ಅವಾಚ್ಯ ಪದ ಬಳಸಿದ ನಟ ಧನ್ವೀರ್ ವಿರುದ್ಧ ಸಿಡಿದೆದ್ದ ಜೈದ್ ಖಾನ್ ಫ್ಯಾನ್ಸ್; ಚಾಮರಾಜಪೇಟೆ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲು!
Actor Dhanveer Gowda: ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ, ನಟ ಜೈದ್ ಖಾನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಂಭೀರ ಆರೋಪ ಸ್ಯಾಂಡಲ್‌ವುಡ್ ನಟ ಧನ್ವೀರ್ ವಿರುದ್ಧ ಕೇಳಿಬಂದಿದೆ. ಆಡಿಯೋ ವೈರಲ್ ಬೆನ್ನಲ್ಲೇ ಆಕ್ರೋಶಗೊಂಡ ಜೈದ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು ಚಾಮರಾಜಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
-
ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ವಿರುದ್ಧದ ವಿವಾದ ಮತ್ತಷ್ಟು ತಾರಕಕ್ಕೇರಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ, ಯುವ ನಟ ಜೈದ್ ಖಾನ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದಡಿ ನಟ ಧನ್ವೀರ್ ವಿರುದ್ಧ ಇದೀಗ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಮೂಲಕ ಧನ್ವೀರ್ ವಿರುದ್ಧ ದಾಖಲಾಗಿರುವ ದೂರುಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದ್ದು, ಧನ್ವೀರ್ ಕಾನೂನು ಸಂಕಷ್ಟ ಬಿಗಿಯಾಗುತ್ತಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಜೈದ್ ಫ್ಯಾನ್ಸ್
ಆಡಿಯೋ ಒಂದರಲ್ಲಿ ನಟ ಜೈದ್ ಖಾನ್ ಹಾಗೂ ಅವರ ಕುಟುಂಬದ ವಿರುದ್ಧ ಧನ್ವೀರ್ ಗೌಡ ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವುದು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುರಿತಾಗಿಯೂ ಕೇವಲವಾಗಿ ಪ್ರಸ್ತಾಪಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಹಾಗೂ ಜೈದ್ ಖಾನ್ ಅಭಿಮಾನಿಗಳು ಮತ್ತು ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಧನ್ವೀರ್ ಬಂಧನಕ್ಕೆ ಆಗ್ರಹ
ದೂರು ನೀಡುವ ಮುನ್ನ ಚಾಮರಾಜಪೇಟೆ ಪೊಲೀಸ್ ಠಾಣೆ ಮುಂಭಾಗ ಜಮೀರ್ ಅಭಿಮಾನಿಗಳು ಜಮಾಯಿಸಿ ಧನ್ವೀರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಧನ್ವೀರ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಮುಖಕ್ಕೆ ಮಸಿ ಬಳಿದ ಪೋಸ್ಟರ್‌ಗಳನ್ನು ಪ್ರದರ್ಶಿಸಿ ತೀವ್ರವಾಗಿ ಪ್ರತಿಭಟಿಸಿದರು. ಈಗಾಗಲೇ ಹಲವು ಠಾಣೆಗಳಲ್ಲಿ ಎನ್‌ಸಿಆರ್ ದಾಖಲಾಗಿದ್ದು, ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಿ ಧನ್ವೀರ್‌ನನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Actor Darshan: ದರ್ಶನ್ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಿಗೆ ಸೂಚನೆ
ಧನ್ವೀರ್ ಮನೆಗೆ ಮುತ್ತಿಗೆ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಭಿಮಾನಿ ವಿನಾಯಕ್ ಮಾತನಾಡಿ, "ನಟ ದರ್ಶನ್ ಕುಟುಂಬದೊಂದಿಗೆ ಜೈದ್ ಖಾನ್ ಉತ್ತಮ ಒಡನಾಟ ಹೊಂದಿರುವುದನ್ನು ಧನ್ವೀರ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ದರ್ಶನ್ ಕುಟುಂಬದವರಿಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಧನ್ವೀರ್ ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಅವರ ಮನೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಿದ್ದಾರೆ" ಎಂದು ಎಚ್ಚರಿಸಿದರು.
ಜೈದ್ ಖಾನ್ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಲಿಖಿತ ದೂರು ಸಲ್ಲಿಸಿದ್ದು, ಮಹಿಳೆಯರನ್ನು ಅವಹೇಳನ ಮಾಡಿರುವ ಹಾಗೂ ಗಣ್ಯರ ವಿರುದ್ಧ ಕೀಳಾಗಿ ಮಾತನಾಡಿರುವ ನಟ ಧನ್ವೀರ್ ಗೌಡ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.