'ದಿ ಕೇರಳ ಸ್ಟೋರಿ 2ʼ ಸಿನಿಮಾವು ರಿಲೀಸ್‌ಗೆ ಸಜ್ಜಾಗುತ್ತಿದೆ. ಸದ್ಯ ಬಿಡುಗಡೆಗೊಂಡಿರುವ ಟ್ರೇಲರ್ ಬಹಳ ಸದ್ದು ಮಾಡಿದೆ. ಅದು ವಿವಾದಕ್ಕೆ ಕಾರಣವಾಗದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಸಿನಿಮಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, "ಈ ಸಿನಿಮಾವು ರಾಜ್ಯದ ಜಾತ್ಯತೀತ ಮೌಲ್ಯಗಳಿಗೆ ಧಕ್ಕೆ ತರುವ ಸಂಚು" ಎಂದು ಕಿಡಿಕಾರಿದ್ದಾರೆ. ಕೇರಳ ಸಿಎಂ ಕಚೇರಿಯಿಂದ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಕೇರಳ ವಿರೋಧಿ ಪ್ರಚಾರ
"ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ಬಿತ್ತಲು ಈ ವಿಷಕಾರಿ ಕೃತಿಯನ್ನು ಬಳಸಲಾಗುತ್ತಿದೆ. ಸಂಪೂರ್ಣ ಸುಳ್ಳು ಮತ್ತು ಕೇರಳ ವಿರೋಧಿ ಪ್ರಚಾರದಿಂದ ಕೂಡಿದ್ದ ಮೊದಲ ಭಾಗವು ಕೋಮು ದ್ವೇಷ ಹರಡುವ ಉದ್ದೇಶ ಹೊಂದಿತ್ತು. ಜಾತ್ಯತೀತ ಸಂಪ್ರದಾಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಮಾಡಲಾಗಿತ್ತು ಎಂಬುದು ದೇಶಕ್ಕೆ ಈಗಾಗಲೇ ಮನವರಿಕೆಯಾಗಿದೆ" ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಹೇಗೆ ಅನುಮತಿ ನೀಡಲಾಗುತ್ತದೆ?
"ಸ್ಪ್ಯಾನಿಷ್ ಚಿತ್ರ 'ಬೀಫ್' ನಂತಹ ಸಿನಿಮಾಗಳನ್ನು ಕೇವಲ ಶೀರ್ಷಿಕೆಯ ಕಾರಣಕ್ಕೆ ನಿಷೇಧಿಸುವಾಗ, ಸಮಾಜವನ್ನು ಒಡೆಯುವ ಇಂತಹ ಸಿನಿಮಾಗಳಿಗೆ ಹೇಗೆ ಅನುಮತಿ ನೀಡಲಾಗುತ್ತದೆ" ಎಂದು ಪ್ರಶ್ನೆ ಮಾಡಿರುವ ಅವರು, "ಪರಸ್ಪರ ಒಪ್ಪಿಗೆಯಿಂದ ನಡೆಯುವ ಅಂತರ್ಜಾತಿ ವಿವಾಹಗಳನ್ನು ಬಲವಂತದ ಮತಾಂತರ ಎಂದು ಬಿಂಬಿಸುವ ಮೂಲಕ ಕೇರಳದ ಶಾಂತಿಯುತ ವಾತಾವರಣವನ್ನು ಕೆಡಿಸಲು ಹೊರಗಿನ ಶಕ್ತಿಗಳು ಪ್ರಯತ್ನಿಸುತ್ತಿವೆ" ಎಂದು ಹೇಳಿದ್ದಾರೆ.
"ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಮಾದರಿಯಾಗಿರುವ ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂದು ಬಿಂಬಿಸುವ ಪ್ರಯತ್ನಗಳನ್ನು ನಾವೆಲ್ಲರೂ ಒಗ್ಗೂಡಿ ತಿರಸ್ಕರಿಸಬೇಕು. ಸತ್ಯವೇ ಯಾವಾಗಲೂ ಜಯಿಸುತ್ತದೆ. ಯಾವುದೇ ಕೋಮು ಗಲಭೆಗಳಿಲ್ಲದ ಮತ್ತು ಸಮುದಾಯಗಳ ನಡುವೆ ಪರಸ್ಪರ ಗೌರವದ ಸಂಪ್ರದಾಯವಿರುವ ಕೇರಳವನ್ನು ಅಂತಹ ಶಕ್ತಿಗಳು ಹಗೆತನದಿಂದ ನೋಡುತ್ತಿವೆ" ಎಂದು ಅವರು ಹೇಳಿದ್ದಾರೆ.
ಕೇರಳ ಸ್ಟೋರಿ 2 ಯಾವಾಗ ರಿಲೀಸ್?
ಕೇರಳ ಸ್ಟೋರಿ ಮೊದಲ ಭಾಗದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವಿವಾದಗಳ ನಡುವೆಯೂ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಅಷ್ಟೇ ಅಲ್ಲದೆ, ನಿರ್ದೇಶಕ ಸುದೀಪ್ತೋ ಸೇನ್ ಅವರಿಗೆ ಅತ್ಯುತ್ತಮ ನಿರ್ದೇಶಕ ಹಾಗೂ ಪ್ರಶಾಂತನು ಮೊಹಾಪಾತ್ರ ಅತ್ಯುತ್ತಮ ಛಾಯಾಗ್ರಹಣ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಇದೀಗ ʻದಿ ಕೇರಳ ಸ್ಟೋರಿ 2ʼ ಚಿತ್ರವನ್ನು ವಿಪುಲ್ ಅಮೃತ್‌ಲಾಲ್ ಶಾ ಅವರು ನಿರ್ಮಾಣ ಮಾಡಿದ್ದಾರೆ. ಬಲವಂತದ ಧಾರ್ಮಿಕ ಮತಾಂತರ ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳ ಸುತ್ತದ ಕಥೆಯನ್ನು ಈ ಸಿನಿಮಾ ಹೊಂದಿದೆ. ಉಲ್ಕಾ ಗುಪ್ತಾ, ಐಶ್ವರ್ಯಾ ಓಜಾ, ಅದಿತಿ ಭಾಟಿಯಾ ಮುಂತಾದವರು ನಟಿಸಿರುವ ಈ ಸಿನಿಮಾವು ಫೆಬ್ರವರಿ 27ರಂದು ತೆರೆಗೆ ಬರಲಿದೆ.