Pariksha Pe Charcha 2025: ಪರೀಕ್ಷೆ ಸಮಯದಲ್ಲಿ ಒತ್ತಡ ನಿವಾರಿಸುವುದು ಹೇಗೆ? ದೀಪಿಕಾ ನೀಡಿದ್ದಾರೆ ಬೊಂಬಾಟ್ ಟಿಪ್ಸ್
ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎದುರಾಗಬಹುದಾದ ಒತ್ತಡವನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಪರೀಕ್ಷಾ ಪೆ ಚರ್ಚಾದ ಟೀಸರ್ ರಿಲೀಸ್ ಆಗಿದೆ. ಮಾನಸಿಕ ಆರೋಗ್ಯದ ಬಗ್ಗೆ ನಟಿ ದೀಪಿಕಾ ಪಡುಕೋಣೆ ಮಾತನಾಡಿದ್ದು, ವಿದ್ಯಾರ್ಥಿಗಳಿಗೆ ಟಿಪ್ಸ್ ನೀಡಿದ್ದಾರೆ.
ಹೊಸದಿಲ್ಲಿ: ಪರೀಕ್ಷೆ ನಡೆಯುವ ವೇಳೆ ವಿದ್ಯಾರ್ಥಿಗಳ ಮೇಲೆ ಬೀರಬಹುದಾದ ಒತ್ತಡವನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2018ರಲ್ಲಿ ಆರಂಭಿಸಿರುವ ಪರೀಕ್ಷಾ ಪೆ ಚರ್ಚಾ (Pariksha Pe Charcha 2025) ಈ ವರ್ಷ ವಿಭಿನ್ನವಾಗಿ ಮೂಡಿಬಂದಿದೆ. ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಕಾಣಿಸಿಕೊಂಡಿರುವ ಪರೀಕ್ಷಾ ಪೆ ಚರ್ಚಾದ ಟೀಸರ್ ಇದೀಗ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ದೀಪಿಕಾ ಪಡುಕೋಣೆ ಅವರು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದು, ಇದಕ್ಕಾಗಿ ಲೈವ್‌ಲವ್‌ಲಾಫ್ (LiveLoveLaugh) ಎನ್ನುವ ಎನ್‌ಜಿಒವನ್ನೂ ಹುಟ್ಟು ಹಾಕಿದ್ದಾರೆ. ಹೀಗಾಗಿ ಅವರು ಪರೀಕ್ಷಾ ಪೆ ಚರ್ಚೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಟಿಪ್ಸ್ ನೀಡಿದ್ದಾರೆ. ಅವರ ಜತೆಗೆ ಈ ಬಾರಿಯ 8ನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ದೀಪಿಕಾ ಪಡುಕೋಣೆ ಕಾಣಿಸಿಕೊಂಡಿರುವ ಮೊದಲ ಸಂಚಿಕೆ ಫೆ. 12ರ ಬೆಳಗ್ಗೆ 10 ಗಂಟೆಗೆ ರಿಲೀಸ್ ಆಗಲಿದೆ.
ವಿದ್ಯಾರ್ಥಿಗಳ ಒತ್ತಡ ನಿವಾರಿಸಿ ಅವರಲ್ಲಿ ನಾಯಕತ್ವ ಗುಣ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೆ ಚರ್ಚಾ ಆರಂಭಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಮಯ ಹೊಂದಾಣಿಕೆಯ ಗುಣ ರೂಢಿಸುವುದು, ಅವರ ವ್ಯಕ್ತಿತ್ವ ವಿಕಸವೂ ಈ ಯೋಜನೆ ಮುಖ್ಯ ಉದ್ದೇಶ. ಈ 8ನೇ ಆವೃತ್ತಿ 8 ಸಂಚಿಕೆಗಳನ್ನು ಒಳಗೊಂಡಿದ್ದು, ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ.
ಮಾನಸಿಕ ಆರೋಗ್ಯ, ಕ್ರೀಡೆ ಮತ್ತು ಶಿಸ್ತು, ಪೋಷಣೆ, ತಂತ್ರಜ್ಞಾನ ಮತ್ತು ಹಣಕಾಸು, ಸೃಜನಶೀಲತೆ ಮತ್ತು ಸಕಾರಾತ್ಮಕತೆ, ಬುದ್ಧಿವಂತಿಕೆ ಮತ್ತು ಶಾಂತಿ ಮತ್ತು ಯಶಸ್ಸಿನ ಕಥೆಗಳನ್ನು ಈ ಬಾರಿಯ ಆವೃತ್ತಿ ಒಳಗೊಂಡಿದೆ.
ಮೊದಲ ಸಂಚಿಕೆ ಮಾನಸಿಕ ಆರೋಗ್ಯದ ಮೇಲೆ ಬೆಳಕು ಚೆಲ್ಲಲಿದೆ. ಈ ಹಿಂದೆ ತಾವು ಖಿನ್ನತೆಗೆ ಒಳಗಾಗಿ ಅದರಿಂದ ಹೊರಬಂದ ಬಗೆಯನ್ನು ದೀಪಿಕಾ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜತೆಗೆ ಅವರು ತಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಅವಕಾಶ ನೀಡಿದ್ದಕ್ಕಾಗಿ ದೀಪಿಕಾ ಅವರು ಮೋದಿ ಅವರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.
ಟೀಸರ್‌ನಲ್ಲಿ ಏನಿದೆ?
ಸದ್ಯ ದೀಪಿಕಾ ಈ ಕಾರ್ಯಕ್ರಮದ ಟೀಸರ್ ಹಂಚಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದರಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿರುವುದು ಕಂಡು ಬಂದಿದೆ. ಸ್ವಯಂ ಅಭಿವ್ಯಕ್ತಿ ಮತ್ತು ದಿನಚರಿಯ ಮಹತ್ವವನ್ನು ಅವರು ಚರ್ಚಿಸಿದ್ದಾರೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಮತ್ತು ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ನಿರ್ಲಕ್ಷಿಸಬಾರದು ಎಂದು ಅವರು ಕಿವಿ ಮಾತು ಹೇಳಿದ್ದಾರೆ.
ತಾವು ಜೀವನದಲ್ಲಿ ಎದುರಿಸಿದ ಖಿನ್ನತೆಯನ್ನು ದಾಟಿ ಹೊರಬಂದ ರೀತಿ ಮತ್ತು ಅದು ಜೀವನದ ಬಗೆಗಿನ ತನ್ನ ದೃಷ್ಟಿಕೋನವನ್ನು ಹೇಗೆ ಬದಲಾಯಿಸಿತು ಎಂಬುದರ ಬಗ್ಗೆಯೂ ದೀಪಿಕಾ ಮಾತನಾಡಿದ್ದಾರೆ. ಪರೀಕ್ಷೆಗಿಂತ ಮೊದಲು ತಮ್ಮ ಮೇಲೆ ಹೆಚ್ಚು ಒತ್ತಡ ಹೇರದಂತೆ ಗಮನ ಹರಿಸಲು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Pariksha Pe Charcha: ಪರೀಕ್ಷಾ ಪೆ ಚರ್ಚಾ ; ಮೋದಿ ಹೇಳಿದ ಯಶಸ್ಸಿನ ಸೂತ್ರಗಳೇನು?
ಟೀಸರ್‌ನಲ್ಲಿ ದೀಪಿಕಾ ವಿದ್ಯಾರ್ಥಿಗಳು ಹೆಚ್ಚು ಒತ್ತಡಕ್ಕೆ ಒಳಗಾಗಬಾರದು, ಶಾಂತ ಮತ್ತು ಕೇಂದ್ರೀಕೃತ ಮನಸ್ಥಿತಿಯೊಂದಿಗೆ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಸಂದೇಶ ರವಾನಿಸಿದ್ದಾರೆ. ಮನಸ್ಸಿನಲ್ಲಿ ಮೂಡುವ ಆಲೋಚನೆಗಳನ್ನು ಬರೆಯುವುದು ತನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡಿತು ಮತ್ತು ಪದಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದು ಮಾನಸಿಕವಾಗಿ ಆರೋಗ್ಯವಾಗಿರಲು ಉತ್ತಮ ಮಾರ್ಗ ಎಂದಿದ್ದಾರೆ.