ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhinav Kashyap: ಸಲ್ಮಾನ್‌ ಖಾನ್‌ ಓರ್ವ ಗೂಂಡಾ; ʼದಬಾಂಗ್‌ʼ ನಿರ್ದೇಶಕ ಅಭಿನವ್‌ ಕಶ್ಯಪ್‌ ಗಂಭೀರ ಆರೋಪ

Salman Khan: ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ವಿರುದ್ಧ ಜನಪ್ರಿಯ ನಿರ್ದೇಶಕ ಅಭಿನವ್‌ ಕಶ್ಯಪ್‌ ಗುಡುಗಿದ್ದಾರೆ. ಸಲ್ಮಾನ್‌ ಖಾನ್‌ಗೆ ನಟನೆಯಲ್ಲಿ ಆಸಕ್ತಿ ಇಲ್ಲ, ಅವರೊಬ್ಬ ಗೂಂಡಾ ಎಂದು ಆರೋಪಿಸಿದ್ದಾರೆ. 2010ರಲ್ಲಿ ತೆರೆಕಂಡ ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ʼದಬಾಂಗ್‌ʼನಲ್ಲಿ ಇವರಿಬ್ಬರು ಜತೆಯಾಗಿ ಕೆಲಸ ಮಾಡಿದ್ದರು. ಅದಾದ ಬಳಿಕ ಇಬ್ಬರ ಮಧ್ಯೆ ಬಿರುಕು ಮೂಡಿತ್ತು.

ಸಲ್ಮಾನ್‌ ಖಾನ್‌ ಓರ್ವ ಗೂಂಡಾ; ಅಭಿನವ್‌ ಕಶ್ಯಪ್‌ ಆರೋಪ

-

Ramesh B Ramesh B Sep 8, 2025 5:49 PM

ಮುಂಬೈ: ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ (Salman Khan) ವಿರುದ್ಧ ಜನಪ್ರಿಯ ನಿರ್ದೇಶಕ ಅಭಿನವ್‌ ಕಶ್ಯಪ್‌ (Abhinav Kashyap) ಗುಡುಗಿದ್ದಾರೆ. ಸಲ್ಮಾನ್‌ ಖಾನ್‌ಗೆ ನಟನೆಯಲ್ಲಿ ಆಸಕ್ತಿ ಇಲ್ಲ, ಅವರೊಬ್ಬ ಗೂಂಡಾ ಎಂದು ಆರೋಪಿಸಿದ್ದಾರೆ. 2010ರಲ್ಲಿ ತೆರೆಕಂಡ ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ʼದಬಾಂಗ್‌ʼ (Dabangg)ನಲ್ಲಿ ಇವರಿಬ್ಬರು ಜತೆಯಾಗಿ ಕೆಲಸ ಮಾಡಿದ್ದರು. ಸಲ್ಮಾನ್‌ ಖಾನ್‌ ವೃತ್ತಿ ಜೀವನಕ್ಕೆ ಟರ್ನಿಂಗ್‌ ಪಾಯಿಂಟ್‌ ಎನಿಕೊಂಡಿದ್ದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 221 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿ ಹೊಸ ದಾಖಲೆ ಬರೆದಿತ್ತು. ಅದಾದ ಬಳಿಕ ಇವರಿಬ್ಬರ ಮಧ್ಯೆ ಬಿರುಕು ಮೂಡಿದೆ.

ಸೆಪ್ಟೆಂಬರ್‌ 10ರಂದು ʼದಬಾಂಗ್‌ʼ ರಿಲೀಸ್‌ ಆಗಿ 15 ವರ್ಷ ಆಗಲಿದೆ. ಈ ಹಿನ್ನೆಲೆಯಲ್ಲಿ ಅಭಿನವ್‌ ಕಶ್ಯಪ್‌ ವಿಶೇಷ ಸಂದರ್ಶನ ನೀಡಿ, ಸಲ್ಮಾನ್‌ ಖಾನ್‌ಗೆ ವೃತ್ತಿಪರರಾಗಿರಲಿಲ್ಲ ಎಂದಿದ್ದಾರೆ.

ಅಭಿನವ್‌ ಕಶ್ಯಪ್‌ ಹೇಳಿದ್ದೇನು?

ʼʼದಬಾಂಗ್‌ʼ ಚಿತ್ರದ ಕುರಿತಾದ ಚರ್ಚೆಯಲ್ಲಿ ಸಲ್ಮಾನ್‌ ಖಾನ್‌ ಭಾಗವಹಿಸುತ್ತಿರಲಿಲ್ಲ. ಕಳೆದ 25 ವರ್ಷಗಳಿಂದ ಅವರಿಗೆ ನಟನೆಯಲ್ಲಿ ಆಸಕ್ತಿ ಉಳಿದಿಲ್ಲ. ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಅವರು ಚಿತ್ರರಂಗದಲ್ಲಿದ್ದಾರೆ. ಅದು ಬಿಟ್ಟರೆ ನಟನೆಯತ್ತ ಗಮನ ಹರಿಸುತ್ತಿಲ್ಲ. ಅವರೊಬ್ಬ ಗೂಂಡಾ. ʼದಬಾಂಗ್‌ʼ ಚಿತ್ರಕ್ಕಿಂತ ಮೊದಲು ಇದು ನನಗೆ ಗೊತ್ತಿರಲಿಲ್ಲ. ಅವರು ಕೆಟ್ಟ ವ್ಯಕ್ತಿʼʼ ಎಂದು ಕಿಡಿ ಕಾರಿದ್ದಾರೆ.

ʼʼಸುಮಾರು 50 ವರ್ಷಗಳಿಂದ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಅವರು ಬಂದಿದ್ದಾರೆ. ಹೀಗಾಗಿ ಅವರು ಈಗಲೂ ಮುಂದುವರಿಯುತ್ತಿದ್ದಾರೆ. ಅವರು ಇಡೀ ಬಾಲಿವುಡ್‌ ಅನ್ನು ನಿಯಂತ್ರಿಸುತ್ತಾರೆ. ನೀವು ಅವರ ಮಾತಿಗೆ ಒಪ್ಪದಿದ್ದರೆ ಸೇಡು ತೀರಿಸಿಕೊಳ್ಳುತ್ತಾರೆʼʼ ಎಂದು ಹೇಳಿದ್ದಾರೆ.

ಸಲ್ಮಾನ್‌ ಖಾನ್‌ ಜತೆಗೆ ಕೆಲಸ ಮಾಡಿದ ತಮ್ಮ ಸಹೋದರ ಅನುರಾಗ್‌ ಕಶ್ಯಪ್‌ ಅವರಿಗೂ ಇದೇ ರೀತಿಯ ಕೆಟ್ಟ ಅನುಭವವವಾಗಿದೆ ಎಂದಿದ್ದಾರೆ. ʼʼತೇರೆ ನಾಮ್‌ʼ ಚಿತ್ರದ ವೇಳೆ ನನ್ನ ಸಹೋದರ (ಅನುರಾಗ್‌ ಕಶ್ಯಪ್‌) ಕೂಡ ಇದೇ ರೀತಿಯ ತೊಂದರೆ ಅನುಭವಿಸಿದ್ದಾರೆ. ಸಲ್ಮಾನ್‌ ಅವರೊಂದಿಗೆ ಸಿನಿಮಾ ಮಾಡಲು ಸಾಧ್ಯವಿಲ್ಲವೆಂದೇ ʼದಬಾಂಗ್‌ʼಗಿಂತ ಮೊದಲು ತಿಳಿಸಿದ್ದರು. ಆದರೆ ನಾನು ಇದನ್ನು ನಂಬಿರಲಿಲ್ಲʼʼ ಎಂದು ವಿವರಿಸಿದ್ದಾರೆ.

ಕಿರಿಕಿರಿಯಿಂದಾಗಿ ಕೊನೆಗೆ ಅನುರಾಗ್‌ ಕಶ್ಯಪ್‌ ʼತೇರೆ ನಾಮ್‌ʼ ಚಿತ್ರದಿಂದ ಹೊರ ಬಂದಿದ್ದರಂತೆ. ʼʼಅನುರಾಗ್‌ ಕಶ್ಯಪ್‌ ʼತೇರೆ ನಾಮ್‌ʼ ಚಿತ್ರದ ಸ್ಕ್ರಿಪ್ಟ್‌ ಬರೆದಿದ್ದರು. ಬೋನಿ ಕಪೂರ್‌ ಅನುಚಿತವಾಗಿ ವರ್ತಿಸಿದ್ದರಿಂದ ಅವರು ಚಿತ್ರದಿಂದ ಹೊರ ನಡೆದರು. ಅವರ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ. ಇದೇ ಅನುಭವ ನನಗೂ ಆಗಿದೆ. ಯಾವುದೇ ಉತ್ತಮ ಚಿತ್ರ ಆಗಲು ಒಳ್ಳೆಯ ಸ್ಕ್ರಿಪ್ಟ್‌ ಅಗತ್ಯʼʼ ಎಂದು ನೆನಪಿಸಿಕೊಂಡಿದ್ದಾರೆ.

ಇದು ಮೊದಲ ಸಲವೇನಲ್ಲ

ಸಲ್ಮಾನ್‌ ಖಾನ್‌ ವಿರುದ್ಧ ಅಭಿನವ್‌ ಕಶ್ಯಪ್‌ ಆರೋಪಿಸುತ್ತಿರುವುದು ಇದು ಮೊದಲ ಸಲವೇನಲ್ಲ. 2020ರಲ್ಲಿ ಅವರು ಫೇಸ್‌ಬುಕ್‌ ಪೋಸ್ಟ್‌ ಮೂಲಕ ಸಲ್ಮಾನ್‌ ಖಾನ್‌ ಮತ್ತು ಸಹೋದರರಾದ ಅರ್ಬಾಜ್‌ ಖಾನ್‌, ಸೊಹೈಲ್‌ ಖಾನ್‌ ಮತ್ತು ಅವರ ತಂದೆ ಸಲೀಂ ಖಾನ್‌ ವಿರುದ್ಧ ಕಿಡಿಕಾರಿದ್ದರು. ಇವರೆಲ್ಲ ತನ್ನ ವೃತ್ತಿ ಜೀವನ ಹಾಳು ಮಾಡಿದ್ದರು ಎಂದು ಆರೋಪಿಸಿದ್ದಾರೆ. ಇದಾದ ಬಳಿಕ ಅರ್ಬಾಜ್‌ ಖಾನ್‌ ಕಾನೂನು ಸಮರ ಕೈಗೊಳ್ಳುವುದಾಗಿ ತಿಳಿಸಿದ್ದರು.