ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೈಲಿನಿಂದಲೇ ನಟ ಧನ್ವೀರ್‌ಗೆ ಖಡಕ್‌ ವಾರ್ನಿಂಗ್‌ ಕೊಟ್ಟ ʻದಾಸʼ; ದರ್ಶನ್‌ ಮೀಟ್‌ ಮಾಡಿದ್ಮೇಲೆ ಜೈದ್‌ ಖಾನ್‌ ಹೇಳಿದ್ದೇನು?

ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನಿಂದ ನಟ ಧನ್ವೀರ್‌ಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಜೊತೆ ಭೇಟಿ ಮಾಡಿದ ನಟ ಜೈದ್ ಖಾನ್ ಬಳಿ ದರ್ಶನ್‌ ಸಂದೇಶ ಕಳುಹಿಸಿದ್ದಾರೆ. "ಸುಳ್ಳು ಹರಡುವುದನ್ನು ಬಿಟ್ಟು ಮುಖಾಮುಖಿ ಬರಲು ಸವಾಲೆಸೆದಿದ್ದು, ಕಾನೂನು ಕ್ರಮಕ್ಕೆ ದರ್ಶನ್ ವಕೀಲರೊಡನೆ ಸಮಾಲೋಚನೆ ನಡೆಸಿದ್ದಾರೆ" ಎಂದು ಜೈದ್‌ ಖಾನ್‌ ಮಾಹಿತಿ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಇಂದು (ಅ.27) ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಜೈದ್ ಖಾನ್ ಹೋಗಿದ್ದರು. ಜೈಲಿನಲ್ಲಿ ದರ್ಶನ್ ಅವರೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೈದ್ ಖಾನ್, ನಟ ಧನ್ವೀರ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಲ್ಲದೆ ದರ್ಶನ್ ಅವರು ಜೈಲಿನಿಂದಲೇ ನೀಡಿದ್ದಾರೆ ಎನ್ನಲಾದ ಖಡಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.

ಹೊರಗಡೆ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಯ ಮಾಹಿತಿಯೂ ದರ್ಶನ್‌ ಅವರಿಗೆ ತಲುಪಿದ್ದು, ಅನಗತ್ಯ ಗೊಂದಲಗಳಿಗೆ ಕಿವಿಗೊಡದಂತೆ ತಮ್ಮ ಅಭಿಮಾನಿಗಳಿಗೆ ಅವರು ಸೂಚನೆ ನೀಡಿದ್ದಾರೆ ಎಂದು ಜೈದ್ ಖಾನ್ ಸ್ಪಷ್ಟಪಡಿಸಿದರು.

ಅಭಿಮಾನಿಗಳನ್ನು ಹಾದಿತಪ್ಪಿಸುವುದು ಸರಿ ಅಲ್ಲ

ದರ್ಶನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಜೈದ್ ಖಾನ್, "ನಾನು ಜೈಲಿನಲ್ಲಿದ್ದೇನೆ ಎಂಬ ಕಾರಣಕ್ಕೆ ನನ್ನ ಪತ್ನಿ ಹಾಗೂ ಮಕ್ಕಳ ಬಗ್ಗೆ ಮಾತನಾಡುವುದು ತಪ್ಪು. ನನ್ನ ಪರವಾಗಿ ಮಾತನಾಡಲು ಅಥವಾ ನಿರ್ಧಾರ ತೆಗೆದುಕೊಳ್ಳಲು ನಾನು ಧನ್ವೀರ್‌ಗಾಗಲಿ ಅಥವಾ ಇನ್ಯಾರಿಗಾಗಲಿ ಯಾವುದೇ ಅಧಿಕಾರ ನೀಡಿಲ್ಲ. ಅವನಿಗೆ ನಿಜವಾಗಿಯೂ ಧೈರ್ಯವಿದ್ದರೆ ನಾನು ಜೈಲಿನಿಂದ ಹೊರಬಂದ ಮೇಲೆ ನನ್ನ ಮುಂದೆ ಬಂದು ಮುಖಾಮುಖಿ ಮಾತನಾಡಲಿ. ಅದನ್ನು ಬಿಟ್ಟು ಎಲ್ಲೋ ಕುಳಿತುಕೊಂಡು ಫೋನ್ ಕಾಲ್‌ಗಳ ಮೂಲಕ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುವುದು, ಅಭಿಮಾನಿಗಳನ್ನು ಹಾದಿತಪ್ಪಿಸುವುದು ಸರಿ ಅಲ್ಲ ಎಂದು ದರ್ಶನ್ ಸರ್ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ" ಎಂದು ಹೇಳಿದ್ದಾರೆ.

ಆತನ ಮೇಲಿಟ್ಟ ನಂಬಿಕೆಯೇ ಇಂದು ಮುಳ್ಳಾಗಿದೆ

"ಇಲ್ಲಿ ಕ್ರೆಡಿಟ್ ವಾರ್ ಮಾತ್ರ ನಡೆಯುತ್ತಿದೆ. ನಾನೇ ಎಲ್ಲವನ್ನೂ ಮಾಡಿದೆ ಎಂದು ಆತ ಕೊಚ್ಚಿಕೊಳ್ಳುತ್ತಿದ್ದಾನೆ. ಆದರೆ ಅಕ್ಕನಾಗಲಿ (ವಿಜಯಲಕ್ಷ್ಮೀ) ಅಥವಾ ದರ್ಶನ್ ಅಣ್ಣನಾಗಲಿ ಸಹಾಯ ಕೇಳಿಕೊಂಡು ಆತನ ಮನೆ ಬಾಗಿಲಿಗೆ ಹೋಗಿರಲಿಲ್ಲ. ತಾನೇ ತಾನಾಗಿ ಬಂದು ಒಳ್ಳೆಯವನಂತೆ ನಾಟಕವಾಡಿ, ಇಂದು ಕುಟುಂಬದ ಒಳಗೇ ಹುಳಿಹಿಂಡುವ ಕೆಲಸ ಮಾಡುತ್ತಿದ್ದಾನೆ. ದರ್ಶನ್ ಅವರ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ? ದರ್ಶನ್ ಅವರ ಈ ಕಷ್ಟದ ಕಾಲದಲ್ಲಿ ಆತನ ಮೇಲಿಟ್ಟ ನಂಬಿಕೆಯೇ ಇಂದು ಅವರಿಗೆ ಮುಳ್ಳಾಗಿ ಪರಿಣಮಿಸಿದೆ ಎಂದು ಸ್ವತಃ ಅವರೇ ಬೇಸರದಿಂದ ಹೇಳಿದ್ದಾರೆ" ಎಂದು ಜೈದ್‌ ಖಾನ್‌ ಹೇಳಿದ್ಧಾರೆ.

ಅವಾಚ್ಯ ಪದ ಬಳಸಿದ ನಟ ಧನ್ವೀರ್‌ ವಿರುದ್ಧ ಸಿಡಿದೆದ್ದ ಜೈದ್‌ ಖಾನ್‌ ಫ್ಯಾನ್ಸ್‌; ಚಾಮರಾಜಪೇಟೆ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲು! ‌

ಅಭಿಮಾನಿಗಳಿಗೆ ಡಿ ಬಾಸ್‌ ಸಂದೇಶ

ಧನ್ವೀರ್ ವಿರುದ್ಧ ಕಾನೂನು ಕ್ರಮದ ಸುಳಿವು ನೀಡಿದ ಜೈದ್ ಖಾನ್, "ದರ್ಶನ್ ಅವರು ಈಗಾಗಲೇ ಜೈಲಿನಿಂದಲೇ ವಕೀಲರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಧನ್ವೀರ್ ವಿರುದ್ಧ ಎನ್‌ಸಿಆರ್ ಹಾಗೂ ಅಧಿಕೃತ ದೂರು ದಾಖಲಿಸಲು ಸಿದ್ಧತೆಗಳು ನಡೆದಿವೆ. ಈ ಮೂಲಕ ಅಭಿಮಾನಿಗಳಲ್ಲಿರುವ ಗೊಂದಲಗಳಿಗೆ ತೆರೆಬೀಳಲಿದೆ. ದರ್ಶನ್ ಅಣ್ಣ ಮತ್ತು ಅತ್ತಿಗೆ ಮೇಲೆ ನಂಬಿಕೆ ಇಟ್ಟು ಶಾಂತರಾಗಿರಿ, ಯಾವುದೇ ಕಾರಣಕ್ಕೂ ದಾರಿ ತಪ್ಪಬೇಡಿ. ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಸಮಯ ಬಂದಾಗ ಅವರೇ ಎಲ್ಲದಕ್ಕೂ ತಕ್ಕ ಉತ್ತರ ನೀಡಲಿದ್ದಾರೆ" ಎಂದರು.

ಅವನು ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ

ಕೊನೆಯದಾಗಿ ತಮ್ಮ ಹಾಗೂ ಇತರರ ವಿರುದ್ಧ ಆಡಿಯೋ, ವಿಡಿಯೋ ಬಿಡುಗಡೆ ಮಾಡುವುದಾಗಿ ಧನ್ವೀರ್ ನೀಡುತ್ತಿರುವ ಹೇಳಿಕೆಗಳನ್ನು ತಳ್ಳಿಹಾಕಿದ ಜೈದ್ ಖಾನ್, "ಅವನಿಗೆ ಸ್ವಂತ ಅಸ್ತಿತ್ವವೇ ಇಲ್ಲ, ದರ್ಶನ್ ಅವರ ಹೆಸರು ಹೇಳಿಕೊಂಡೇ ಆತ ಗುರುತಿಸಿಕೊಂಡಿದ್ದಾನೆ. ಆತ ಮೊದಲು ನನ್ನ ಮಟ್ಟಕ್ಕೆ ಬರಲಿ, ಆಮೇಲೆ ಅವನಿಗೆ ಉತ್ತರ ಕೊಡುತ್ತೇನೆ. ಮಾಧ್ಯಮಗಳನ್ನೂ ಅವಾಚ್ಯವಾಗಿ ನಿಂದಿಸುವ ಆತ ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದಾನೆ? ನನ್ನ ವಿರುದ್ಧ ಅಥವಾ ಇತರರ ವಿರುದ್ಧ ಸಾಕ್ಷ್ಯಾಧಾರಗಳು, ಆಡಿಯೋಗಳು ಇದ್ದರೆ ತಕ್ಷಣ ಬಿಡುಗಡೆ ಮಾಡಲಿ. ದಿನಕ್ಕೊಂದು ನೆಪ ಹೇಳಿಕೊಂಡು ತಲೆಮರೆಸಿಕೊಂಡು ಓಡಾಡುವ ಬದಲು, ಸಾರ್ವಜನಿಕವಾಗಿ ಹೊರಹಾಕಲಿ" ಎಂದು ನೇರ ಸವಾಲು ಹಾಕಿದರು.