Deepika Padukone: ಹಲವು ಬಾರಿ ಭಾರತದಿಂದ ಆಸ್ಕರ್ ಪ್ರಶಸ್ತಿ ಕಸಿಯಲಾಗಿದೆ; ದೀಪಿಕಾ ಪಡುಕೋಣೆ ಹೀಗೆ ಹೇಳಿದ್ಯಾಕೆ?
Oscars Award: ಈ ಬಾರಿ ಆಸ್ಕರ್ ಪ್ರಸಸ್ತಿ ಘೋಷಣೆಯಾದಾಗ ಭಾರತೀಯರು ಮತ್ತೆ ನಿರಾಸೆಗೊಂಡಿದ್ದರು. ಯಾಕೆಂದರೆ ಬಹುನಿರೀಕ್ಷಿತ ಭಾರತದ ಯಾವ ಚಿತ್ರಗಳಿಗೂ ಪ್ರಸಸ್ತಿ ದೊರೆತಿರಲಿಲ್ಲ. ಈ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬೇಸರ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಪಡುಕೋಣೆ.

ಮುಂಬೈ: ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗ ಪ್ರವೇಶಿಸಿ ಬಳಿಕ ಬಾಲಿವುಡ್‌ನಲ್ಲಿ ನಟಿಸಿ ಅಲ್ಲಿ ನಂ. 1 ನಟಿಯಾಗಿ ಹಾಲಿವುಡ್‌ಗೂ ಪಾದರ್ಪಣೆ ಮಾಡಿರುವ ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಗ್ಲೋಬಲ್ ಸ್ಟಾರ್ ಆಗಿ ಬದಲಾಗಿದ್ದಾರೆ. ಮೂಲತಃ ಮಾಡೆಲ್ ಆಗಿರುವ ಅವರ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅವರು ಇದೀಗ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದಾರೆ. ಈ ಮಧ್ಯೆ ಅವರು ಆಸ್ಕರ್ (Oscars) ಬಗ್ಗೆ ಮಾತನಾಡಿ, ಹಲವು ಬಾರಿ ಭಾರತೀಯರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕಸಿಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಶೇರ್ ಮಾಡಿಕೊಂಡಿರುವ ಅವರು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಜತೆಗೆ 2023ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಿರೂಪಕಿಯಾಗಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಹಂಚಿಕೊಂಡ ವಿಡಿಯೊ:
ಈ ಸುದ್ದಿಯನ್ನೂ ಓದಿ: Pariksha Pe Charcha 2025: ಪರೀಕ್ಷಾ ಪೇ ಚರ್ಚಾ: ಪ್ರಧಾನಿ ಮೋದಿ ಜೊತೆಗೆ ಸದ್ಗುರು, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಗಣ್ಯರು ಭಾಗಿ!
ದೀಪಿಕಾ ಹೇಳಿದ್ದೇನು?
ʼʼಹಲವು ಬಾರಿ ಭಾರತೀಯರ ಕೈಯಿಂದ ಆಸ್ಕರ್ ಪ್ರಶಸ್ತಿಯನ್ನು ಕಸಿಯಲಾಗಿದೆ. ಪ್ರಶಸ್ತಿಗೆ ಅರ್ಹವಾದ ಭಾರತದ ಸಿನಿಮಾಗಳನ್ನು, ಪ್ರತಿಭೆಗಳನ್ನು ತಿರಸ್ಕರಿಸಲಾಗಿದೆʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿಮರ್ಶಕರ ಮೆಚ್ಚುಗೆ ಗಳಿಸಿದ, ಬಹುನಿರೀಕ್ಷಿತ ಭಾರತದ ಚಿತ್ರಗಳಾದ ʼಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ ಮತ್ತು ʼಲಾಪತ ಲೇಡೀಸ್ʼಗೆ ಈ ಬಾರಿ ಪ್ರಶಸ್ತಿ ಮಿಸ್ ಆಗಿದೆ. ಇದರ ಬಗ್ಗೆ ಈ ಹಿಂದೆ ಸಿನಿಪ್ರಿಯರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ದೀಪಿಕಾ ಕೂಡ ಧ್ವನಿಗೂಡಿಸಿದ್ದಾರೆ.
ಆಸ್ಕರ್ ವೇದಿಕೆಯ ಅನುಭವ ಹಂಚಿಕೊಂಡ ದೀಪಿಕಾ
2023ರಲ್ಲಿ ರಾಜಮೌಳಿ ನಿರ್ದೇಶನದ ತೆಲುಗಿನ ʼಆರ್‌ಆರ್‌ಆರ್ʼ ಚಿತ್ರದ ʼನಾಟು ನಾಟುʼ ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿತ್ತು. ಈ ವೇಳೆ ಕಾರ್ಯಕ್ರಮವನ್ನು ನಿರೂಪಿಸಿದ್ದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಅವರು ಹೇಳಿಕೊಂಡಿದ್ದಾರೆ. ʼʼಆರ್‌ಆರ್‌ಆರ್ʼ ಚಿತ್ರಕ್ಕೆ ಪ್ರಶಸ್ತಿ ಘೋಷಿಸಿದಾಗ ನಾನು ಭಾವುಕಳಾದೆ. ಭಾರತೀಯಳು ಎನ್ನುವ ಹೊರತಾಗಿ ಆ ಸಿನಿಮಾದೊಂದಿಗೆ ನನಗೆ ಬೇರೆ ಯಾವುದೇ ಸಂಬಂಧವಿರಲಿಲ್ಲ. ಆದರೆ ಅದು ನನಗೆ ದೊಡ್ಡ ಕ್ಷಣದಂತೆ ಭಾಸವಾಯ್ತು. ಅದು ನನಗೆ ವೈಯಕ್ತಿಕ ಖುಷಿ ನೀಡಿತುʼʼ ಎಂದು ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ಹಾಡಿನ ಕುರಿತ ಅನೌನ್ಸ್‌ಮೆಂಟ್ ಅನ್ನು ಆಸ್ಕರ್ ವೇದಿಕೆ ಮೇಲೆ ದೀಪಿಕಾ ಪಡುಕೋಣೆ ಘೋಷಿಸಿದ್ದರು. ಇದು ಕೂಡ ಅವರ ಪಾಲಿಗೆ ಅವಿಸ್ಮರಣೀಯ ಅನುಭವವಾಗಿತ್ತು.
ದೀಪಿಕಾ ಹಂಚಿಕೊಂಡ ಇನ್‌ಸ್ಟಾಗ್ರಾಂ ವಿಡಿಯೊ ವಿಮರ್ಶಕರ ಮೆಚ್ಚುಗೆ ಪಡೆದ ಹಲವು ಭಾರತೀಯ ಸಿನಿಮಾಗಳ ತುಣುಕುಗಳನ್ನು ಒಳಗೊಂಡಿದೆ. ಪಾಯಲ್ ಕಪಾಡಿಯಾ ಅವರ ʼಆಲ್ ವಿ ಇಮ್ಯಾಜಿನ್ ಆಸ್ ಲೈಟ್ʼ, ಕಿರಣ್ ರಾವ್ ಅವರ ʼಲಾಪತ ಲೇಡೀಸ್ʼ, ರಾಹಿ ಅನಿಲ್ ಬಾರ್ವೆ ಅವರ ʼತುಂಬಡ್ʼ ಮತ್ತು ರಿತೇಶ್ ಬಾತ್ರಾ ಅವರ ʼದಿ ಲಂಚ್ ಬಾಕ್ಸ್ʼ ಚಿತ್ರಗಳು ತಮ್ಮ ಕಥೆ ಮತ್ತು ಅಭಿನಯಕ್ಕಾಗಿ ಮೆಚ್ಚುಗೆ ಪಡೆದಿದ್ದವು. ಆದರೆ ಆಸ್ಕರ್ ಪ್ರಶಸ್ತಿ ಲಭಿಸಿಲ್ಲ. ಈ ಮೂಲಕ ಭಾರತೀಯ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಇದ್ದ ಅವಕಾಶ ಕೈತಪ್ಪಿದೆ ಎಂದು ದೀಪಿಕಾ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಅವರ ಈ ಅಭಿಪ್ರಾಯಕ್ಕೆ ಹಲವು ಸಹಮತ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.