ʻಜೋಗಿʼ ಪ್ರೇಮ್ ನಿರ್ದೇಶನದ ʻಕೆಡಿ: ದಿ ಡೆವಿಲ್ʼ ಸಿನಿಮಾ ತೆರೆಕಂಡಿದೆ. ಧ್ರುವ ಸರ್ಜಾ, ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಹೀಗೆ ದೊಡ್ಡ ಕಲಾವಿದರ ಬಳಗವೇ ಇರುವಂತಹ ಈ ಸಿನಿಮಾಕ್ಕಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದರು. ಆ ಎಲ್ಲಾ ಕಾಯುವಿಕೆಗೆ ಈಗ ತೆರೆಬಿದ್ದಿದೆ. 1975ರ ಕಾಲಘಟ್ಟದ ಬೆಂಗಳೂರಿನ ಭೂಗತ ಲೋಕದಲ್ಲಿ ನಡೆದಂತಹ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನ ಹೆಣೆದಿದ್ದಾರೆ ಪ್ರೇಮ್.
ಕೆಡಿಯ ಕಥೆ ಏನು?
ಬೆಂಗಳೂರಿನ ಏರಿಯೊಂದರಲ್ಲಿ ಸೀಮೆ ಎಣ್ಣೆ ವ್ಯಾಪಾರ ಮಾಡಿಕೊಂಡಿರುವ ನಿಷ್ಕಲ್ಮಶ ಮನಸ್ಸಿನ, ಅನಕ್ಷರಸ್ಥ ಯುವಕ ಕಾಳಿದಾಸ (ಧ್ರುವ). ಆದರೆ, ಅವನಿಗೊಬ್ಬ ಸುಶಿಕ್ಷಿತ ಅಣ್ಣನಿದ್ದಾನೆ, ಧರ್ಮ (ರಮೇಶ್ ಅರವಿಂದ್). ವಿದ್ಯೆ ಕಲಿಯದ ಕಾಳಿಯನ್ನು ಕಂಡರೆ ಧರ್ಮನಿಗೆ ಆಗೋದಿಲ್ಲ. ಒಂದೇ ಮನೆಯಲ್ಲಿದ್ದರೂ, ತಮ್ಮನ ಜೊತೆ ಮಾತನಾಡೋದಿಲ್ಲ ಧರ್ಮ. ಆದರೆ, ಕಾಳಿಗೆ ಅಣ್ಣನ ಮೇಲೆ ಅಪಾರವಾದ ಪ್ರೀತಿ, ಹಾಗೆಯೇ, ಪೊಲೀಸರೇ ಹೆದರುವಂತಹ ಭೂಗತ ಲೋಕದ ಡಾನ್ ಧಕ್ ದೇವನ (ಸಂಜಯ್ ದತ್) ಕಂಡರೆ ಕಾಳಿಗೆ ಸಿಕ್ಕಾಪಟ್ಟೆ ಭಕ್ತಿ.
ಇದೆಲ್ಲದರ ಮಧ್ಯೆ ಊದಿನ ಕಡ್ಡಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಘಾಟಿ ಹುಡುಗಿ ಮಚ್ಚ್ ಲಕ್ಷ್ಮೀ ಮೇಲೆ ಕಾಳಿಗೆ ಪ್ರೀತಿ ಚಿಗುರುತ್ತದೆ. ಇನ್ನೇನು ಅವರ ಪ್ರೀತಿ ಬೆಳೆಯಬೇಕು, ಎನ್ನುವಷ್ಟರಲ್ಲಿ ಅನಾಹುತಕಾರಿ ತಿರುವುಗಳು ಕಾಳಿ ಜೀವನದಲ್ಲಿ ನಡೆಯುತ್ತವೆ. ದೇವನನ್ನು ದೇವರಂತೆ ಆರಾಧಿಸುತ್ತಿದ್ದು ಕಾಳಿ, ಬದಲಾದ ಸನ್ನಿವೇಶಗಳಲ್ಲಿ ಅದೇ ದೇವನ ಮೇಲೆಯೇ ಮಚ್ಚು ಬೀಸುವ ಹಂತಕ್ಕೆ ಹೋಗುತ್ತಾನೆ. ಇಂತಹದ್ದೊಂದು ತಿರುವಿಗೆ ಕಾರಣವಾಗುವ ಆ ಸನ್ನಿವೇಶಗಳೇನು ಎಂಬುದನ್ನು ತೆರೆಮೇಲೆ ನೋಡಬೇಕು. ಜೊತೆಗೆ ಇದಕ್ಕೆ ದೇವನ ಪತ್ನಿ ಸತ್ಯವತಿ (ಶಿಲ್ಪಾ ಶೆಟ್ಟಿ) ಮತ್ತು ಜನರ ಬೆಂಬಲವಿರುವ ಪ್ರಭಾವಿ ರಾಜಕಾರಣಿ ಅಣ್ಣಯ್ಯಪ್ಪ (ರವಿಚಂದ್ರನ್) ಪಾತ್ರಗಳು ಕಥೆಗೆ ಇನ್ನಷ್ಟು ಮೆರುಗು ನೀಡಿವೆ.
ಮತ್ತೆ ಮಿಂಚಿದ್ರಾ ಶೋ ಮ್ಯಾನ್ ಪ್ರೇಮ್?
ರೌಡಿಸಂ ಸಿನಿಮಾಗಳನ್ನು ಮಾಡೋದ್ರಲ್ಲಿ ಪ್ರೇಮ್ ಮಾಸ್ಟರ್. ಅವರ ಮೊದಲ ಸಿನಿಮಾ ಕರಿಯದಿಂದಲೇ ಭೂಗತ ಲೋಕದ ಕಥೆಯನ್ನು ಹೇಳಿಕೊಂಡು ಬಂದಿರುವ ಪ್ರೇಮ್, ಜೋಗಿಯಲ್ಲೂ ಅದನ್ನು ಮುಂದುವರಿಸಿದ್ದರು. ಕೆಡಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರೇಮ್, 1975ರ ಕಾಲಘಟ್ಟದಲ್ಲಿ ನಡೆದಂತಹ ಭೂಗದ ಲೋಕದ ಕಥೆಯನ್ನು ಹೇಳಿದ್ದಾರೆ. ಸಾಮಾನ್ಯವಾಗಿ ಪ್ರೇಮ್ ಸಿನಿಮಾಗಳಲ್ಲಿ ಮದರ್ ಸೆಂಟಿಮೆಂಟ್ ಇರುತ್ತದೆ. ಆದರೆ ಈ ಬಾರಿ ಬ್ರದರ್ ಸೆಂಟಿಮೆಂಟ್ ಮೇಲೆ ಜಾಸ್ತಿ ಪೋಕಸ್ ನೀಡಿದ್ದಾರೆ. ಫ್ಯಾಮಿಲಿ ಎಮೋಷನ್ಸ್ ಜೊತೆಗೆ ಅಂಡರ್‌ವರ್ಲ್ಡ್ ಕಥೆಯನ್ನು ಹೇಳಿದ್ದಾರೆ. ರೆಟ್ರೋ ಕಾಲದ ಕಥೆಯಾದ್ದರಿಂದ ಬಹುತೇಕ ಸೆಟ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಇಲ್ಲಿನ ಬೃಹತ್ ಸೆಟ್‌ಗಳೇ ಸಿನಿಮಾದ ಹೈಲೈಟ್ ಎನ್ನಬಹುದು. ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾಗಳೆಂದರೆ, ಅಲ್ಲಿ ಅದ್ದೂರಿತನವೇ ಹೆಚ್ಚಿರುತ್ತದೆ. ಕೆಡಿಯಲ್ಲೂ ಅದು ಎದ್ದು ಕಾಣುತ್ತದೆ.
KD Twitter Review: ಧ್ರುವ ಸರ್ಜಾ ನಟನೆಗೆ ಫುಲ್ ಮಾರ್ಕ್ಸ್ ಕೊಟ್ರು ಫ್ಯಾನ್ಸ್; ಮೂವಿ ನೋಡಿದವರು ಎನಂದ್ರು?
ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಅದ್ಭುತವಾಗಿದ್ದು, ಸಿನಿಮಾದ ಕ್ವಾಲಿಟಿಯನ್ನು ಹೆಚ್ಚಿಸಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಖುಷಿ ನೀಡಿದರೆ, ಹಿನ್ನೆಲೆ ಸಂಗೀತದಲ್ಲಿ ಅಬ್ಬರವೇ ಜಾಸ್ತಿ ಇದೆ. ಕ್ರಾಂತಿ ಕುಮಾರ್ ಬರೆದ ಪಂಚಿಂಗ್ ಸಂಭಾಷಣೆ ಧ್ರುವ ಫ್ಯಾನ್ಸ್‌ಗೆ ಇಷ್ಟವಾಗುತ್ತದೆ. ಆದರೆ ನಾಯಕಿ ಪಾತ್ರಕ್ಕೆ ಡೈಲಾಗ್‌ಗಳು ತುಸು ಜಾಸ್ತಿಯಾದವೇನೋ ಎಂಬ ಫೀಲ್ ನೀಡುತ್ತದೆ. ರೆಟ್ರೋ ಕಾಲವನ್ನು ಮರುಸೃಷ್ಟಿ ಮಾಡುವಲ್ಲಿ ವಿಎಫ್‌ಎಕ್ಸ್ ಕೂಡ ಸಹಾಯಕವಾಗಿದೆ. ವಿವಾದಕ್ಕೆ ಕಾರಣವಾಗಿದ್ದ ನೋರಾ ಫತೇಹಿ ಕಾಣಿಸಿಕೊಂಡಿದ್ದ ಆ ಹಾಡನ್ನು ಕತ್ತರಿಸಲಾಗಿದೆ. ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಕೆಡಿ ಕಥೆ ಇನ್ನೂ ಮುಗಿದಿಲ್ಲ. ಪಾರ್ಟ್ 2ಕ್ಕೆ ಕಾಯುತ್ತೀರಿ ಎಂದು ಕಾಲಭೈರವನಾಗಿ ಸಿಗ್ನಲ್ ಕೊಟ್ಟಿದ್ದಾರೆ ಕಿಚ್ಚ. ಹಾಗ್ನೋಡಿದ್ರೆ, ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್‌ಗಳ ಸರಮಾಲೆಯೇ ಇದೆ. ಆದರೆ, ಅದೆಲ್ಲದಕ್ಕೂ ಉತ್ತರ ಪಾರ್ಟ್ 2ರಲ್ಲಿ ಸಿಗಲಿದೆ.
ಕಾಳಿಯಾಗಿ ಅಬ್ಬರಿಸಿದ ಧ್ರುವ ಸರ್ಜಾ
ನಟ ಧ್ರುವ ಸರ್ಜಾ ಅವರು ಕಾಳಿದಾಸ ಮತ್ತು ಕೆಡಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿಯಾಗಿ ಮುಗ್ಧನಾಗಿ ಮಿಂಚಿದ್ದಾರೆ. ಬಹಳ ಸಮಯದ ನಂತರ ಪಕ್ಕಾ ಲೋಕಲ್ ಹುಡುಗನಂತೆ ಧ್ರುವ ಗಮನಸೆಳೆದಿದ್ದಾರೆ. ಅವರ ಫ್ಯಾನ್ಸ್‌ಗೆ ಇಷ್ಟವಾಗುವಂತಹ ಹಲವು ವಿಚಾರಗಳು ಇಲ್ಲಿವೆ. ಇದು ಆಕ್ಷನ್ ಸಿನಿಮಾವಾದರೂ, ಎಮೋಷನಲ್ ಸೀನ್‌ಗಳಲ್ಲಿ ಧ್ರುವ ಹೆಚ್ಚು ಮಿಂಚಿದ್ದಾರೆ. ಅದರ ಜೊತೆಗೆ ಕೆಡಿಯಾಗಿಯೂ ಅಷ್ಟೇ ಖಡಕ್ ಆಗಿ ಅಬ್ಬರಿಸಿದ್ದಾರೆ. ಚಾನ್ಸ್ ಸಿಕ್ಕಲೆಲ್ಲಾ ಮಸ್ತ್ ಆಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ನಾಯಕಿ ರೀಷ್ಮಾ ನಾಣಯ್ಯ ಅವರ ಮಚ್ಚ್ ಲಕ್ಷ್ಮೀ ಪಾತ್ರವು ತುಸು ಹೆಚ್ಚೇ ಅಬ್ಬರಿಸುತ್ತದೆ. ನಟನೆಯಲ್ಲಿ ಅವರಿನ್ನೂ ಮಾಗಬೇಕಿದೆ.
ಧ್ರುವ ಸರ್ಜಾ ಅಭಿಮಾನಿಗಳ ಸಂಭ್ರಮ
ದೇವನಾಗಿ ಸಂಜಯ್ ದತ್ ಎಂದಿನಂತೆ ಖಡಕ್. ಅಚ್ಚರಿ ಹುಟ್ಟಿಸುವಂತಹ ಧರ್ಮ ಪಾತ್ರವನ್ನು ರಮೇಶ್ ಅರವಿಂದ್ ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಶಾಸಕನಾಗಿ ರವಿಚಂದ್ರನ್, ಪೊಲೀಸ್ ಅಧಿಕಾರಿಯಾಗಿ ರವಿಶಂಕರ್, ದೇವನ ಬಲಗೈ ಬಂಟನಾಗಿ ಯಶ್ ಶೆಟ್ಟಿ ಸಿಕ್ಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಇಲ್ಲಿ ಎರಡೇ ಸೀನ್‌ಗಳಲ್ಲಿ ಕಾಣಿಸಿಕೊಂಡರೂ, ಕಥೆಗೆ ಬಹಳಷ್ಟು ತಿರುವು ನೀಡುತ್ತಾರೆ ಮತ್ತು ಪಾರ್ಟ್ 2ರಲ್ಲಿ ಅವರದ್ದೇ ಆರ್ಭಟ ಇರಲಿದೆ ಎಂಬುದಕ್ಕೆ ಸಾಕ್ಷಿ ಕೂಡ ಇದೆ.
ಒಟ್ಟಾರೆಯಾಗಿ, 'ಕೆಡಿ: ದಿ ಡೆವಿಲ್' ಮಾಸ್ ಮಸಾಲೆ ತುಂಬಿರುವಂತಹ ಒಂದು ಪಕ್ಕಾ ಮನರಂಜನೆಯ ಚಿತ್ರ. ಧ್ರುವ ಸರ್ಜಾ ಫ್ಯಾನ್ಸ್‌ಗೆ ಈ ಸಿನಿಮಾ ಜಾಸ್ತಿಯೇ ಖುಷಿ ನೀಡಬಹುದು.
Movie: ಕೆಡಿ
Release Date: ಏ.30, 2026
Language: ಕನ್ನಡ
Genre: ಥ್ರಿಲ್ಲರ್, ಡ್ರಾಮಾ, ಆಕ್ಷನ್
Director: ಜೋಗಿ ಪ್ರೇಮ್
Cast: ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ರವಿಚಂದ್ರನ್, ರವಿಶಂಕರ್, ಸುಚೇಂದ್ರ ಪ್ರಸಾದ್, ಯಶ್ ಶೆಟ್ಟಿ
Duration: 140 ನಿಮಿಷ
Rating: 3.5/5