ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jerax Trailer: ʻಜೆರಾಕ್ಸ್ʼ ಕಾಪಿಗೆ ಜೀವ ಬಂದ್ರೆ ಹೇಗಿರುತ್ತೆ? ಡಾಲಿ ಧನಂಜಯ್ ನಿರ್ಮಾಣದ ವೆಬ್ ಸರಣಿಯಲ್ಲಿ ಫ್ಯಾಂಟಸಿ ಕಿಕ್!

Xerox Web Series: ಡಾಲಿ ಧನಂಜಯ ನಿರ್ಮಾಣದ, 'ಬ್ಲಿಂಕ್' ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶನದ ಜೆರಾಕ್ಸ್ ವೆಬ್‌ ಸರಣಿಯ ಟ್ರೇಲರ್‌ ರಿಲೀಸ್‌ ಆಗಿದೆ. ಒಂದು ನಿಗೂಢ ತಾಯಿತದಿಂದಾಗಿ ಜೆರಾಕ್ಸ್ ಕಾಪಿಗಳಿಗೆ ಜೀವ ಬಂದು, ಇಡೀ ಊರಿನಲ್ಲಿ ನಡೆಯುವ ಅಚ್ಚರಿ ಮತ್ತು ಹಾಸ್ಯದ ಘಟನೆಗಳೇ ಈ ಆರು ಸಂಚಿಕೆಗಳ ಸರಣಿಯ ಜೀವಾಳ. ಏಪ್ರಿಲ್ 24 ರಿಂದ ಇದು ಜೀ5 ನಲ್ಲಿ ಈ ವೆಬ್‌ ಸರಣಿಯು ವೀಕ್ಷಣೆಗೆ ಲಭ್ಯವಾಗಲಿದೆ.

ಜೀ5ನ ಬಹುನಿರೀಕ್ಷಿತ ವೆಬ್‌ ಸರಣಿ ʻಜೆರಾಕ್ಸ್‌ʼನ ಟ್ರೇಲರ್‌ ಬಿಡುಗಡೆಯಾಗಿದ್ದು, 6 ಸಂಚಿಕೆಗಳುಳ್ಳ ಈ ಫ್ಯಾಂಟಸಿ ಹಾಸ್ಯ ವೆಬ್‌ ಸರಣಿಯ ಟ್ರೇಲರ್‌ ಗಮನಸೆಳೆಯುತ್ತಿದೆ. ನಟ, ನಿರ್ಮಾಪಕ ʻಡಾಲಿʼ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ʻಜೆರಾಕ್ಸ್‌ʼ‌ ವೆಬ್ ಸರಣಿ ನಿರ್ಮಾಣಗೊಂಡಿದ್ದು, ಇದಕ್ಕೆ ʻಬ್ಲಿಂಕ್‌ʼ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಆಕ್ಷನ್‌ - ಕಟ್‌ ಹೇಳಿದ್ದಾರೆ. ʻಜೆರಾಕ್ಸ್‌ʼ ವೆಬ್‌ ಸೀರಿಸ್‌ನಲ್ಲಿ ನಾಗಭೂಷಣ್‌, ಪಾಯಲ್‌ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಏನಿದು ಜೆರಾಕ್ಸ್?

ಮಳವಳ್ಳಿಯ ರಾಯದುರ್ಗದ ಪ್ರಕಾಶ (ನಾಗಭೂಷಣ) ಒಬ್ಬ ಸಾಮಾನ್ಯ ಜೆರಾಕ್ಸ್‌ ಅಂಗಡಿ ಕೆಲಸಗಾರ. ಅವನ ಜೆರಾಕ್ಸ್‌ ಯಂತ್ರಕ್ಕೆ ಒಂದು ತಾಯಿತ ಸೇರಿದಾಗ ಅವನ ಜೀವನ ಬದಲಾಗುತ್ತದೆ. ಅವನು ತೆಗೆಯುವ ಜೆರಾಕ್ಸ್‌ ಕಾಪಿಗಳಿಗೆ ಜೀವ ಬಂದು ಅವನ ಜೀವನ ಉಲ್ಟಾಪಲ್ಟಾವಾಗುತ್ತದೆ. ಇದರಿಂದ ಆಗುವ ಅಚಾನಕ್‌ ಬದಲಾವಣೆಗಳು, ಊರಿನಲ್ಲಾಗುವ ಆಶ್ಚರ್ಯಕರ ಘಟನೆಗಳು, ಕುತೂಹಲಕಾರಿ ಸನ್ನಿವೇಶಗಳನ್ನು ಈ ಕಥೆಯು ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಜೀ5ನಲ್ಲಿ ಇದೇ ಏಪ್ರಿಲ್‌ 24ರಿಂದ ಈ ವೆಬ್‌ ಸರಣಿಯು ಸ್ಟ್ರೀಮಿಂಗ್‌ ಆಗಲಿದ್ದು, ಕನ್ನಡ ವೆಬ್‌ ಸರಣಿ ಪ್ರಿಯರಿಗೆ ಹೊಸ ರೀತಿಯ ಮನರಂಜನೆ ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸುತ್ತದೆ ಜೆರಾಕ್ಸ್‌ ಟೀಮ್.

ʻಕಿಚ್ಚʼ ಸುದೀಪ್‌ ಸೋದರಳಿಯನ ಸಿನಿಮಾಕ್ಕೆ ‌ʻಡಾಲಿʼ ಧನಂಜಯ್ ಎಂಟ್ರಿ; ʻಮ್ಯಾಂಗೋ ಪಚ್ಚʼ ಟೀಮ್‌ನಿಂದ ಹೊಸ ಬ್ರೇಕಿಂಗ್‌ ನ್ಯೂಸ್

ನಿರ್ಮಾಪಕ ಧನಂಜಯ್ ಹೇಳಿದ್ದೇನು?

"ನನಗೆ ಈ ಕಥೆ ಇಷ್ಟವಾಗಲು ಕಾರಣ, ಅದು ಹೇಳುವ ತತ್ವ. ಪ್ರತಿಯೊಂದು ಹಾಸ್ಯ ಸನ್ನಿವೇಶದ ಹಿಂದೆ ಅಡಗಿರುವ ತತ್ವ ನನ್ನನ್ನು ಗಾಢವಾಗಿ ಸೆಳೆಯಿತು. ಜೆರಾಕ್ಸ್‌ ಕಾಪಿಗಳಿಗೆ ಜೀವ ಬಂದಾಗ, ಜನರು ತಮ್ಮ ಪ್ರತಿಬಿಂಬವನ್ನೇ ಸ್ವೀಕರಿಸಲು ಹೇಗೆ ನಿರಾಕರಿಸುತ್ತಾರೆ ಇವೆಲ್ಲವು ನನ್ನನ್ನು ಆಕರ್ಷಿಸಿತು. ಈ ಕಥೆಯು ಒಂಟಿತನ, ಹಾಸ್ಯ, ಪಶ್ಚಾತಾಪ, ಗೊಂದಲ ಎಲ್ಲವನ್ನೂ ಒಳಗೊಂಡಿದೆ. ಇದು ಕೇವಲ ಹಾಸ್ಯವನ್ನಷ್ಟೇ ಹೇಳದೇ, ಜೀವನದ ಮೌಲ್ಯಗಳನ್ನೂ ಕೂಡ ಹೇಳುತ್ತದೆ" ಎನ್ನುತ್ತಾರೆ ನಿರ್ಮಾಪಕ ಡಾಲಿ ಧನಂಜಯ.

ಇದು ಭಯದಿಂದ ಹುಟ್ಟಿದ ಕಥೆ

"ನಮ್ಮ ಕಾಪಿಯು ನಾವು ನೋಡಲು ಬಯಸದ ನಮ್ಮ ಒಂದು ವ್ಯಕ್ತಿತ್ವವನ್ನು ಬಿಂಬಿಸಿದರೆ ಹೇಗೆ ಇರುತ್ತದೆ? ಜೆರಾಕ್ಸ್‌ ಈ ಒಂದು ಭಯದಿಂದ ಹುಟ್ಟಿದ ಕಥೆ ಎಂದರೆ ತಪ್ಪಾಗಲಾರದು. ಮಳವಳ್ಳಿಯಲ್ಲಿ ನಡೆಯುವ ಈ ಒಂದು ಆಶ್ಚರ್ಯಕರ ಘಟನೆ ಹೇಗೆ ಹಲವಾರು ಹೊಸ ತಿರುವುಗಳಿಗೆ ಕಾರಣವಾಗುತ್ತದೆ? ಹೇಗೆ ಜನರ ಜೀವನವನ್ನು ಬದಲಾಯಿಸುತ್ತದೆ? ಇವೆಲ್ಲವನ್ನೂ ಕುತೂಹಲಕಾರಿಯಾಗಿ ತೋರಿಸುವ ಪ್ರಯತ್ನ ಈ ವೆಬ್‌ ಸರಣಿಯಲ್ಲಿ ಆಗಿದೆ" ಎನ್ನುತ್ತಾರೆ ನಿರ್ದೇಶಕ ಶ್ರೀನಿಧಿ ಬೆಂಗಳೂರು.

Mother Promise: ಗೆಳೆಯರ ಗ್ಯಾಂಗ್‌ ಜೊತೆಗೆ ಬಂದು ʻತಾಯಾಣೆʼ ಮನರಂಜನೆ ಮಿಸ್‌ ಆಗಲ್ಲ ಅಂತಿದ್ದಾರೆ ‌ʻಡಾಲಿʼ ಧನಂಜಯ್

ಇದೊಂದು ವಿಭಿನ್ನವಾದ ಪಾತ್ರ

"ನಾನು ಪ್ರಕಾಶ ಎಂಬ ಒಬ್ಬ ಸಾಮಾನ್ಯ ಜೆರಾಕ್ಸ್‌ ಅಂಗಡಿ ಕೆಲಸಗಾರನ ಪಾತ್ರವನ್ನು ಮಾಡಿದ್ದೇನೆ. ತನ್ನ ಜೀವನದಲ್ಲಿ ಆಗುವ ಒಂದು ಘಟನೆಯಿಂದ ಹೇಗೆ ಇಡೀ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ ಎಂಬುದನ್ನು ಕಥೆಯು ಹೇಳುತ್ತದೆ. ಪ್ರಕಾಶ ಸಾಮಾನ್ಯ ವ್ಯಕ್ತಿ. ಆತನೇನು ಪ್ರಭಾವಿಯಲ್ಲ. ಆದರೆ ಈ ಘಟನೆಯ ನಂತರ ಎಲ್ಲರ ಜೀವನದಲ್ಲಿ ನಡೆಯುವ ಘಟನೆಗಳಿಗೆ ಇವನು ಕಾರಣಕರ್ತನಾಗಿರುತ್ತಾನೆ. ಅವನು ಶಕ್ತಿಶಾಲಿಯೇನಲ್ಲ, ಕೆಟ್ಟವನೂ ಅಲ್ಲ. ಆದರೆ ಎಲ್ಲದರ ಹಿಂದೆ ಇವನ ಕೈವಾಡವಿರುತ್ತದೆ. ಇದೊಂದು ವಿಭಿನ್ನವಾದ ಪಾತ್ರ. ವಿವಿಧ ಬಣ್ಣಗಳುಳ್ಳ ಪಾತ್ರ ಎಂದರೆ ತಪ್ಪಾಗಲಾರದು" ಎನ್ನುತ್ತಾರೆ ನಟ ನಾಗಭೂಷಣ.

ಜೆರಾಕ್ಸ್‌ನಲ್ಲಿ ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಶ್ರೀವತ್ಸ, ಯಶವಂತ್‌ ಶೆಟ್ಟಿ, ವಿಜಯ್‌ ಪ್ರಸಾದ್‌, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್‌ ಗೌಡ ಮುಂತಾದವರು ನಟಿಸಿದ್ದಾರೆ.