್ರತಿಕ್ರಿಯೆಯನ್ನು ನೀಡಲಿಲ್ಲ ವಿಜಯ್. ಆದರೆ ಹಿನ್ನೆಲೆಯಲ್ಲಿ ಏನು ಮಾಡಬೇಕಿತ್ತೋ, ಅದೆಲ್ಲವನ್ನೂ ಸದ್ದಿಲ್ಲದೇ ವಿಜಯ್ ಮಾಡುತ್ತಲೇ ಇದ್ದರು.
ಎರಡೇ ವರ್ಷದಲ್ಲಿ ಅಧಿಕಾರದತ್ತ
ರಾಜಕೀಯಕ್ಕೆ ಬರುವುದರ ಬಗ್ಗೆ ಯಾವುದೇ ಸೂಚನೆ ನೀಡದ ವಿಜಯ್, 2024ರಲ್ಲಿ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದರು. ಮೊದಲ ಆರೇಳು ತಿಂಗಳು ಅಷ್ಟೇನೂ ಅಗ್ರೆಸ್ಸಿವ್ ಆಗಿರದ ಅವರು ನಂತರ ಸಕ್ರಿಯವಾಗಿ ಅಖಾಡಕ್ಕಿಳಿದರು. ತಮಿಳುನಾಡನ್ನು ಸುತ್ತಿ ಪ್ರಚಾರ ಸಭೆಗಳನ್ನು ಮಾಡಿದರು. ಹಲವು ಅಡ್ಡಿಗಳು ಎದುರಾದರೂ, ಅದ್ಯಾವುದನ್ನೂ ಲೆಕ್ಕಿಸದೇ, ಚುನಾವಣೆ ಮೇಲಷ್ಟೇ ಗಮನವಿಟ್ಟರು. "ವೆಟ್ರಿ ನಿಚಯಂ.. (ವಿಜಯ ನಿಶ್ಚಯ) ವೆಟ್ರಿ ನಿಚಯಂ.." ಎನ್ನುತ್ತಲೇ ಕಾರ್ಯಕರ್ತರನ್ನು ಹುರಿದುಂಬಿಸಿದರು. ವಿಜಯ್ ಅವರ ಲೆಕ್ಕಾಚಾರಗಳು, ನಡೆಗಳು ಎಷ್ಟು ನಿಗೂಢವಾಗಿತ್ತೆಂದರೆ, ಎಕ್ಸಿಟ್ ಪೋಲ್‌ಗಳಿಗೂ ವಿಜಯ್ ಜಾಡನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿರುವ ವಿಜಯ್, ಇದೀಗ ಮುಂದಿನ ಸಿಎಂ ಆಗುವತ್ತು ದಾಪುಗಾಲಿಟ್ಟಿದ್ದಾರೆ.