ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಚಿತ್ರಕ್ಕೆ ತಿಂಗಳಿಗೂ ಮೊದಲೇ ಅಡ್ವಾನ್ಸ್‌ ಬುಕ್ಕಿಂಗ್; ಇದು ಜಗತ್ತಿನ ಮೊದಲ ಸಂಪೂರ್ಣ ಐಮ್ಯಾಕ್ಸ್ ಸಿನಿಮಾ!

ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಚಿತ್ರದ ಐಮ್ಯಾಕ್ಸ್ ಟಿಕೆಟ್ ಬುಕ್ಕಿಂಗ್ ಜೂನ್ 8 ರಿಂದ ಭಾರತದಲ್ಲಿ ಆರಂಭವಾಗಲಿದೆ ಎಂದು ವಾರ್ನರ್ ಬ್ರದರ್ಸ್ ಘೋಷಿಸಿದೆ. ಹೋಮರ್ ಮಹಾಕಾವ್ಯದ ಆಧರಿತ, ಸಂಪೂರ್ಣ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡ ಜಗತ್ತಿನ ಮೊದಲ ಚಿತ್ರ ಇದಾಗಿದೆ.

ಸಿನಿಮಾ ಪ್ರಿಯರು ಚಾತಕಪಕ್ಷಿಯಂತೆ ಕಾಯುತ್ತಿದ್ದ ಆ ಕ್ಷಣ ಕೊನೆಗೂ ಬಂದಿದೆ. ಹಾಲಿವುಡ್‌ನ ಮಾಂತ್ರಿಕ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ, ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಮತ್ತು ವಿಶಿಷ್ಟ ಪ್ರಯೋಗ ಎನಿಸಿಕೊಂಡಿರುವ ‘ದಿ ಒಡಿಸ್ಸಿ’ (The Odyssey) ಚಿತ್ರದ ಐಮ್ಯಾಕ್ಸ್ ಟಿಕೆಟ್ ಬುಕ್ಕಿಂಗ್ ದಿನಾಂಕ ಅಧಿಕೃತವಾಗಿ ಪ್ರಕಟಗೊಂಡಿದೆ. ಭಾರತೀಯ ಚಿತ್ರಪ್ರೇಮಿಗಳು ಜೂನ್ 8 ರಿಂದಲೇ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದು ಎಂದು ಜಾಗತಿಕ ವಿತರಕ ಸಂಸ್ಥೆ ವಾರ್ನರ್ ಬ್ರದರ್ಸ್ ಘೋಷಿಸಿದೆ.

ಸಂಪೂರ್ಣ ಐಮ್ಯಾಕ್ಸ್‌ನಲ್ಲಿ ಮೂಡಿಬಂದ ಜಗತ್ತಿನ ಮೊದಲ ಸಿನಿಮಾ

ಇದುವರೆಗೆ ಬಂದಿರುವ ಐಮ್ಯಾಕ್ಸ್ ಸಿನಿಮಾಗಳಲ್ಲಿ ಕೇವಲ ಕೆಲವು ಪ್ರಮುಖ ದೃಶ್ಯಗಳನ್ನು ಮಾತ್ರ ಐಮ್ಯಾಕ್ಸ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗುತ್ತಿತ್ತು. ಆದರೆ, ‘ದಿ ಒಡಿಸ್ಸಿ’ ಇಡೀ ಸಿನಿಮಾ ಇತಿಹಾಸದಲ್ಲೇ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣವಾಗಿ ಅತ್ಯಾಧುನಿಕ ಐಮ್ಯಾಕ್ಸ್ ಫಿಲ್ಮ್ ತಂತ್ರಜ್ಞಾನ ಮತ್ತು ಕ್ಯಾಮೆರಾಗಳನ್ನು ಬಳಸಿ ಜಗತ್ತಿನಾದ್ಯಂತ ಚಿತ್ರೀಕರಣಗೊಂಡ ಮೊದಲ ಐತಿಹಾಸಿಕ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾವನ್ನು ಜುಲೈ 17 ರಂದು ವಿಶ್ವಾದ್ಯಂತ ಏಕಕಾಲದಲ್ಲಿ ಬೆಳ್ಳಿತೆರೆಯ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.

ಹಾಲಿವುಡ್‌ನ ‘ಅನಕೊಂಡ’ ಚಿತ್ರದ ಕರ್ನಾಟಕದ ವಿತರಣೆ ಹಕ್ಕುಗಳನ್ನು ಪಡೆದ ಹೊಂಬಾಳೆ ಫಿಲ್ಮ್ಸ್‌

ಹೋಮರ್ ಮಹಾಕಾವ್ಯಕ್ಕೆ ನೋಲನ್ ಸ್ಪರ್ಶ

ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರು ಗ್ರೀಕ್ ಪುರಾಣದ ಪ್ರಸಿದ್ಧ ಲೇಖಕ ಹೋಮರ್ ಬರೆದ ಮಹಾಕಾವ್ಯವನ್ನು ಇಲ್ಲಿ ತೆರೆಗೆ ತರುತ್ತಿದ್ದಾರೆ. ಟ್ರಾಯ್ ಮಹಾಯುದ್ಧ ಮುಗಿದ ನಂತರ ಇಥಾಕಾದ ರಾಜ ಒಡಿಸ್ಸಿಯಸ್ ತನ್ನ ತಾಯ್ನಾಡಿಗೆ ಮರಳಲು ಸಮುದ್ರ ಮಾರ್ಗದಲ್ಲಿ ನಡೆಸುವ ಹತ್ತು ವರ್ಷಗಳ ಭೀಕರ, ರೋಮಾಂಚನಕಾರಿ ಮತ್ತು ಅಪಾಯಕಾರಿ ಪ್ರಯಾಣವೇ ಈ ಚಿತ್ರದ ಮುಖ್ಯ ಕಥಾಹಂದರವಾಗಿದೆ. ಇದನ್ನು ನೋಲನ್ ತಮ್ಮದೇ ಆದ ವಿಭಿನ್ನ ಶೈಲಿಯ ನಿರೂಪಣೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಹಲವು ತಾರೆಯರ ನಟನೆ

ಈ ಚಿತ್ರದಲ್ಲಿ ಒಡಿಸ್ಸಿಯಸ್ ಆಗಿ ವರ್ಸಟೈಲ್ ನಟ ಮ್ಯಾಟ್ ಡಾಮನ್ ನಟಿಸಿದ್ದರೆ, ಅವರ ಮಗ ಟೆಲಿಮ್ಯಾಕಸ್ ಪಾತ್ರದಲ್ಲಿ ಟಾಮ್ ಹಾಲೆಂಡ್ ಮತ್ತು ಪೆನೆಲೋಪ್ ಆಗಿ ಆನ್ ಹ್ಯಾಥ್‌ವೇ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರೊಂದಿಗೆ ಗ್ಲೋಬಲ್ ಸ್ಟಾರ್‌ಗಳಾದ ಝೆಂಡಾಯಾ, ರಾಬರ್ಟ್ ಪ್ಯಾಟಿನ್ಸನ್ ಮತ್ತು ಚಾರ್ಲಿಜ್ ಥೆರಾನ್ ಒಳಗೊಂಡ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

Kantara Chapter 1: ಆಸ್ಕರ್ ರೇಸ್‌ಗೆ ಎಂಟ್ರಿ ಕೊಟ್ಟ ‘ಕಾಂತಾರ ಚಾಪ್ಟರ್ 1’; ಹಾಲಿವುಡ್ ಸಿನಿಮಾಗಳ ಜೊತೆ ರಿಷಬ್ ಸಿನಿಮಾ ಸ್ಪರ್ಧೆ

ಭಾರತದ ಸಿನಿಪ್ರಿಯರಿಗೆ ಗೋಲ್ಡನ್ ಚಾನ್ಸ್

ಭಾರತದಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭದ ಕುರಿತು ವಾರ್ನರ್ ಬ್ರದರ್ಸ್ ಡಿಸ್ಕವರಿ ಇಂಡಿಯಾದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡೆನ್ಜಿಲ್ ಡಿಯಾಸ್ ಮಾತನಾಡಿ, "ಈ ಸಿನಿಮೀಯ ಮೈಲಿಗಲ್ಲನ್ನು ತಲುಪಲು ಕ್ರಿಸ್ಟೋಫರ್ ನೋಲನ್ ಸುಮಾರು 20 ವರ್ಷಗಳ ಕಾಲ ಶ್ರಮಿಸಿದ್ದಾರೆ. ಜೂನ್ 8 ರಂದು ಭಾರತೀಯ ನೋಲನ್ ಅಭಿಮಾನಿಗಳು ಜಗತ್ತಿನಾದ್ಯಂತ ಇರುವ ಇತರ ದೇಶಗಳ ಅಭಿಮಾನಿಗಳೊಂದಿಗೆ ಏಕಕಾಲದಲ್ಲಿ ತಮ್ಮ ನೆಚ್ಚಿನ ಸೀಟುಗಳನ್ನು ಬುಕ್ ಮಾಡಿಕೊಳ್ಳಬಹುದು. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ವಿಶೇಷವಾದ ಹಾಗೂ ಹೆಮ್ಮೆಯ ಕ್ಷಣವಾಗಿದೆ" ಎಂದು ತಿಳಿಸಿದ್ದಾರೆ.