Deepika Padukone: ಚಿಕ್ಕ ಬ್ರೇಕ್ ಬಳಿಕ ಚಿತ್ರರಂಗದಲ್ಲಿ ಬ್ಯುಸಿಯಾದ ದೀಪಿಕಾ; ಮತ್ತೊಂದು ತೆಲುಗು ಚಿತ್ರಕ್ಕೆ ಸಹಿ
Prabhas: ಕಳೆದ ವರ್ಷ ಮಗಳಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆ ಸದ್ಯ ವಿರಾಮದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಜತೆಗೆ ಬಾಲಿವುಡ್‌ನ ʼಕಿಂಗ್ʼ ಚಿತ್ರವನ್ನು ದೀಪಿಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಇದರೊಂದಿಗೆ ಮತ್ತೊಂದು ತೆಲುಗು ಸಿನಿಮಾ ಸಿನಿಮಾಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ.

ಹೈದರಾಬಾದ್: ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗ ಪ್ರವೇಶಿಸಿ, ಬಾಲಿವುಡ್‌ಗೆ ಕಾಲಿಟ್ಟು ಟಾಪ್ ನಟಿಯಾಗಿರುವ ಕರುನಾಡ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಇದೀಗ ಚಿಕ್ಕ ಬ್ರೇಕ್ ಬಳಿಕ ಮತ್ತೊಮ್ಮೆ ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಪುತ್ರಿ ದುವಾಗೆ ಜನ್ಮ ನೀಡಿದ ಅವರು ಕೆಲ ಕಾಲ ಅಭಿನಯದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಕಳೆದ ವರ್ಷ ತೆರೆಕಂಡ ತೆಲುಗಿನ ಪ್ಯಾನ್ ಇಂಡಿಯಾ ಚಿತ್ರ ʼಕಲ್ಕಿ 2898 ಎಡಿʼ ಚಿತ್ರದಲ್ಲಿ ನಟಿಸಿದ್ದ ದೀಪಿಕಾ ಇದರ 2ನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ʼಕಲ್ಕಿ 2898 ಎಡಿʼ (Kalki 2898 AD)ಯಲ್ಲಿ ಮೊದಲ ಬಾರಿಗೆ ಪ್ರಭಾಸ್‌ಗೆ (Prabhas) ಜೋಡಿಯಾಗಿ ನಟಿಸಿದ್ದ ದೀಪಿಕಾ ಇದೀಗ ಅವರೊಂದಿಗೆ ಇದರ ಸೀಕ್ವೆಲ್ ಜತೆಗೆ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ʼಕಲ್ಕಿ 2898 ಎಡಿʼ ಭಾಗ 2ರಲ್ಲಿ ದೀಪಿಕಾ ಪಾತ್ರ ಮುಂದುವರಿಯಲಿದೆ. ಮೊದಲ ಭಾಗದಲ್ಲಿ ಕಥೆಗೆ ತಿರುವು ನೀಡುವ ಮುಖ್ಯ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದರು. ದ್ವಿತೀಯ ಭಾಗದಲ್ಲಿ ಅವರ ಪಾತ್ರದ ಸುತ್ತವೇ ಚಿತ್ರ ಸಾಗುವ ಸೂಚನೆ ಸಿಕ್ಕಿದೆ. ಇದರೊಂದಿಗೆ ದೀಪಿಕಾ ಪ್ರಭಾಸ್‌ಗೆ ನಾಯಕಿಯಾಗಿ ಮತ್ತೊಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ಪಿಂಕಿವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.
ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್ ಪೋಸ್ಟ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Deepika Padukone: ಹಲವು ಬಾರಿ ಭಾರತದಿಂದ ಆಸ್ಕರ್ ಪ್ರಶಸ್ತಿ ಕಸಿಯಲಾಗಿದೆ; ದೀಪಿಕಾ ಪಡುಕೋಣೆ ಹೀಗೆ ಹೇಳಿದ್ಯಾಕೆ?
ʼಸ್ಪಿರಿಟ್ʼ ಚಿತ್ರದಲ್ಲಿ ದೀಪಿಕಾ?
ಸದ್ಯ ದೇಶಾದ್ಯಂತ ಕುತೂಹಲ ಕೆರಳಿಸಿರುವ ಚಿತ್ರ ತೆಲುಗಿನ ʼಸ್ಪಿರಿಟ್ʼ. ʼಅರ್ಜುನ್ ರೆಡ್ಡಿʼ, ʼಅನಿಮಲ್ʼ ಸಿನಿಮಾ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್ ಕಟ್ ಹೇಳುತ್ತಿರುವ ʼಸ್ಪಿರಿಟ್ʼ ಚಿತ್ರದ ನಾಯಕನಾಗಿ ಪ್ರಭಾಸ್ ಈಗಾಗಲೇ ಆಯ್ಕೆಯಾಗಿದ್ದಾರೆ. ಈ ಮೊದಲು ಇದರಲ್ಲಿ ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಆದರೆ ಇದೀಗ ಕೇಳಿಬರುತ್ತಿರುವ ವರದಿ ಪ್ರಕಾರ ಪ್ರಭಾಸ್ ಜತೆ ದೀಪಿಕಾ ಪಡುಕೋಣೆ ರೊಮ್ಯಾನ್ಸ್ ಮಾಡಲಿದ್ದಾರೆ.
ʼʼದೀಪಿಕಾ ಅವರಿಗೆ ಈ ಹಿಂದೆಯೇ ನಾಯಕಿ ಪಾತ್ರದ ಆಫರ್ ನೀಡಲಾಗಿತ್ತು. ಆದರೆ ಚಿತ್ರ 2024ರ ಕೊನೆಯಲ್ಲಿ ಆರಂಭವಾಗುವ ಸಾಧ್ಯತೆ ಇದ್ದುದರಿಂದ ಅವರು ಸಹಿ ಮಾಡಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಸಿನಿಮಾದ ಶೂಟಿಂಗ್ ಮುಂದೂಡಲಾಗಿತ್ತು. ಹೀಗಾಗಿ ವಂಗಾ ಮತ್ತೆ ದೀಪಿಕಾ ಅವರನ್ನು ಸಂಪರ್ಕಿಸಿದ್ದಾರೆ. ಇದಕ್ಕೆ ಅವರು ಒಪ್ಪಿದ್ದಾರೆʼʼ ಎಂದು ಪಿಂಕ್‌ವಿಲ್ಲಾ ವಿವರಿಸಿದೆ.
ʼʼನಾಯಕಿ ಪಾತ್ರಕ್ಕೆ ವಂಗಾ ಸಾಕಷ್ಟು ಪ್ರಾಧಾನ್ಯತೆ ನೀಡಿದ್ದಾರೆ. ಇಡೀ ಸ್ಕ್ರಿಪ್ಟ್ ಮಾತ್ರವಲ್ಲ ತಮ್ಮ ಪಾತ್ರವನ್ನೂ ಮೆಚ್ಚಿಕೊಂಡಿರುವ ದೀಪಿಕಾ ಸಹಿ ಹಾಕಿದ್ದಾರೆ. ವಂಗಾ ಅವರೊಂದಿಗೆ ಕೆಲಸ ಮಾಡಲು ಅವರು ಸಾಕಷ್ಟು ಎಕ್ಸೈಟ್ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಮೊದಲ ಬಾರಿಗೆ ವಂಗಾ ಮತ್ತು ದೀಪಿಕಾ ಜತೆಯಾಗಿ ಕೆಲಸ ಮಾಡಲಿದ್ದಾರೆʼʼ ಎಂದು ತಿಳಿಸಿದೆ.
ವಂಗಾ ಈಗಾಗಲೇ ಚಿತ್ರೀಕರಣಕ್ಕೆ ಅಗತ್ಯವಾದ ಎಲ್ಲ ಸಿದ್ಧತೆ ನಡೆಸಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ಶೂಟಿಂಗ್ ಆರಂಭವಾಗಲಿದೆ. ಇದು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ 2027ರಲ್ಲಿ ತೆರೆಗೆ ಬರಲಿದೆ.