ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಚರಂಡಿ ತಲೆಮಾರು’ ಹೇಳಿಕೆಗೆ ಆಕ್ರೋಶ: ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್‌ಗೆ ತಿರುಗೇಟು ನೀಡಿದ ಸಿಜೆಪಿ!

ಬಿಜೆಪಿ ಸಂಸದೆ ಕಂಗನಾ ರಣಾವತ್ ದೇಶದ ಯುವತಿಯರನ್ನು ‘ಚರಂಡಿ ತಲೆಮಾರು’ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಕಂಗನಾ ಮಾತುಗಳನ್ನು ಅವರ ಸ್ವಂತ ಬಿಜೆಪಿ ಪಕ್ಷವೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವ್ಯಂಗ್ಯವಾಡಿದೆ.

ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ 'ಚರಂಡಿ ತಲೆಮಾರು' (ಜೆನೆರೇಷನ್ ಗಟಾರ್) ಎಂಬ ಹೇಳಿಕೆಯ ವಿರುದ್ಧ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ತೀವ್ರ ವಾಗ್ದಾಳಿ ನಡೆಸಿದೆ. "ಕಂಗನಾ ಅವರಿಗೆ ಯಾವುದೇ ಗಂಭೀರತೆ ಇಲ್ಲ, ಅವರ ಸ್ವಂತ ಪಕ್ಷದವರೇ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ" ಎಂದು ಸಿಜೆಪಿ ವ್ಯಂಗ್ಯವಾಡಿದೆ.

'ವಾಂತಿ ತರಿಸುವಂತಿದೆ' ಎಂದಿದ್ದ ಕಂಗನಾ

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಕಂಗನಾ ರಣಾವತ್, ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಬಳಸಿದ ಭಾಷೆಯು 'ವಾಂತಿ ತರಿಸುವಂತಿದೆ' ಮತ್ತು 'ಅಸಭ್ಯವಾಗಿದೆ' ಎಂದು ಆರೋಪಿಸಿದ್ದರು. ಅಲ್ಲದೆ, ಪ್ರತಿಭಟನಾಕಾರರ ಪಾಲನೆ-ಪೋಷಣೆಯ ಕುರಿತಾಗಿಯೂ ಪ್ರಶ್ನೆ ಎತ್ತಿದ್ದರು.

ನಿಮ್ಮ ವಿಕಾರತೆಯನ್ನು ತೋರಿಸುತ್ತಿದ್ದೀರಷ್ಟೇ

"ಛೀ! ಇವರನ್ನು ಯಾರು ಹೆತ್ತು ಸಾಕಿ ಬೆಳೆಸುತ್ತಿದ್ದಾರೋ ಗೊತ್ತಿಲ್ಲ... ಭಾರತವು ಸೌಜನ್ಯವನ್ನು ಮೈಗೂಡಿಸಿಕೊಂಡು, ಸಾಂಸ್ಕೃತಿಕವಾಗಿ ಬೇರೂರಿರುವ ವೈವಿಧ್ಯಮಯ ಜನರ ಸುಂದರ ನಾಡಾಗಿದೆ. ಆದರೆ ನೀವು ನಿಮ್ಮನ್ನು ಜಿರಳೆಗಳು (ಕಾಕ್ರೋಚ್) ಎಂದು ಕರೆದುಕೊಳ್ಳುತ್ತೀರಿ, ನೀವು ನೋಡಲು ಮತ್ತು ನಿಮ್ಮ ವರ್ತನೆ ಕೂಡ ಹಾಗೆಯೇ ಇದೆ. ಜಗತ್ತಿಗೆ ನಿಮ್ಮ ಕೊಳೆ, ಕಸ ಮತ್ತು ವಿಕಾರತೆಯನ್ನು ತೋರಿಸುತ್ತಿದ್ದೀರಷ್ಟೇ. ಈ ವಿಡಿಯೋ ರೀಲ್ಸ್ ನೋಡಿ ನನಗೆ ಮಾನಸಿಕವಾಗಿ ಗಾಯವಾಗಿದೆ. ನನಗೀಗ ಡಿಜಿಟಲ್ ಡಿಟಾಕ್ಸ್ ಮತ್ತು ವಿಶ್ರಾಂತಿಯ ಅಗತ್ಯವಿದೆ" ಎಂದು ಕಂಗನಾ ಬರೆದುಕೊಂಡಿದ್ದರು.

ಹಿಂದೂ ಮಹಿಳೆಯರ ನಡವಳಿಕೆ ಆಘಾತಕಾರಿಯಾಗಿದೆ!

ಅಷ್ಟೇ ಅಲ್ಲದೆ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿರುವ ಇಂದಿನ ಭಾರತೀಯ ಯುವತಿಯರನ್ನು ‘ಜೆನೆರೇಷನ್ ಗಟಾರ್’ (ಚರಂಡಿ ತಲೆಮಾರು) ಎಂದು ಕರೆದಿದ್ದ ಕಂಗನಾ, "ಯುವ ಹಿಂದೂ ಮಹಿಳೆಯರ ನಡವಳಿಕೆ ಅತ್ಯಂತ ಆಘಾತಕಾರಿಯಾಗಿದೆ. ಸಮಾಜಕ್ಕಾಗಲಿ ಅಥವಾ ವ್ಯವಸ್ಥೆಗಾಗಲಿ ಅವರಿಂದ ಯಾವುದೇ ಕೊಡುಗೆಯಿಲ್ಲ. ಅವರು ಶಿಕ್ಷಣದಲ್ಲೂ ಉತ್ತಮವಾಗಿಲ್ಲ, ತೀರಾ ಕನಿಷ್ಠ ಮಟ್ಟಕ್ಕೆ ತಲುಪಿದ್ದಾರೆ. ಅವರಿಗೆ ಗೃಹಿಣಿಯರಾಗುವ ಅರ್ಹತೆಯೂ ಇಲ್ಲ. ಆದರೂ ಡ್ರಗ್ಸ್, ಮದ್ಯಪಾನ ಮತ್ತು ಲೈಂಗಿಕ ಸ್ವಾತಂತ್ರ್ಯವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ. ಹೆತ್ತವರ ಸಂಪಾದನೆಯಲ್ಲೇ ನಾಚಿಕೆಯಿಲ್ಲದೆ ಜೀವನ ನಡೆಸುತ್ತಾ, ಸ್ವತಂತ್ರ ಜೀವನಕ್ಕಾಗಿ ನಿರಂತರವಾಗಿ ಜಗಳವಾಡುತ್ತಾರೆ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ನಟಿ ಕಂಗನಾ ರಣಾವತ್‌ಗೆ ದೊಡ್ಡ ಸಹಾಯ ಮಾಡಿದ ಬಾಲಿವುಡ್‌ ನಟ ಜಾನ್ ಅಬ್ರಹಾಂ; ಎಲ್ಲರೆದುರು ಕೊಂಡಾಡಿದ ಸಂಸದೆ

ಕಂಗನಾರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ

ಕಂಗನಾ ಅವರ ಈ ಹೇಳಿಕೆಗಳ ಕುರಿತು ಮಂಗಳವಾರ (ಜುಲೈ 28) ಪ್ರತಿಕ್ರಿಯಿಸಿದ ಸಿಜೆಪಿ ವಕ್ತಾರ ಸೌರವ್ ದಾಸ್, "ನೋಡಿ, ಕಂಗನಾ ರಣಾವತ್ ಅವರಿಗೆ ಅವರ ಸ್ವಂತ ಪಕ್ಷದವರೇ ಹೆಚ್ಚಿನ ಗಮನ ಕೊಡುವುದಿಲ್ಲ ಅಥವಾ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಿರುವಾಗ ನಾವು ಏಕೆ ಅವರನ್ನು ಗಂಭೀರವಾಗಿ ಪರಿಗಣಿಸಬೇಕು? ಜೆನ್-ಝೀ (Gen Z), ಜೆನ್ ಆಲ್ಫಾ (Gen Alpha) ಅಥವಾ ದೇಶದ ಯಾವುದೇ ಯುವ ಪೀಳಿಗೆಯವರು ಕಂಗನಾ ಮಾತನ್ನು ಕೇಳುತ್ತಾರೆ ಅಥವಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.

Kangana Ranaut: ಅಸಹ್ಯ, ವಾಂತಿ ಬರುವಂತಹದ್ದು! Gen Z ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ

"ಕಂಗನಾ ಈಗ ರಾಜಕಾರಣಿ. ಹಿಮಾಚಲ ಪ್ರದೇಶದಲ್ಲಿರುವ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದ ವಿಡಿಯೋಗಳಿದ್ದವು. ಅದರಲ್ಲಿ ಅವರು, ʻಸಂಸದೆಯಾಗುವುದು ಎಂದರೆ ಬಹಳ ಕಡಿಮೆ ಕೆಲಸ ಎಂದು ತಾವು ಭಾವಿಸಿದ್ದಾಗಿ, ಆದರೆ ಅದು ನಿಜವಾಗಿಯೂ ಸಾಕಷ್ಟು ಶ್ರಮವನ್ನು ಬಯಸುತ್ತದೆʼ ಎಂದು ಹೇಳಿದ್ದರು. ಇದು ಅವರ ಗಂಭೀರತೆಯ ಮಟ್ಟವನ್ನು ತೋರಿಸುತ್ತದೆ. ಈ ಮೂಲಕ ತಮ್ಮಲ್ಲಿ ಗಂಭೀರತೆಯ ಕೊರತೆ ಇರುವುದನ್ನು ತಾವೇ ಬಹಿರಂಗಪಡಿಸಿಕೊಂಡಿದ್ದರು" ಎಂದು ಅವರು ವ್ಯಂಗ್ಯವಾಡಿದ್ದಾರೆ.

"ಅವರು ಬಳಸಿದ ಪದಗಳ ಆಯ್ಕೆ ಸೂಕ್ತವಲ್ಲ. ರಾಜಕಾರಣಿಗಳು ತಮ್ಮ ಭಾಷೆಯ ಬಗ್ಗೆ ಎಚ್ಚರ ವಹಿಸಬೇಕು ಹಾಗೂ ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು" ಎಂದು ಒತ್ತಿ ಹೇಳಿದರು. "ನೀವು ಮಾಡಿದ್ದಕ್ಕಿಂತ ಹೆಚ್ಚಿನದನ್ನು ಜೆನ್-ಝೀ (Gen Z) ಪೀಳಿಗೆಯವರು ಈ ದೇಶಕ್ಕಾಗಿ ಮಾಡಿದ್ದಾರೆ ಮತ್ತು ಮಾಡುತ್ತಲೇ ಇದ್ದಾರೆ. ಜೆನ್-ಝೀ ಈ ದೇಶದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಲು ಕೆಲಸ ಮಾಡಿದೆ. ಅದನ್ನು ನೀವು ಮಾಡಿಲ್ಲ. ಆದ್ದರಿಂದ, ನೀವು ಅದನ್ನು ಖಂಡಿತವಾಗಿಯೂ ನೆನಪಿನಲ್ಲಿಡಬೇಕು" ಎಂದು ಅವರು ಹೇಳಿದರು.