ವರ್ಷಾರಂಭದಲ್ಲೇ ಮೆಗಾ ಸ್ಟಾರ್ ಚಿರಂಜೀವಿ ಅವರು ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಕಂಡಿದ್ದ 'ಮನ ಶಂಕರ ವರಪ್ರಸಾದ್ ಗಾರು' (Mana Shankara Varaprasad Garu) ಸಿನಿಮಾವು 15 ದಿನಗಳಲ್ಲೇ ದೊಡ್ಡ ಗಳಿಕೆ ಮಾಡುವ ಮೂಲಕ ಚಿರು ಜರ್ನಿಗೆ ಹೊಸ ಬೂಸ್ಟ್ ನೀಡಿದೆ. ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾವನ್ನು ಚಿರಂಜೀವಿ ಅಭಿಮಾನಿಗಳು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ.
15 ದಿನಗಳಿಗೆ 358 ಕೋಟಿ ರೂ. ಗಳಿಕೆ
ಹೌದು, ಚಿರಂಜೀವಿ, ನಯನತಾರಾ ನಟನೆಯ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾವು ತೆಲುಗಿನಲ್ಲಿ ಮಾತ್ರ ತೆರೆಕಂಡಿದ್ದು, ಮೊದಲ 15 ದಿನಗಳಿಗೆ 358 ಕೋಟಿ ರೂ. ಗಳಿಕೆ ಮಾಡಿ, ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕರ್ನಾಟಕದಿಂದಲೇ ಈ ಸಿನಿಮಾಕ್ಕೆ 20+ ಕೋಟಿ ರೂ. ಹಣ ಗಳಿಕೆ ಆಗಿರುವುದು ಅಚ್ಚರಿ ಮೂಡಿಸಿದೆ. ಇದು ಚಿರಂಜೀವಿ ಅವರ ಕ್ರೇಜ್ ಎಂಥದ್ದು ಎಂಬುದಕ್ಕೆ ಸಣ್ಣ ಉದಾಹರಣೆ ಆಗಿದೆ.
ಇನ್ನು, ವರದಿಗಳ ಪ್ರಕಾರ, 'ಮನ ಶಂಕರ ವರಪ್ರಸಾದ್ ಗಾರು' (Mana Shankara Varaprasad Garu) ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದು, ಚಿರಂಜೀವಿ ಅವರ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ.
ಚಿರಂಜೀವಿ ಟಾಪ್ 5 ಸಿನಿಮಾಗಳು
ಚಿರಂಜೀವಿ ನಟನೆಯ ಅತ್ಯಧಿಕ ಗಳಿಕೆ ಮಾಡಿದ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ ಈಗ 'ಮನ ಶಂಕರ ವರ ಪ್ರಸಾದ್ ಗಾರು' ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನವು ಸೈರಾ ನರಸಿಂಹ ರೆಡ್ಡಿ, ವಾಲ್ತೇರು ವೀರಯ್ಯ ಸಿನಿಮಾಗಳಿಗೆ ಸಿಕ್ಕಿದೆ. ಇನ್ನು, 'ಮನ ಶಂಕರ ವರ ಪ್ರಸಾದ್ ಗಾರು' ಸಿನಿಮಾದ ನಿರ್ಮಾಣದ ಖರ್ಚು ಬರೀ 28 ಕೋಟಿ ರೂ. ಗಳಾಗಿದ್ದು, ಸಂಭಾವನೆ, ಇನ್ನಿತರ ಖರ್ಚುಗಳು ಸೇರಿದರೆ, ಆ ಮೊತ್ತ 150 ಕೋಟಿ ರೂ. ದಾಟುತ್ತದೆ. ಆದರೂ ಚಿರು, ವಿಕ್ಟರಿ ವೆಂಕಟೇಶ್, ನಯನತಾರ ಅವರಂತಹ ಸ್ಟಾರ್ ಕಲಾವಿದರು ಇದ್ದಾಗ್ಯೂ ಬರೀ 28 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿರುವುದಕ್ಕೆ ನಿರ್ದೇಶಕ ಅನಿಲ್ ರವಿಪುಡಿ ಅವರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರತಂಡ ಹಂಚಿಕೊಂಡ ಕಲೆಕ್ಷನ್ ಮಾಹಿತಿ
ಚಿರಂಜೀವಿ, ನಯನತಾರ ಜೊತೆಗೆ ವೆಂಕಿ ಗೌಡ ಎಂಬ ಅತಿಥಿ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಕ್ಯಾಥರಿನ್ ಥ್ರೆಸಾ, ಸುದೇವ್ ನಾಯರ್, ಸಚಿನ್ ಖೇಡ್ಕರ್, ಜರೀನಾ ವಹಾಬ್, ಶರತ್ ಸಕ್ಸೇನಾ, ರಘು ಬಾಬು, ಹರ್ಷ ವರ್ಧನ್, ಅಭಿನವ್ ಗೋಮಠಂ, ಹರ್ಷ ಚೆಮುಡು, ಶ್ರೀನಿವಾಸ್ ರೆಡ್ಡಿ ಮುಂತಾದವರು ನಟಿಸಿದ್ದಾರೆ.