Darshan Birthday: ದರ್ಶನ್ ಹುಟ್ಟುಹಬ್ಬ; ಕಾಮನ್ ಡಿಪಿ ರಿಲೀಸ್ ಮಾಡಿದ ವಿಜಯಲಕ್ಷ್ಮೀ
ಲಕ್ಷಾಂತರ ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್‌ವುಡ್ ನಟ ದರ್ಶನ್ ಅವರಿಗೆ ಭಾನುವಾರ (ಫೆ. 16) ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದು, ವೈರಲ್ ಆಗಿದೆ.

ನಟ ದರ್ಶನ್.

ಬೆಂಗಳೂರು: ಲಕ್ಷಾಂತರ ಅಭಿಮಾನಿಗಳ ಪಾಲಿನ ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಅವರಿಗೆ ಭಾನುವಾರ (ಫೆ. 16) ಹುಟ್ಟುಹಬ್ಬದ ಸಂಭ್ರಮ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸುಮಾರು 6 ತಿಂಗಳು ಜೈಲಿನಲ್ಲಿದ್ದ ದರ್ಶನ್ ಡಿಸೆಂಬರ್‌ನಲ್ಲಿ ಹೊರ ಬಂದಿದ್ದು, ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ (Darshan Birthday). ಆದರೆ ಅನಾರೋಗ್ಯದ ಕಾರಣ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಅವರು ಇತ್ತೀಚೆಗೆ ತಿಳಿಸಿದ್ದು, ಫ್ಯಾನ್ಸ್‌ಗೆ ನಿರಾಸೆ ಉಂಟು ಮಾಡಿತ್ತು. ಇದನ್ನು ಮರೆಸುವಂತೆ ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದು, ವೈರಲ್ ಆಗಿದೆ. ಹಲವರ ಡಿಪಿಯನ್ನು ಈ ಫೋಟೊ ಅಲಂಕರಿಸಿದೆ.
ಈಗ ಬಿಡುಗಡೆ ಮಾಡಲಾಗಿರುವ ಡಿಪಿಯಲ್ಲಿ ದರ್ಶನ್ ಅವರ ದೊಡ್ಡ ಕಟೌಟ್ನ ಚಿತ್ರವಿದೆ. ಅವರು ಅಭಿಮಾನಿಗಳೆಡೆಗೆ ಕೈ ಬೀಸುವಂತೆ ಚಿತ್ರಿಸಲಾಗಿದೆ. ಹಿನ್ನೆಲೆಯಲ್ಲಿ ಹಲವು ಅಂಗಡಿಗಳಿವೆ.
ಬಹುತೇಕ ಎಲ್ಲ ಅಂಗಡಿಗಳಿಗೂ ದರ್ಶನ್ ಅವರ ಹೆಸರೇ ಇದೆ. ಅಭಿಮಾನಿಗಳು ದರ್ಶನ್ ಕಟೌಟ್ ಕಡೆಗೆ ಕೈ ಬೀಸುತ್ತಿರುವ ಚಿತ್ರಣವೂ ಡಿಪಿಯಲ್ಲಿದೆ. ಸದ್ಯ ಈ ಡಿಪಿ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ʼಡೆವಿಲ್ʼ ಟೀಸರ್ ಬಿಡುಗಡೆ
ವಿಶೇಷ ಎಂದರೆ ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಾಳೆ ಅವರ ಹೊಸ ಚಿತ್ರ ʼಡೆವಿಲ್ʼನ ಟೀಸರ್ ರಿಲೀಸ್ ಆಗಲಿದೆ. ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದ ಅಪ್‌ಡೇಟ್‌ಗಾಗಿ ಹಲವು ದಿನಗಳಿಂದ ಕಾಯುತ್ತಿದ್ದ ಫ್ಯಾನ್ಸ್‌ಗೆ ಇದೇ ಕಾರಣಕ್ಕೂ ಭಾನುವಾರ ಬಿಗ್ ಡೇ ಎನಿಸಿಕೊಂಡಿದೆ. ಈ ಚಿತ್ರದಲ್ಲಿ ದರ್ಶನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಅವರನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ. ದರ್ಶನ್ ಜೈಲಿಗೆ ಹೋಗುವ ಮುನ್ನ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಚಿತ್ರೀಕರಣ ಇನ್ನೂ ಬಾಕಿ ಇದೆ ಎನ್ನಲಾಗಿದೆ. ಸದ್ಯ ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್ ಚಿಕಿತ್ಸೆ ಪಡೆದುಕೊಂಡ ಬಳಿಕ ಶೂಟಿಂಗ್‌ಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಈ ಹಿಂದೆ 2017ರಲ್ಲಿ ತೆರೆಕಂಡ ʼತಾರಕ್ʼ ಚಿತ್ರದಲ್ಲಿ ಪ್ರಕಾಶ್ ಮತ್ತು ದರ್ಶನ್ ಜತೆಯಾಗಿ ಕೆಲಸ ಮಾಡಿದ್ದರು. ಇದೀಗ ಈ ಹಿಟ್ ಜೋಡಿ 2ನೇ ಬಾರಿಗೆ ಒಂದಾಗುತ್ತಿರುವುದರಿಂದ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ದರ್ಶನ್ ಹೇಳಿದ್ದೇನು?
ಇತ್ತೀಚೆಗೆ ವಿಡಿಯೊ ಮಾಡಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದ ದರ್ಶನ್, ಆರೋಗ್ಯ ಸಮಸ್ಯೆಯಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳತ್ತಿಲ್ಲ ಎಂದು ತಿಳಿಸಿದ್ದರು. ʼʼಫೆ.16ಕ್ಕೆ ನನ್ನ ಹುಟ್ಟುಹಬ್ಬ. ಪ್ರತಿಯೊಬ್ಬರನ್ನೂ ಭೇಟಿಯಾಗಿ ಥ್ಯಾಂಕ್ಸ್ ಹೇಳೋಣ ಎನ್ನುವ ಆಸೆ ಇತ್ತು. ಆದರೆ ಆರೋಗ್ಯ ಸಮಸ್ಯೆಯಿಂದ ತುಂಬಾ ಹೊತ್ತು ನಿಂತುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲʼʼ ಎಂದು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Actor Darshan: ಒಂದೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್; ಪತ್ನಿ ವಿಜಯಲಕ್ಷ್ಮಿ ಮನೆಗೆ ಹೊರಟ ನಟ
ʼʼನಿಂತುಕೊಂಡು ಎಲ್ಲರಿಗೂ ವಿಶ್ ಮಾಡಲು ನನ್ನಿಂದ ಆಗುತ್ತಲ್ಲ. ಆಪರೇಷನ್ ಅನ್ನೋದು ಕಟ್ಟಿಟ್ಟ ಬುಟ್ಟಿ. ಅದು ನನಗೂ ಗೊತ್ತು. ಅದನ್ನು ಮುಂದೆ ಮಾಡಿಸಲೇಬೇಕು. ಈಗಾಗಲೇ ಒಪ್ಪಿಕೊಂಡಿರುವ ಕೆಲಸ ಮುಗಿಸಬೇಕಿದೆ. ನನ್ನ ನಿರ್ಮಾಪಕರು ಇಷ್ಟು ದಿನ ನನಗಾಗಿ ಕಾದಿದ್ದಾರೆ. ಅವರಿಗೆ ಧನ್ಯವಾದಗಳು. ಅವರಿಗೆ ನಾನು ಅನ್ಯಾಯ ಮಾಡಬಾರದು ಎನ್ನುವ ಕಾರಣಕ್ಕೆ ಎಷ್ಟು ದಿನ ಸಾಧ್ಯವಾಗುತ್ತದೋ ಅಷ್ಟು ದಿನ ಆಪರೇಷನ್ ಮುಂದಕ್ಕೆ ಹಾಕಲು ನೋಡ್ತಾ ಇದ್ದೇನೆ. ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ. ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿʼʼ ಎಂದು ಮನವಿ ಮಾಡಿದ್ದರು.