ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ದೂರು ನೀಡಲಾಗಿತ್ತು. ಆದರೆ ಕೆಲ ದಿನಗಳ ನಂತರ ವಿಜಯಲಕ್ಷ್ಮಿ ಅವರು ಪೊಲೀಸರ ತನಿಖೆ ಬಗ್ಗೆ ಅಸಮಾಧನ ಹೊರ ಹಾಕಿದ್ದರು. ಆ ಬಳಿಕ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಈ ಪ್ರಕರಣದಲ್ಲಿ ಈವರೆಗೂ ಒಟ್ಟು 6 ಮಂದಿಯನ್ನು ಬಂಧಿಸಿದ್ದು, ಇದೀಗ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಅನ್ನು ಕೂಡ ಸಲ್ಲಿಕೆ ಮಾಡಿದ್ದಾರೆ.
ಆರೋಪಿಗಳಲ್ಲಿ ಸುದೀಪ್ ಫ್ಯಾನ್ಸ್ ಕೂಡ ಇದ್ದಾರೆ
ಬೆಂಗಳೂರಿನ 45ನೇ ಎಸಿಎಂಎಂ ಕೋರ್ಟ್‌ಗೆ ಆರು ಮಂದಿ ವಿರುದ್ಧ ಸಿಸಿಬಿ ಪೊಲೀಸರು ಸುಮಾರು 473 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ಶೀಟ್ನಲ್ಲಿ 6 ಆರೋಪಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದು, ಈ ಆರೋಪಿಗಳಲ್ಲಿ ಸುದೀಪ್ ಅಭಿಮಾನಿಗಳೂ ಇದ್ದಾರೆ. ವಿಜಯಲಕ್ಷ್ಮಿ ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಉದ್ದೇಶದಿಂದಲೇ ನಕಲಿ ಐಡಿಗಳನ್ನು ಆರೋಪಿಗಳು ಕ್ರಿಯೆಟ್ ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಇನ್ನೂ 12 ಐಡಿಗಳ ಮಾಹಿತಿ ಸಿಕ್ಕಿಲ್ಲ
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಟಾರ್ಗೆಟ್ ಮಾಡಿ, ಅವರ ಫೋಟೋಗಳನ್ನು ಶೇರ್ ಮಾಡಿ, ಆರೋಪಿಗಳು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಇದೀಗ ತಮ್ಮ ತಪ್ಪನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಎಲ್ಲಾ ಆರು ಆರೋಪಿಗಳ ಮೊಬೈಲ್‌ಗಳನ್ನು ಜಪ್ತಿ ಮಾಡಿ ಮಾಡಿರುವ ಸಿಸಿಬಿ, ಅವುಗಳನ್ನು ಎಫ್ಎಸ್ಎಲ್ಗೆ ರವಾನೆ ಮಾಡಿದೆ. ಎಫ್ಎಸ್ಎಲ್ನಿಂದ ಮೊಬೈಲ್ ರಿಟ್ರೀವ್ ವರದಿ ಬರಬೇಕಿದೆ. ಇನ್ನು, 12 ಐಡಿಗಳ ಮಾಹಿತಿ ಸಿಕ್ಕಿಲ್ಲವಾದ್ದರಿಂದ ಕಂಪನಿಗಳಿಗೆ ಪತ್ರ ಬರೆಯಲಾಗಿದೆ. ಸದ್ಯ ಕೋರ್ಟ್‌ಗೆ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸುವುದಾಗಿ ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾಮೀನಿಗಾಗಿ ಆರೋಪಿಗಳಿಂದ ಅರ್ಜಿ
ಇನ್ನು, ಈ ಪ್ರಕರಣದ ಆರೋಪಿಗಳು 2 ತಿಂಗಳಿನಿಂದ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಸದ್ಯ ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 24ಕ್ಕೆ ಮುಂದೂಡಿದೆ.