ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mother Promise Review: ತಾಯಾಣೆ, ಇದು ತಲೆನೋವು ಬರಿಸುವ ಸಿನಿಮಾ ಅಲ್ಲ, ನಗಿಸಿ ಹೊಟ್ಟೆನೋವು ಬರಿಸುವ ಸಿನಿಮಾ!

Mother Promise Movie Review: ಡಾಲಿ ಧನಂಜಯ್ ನಿರ್ಮಾಣದ ಹಾಗೂ ಪೂರ್ಣಚಂದ್ರ ಮೈಸೂರು ನಿರ್ದೇಶನದ 'ಮದರ್ ಪ್ರಾಮಿಸ್' ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬೆಂಗಳೂರಿನ ಇಬ್ಬರು ಡಾನ್‌ಗಳ ಸುತ್ತ ಇಡೀ ಕಥೆ ಹೆಣೆಯಲಾಗಿದ್ದು, ಯಾವುದೇ ಲಾಜಿಕ್ ಇಲ್ಲದ 'ಮೈಂಡ್‌ಲೆಸ್ ಕಾಮಿಡಿ' ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಇದರ ಪೂರ್ಣ ವಿಮರ್ಶೆ ಇಲ್ಲಿದೆ.

ನಟ ‘ಡಾಲಿ’ ಧನಂಜಯ್ ಅವರು ಹೊಸ ಪ್ರತಿಭೆಗಳನ್ನು ಬೆಳೆಸಲು ಹಾಗೂ ಹೊಸ ರೀತಿಯ ಕಥೆಗಳಿಗೆ ವೇದಿಕೆ ಕಲ್ಪಿಸಬೇಕು ಎಂಬ ಉದ್ದೇಶದಿಂದಲೇ ‘ಡಾಲಿ ಪಿಕ್ಚರ್ಸ್’ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈಗಾಗಲೇ ಈ ಬ್ಯಾನರ್‌ನಿಂದ ಒಂದಷ್ಟು ಪ್ರತಿಭೆಗಳು ಬೆಳಕಿಗೆ ಬಂದು ಮಿಂಚಿದ್ದಾರೆ. ಈ ಬಾರಿ ‘ಮದರ್ ಪ್ರಾಮಿಸ್’ ಸಿನಿಮಾದ ಮೂಲಕ ಒಂದು ದೊಡ್ಡ ಪ್ರತಿಭೆಗಳ ದಂಡನ್ನೇ ಪ್ರೇಕ್ಷಕರ ಮುಂದೆ ನಿಲ್ಲಿಸಿದ್ದಾರೆ ಡಾಲಿ ಧನಂಜಯ್.

ಧನಂಜಯ್ ಅವರ ಸ್ನೇಹಿತ ಹಾಗೂ ನಟ ಪೂರ್ಣಚಂದ್ರ ಮೈಸೂರು ಅವರು ‘ಮದರ್ ಪ್ರಾಮಿಸ್’ ಮೂಲಕ ನಿರ್ದೇಶಕರಾಗಿದ್ದಾರೆ. ಅವರೇ ಕಥೆ-ಚಿತ್ರಕಥೆ ಬರೆದುಕೊಂಡಿರುವ ಈ ಸಿನಿಮಾಕ್ಕೆ ಡಾಲಿ ಬಂಡವಾಳ ಹೂಡಿದ್ದರೆ, ಒಂದು ದೊಡ್ಡ ಬಳಗವೇ ಸಾಥ್ ನೀಡಿದೆ. ‘ಮದರ್ ಪ್ರಾಮಿಸ್’ ಟ್ರೇಲರ್ ನೋಡಿದವರಿಗೆ ಇದೊಂದು ‘ಮೈಂಡ್‌ಲೆಸ್ ಕಾಮಿಡಿ’ ಜಾನರ್‌ನ ಸಿನಿಮಾ ಎಂಬುದು ಗೊತ್ತಾಗಿರುತ್ತದೆ. ಅಷ್ಟಕ್ಕೂ ಈ ಸಿನಿಮಾ ಹೇಗಿದೆ? ಏನಿದು ಮದರ್ ಪ್ರಾಮಿಸ್? ಮುಂದೆ ಓದಿ.

ಒಂದು ದಿನದಲ್ಲಿ ನಡೆಯುವ ಕಥೆ!

ಚಿತ್ರದ ಕಥೆ ನಿಂತಿರುವುದು ಬೆಂಗಳೂರಿನ ಇಬ್ಬರು ಡಾನ್‌ಗಳ ಸುತ್ತ. ಅಮ್ಮ ಕೊಡಿಸಿದ ಸ್ಪ್ಲೆಂಡರ್ ಬೈಕ್‌ನಲ್ಲಿ ರೇಸ್ ಆಡುತ್ತಾ ಬೆಳೆದು, ಈಗ ಸಿಟಿಯ ದೊಡ್ಡ ಗ್ಯಾಂಬ್ಲಿಂಗ್ ಕಿಂಗ್‌ಪಿನ್ ಆಗಿರುವ ರೋಸಿ (ಧನಂಜಯ್) ಒಂದು ಕಡೆಯಾದರೆ, ‘ದೊನ್ನೆ ಬಿರಿಯಾನಿ’ (ಮಹದೇವ್ ಪ್ರಸಾದ್) ಹೆಸರಿನ ಮತ್ತೊಬ್ಬ ಡಾನ್ ಮಗದೊಂದು ಕಡೆ! ಸಣ್ಣ ವಿಚಾರಕ್ಕೆ ಕಿರಿಕ್ ಮಾಡಿಕೊಂಡು ಇಡೀ ಬೆಂಗಳೂರನ್ನು ಅರ್ಧರ್ಧ ಹಂಚಿಕೊಂಡಿರುವ ಇವರ ನಡುವೆ, ಐಪಿಎಲ್ ಫೈನಲ್ ಪಂದ್ಯ ಮುಗಿದ ಮೇಲೆ ದೊಡ್ಡ ರಗಳೆಯೇ ಶುರುವಾಗುತ್ತದೆ. ಅತ್ತಲಿಂದ ನಾಲ್ಕೈದು ಮಂದಿ, ಇತ್ತಲಿಂದ ಐದಾರು ಮಂದಿ ಬಂದು ಎರಡೂ ಗ್ಯಾಂಗ್‌ಗಳ ಮಧ್ಯೆ ದೊಡ್ಡ ದೊಂಬಿಯನ್ನೇ ಎಬ್ಬಿಸಿಬಿಡುತ್ತಾರೆ. ಆ ದೊಂಬಿ-ಗಲಾಟೆಯಲ್ಲಿ ಕೈ-ಏಟಿಗಿಂತ ನಗುವಿನ ಏಟುಗಳೇ ಜಾಸ್ತಿ! ಅದು ಹೇಗೆ ಎಂಬುದನ್ನು ತೆರೆಮೇಲೆಯೇ ನೋಡಬೇಕು!

ಸಂಪೂರ್ಣವಾಗಿ ಆವರಿಸಿಕೊಳ್ಳುವ ಪೂರ್ಣ

ನಟ ಪೂರ್ಣಚಂದ್ರ ಮೈಸೂರು ಇದೇ ಮೊದಲ ಬಾರಿಗೆ ನಿರ್ದೇಶನದ ಗದ್ದುಗೆ ಏರಿದ್ದಾರೆ. ಮೊದಲ ಸಿನಿಮಾದಲ್ಲೇ ಇಷ್ಟೊಂದು ದೊಡ್ಡ ತಾರಾಗಣವಿರುವ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಪೂರ್ಣ ಇಲ್ಲಿ ಪ್ರೇಕ್ಷಕರನ್ನು ಪದೇಪದೇ ಸಂಪೂರ್ಣವಾಗಿ ನಗಿಸಬೇಕು ಎಂದು ನಿರ್ಧರಿಸಿಯೇ ಕಥೆ, ಚಿತ್ರಕಥೆ ಬರೆದಂತಿದೆ. ಪೂರ್ಣಗೆ ಇಲ್ಲಿ ಮೊದಲ ಗೆಲುವು ಸಿಕ್ಕಿರುವುದೇ ಕಲಾವಿದರ ಆಯ್ಕೆಯ ವಿಚಾರದಲ್ಲಿ. ಪ್ರತಿಯೊಬ್ಬರೂ ಕೂಡ ಆಯಾ ಪಾತ್ರಗಳಿಗೆ ಸೂಕ್ತವಾಗಿ ಹೊಂದಿಕೊಂಡಿದ್ದಾರೆ. ಇಲ್ಲಿ ಸಾಂಪ್ರದಾಯಿಕ ಲವ್ ಸ್ಟೋರಿ ಇಲ್ಲ, ಪ್ರತ್ಯೇಕ ಕಾಮಿಡಿ ಟ್ರ್ಯಾಕ್ ಇಲ್ಲ; ಬದಲಿಗೆ ಇಡೀ ಸಿನಿಮಾವೇ ಒಂದು ಫನ್ ರೈಡ್! ಯಾವುದೇ ಬೋರಿಂಗ್ ಉಪದೇಶವಿಲ್ಲದೆ, ನಗಿಸುತ್ತಲೇ ಸ್ನೇಹದ ಮಹತ್ವವನ್ನು ಹೇಳಲಾಗಿದೆ. ತಲೆನೋವು ಬರಿಸುವ ಸಿನಿಮಾ ನಡುವೆ, ಇದು ನಕ್ಕು ನಕ್ಕು ಹೊಟ್ಟೆ ನೋವು ಬರಿಸುವಂತಿದೆ.

ಸಿನಿಮಾ ಆರಂಭವಾಗುತ್ತಿದ್ದಂತೆಯೇ ಒಂದಷ್ಟು ಗೊಂದಲಗಳು ಎದುರಾಗುತ್ತವೆ. ಯಾರು ಯಾರಿಗೆ ಹೊಡೆಯುತ್ತಿದ್ದಾರೆ, ಯಾರ ಹಿಂದೆ ಯಾರು ಬಿದ್ದಿದ್ದಾರೆ, ಯಾರನ್ನು ಯಾರು ಹುಡುಕುತ್ತಿದ್ದಾರೆ.. ಹೀಗೆ ಹಲವು ಪ್ರಶ್ನೆಗಳು ನೋಡುಗನನ್ನು ಕಾಡುತ್ತವೆ. ಆದರೆ, ಅದೆಲ್ಲದಕ್ಕೂ ಇಂಟರ್ವೆಲ್‌ಗೂ ಮುಂಚೆಯೇ ಕ್ಲಾರಿಟಿ ಕೊಡುವ ನಿರ್ದೇಶಕರು, ಆನಂತರ ದ್ವಿತೀಯಾರ್ಧವನ್ನು ಒಂದೇ ಲೀನಿಯರ್ ಟ್ರ್ಯಾಕ್‌ನಲ್ಲಿ ಮನರಂಜನಾತ್ಮಕವಾಗಿ ಕೊಂಡೊಯ್ಯುತ್ತಾರೆ.

ʻಮದರ್‌ ಪ್ರಾಮಿಸ್‌ʼ‌ ಸಿನಿಮಾ ಟ್ರೇಲರ್‌: ಜುಲೈ 10ಕ್ಕೆ ಥಿಯೇಟರ್‌ನಲ್ಲಿ ‌ʻಡಾಲಿʼ ಧನಂಜಯ್‌ ಗ್ಯಾಂಗ್‌ನ ಹಾವಳಿ ಫಿಕ್ಸ್!

ಇದು ತಲೆಗೆ ಜಾಸ್ತಿ ಕೆಲಸ ಕೊಡದ ಒಂದು ಪಕ್ಕಾ ‘ಮೈಂಡ್‌ಲೆಸ್ ಕಾಮಿಡಿ’ ಸಿನಿಮಾ. ತೆರೆಮೇಲೆ ನೋವಿರಲಿ, ಕಷ್ಟವಿರಲಿ, ಸುಖವಿರಲಿ.. ಏನೇ ಬಂದರೂ ನೋಡುಗ ಮಾತ್ರ ನಗುತ್ತಲೇ ಇರುತ್ತಲೇ ಇರಲಿ ಎಂಬುದು ನಿರ್ದೇಶಕರ ಪಾಲಿಸಿ. ಹಿಂದಿಯ ‘ಹೇರಾ ಫೇರಿ’, ‘ಧಮಾಲ್’, ‘ಗೋಲ್‌ಮಾಲ್’, ‘ವೆಲ್‌ಕಮ್‌’ನಂತಹ ಸಿನಿಮಾಗಳು ಇಂಥದ್ದೇ ಫಾರ್ಮ್ಯಾಟ್‌ನಲ್ಲಿವೆ. ಅದೇ ಮಾದರಿಯನ್ನು ಪೂರ್ಣ ಕೂಡ ಇಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಇನ್ನು ಕೆರೆಗಳೇ ಕಾಣೆಯಾಗಿರುವ ಬೆಂಗಳೂರಿನಲ್ಲಿ ಅವರು ‘ಸಮುದ್ರ’ (ಬನಶಂಕರಿ ಬೀಚ್) ತೋರಿಸಿರುವ ಕ್ರಿಯೇಟಿವಿಟಿ ಸಖತ್ ಮಜಾ ನೀಡುತ್ತದೆ.

ಟೆಕ್ನಿಕಲಿ ಹೇಗಿದೆ? ಮೈನಸ್ ಪಾಯಿಂಟ್ಸ್ ಏನು?

ಸಿನಿಮಾದ ಒನ್‌ಲೈನರ್ ಪಂಚ್ ಸಂಭಾಷಣೆಗಳು ಅದ್ಭುತವಾಗಿ ವರ್ಕ್ ಆಗಿವೆ. ಛಾಯಾಗ್ರಹಣ ಹಾಗೂ ಸಂಗೀತ ಚಿತ್ರದ ಮೂಡ್‌ಗೆ ಪೂರಕವಾಗಿವೆ. ಆದರೆ, ಪ್ರಥಮಾರ್ಧದಲ್ಲಿ ಬರುವ ಕೆಲವು ಬಾರ್ ಸೀನ್‌ಗಳು ಹಾಗೂ ಅನಗತ್ಯ ಬಿಲ್ಡಪ್‌ಗಳಿಗೆ ಕತ್ತರಿ ಹಾಕಿದ್ದರೆ ಚಿತ್ರದ ವೇಗ ಇನ್ನಷ್ಟು ಹೆಚ್ಚುತ್ತಿತ್ತು. ಸಿನಿಮಾದಲ್ಲಿ ಜಾಸ್ತಿ ಲಾಜಿಕ್ ಹುಡುಕಲು ಹೋದರೆ ಒಂಚೂರು ನಿರಾಸೆಯಾಗಬಹುದು.

ಇದು ಪ್ರತಿಭೆಗಳ ಗೊಂಚಲು

‘ಮದರ್ ಪ್ರಾಮಿಸ್’ ಸಿನಿಮಾದಲ್ಲಿ ಧನಂಜಯ್ ಸೇರಿದಂತೆ 25ಕ್ಕೂ ಅಧಿಕ ಕಲಾವಿದರಿದ್ದಾರೆ. ಎಲ್ಲರೂ ಒಂದಲ್ಲಾ ಒಂದು ಸೀನ್‌ನಲ್ಲಿ ನೋಡುಗರ ಗಮನ ಸೆಳೆದು ಹೋಗುತ್ತಾರೆ. ಧನುಗೆ ಇಲ್ಲಿ ಜಾಸ್ತಿ ಸ್ಕ್ರೀನ್ ಸ್ಪೇಸ್ ಇಲ್ಲ. ಇವರೇನೂ ಇಲ್ಲಿ ಹೀರೋ ಆಗಿ ಕಾಣಿಸಿಕೊಂಡಿಲ್ಲ, ಬದಲಾಗಿ ‘ಮದರ್ ಪ್ರಾಮಿಸ್’ ತಂಡದಲ್ಲಿ ತಾವೂ ಒಂದು ಪಾತ್ರವಾಗಿ ಬಂದು ಹೋಗುತ್ತಾರೆ. ಚಿ. ಗುರುದತ್, ಮಹದೇವ್ ಪ್ರಸಾದ್, ಯಶವಂತ್ ಶೆಟ್ಟಿ, ಶ್ರೀವತ್ಸ, ಅರುಣ್ ಬ್ರಹ್ಮಾವರ್, ನರೇಶ್ ಡಿಂಗ್ರಿ ಮುಂತಾದವರು ಪದೇಪದೇ ನಗಿಸುತ್ತಾರೆ. ಫ್ಲಾಶ್‌ಬ್ಯಾಕ್‌ನಲ್ಲಿ ಅಮ್ಮನಾಗಿ ವಿನಯಾ ಪ್ರಸಾದ್ ಬಂದು ಹೋದರೆ, ತಿದ್ದುವ ಗುರುವಿನ ಪಾತ್ರದಲ್ಲಿ ಹಿರಿಯ ನಟಿ ಗೀತಾ ಮಿಂಚಿದ್ದಾರೆ.

ಬಹಳ ದಿನಗಳ ನಂತರ ತಲೆಗೆ ಅಷ್ಟಾಗಿ ಕೆಲಸ ಕೊಡದೆ, ಮನಸಾರೆ ನಕ್ಕು ಬರಬಹುದಾದ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಿದು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಮತ್ತು ‘ಸು ಫ್ರಂ ಸೋ’ ಮಾದರಿಯ ಹೊಸ ಅಲೆಯ ಕಾಮಿಡಿ ಚಿತ್ರಗಳನ್ನು ಇಷ್ಟಪಡುವವರಿಗೆ ‘ಮದರ್ ಪ್ರಾಮಿಸ್’ ಖಂಡಿತವಾಗಿಯೂ ಇಷ್ಟವಾಗುತ್ತದೆ.

Movie: ಮದರ್‌ ಪ್ರಾಮಿಸ್

Release Date: ಜು.10, 2026

Language: ಕನ್ನಡ

Genre: ಕಾಮಿಡಿ, ಥ್ರಿಲ್ಲರ್‌, ಡ್ರಾಮಾ

Director: ಪೂರ್ಣ ಮೈಸೂರು

Cast: ಧನಂಜಯ್, ಮಹದೇವ್ ಪ್ರಸಾದ್, ಪೂರ್ಣ ಮೈಸೂರು, ಚಿ. ಗುರುದತ್, ಯಶವಂತ್ ಶೆಟ್ಟಿ, ವಿನಯಾ ಪ್ರಸಾದ್, ಗೀತಾ ಮತ್ತು ಇತರರು.,

Duration: 166 ನಿಮಿಷ

Rating: 3.5/5