ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅವರು ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಎಂಟ್ರಿ ಕೊಡುತ್ತಿರುವುದು ಗೊತ್ತೇ ಇದೆ. ʻಮ್ಯಾಂಗೋ ಪಚ್ಚʼ ಹೆಸರಿನ ಸಿನಿಮಾದಲ್ಲಿ ಅವರು ಹೀರೋ ಆಗಿದ್ದು, ನಾಯಕಿಯಾಗಿ ಕಾಜಲ್ ಕುಂದರ್ ಕಾಣಿಸಿಕೊಳ್ಳಲಿದ್ದಾರೆ. ಸುಪ್ರಿಯಾನ್ವಿ ಸ್ಟುಡಿಯೋಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಿಂದ ಒಂದು ಬ್ರೇಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ.
ಡಾಲಿ ಧನಂಜಯ್ ಎಂಟ್ರಿ
ಬಿಡುಗಡೆಯ ಹಂತಕ್ಕೆ ಬಂದಿರುವ ʻಮಾಂಗೋ ಪಚ್ಚʼ ಸಿನಿಮಾಕ್ಕೆ ಈಗ ಡಾಲಿ ಧನಂಜಯ್ ಅವರ ಎಂಟ್ರಿಯಾಗಿದೆ ಎಂಬ ಟಾಕ್ ಕೇಳಿಬಂದಿದೆ. ಹೌದು, ಈ ಚಿತ್ರದ ಒಂದು ವಿಶೇಷ ಪಾತ್ರದಲ್ಲಿ ಡಾಲಿ ಧನಂಜಯ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಕೆಆರ್‌ಜಿ ಸ್ಟುಡಿಯೋಸ್ ಜೊತೆಗೆ ಡಾಲಿ ಧನಂಜಯ್ ಅವರಿಗೆ ಉತ್ತಮ ಒಡನಾಟ ಇರುವುದ ಗೊತ್ತೇ ಇದೆ. ಇದೀಗ ಅದೇ ಬ್ಯಾನರ್‌ನ ಈ ಹೊಸ ಸಿನಿಮಾಕ್ಕೆ ಡಾಲಿ ಸಾಥ್ ನೀಡಿದ್ದಾರೆ. ಸದ್ಯ ಡಾಲಿ ನಿಭಾಯಿಸುತ್ತಿರುವ ಪಾತ್ರವೇನು ಎಂಬುದರ ಬಗ್ಗೆ ಚಿತ್ರತಂಡದಿಂದಲೇ ಮಾಹಿತಿ ಹೊರಬರಬೇಕಿದೆ.
ಬಿಗ್‌ಬಾಸ್‌ಗೆ ʻರಣ ಹದ್ದುʼ ಸಂಕಷ್ಟ; ನಟ ಕಿಚ್ಚ ಸುದೀಪ್ ವಿರುದ್ಧ ಅರಣ್ಯಾಧಿಕಾರಿಗೆ ದೂರು
ಮ್ಯಾಂಗೋ ಪಚ್ಚ ಸೆಟ್‌ಗೆ ಸುದೀಪ್ ಎಂಟ್ರಿ
ಮೂಲಗಳ ಪ್ರಕಾರ, ನಟ ಮತ್ತು ನಿರ್ದೇಶಕ ಕಿಚ್ಚ ಸುದೀಪ್ ಅವರು ಕಳೆದ ಕೆಲವು ದಿನಗಳಿಂದ ಮ್ಯಾಂಗೋ ಪಚ್ಚ ಚಿತ್ರದ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಪ್ರಮುಖ ದೃಶ್ಯಗಳ ಚಿತ್ರೀಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ (ಸುಪ್ರಿಯಾನ್ವಿ ಸ್ಟುಡಿಯೋಸ್) ಹಾಗೂ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ (ಕೆಆರ್‌ಜಿ ಸ್ಟುಡಿಯೋಸ್) ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರವು ಈ ವರ್ಷದ ಆರಂಭದಲ್ಲೇ ಬಿಡುಗಡೆಯಾಗಬೇಕಿತ್ತು, ಆದರೆ ಸಂಚಿತ್‌ಗೆ ಇದು ಭದ್ರವಾದ ಅಡಿಪಾಯವಾಗಬೇಕೆಂಬ ಉದ್ದೇಶದಿಂದ ಚಿತ್ರತಂಡವು ಹೆಚ್ಚಿನ ಸಮಯವನ್ನು ತೆಗೆದುಕೊಂಡು ಸಿನಿಮಾವನ್ನು ಇನ್ನಷ್ಟು ಚೆಂದಗಾಣಿಸುವುದಕ್ಕಾಗಿ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಇದು ಮೈಸೂರಿನ ಕ್ರೈಮ್ ಕಥೆ
ಮೈಸೂರಿನ ಹಿನ್ನೆಲೆಯಲ್ಲಿ ನಡೆಯುವ ಕ್ರೈಮ್ ಡ್ರಾಮಾವನ್ನು 'ಮಾಂಗೋ ಪಚ್ಚ' ಚಿತ್ರ ಹೊಂದಿದೆ. ಈ ಕಥೆಯು 2001 ರಿಂದ 2011 ರವರೆಗಿನ ಒಂದು ದಶಕದ ಅವಧಿಯನ್ನು ಒಳಗೊಂಡಿದೆ. ಮೈಸೂರಿನ ವಿವಿಧ ಕಾಲಘಟ್ಟಗಳನ್ನು ಮತ್ತು ಅಲ್ಲಿ ನಡೆಯುವ ಸರಣಿ ಘಟನೆಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ.
ಸಂಚಿತ್, ಕಾಜಲ್ ಕುಂದರ್ ಜೊತೆಗೆ ಈ ಚಿತ್ರದಲ್ಲಿ ಮಯೂರ್ ಪಟೇಲ್, ಭಾವನಾ, ಹಂಸ, ಹರಿಣಿ ಶ್ರೀಕಾಂತ್, ಜೈ ಗೋಪಿನಾಥ್ ಮತ್ತು ಪ್ರಶಾಂತ್ ಹಿರೇಮಠ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ.