ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್‌ʼ ಖ್ಯಾತಿಯ ಕಿಶನ್ - ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು; ನವಿಲು ಗರಿ ಉಡುಪು ಧರಿಸಿ ರೀಲ್ಸ್ ಮಾಡಿದ್ದಕ್ಕೆ ಸಂಕಷ್ಟ!

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತ್ತು ನಟ ಕಿಶನ್ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಇತ್ತೀಚೆಗೆ ಈ ಜೋಡಿಯು ಭಾರಿ ಪ್ರಮಾಣದ ನೈಜ ನವಿಲು ಗರಿಗಳಿಂದ ವಿನ್ಯಾಸಗೊಳಿಸಲಾದ ಉಡುಪುಗಳನ್ನು ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹಂಚಿಕೊಂಡಿದ್ದರು. ಅದೇ ಈಗ ಸಂಕಷ್ಟ ತಂದಿಟ್ಟಿದೆ.

ಬಿಗ್‌ ಬಾಸ್‌ ಖ್ಯಾತಿಯ ನಟ ಕಿಶನ್ ಹಾಗೂ ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಟ ಕಿಶನ್ ಹಾಗೂ ನಟಿ ನಿವೇದಿತಾ ಗೌಡ ಇದೀಗ ಹೊಸದೊಂದು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ನವಿಲು ಗರಿಗಳನ್ನು ಬಳಸಿ ಸಿದ್ಧಪಡಿಸಲಾದ ಉಡುಪುಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಂಚಿಕೊಂಡಿದ್ದಕ್ಕಾಗಿ ಈ ಇಬ್ಬರ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಈ ಇಬ್ಬರ ವಿರುದ್ಧ ವನ್ಯಜೀವಿ (ಸಂರಕ್ಷಣಾ) ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಕೋರಿ ದೂರು ಸಲ್ಲಿಸಿದ್ದಾರೆ.

ವಿವಾದಕ್ಕೆ ಕಾರಣವಾದ ಆ ರೀಲ್ಸ್‌ನಲ್ಲಿ ಏನಿದೆ?

4-5 ದಿನಗಳ ಹಿಂದಷ್ಟೇ ಕಿಶನ್ ಹಾಗೂ ನಿವೇದಿತಾ ಗೌಡ ಜೋಡಿಯು ನವಿಲು ಗರಿಗಳಿಂದ ವಿನ್ಯಾಸಗೊಳಿಸಲಾದ ವಿಶೇಷ ಉಡುಪುಗಳನ್ನು ಧರಿಸಿ ರೀಲ್ಸ್ ಮಾಡಿದ್ದರು. ಈ ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆದರೆ, ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಪ್ರಕಾರ ರಾಷ್ಟ್ರಪಕ್ಷಿ ನವಿಲಿನ ಗರಿಗಳನ್ನು ಈ ರೀತಿ ವಾಣಿಜ್ಯ ಮತ್ತು ಸಾರ್ವಜನಿಕ ಪ್ರದರ್ಶನಕ್ಕೆ ಬಳಸುವುದು ಕಾನೂನುಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ದಿನೇಶ್ ಕಲ್ಲಹಳ್ಳಿ ಅವರು ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

Niveditha Gowda: ನಾನು ಮತ್ತು ಚಂದನ್ ದೂರ ಆಗಿರೋ ಕಾರಣ ಇದೇ! ನಿವೇದಿತಾ ಗೌಡ ಹೇಳಿದ್ದೇನು?

ದಿನೇಶ್ ಕಲ್ಲಹಳ್ಳಿ ನೀಡಿದ ದೂರಿನಲ್ಲಿ ಏನಿದೆ?

"ಭಾರತದ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲು (Peacock) ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿದ್ದು, ಅದರ ಗರಿಗಳು, ಅಂಗಾಂಗಗಳು ಅಥವಾ ಅವುಗಳಿಂದ ತಯಾರಿಸಲಾದ ವಸ್ತುಗಳ ಅನಧಿಕೃತ ಸಂಗ್ರಹಣೆ, ವ್ಯಾಪಾರ, ಪ್ರದರ್ಶನ ಹಾಗೂ ಬಳಕೆ ಕುರಿತು ಕಾನೂನು ನಿಯಮಗಳು ಅನ್ವಯವಾಗುತ್ತವೆ. ಇಂತಹ ಸಂದರ್ಭದಲ್ಲಿ ನೃತ್ಯಗಾರರಾದ ಶ್ರೀ ಕಿಶನ್ ಹಾಗೂ ಶ್ರೀಮತಿ ನಿವೇದಿತಾ ಗೌಡ ಅವರು ನೈಜ ನವಿಲು ಗರಿಗಳಿಂದ ತಯಾರಿಸಲಾದ ಭಾರೀ ಪ್ರಮಾಣದ ಉಡುಪುಗಳನ್ನು ಧರಿಸಿ ನೃತ್ಯ ಮಾಡಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಾರ್ವಜನಿಕವಾಗಿ ಪ್ರಸಾರ ಮಾಡಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ"

ಕಾನೂನುಬದ್ಧವಾಗಿ ಪಡೆದಿದ್ದಾರೆಯೇ?

"ಸದರಿ ವಿಡಿಯೋದಲ್ಲಿ ಬಳಸಿರುವ ಉಡುಪುಗಳಲ್ಲಿ ಅಸಾಮಾನ್ಯ ಪ್ರಮಾಣದ ನವಿಲು ಗರಿಗಳು ಗೋಚರಿಸುತ್ತಿದ್ದು, ಇಷ್ಟು ದೊಡ್ಡ ಪ್ರಮಾಣದ ಗರಿಗಳು ಎಲ್ಲಿಂದ ಬಂದವು? ಅವುಗಳನ್ನು ಕಾನೂನುಬದ್ಧವಾಗಿ ಪಡೆದಿದ್ದಾರೆಯೇ? ಅವುಗಳ ಮೂಲ ಯಾವುದು? ಯಾವುದೇ ಅನುಮತಿ ಅಥವಾ ದಾಖಲೆಗಳಿವೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ. ಇಂತಹ ಪ್ರದರ್ಶನಗಳು ಸಾರ್ವಜನಿಕರಲ್ಲಿ ನವಿಲು ಗರಿಗಳ ಬಳಕೆಯನ್ನು ಉತ್ತೇಜಿಸುವ ಅಪಾಯಕಾರಿ ಸಂದೇಶ ನೀಡುವ ಸಾಧ್ಯತೆ ಇದ್ದು, ಇದರಿಂದ ನವಿಲುಗಳ ಮೇಲೆ ಅಕ್ರಮ ಬೇಟೆ ಹಾಗೂ ಕಳ್ಳಸಾಗಣೆ ಚಟುವಟಿಕೆಗಳು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ"

Niveditha Gowda: ನಿವೇದಿತಾ ಗೌಡ ಮಾದಕ ನೃತ್ಯಕ್ಕೆ ಪಡ್ಡೆ ಹೈಕ್ಳು ಸುಸ್ತು

ಅಕ್ರಮ ವ್ಯಾಪಾರಕ್ಕೆ ಪರೋಕ್ಷ ಉತ್ತೇಜನ

"ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಪ್ರಭಾವಿ ವ್ಯಕ್ತಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವವರು ಇಂತಹ ವಸ್ತುಗಳನ್ನು ಪ್ರಚಾರಾತ್ಮಕವಾಗಿ ಬಳಸುವುದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ಪ್ರದರ್ಶನಗಳು ವನ್ಯಜೀವಿ ಉತ್ಪನ್ನಗಳ ಬಳಕೆಯನ್ನು ಸಾಮಾನೀಕರಿಸುವ ಮೂಲಕ ಅಕ್ರಮ ವ್ಯಾಪಾರಕ್ಕೆ ಪರೋಕ್ಷ ಉತ್ತೇಜನ ನೀಡುವ ಸಾಧ್ಯತೆ ಇದೆ. ಆದ್ದರಿಂದ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಂಬಂಧಿತ ಕಾನೂನು ಉಲ್ಲಂಘನೆಗಳ ಬಗ್ಗೆ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ"

ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಪಾರದರ್ಶಕ ಕ್ರಮ

"ಈ ಸಂಬಂಧ ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ವ್ಯಾಪ್ತಿಯ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ತಕ್ಷಣ ದೂರು ದಾಖಲಿಸಿ ತನಿಖೆ ನಡೆಸುವಂತೆ ನಿರ್ದೇಶನ ನೀಡಬೇಕು. ವಿಡಿಯೋ ಹಾಗೂ ಛಾಯಾಚಿತ್ರಗಳ ತಾಂತ್ರಿಕ ಪರಿಶೀಲನೆ ನಡೆಸಿ, ಬಳಸಲಾದ ಗರಿಗಳು ನೈಜವಾಗಿವೆಯೇ ಅಥವಾ ಕೃತಕವಾಗಿವೆಯೇ ಎಂಬುದನ್ನು ವೈಜ್ಞಾನಿಕವಾಗಿ ದೃಢೀಕರಿಸಬೇಕು. ನೈಜ ನವಿಲು ಗರಿಗಳಾಗಿರುವುದು ಕಂಡುಬಂದಲ್ಲಿ ಅವುಗಳನ್ನು ವಶಕ್ಕೆ ಪಡೆದು ಅವುಗಳ ಮೂಲ, ಖರೀದಿ, ಸಾಗಣೆ ಹಾಗೂ ಸಂಗ್ರಹಣೆಯ ಕುರಿತು ತನಿಖೆ ನಡೆಸಬೇಕು. ಹಾಗೆಯೇ, ಸಂಬಂಧಿತ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿ, ಗರಿಗಳನ್ನು ಪೂರೈಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನವಿಲು ಗರಿಗಳನ್ನು ಪಡೆಯುವ ಉದ್ದೇಶದಿಂದ ಯಾವುದೇ ಅಕ್ರಮ ಬೇಟೆ, ಕಳ್ಳಸಾಗಣೆ ಅಥವಾ ವನ್ಯಜೀವಿ ಅಪರಾಧ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚಲು ವಿಶೇಷ ತನಿಖೆ ನಡೆಸಬೇಕು. ತನಿಖೆಯ ಅವಧಿಯಲ್ಲಿ ಯಾವುದೇ ಪ್ರಭಾವ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಪಾರದರ್ಶಕ ಕ್ರಮ ಜರುಗಿಸಬೇಕು"

ನವಿಲೇ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ ಕಿಶನ್‌- ನಿವೇದಿತಾ ಗೌಡ



ನವಿಲು ಗರಿ ಉಡುಪುಗಳನ್ನು ವಶಕ್ಕೆ ಪಡೆಯಬೇಕು

"ಆದ್ದರಿಂದ, ಮಾನ್ಯರು ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸುತ್ತೇನೆ. ಈ ದೂರಿನ ಆಧಾರದ ಮೇಲೆ ತಕ್ಷಣ ಪ್ರಕರಣ ದಾಖಲಿಸಲು ನಿರ್ದೇಶನ ನೀಡಬೇಕು. ಶ್ರೀ ಕಿಶನ್ ಹಾಗೂ ನಿವೇದಿತಾ ಗೌಡ ಬಳಸಿರುವ ನವಿಲು ಗರಿ ಉಡುಪುಗಳನ್ನು ವಶಕ್ಕೆ ಪಡೆದು ಪರೀಕ್ಷಿಸಬೇಕು.ಗರಿಗಳ ಮೂಲ, ಖರೀದಿ ಹಾಗೂ ಪೂರೈಕೆ ಸರಪಳಿಯ ಕುರಿತು ಸಮಗ್ರ ತನಿಖೆ ನಡೆಸಬೇಕು. ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಅನ್ವಯ ಅನ್ವಯವಾಗುವ ವಿಧಿಗಳಡಿ ಕಾನೂನು ಕ್ರಮ ಜರುಗಿಸಬೇಕು. ವನ್ಯಜೀವಿ ಸಂರಕ್ಷಣೆ ರಾಷ್ಟ್ರದ ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಜವಾಬ್ದಾರಿಯಾಗಿರುವುದರಿಂದ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಷ್ಟ್ರಪಕ್ಷಿಯ ಸಂರಕ್ಷಣೆಯ ದೃಷ್ಟಿಯಿಂದ ಹಾಗೂ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಉಲ್ಲಂಘನೆಯಾಗಿರುವುದರಿಂದ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ವಿನಂತಿಸಿದ್ದಾರೆ. ಸದ್ಯ ಈ ದೂರಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.