ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sudipto Sen: ʼದಿ ಕೇರಳ ಸ್ಟೋರಿʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಘೋಷಿಸಿದ್ದಕ್ಕೆ ಕೇರಳ ಸಿಎಂ ಆಕ್ಷೇಪ; ಖಡಕ್‌ ರಿಪ್ಲೈ ಕೊಟ್ಟ ನಿರ್ದೇಶಕ ಸುದೀಪ್ತೊ ಸೇನ್‌

The Kerala Story: 'ದಿ ಕೇರಳ ಸ್ಟೋರಿʼ ಚಿತ್ರದ ನಿರ್ದೇಶಕ ಸುದೀಪ್ತೊ ಸೇನ್‌ ಅವರಿಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಿದ್ದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಟೀಕಿಸಿದ್ದರು. ʼʼಮೊದಲು ಚಿತ್ರ ನೋಡಿʼʼ ಎಂದು ಹೇಳುವ ಮೂಲಕ ಇದೀಗ ಸುದೀಪ್ತೊ ಸೇನ್‌ ತಿರುಗೇಟು ನೀಡಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ನಿರ್ದೇಶಕ ಸುದೀಪ್ತೊ ಸೇನ್‌ ತಿರುಗೇಟು

Ramesh B Ramesh B Aug 2, 2025 9:38 PM

ಮುಂಬೈ: ಬಹುನಿರೀಕ್ಷಿತ 71ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ (71st National Film Awards) ಘೋಷಣೆಯಾಗಿದೆ. 2023ರಲ್ಲಿ ತೆರೆಕಂಡ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼದಿ ಕೇರಳ ಸ್ಟೋರಿʼ (The Kerala Story) ಬಾಲಿವುಡ್‌ ಚಿತ್ರವೂ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾಗಿದೆ. ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವ ಸುದೀಪ್ತೊ ಸೇನ್‌ (Sudipto Sen) ಅತ್ಯುತ್ತಮ ನಿರ್ದೇಶಕ ಎನಿಸಿಕೊಂಡಿದ್ದಾರೆ. ದೇಶದ ಘಟಾನುಘಟಿ ನಿರ್ದೇಶಕರನ್ನು ಹಿಂದಿಕ್ಕಿ ಅವರು ಈ ಅವಾರ್ಡ್‌ ಪಡೆದುಕೊಂಡಿದ್ದಾರೆ. ಮತಾಂತರ ಜಾಲಕ್ಕೆ ಸಿಲುಕಿ ಬದುಕು ದುರ್ಬರವಾದ ಹಿಂದು ಯುವತಿಯರ ಕಣ್ಣೀರ ಕಥೆಯನ್ನು ಅವರು ಮನಮುಟ್ಟುವಂತೆ ತೆರೆ ಮೇಲೆ ತಂದಿದ್ದಾರೆ. ಈ ಚಿತ್ರಕ್ಕೆ ಪ್ರಶಸ್ತಿ ನೀಡಿರುವುದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ (Pinarayi Vijayan) ಖಂಡಿಸಿದ್ದು, ಸುದೀಪ್ತೊ ಸೇನ್‌ ಖಡಕ್‌ ಆಗಿ ಪ್ರತಿಕ್ರಿಯಿಸಿದ್ದಾರೆ. ʼʼಮೊದಲು ಸಿನಿಮಾ ನೋಡಿʼʼ ಎಂದು ಸವಾಲೆಸೆದಿದ್ದಾರೆ.

ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ ಪಿಣರಾಯಿ ವಿಜಯನ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ʼʼಕೇರಳದ ಮಾನ ಹಾಳು ಮಾಡುವ ಮತ್ತು ಕೋಮು ದ್ವೇಷದ ಬೀಜವನ್ನು ಬಿತ್ತುವ ಸ್ಪಷ್ಟ ಉದ್ದೇಶದಿಂದ ತಪ್ಪು ಮಾಹಿತಿಯನ್ನು ಹರಡುವ ಈ ಚಿತ್ರವನ್ನು ಗೌರವಿಸುವ ಮೂಲಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರು ಸಂಘ ಪರಿವಾರದ ವಿಭಜಕ ಸಿದ್ಧಾಂತದ ನಿರೂಪಣೆಗೆ ಬೆಂಬಲ ಸೂಚಿಸಿದ್ದಾರೆʼʼ ಎಂದು ಆರೋಪಿಸಿದ್ದರು.



ಈ ಸುದ್ದಿಯನ್ನೂ ಓದಿ: The Kerala Story: ಸಮುದಾಯಗಳ ನಡುವೆ ವಿಷ ಬಿತ್ತುವ ಕೆಲಸ; 'ದಿ ಕೇರಳ ಸ್ಟೋರಿ'ಗೆ ರಾಷ್ಟ್ರ ಪ್ರಶಸ್ತಿಯ ವಿರುದ್ಧ ಪಿಣರಾಯಿ ವಿಜಯನ್ ಆಕ್ಷೇಪ



ತಿರುಗೇಟು ನೀಡಿದ ಸುದೀಪ್ತೊ ಸೇನ್‌

ಈ ಆರೋಪಕ್ಕೆ ತಿರುಗೇಟು ನೀಡಿದ ನಿರ್ದೇಶಕ ಸುದೀಪ್ತೊ ಸೇನ್‌, "ಪಿಣರಾಯಿ ವಿಜಯನ್‌ ಚಿತ್ರವನ್ನು ನೋಡಿಲ್ಲ ಎಂಬುದು ನನಗೆ ಸ್ಪಷ್ಟವಾಗಿದೆ. ಚಿತ್ರವನ್ನು ನೋಡುವಂತೆ ನಾನು ಅವರಲ್ಲಿ ವಿನಂತಿಸುತ್ತೇನೆ. ಅವರು ತುಂಬ ಹಿರಿಯ ಮತ್ತು ಗೌರವಾನ್ವಿತ ರಾಜಕಾರಣಿ. ಆದ್ದರಿಂದ ಅವರು ಚಿತ್ರ ವೀಕ್ಷಿಸಬೇಕುʼʼ ಎಂದು ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ ಕೇರಳದ ಮುಖ್ಯಮಂತ್ರಿಯಾಗಿದ್ದ ಅಚ್ಯುತಾನಂದನ್ ಅವರ ಹೇಳಿಕೆಗೆ ಪಿಣರಾಯಿ ವಿಜಯನ್‌ ಬೆಂಲ ನೀಡಿದ್ದನ್ನು ಸೇನ್ ನೆನಪಿಸಿಕೊಂಡರು. "ಒಂದು ವೇಳೆ ಅವರು ಈ ಚಿತ್ರವನ್ನು ನೋಡಿದ್ದರೆ 15 ವರ್ಷಗಳ ಹಿಂದೆ ಘಟನೆ ನೆನಪಾಗುತ್ತಿತ್ತು. ಅಂದು ವಿ.ಎಸ್. ಅಚ್ಯುತಾನಂದನ್ ದೆಹಲಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ಪಿ.ಎಫ್.ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ರೀತಿಯ ಕೋಮುವಾದಿ ಸಂಘಟನೆಗಳು ಕೇರಳದಲ್ಲಿ ಮಹಿಳೆಯರನ್ನು ಮತಾಂತರಿಸುತ್ತಿವೆ. ಮುಂದಿನ 20 ವರ್ಷಗಳಲ್ಲಿ ಕೇರಳವು ಇಸ್ಲಾಮಿಕ್ ರಾಜ್ಯವಾಗಿ ಬದಲಾಗಲಿದೆ ಎಂದು ಹೇಳಿದ್ದರು. ಅದರ ವಿಡಿಯೊ ಯುಟ್ಯೂಬ್‌ನಲ್ಲಿ ಲಭ್ಯವಿದೆʼʼ ಎಂದು ತಿಳಿಸಿದ್ದಾರೆ.

ಮುಂದುವರಿದು, "ವಿ.ಎಸ್. ಅಚ್ಯುತಾನಂದನ್ ಅವರ ಹೇಳಿಕೆ ವಿರೋಧ ವ್ಯಕ್ತವಾಗಿತ್ತು. ಅಂದು ಅವರನ್ನು ಬೆಂಬಲಿಸಲು ಯಾರು ಬಂದಿದ್ದರು ಎನ್ನುವುದು ನಿಮಗೆ ಗೊತ್ತೆ? ಸ್ವತಃ ಪಿಣರಾಯಿ ವಿಜಯನ್. ಆಗ ಅವರು ವಿ.ಎಸ್. ಅಚ್ಯುತಾನಂದನ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದರು. 15 ವರ್ಷದ ಹಿಂದೆ ನೀಡಿದ್ದ ಹೇಳಿಕೆಗೆ ಸಂಪೂರ್ಣ ವಿರುದ್ಧ ನಿಲುವನ್ನು ಅವರು ಇಂದು ಹೊಂದಿದ್ದಾರೆ. ಯಾವ ಪಿಣರಾಯಿ ವಿಜಯನ್‌ ಅವರನನು ನಾವು ನಂಬಬೇಕು?ʼʼ ಎಂದು ಪ್ರಶ್ನಿಸಿದ್ದಾರೆ.

ʼʼಸೆನ್ಸಾರ್‌ ಬೋರ್ಡ್‌ನವರು ಬರೋಬ್ಬರಿ 2 ತಿಂಗಳು ಅಧ್ಯಯನ ನಡೆಸಿ ಪ್ರಮಾಣಪತ್ರ ನೀಡಿದರು. ಅವರು ಚಿತ್ರದ ಪ್ರತಿಯೊಂದು ಅಂಶವನ್ನೂ, ಸಂಭಾಷಣೆಯನ್ನೂ ಪರಿಶೀಲಿಸಿದರು. ಚಿತ್ರದಲ್ಲಿ ಏನು ತೋರಿಸಿದ್ದೇನೂ ಅದೆಕ್ಕೆಲ್ಲ ನಾನು ಜವಾಬ್ದಾರʼʼ ಎಂದು ವಿವರಿಸಿದ್ದಾರೆ.

ಈ ಚಿತ್ರ ಬಿಡುಗಡೆಯಾದ ಸಮಯದಲ್ಲಿ ವಿವಾದ ಭುಗಿಲೆದ್ದಿದ್ದವು. ಕೇರಳದಲ್ಲಿ ಚಿತ್ರವನ್ನು ರಿಲೀಸ್‌ ಮಾಡದಂತೆ ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ ಆಗ್ರಹಿಸಿದ್ದವು. ಅದಾಗ್ಯೂ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 300 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿತ್ತು. 10-15 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ದೇವದರ್ಶಿ ಮತ್ತಿತರರು ನಟಿಸಿದ್ದರು.