ಮುಂಬೈ: ಬಾಲಿವುಡ್ ಕ್ಯೂಟ್ ಕಪಲ್‌ಗಳಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ದಂಪತಿ ಮುಂಚೂನಿಯಲ್ಲಿ ನಿಲ್ಲುತ್ತಾರೆ. ಈ ಜೋಡಿ ಹಿಂದೆ ಬಾಲಿವುಡ್‌ನ ಅನೇಕ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ರೀಲ್ ಜತೆಗೆ ರಿಯಲ್ ಲೈಫ್‌ನಲ್ಲೂ ಪ್ರೀತಿಸುತ್ತಿದ್ದ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಕಳೆದ ವರ್ಷ ಹೆಣ್ಣುಮಗು ಜನಿಸಿದೆ. ಮಗುವಾದ ಬಳಿಕ ನಟಿ ದೀಪಿಕಾ ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಕೆಲವು ದಿನಗಳ ಬ್ರೇಕ್ ನಂತರ ಇದೀಗ ಅವರು ಬಣ್ಣದ ಲೋಕಕ್ಕೆ ಮರಳಿದ್ದಾರೆ. ಸಿನಿಮಾ ಶೂಟಿಂಗ್ ಹಾಗೂ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಇವರು ಹಲವು ಜಾಹೀರಾತುಗಳಲ್ಲಿ ಜತೆಗೆಯಾಗಿ ನಟಿಸಿದ್ದು, ಇದೀಗ ಮತ್ತೊಮ್ಮೆ ಬ್ರ್ಯಾಂಡ್ ಒಂದರಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.
ಇವರಿಬ್ಬರ ಅದ್ಭುತ ಕೆಮಿಸ್ಟ್ರಿ ಮತ್ತೊಮ್ಮೆ ಜಾಹೀರಾತಿನಲ್ಲಿ ವರ್ಕೌಟ್ ಆಗಿದೆ. ಇವರು ಎಮಿರೇಟ್‌ನ ಬ್ರ್ಯಾಂಡ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಇದೇ ಜಾಹೀರಾತಿನಲ್ಲಿ ಅವರಿಬ್ಬರು ಕಾಣಿಸಿಕೊಂಡ ವಿಡಿಯೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟಿ ದೀಪಿಕಾ ಪಡುಕೋಣೆ ಮತ್ತು ಅವರ ಪತಿ ರಣವೀರ್ ಸಿಂಗ್ ಇರುವ ಜಾಹೀರಾತು ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟದ್ದಾಗಿದೆ. ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಎಮಿರೇಟ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ ಎನ್ನುವುದನ್ನು ಜಾಹೀರಾತು ಬಿಡುಗಡೆಯೊಂದಿಗೆ ಅಧಿಕೃತವಾಗಿ ಘೋಷಿಸಲಾಗಿದೆ. ಇವರಿಬ್ಬರು ಸೇರಿ ಅಬುಧಾಬಿಯ ಪ್ರವಾಸಿ ತಾಣಗಳನ್ನು ಪರಿಚಯಿಸುತ್ತಿದ್ದಾರೆ.
ದೀಪಿಕಾ ಮತ್ತು ರಣವೀರ್ ಸಿಂಗ್ ನಟಿಸಿರುವ ಜಾಹೀರಾತು ಇಲ್ಲಿದೆ:
ಈ ಜಾಹೀರಾತು ರಣವೀರ್ ಒಂದು ಮ್ಯೂಸಿಯಂನಲ್ಲಿ ಕಲಾಕೃತಿಯನ್ನು ಮೆಚ್ಚಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ಬಳಿಕ ಅವರು, ʼʼಕ್ರಿ.ಶ. 90ರಲ್ಲಿ ಈ ಕಲಾಕೃತಿ ರಚಿಸಲಾಗಿದೆ. ಆವಾಗಲೇ ಈ ಶೈಲಿಯ ಆರ್ಟ್ ಇತ್ತು ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇದನ್ನು ನೋಡಿದ ಮೇಲೆ ಅವರು ನನ್ನ ಪ್ರತಿಮೆಯನ್ನು ಯಾವ ರೀತಿ ರಚಿಸಬಹುದು?ʼʼ ಎಂದು ಕೇಳುತ್ತಾರೆ. ಆಗ ದೀಪಿಕಾ "ನೀವು ಖಂಡಿತವಾಗಿಯೂ ಮ್ಯೂಸಿಯಂನಲ್ಲಿರಲು ಅರ್ಹರು" ಎಂದು ತಮಾಷೆಯಾಗಿ ಪ್ರತಿಕ್ರಿಯಿಸುತ್ತಾರೆ.
ನಂತರ ರಣವೀರ್, "ನಾವು ಬೇರೆ ಸ್ಥಳದಲ್ಲಿ ಬೆಳೆದಿದ್ದರೆ ಅಲ್ಲಿನ ಆಚಾರ ವಿಚಾರ, ಸಂಸ್ಕೃತಿ ಹೇಗಿರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅಬುಧಾಬಿ ಕುಟುಂಬದ ಮೌಲ್ಯ ಬೆಳೆಸುವ ಹಾಟ್‌ಸ್ಪಾಟ್. ಈಗ ನಾನು ನನ್ನ ಪತ್ನಿ ದೀಪಿಕಾ ಜತೆ ಈ ಪ್ರಯಾಣವನ್ನು ಅನುಭವಿಸುತ್ತಿದ್ದೇನೆʼʼ ಎಂದು ತಿಳಿಸಿದ್ದಾರೆ. ಇದಕ್ಕೆ ದೀಪಿಕಾ ಪ್ರತಿಕ್ರಿಯೆ ನೀಡಿ, "ನೀವು ಪ್ರೀತಿಸುವ ಜನರೊಂದಿಗೆ ಪ್ರಯಾಣ ಮಾಡಿದರೆ ಆ ಪ್ರಯಾಣವು ಯಾವಾಗಲೂ ಹೆಚ್ಚು ಅರ್ಥಪೂರ್ಣ ವಾಗಿರುತ್ತದೆ... ಈ ಸುಂದರ ನಗರವು ನೀಡುವ ಅನುಭವಗಳನ್ನು ಅನ್ವೇಷಿಸಿಬೇಕುʼʼ ಎಂದು ಹೇಳಿದ್ದಾರೆ.
ಜಾಹೀರಾತಿನಲ್ಲಿ ಈ ಜೋಡಿಯನ್ನು ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ದುವಾಳ ಪೇರೆಂಟ್ಸ್ ಅನ್ನು ಒಟ್ಟಿಗೆ ಕಂಡು ಖುಷಿ ಆಯ್ತು. ಶೀಘ್ರವೇ ಹೊಸ ಸಿನಿಮಾ ಮಾಡಿ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ. ದೀಪಿಕಾ ಸದ್ಯ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ʼಕಿಂಗ್ʼ ಮತ್ತು ತೆಲುಗಿನ ಅಲ್ಲು ಅರ್ಜುನ್-ಅಟ್ಲಿ ಕಾಂಬಿನೇಷನ್‌ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ರಣವೀರ್ ಸಿಂಗ್ ಆದಿತ್ಯಧಾರ್ ನಿರ್ದೇಶನದ ʼಧುರಂಧರ್ʼನಲ್ಲಿ ಅಭಿನಯಿಸಿದ್ದು ಡಿಸೆಂಬರ್ 5ಕ್ಕೆ ತೆರೆಗೆ ಬರಲಿದೆ.