KVN Productions: ಟಾಲಿವುಡ್‌ಗೆ ಕಾಲಿಟ್ಟ ಕೆವಿಎನ್ ಪ್ರೊಡಕ್ಷನ್ಸ್; ಚಿರಂಜೀವಿ ನಟನೆಯ ಚಿತ್ರ ನಿರ್ಮಾಣ
Mega 158: ಸದ್ಯ ಅದ್ಧೂರಿ ಚಿತ್ರ ನಿರ್ಮಾಣದ ಮೂಲಕ ಗಮನ ಸೆಳೆದ ಬೆಂಗಳೂರು ಮೂಲದ ಕೆವಿಎನ್ ಪ್ರೊಡಕ್ಷನ್ಸ್ ತಮಿಳಿನ ಬಳಿಕ ಇದೀಗ ತೆಲುಗಿಗೆ ಕಾಲಿಟ್ಟಿದೆ. ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿದೆ.


ಹೈದರಾಬಾದ್: ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ, ಕರ್ನಾಟಕ ಮೂಲದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ನಿರ್ಮಾಣ ಹಾಗೂ ವಿತರಣೆಯಲ್ಲಿ ದೊಡ್ಡ ಹೆಸರು ಮಾಡಿರುವ ಈ ಸಂಸ್ಥೆ ಈಗ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ನಟನೆಯ ಸಿನಿಮಾ ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಈಗಾಗಲೇ ಬಹುನಿರೀಕ್ಷಿತ ʼಟಾಕ್ಸಿಕ್ʼ, ʼಕೆಡಿʼ, ಜನ ನಾಯಕನ್ʼ ಸಿನಿಮಾ ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಚಿರಂಜೀವಿ ಅಭಿನಯದ ಚಿತ್ರ ನಿರ್ಮಿಸಲು ಮುಂದಾಗಿದೆ. ಸದ್ಯ ಶೀರ್ಷಿಕೆ ಅಂತಿಮಗೊಳ್ಳದ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ʼಮೆಗಾ 158ʼ (Mega 158) ಎಂದು ಹೆಸರಿಡಲಾಗಿದೆ.
ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನ ನಾಯಕನ್' ಚಿತ್ರ ನಿರ್ಮಾಣ ಮಾಡುವ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟ ಕೆವಿನ್ ತೆಲುಗಿನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಇದು ಚಿರಂಜೀವಿ ಅವರ 158ನೇ ಸಿನಿಮಾ ಎನ್ನುವುದು ವಿಶೇಷ.
ಚಿರಂಜೀವಿ ಅವರ 70ನೇ ಹುಟ್ಟುಹಬ್ಬದ ವಿಶೇಷವಾಗಿ ಆಗಸ್ಟ್ 22ರಂದು ಈ ಪ್ರಾಜೆಕ್ಟ್ ಅನೌನ್ಸ್ ಮಾಡಲಾಗಿದೆ. ಈ ಹಿಂದೆ ʼವಾಲ್ತೇರು ವೀರಯ್ಯʼ ಸಿನಿಮಾ ಮಾಡಿದ್ದ ಬಾಬಿ ಕೊಲ್ಲಿ ಮತ್ತೊಮ್ಮೆ ಚಿರುಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Daali Dhananjay Birthday: ಡಾಲಿ ಧನಂಜಯ್‌ಗೆ ಹುಟ್ಟುಹಬ್ಬದ ಸಂಭ್ರಮ; ಹೊರಬಿತ್ತು ʼಜಿಂಗೋʼ ಚಿತ್ರದ ಪೋಸ್ಟರ್
ಚಿರಂಜೀವಿ-ಬಾಬಿ-ಕೆವಿಎನ್ ಕಾಂಬಿನೇಷನ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೂಡಿ ಬರಲಿದೆ. ಈ ಚಿತ್ರವನ್ನು ದಸರಾ ವೇಳೆಗೆ ಲಾಂಚ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ವರ್ಷದ ಕೊನೆಗೆ ಶೂಟಿಂಗ್ ಆರಂಭವಾಗಲಿದೆ.
ಸದ್ಯ ಚಿರಂಜೀವಿ ʼವಿಶ್ವಂಭರʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾವನ್ನು ಮಲ್ಲಡಿ ವಸಿಷ್ಟ ನಿರ್ದೇಶಿಸುತ್ತಿದ್ದು, ತ್ರಿಷಾ ಕೃಷ್ಣನ್, ಕನ್ನಡತಿ ಆಶಿಕಾ ರಂಗನಾಥ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಶಾ ಚಾವ್ಲಾ, ಕುನಾಲ್ ಕಪೂರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರ ಮುಂದಿನ ವರ್ಷ ತೆರೆ ಕಾಣಲಿದೆ. ತೆಲುಗಿನ ಜತೆಗೆ ಹಿಂದಿ ಮತ್ತು ತಮಿಳಿನಲ್ಲೂ ರಿಲೀಸ್ ಆಗಲಿದ್ದು, ಇದರ ಬಜೆಟ್ ಬರೋಬ್ಬರಿ 250 ಕೋಟಿ ರೂ. ಫ್ಯಾಂಟಸಿ ಆ್ಯಕ್ಷನ್ ಶೈಲಿಯ ಚಿತ್ರ ಇದಾಗಿದ್ದು, ಈಗಾಗಲೆ ನಿರೀಕ್ಷೆ ಮೂಡಿಸಿದೆ. 2023ರಲ್ಲಿ ಬಿಡುಗಡೆಯಾದ ಚಿರಂಜೀವಿ ನಟನೆಯ ʼಭೋಲ ಶಂಕರ್ʼ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದ್ದರಿಂದ ʼವಿಶ್ವಂಭರʼ ಚಿತ್ರದ ಮೇಲೆ ಭರವಸೆ ಇಟ್ಟಿದ್ದಾರೆ.
ಇದರೊಂದಿಗೆ ಚಿರಂಜೀವಿ ಇನ್ನೂ 3 ಚಿತ್ರಗಳನ್ನು ಒಪ್ಪಿಕೊಂಡಿದ್ದು, ಅಧಿಕೃತ ಘೋಷಣೆ ಹೊರ ಬೀಳಲಿದೆ. ಸದ್ಯ ಕೆವಿನ್‌ನ ಚಿತ್ರ ಕುತೂಹಲ ಮೂಡಿಸಿದ್ದು ನಾಯಕಿ ಸೇರಿದಂತೆ ಇತರ ತಾರಾಗಣ, ತಂತ್ರಜ್ಞರ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.