ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಕೃಷ್ಣಾವತಾರಂʼ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ಟ್ಯಾಕ್ಸ್‌ ಫ್ರೀ ಮಾಡಿದ ಸಿಎಂ ಯೋಗಿ ಆದಿತ್ಯನಾಥ್;‌ ಇದು ಕನ್ನಡಿಗರು ನಟಿಸಿರುವ ಸಿನಿಮಾ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಕೃಷ್ಣಾವತಾರಂ: ಪಾರ್ಟ್ 1' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಲೋಕಭವನದಲ್ಲಿ ಚಿತ್ರ ವೀಕ್ಷಿಸಿದ ಅವರು, ಸನಾತನ ಸಂಸ್ಕೃತಿ ಮತ್ತು ಶ್ರೀಕೃಷ್ಣನ ಜೀವನವನ್ನು ಭವ್ಯವಾಗಿ ಚಿತ್ರಿಸಿರುವುದನ್ನು ಶ್ಲಾಘಿಸಿದರು. ಕನ್ನಡದ ಸುಶ್ಮಿತಾ ಭಟ್ ಮತ್ತು ಜೆಕೆ ಅಂತಹ ಸ್ಯಾಂಡಲ್‌ವುಡ್ ಪ್ರತಿಭೆಗಳು ಈ ಚಿತ್ರದಲ್ಲಿರುವುದು ವಿಶೇಷ.

ಇತ್ತೀಚೆಗೆ ಬಿಡುಗಡೆಯಾದ ‘ಕೃಷ್ಣಾವತಾರಂ: ಪಾರ್ಟ್ 1’ ಸಿನಿಮಾಕ್ಕೆ ಉತ್ತರ ಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಭಾನುವಾರ (ಮೇ 10) ಲೋಕಭವನದಲ್ಲಿ ನಡೆದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮಕ್ಕಳು ಮತ್ತು ಯುವಜನರು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ಅನುವಾಗುವಂತೆ ರಾಜ್ಯದಾದ್ಯಂತ ಜಿಲ್ಲೆಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲು ಸರ್ಕಾರ ಸೂಚಿಸಿದೆ.

ಸಿನಿಮಾ ವೀಕ್ಷಿಸಿದ ಯೋಗಿ ಆದಿತ್ಯನಾಥ್

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್, ಸಂಪುಟ ಸಚಿವರು ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಪಂಕಜ್ ಚೌಧರಿ ಅವರು ‘ಕೃಷ್ಣಾವತಾರಂ: ಪಾರ್ಟ್ 1’ ಸಿನಿಮಾದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಚಿತ್ರದ ಪ್ರದರ್ಶನದ ವೇಳೆ ಸಭಾಂಗಣವು "ಕೃಷ್ಣ-ಕೃಷ್ಣ" ಮತ್ತು "ರಾಧೆ-ರಾಧೆ" ಘೋಷಣೆಗಳಿಂದ ಮೊಳಗಿದ್ದು ವಿಶೇಷ. ಅಂದಹಾಗೆ, ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ ಕಲಾವಿದರಾದ ಸುಶ್ಮಿತಾ ಭಟ್ ಮತ್ತು ಜೆಕೆ (ಕಾರ್ತಿಕ್ ಜಯರಾಮ್) ‌ಕೂಡ ಬಣ್ಣ ಹಚ್ಚಿರುವುದು ವಿಶೇಷ.

Karavali: ಮಲಯಾಳಂ - ತಮಿಳಿನಲ್ಲಿ ಮಿಂಚಿದ ಮೇಲೆ ಕನ್ನಡಕ್ಕೆ ಮರಳಿದ ಸುಶ್ಮಿತಾ ಭಟ್; ಇದಕ್ಕೆ ರಾಜ್‌ ಬಿ ಶೆಟ್ಟಿಯೇ ಕಾರಣ!

ಸಿಎಂ ಯೋಗಿ ಹೇಳಿದ್ದೇನು?

ಉತ್ತರ ಪ್ರದೇಶ ಮುಖ್ಯಮಂತ್ರಿ ಸಿಎಂ ಯೋಗಿ ಆದಿತ್ಯನಾಥ್, "ಈ ಚಿತ್ರವು ಭಗವಾನ್ ಶ್ರೀಕೃಷ್ಣನ ಜೀವನವನ್ನು ಮಾನವ ದೃಷ್ಟಿಕೋನದಿಂದ ಪ್ರಸ್ತುತಪಡಿಸುತ್ತದೆ. ದ್ವಾಪರ ಯುಗ, ಸನಾತನ ಸಂಸ್ಕೃತಿ ಮತ್ತು ಭಾರತೀಯ ಸಂಪ್ರದಾಯಗಳನ್ನು ಭವ್ಯವಾಗಿ ಚಿತ್ರಿಸಲಾಗಿದೆ. ರಾಧಾ, ರುಕ್ಮಿಣಿ ಮತ್ತು ಸತ್ಯಭಾಮೆಯ ಕಥೆಗಳಿಗೂ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಈ ಚಿತ್ರದಲ್ಲಿ ಸತ್ಯಭಾಮೆಯ ಪಾತ್ರ ನಿರ್ವಹಿಸಿರುವ ಸಂಸ್ಕೃತಿ ಅವರು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ ಮೊಮ್ಮಗಳಾಗಿದ್ದು, ಇದು ಹೆಮ್ಮೆಯ ವಿಷಯ" ಎಂದು ಹೇಳಿದರು.

ಯುಪಿ ಸರ್ಕಾರದ ಈ ನಿರ್ಧಾರಕ್ಕೆ ಧನ್ಯವಾದ ಅರ್ಪಿಸಿರುವ ಚಿತ್ರತಂಡ, "ನಮ್ಮ ಪರಂಪರೆ ಮತ್ತು ಶ್ರೀಕೃಷ್ಣನ ಕಥೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನಕ್ಕೆ ಬೆಂಬಲ ನೀಡಿದ್ದಕ್ಕಾಗಿ ಯೋಗಿ ಆದಿತ್ಯನಾಥ್ ಅವರಿಗೆ ಕೃತಜ್ಞತೆಗಳು" ಎಂದು ಹೇಳಿಕೊಂಡಿದೆ. 3 ಭಾಗಗಳ ಸರಣಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೊದಲ ಭಾಗ ‘ಕೃಷ್ಣಾವತಾರಂ ಪಾರ್ಟ್ 1: ದಿ ಹಾರ್ಟ್ (ಹೃದಯಂ)’ ಈಗ ರಿಲೀಸ್‌ ಆಗಿದೆ.

ಸಿಎಂ ಯೋಗಿ ಆದಿತ್ಯನಾಥ್‌ ಜೊತೆ ಚಿತ್ರತಂಡ



ಶ್ರೀಕೃಷ್ಣನ ಪ್ರೇಮ ಮತ್ತು ಕರ್ತವ್ಯದ ಹಾದಿಯಲ್ಲಿ ಎದುರಾಗುವ ಸವಾಲುಗಳ ಮೇಲೆ ಈ ಸಿನಿಮಾದ ಕಥೆ ಕೇಂದ್ರೀಕೃತವಾಗಿದೆ. ಈ ಚಿತ್ರದ ಪ್ರಚಾರದ ಅಂಗವಾಗಿ ಮಥುರಾದ ಕೃಷ್ಣ ಜನ್ಮಭೂಮಿ, ಪ್ರೇಮ ಮಂದಿರ ಮತ್ತು ಇಸ್ಕಾನ್ ಬೃಂದಾವನದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು.

ಹಾರ್ದಿಕ್ ಗಜ್ಜರ್ ನಿರ್ದೇಶನದ ‘ಕೃಷ್ಣಾವತಾರಂ: ಪಾರ್ಟ್ 1’ ಚಿತ್ರವು ಮೇ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಗುಪ್ತಾ, ಸಂಸ್ಕೃತಿ, ಸುಶ್ಮಿತಾ ಭಟ್ ಮತ್ತು ನಿವಾಶಿನಿ ಕೃಷ್ಣನ್, ಜೆಕೆ ನಟಿಸಿದ್ದರೆ, ಇವರ ಜೊತೆಗೆ ಹಿರಿಯ ಕಲಾವಿದರಾದ ಜಾಕಿ ಶ್ರಾಫ್ ಮತ್ತು ಅಶುತೋಷ್ ರಾಣಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.