ದಳಪತಿ ವಿಜಯ್ ಅವರ ʻಜನ ನಾಯಗನ್ʼ ಸಿನಿಮಾಗೆ ಎಷ್ಟೆಲ್ಲಾ ಸೆನ್ಸಾರ್ ಪ್ರಾಬ್ಲಂ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ, ಈ ಚಿತ್ರವನ್ನು ಸರಿಯಾದ ಸಮಯಕ್ಕೆ ರಿಲೀಸ್ ಮಾಡಲು ಕೆವಿಎನ್ ಪ್ರೊಡಕ್ಷನ್ಸ್‌ಗೆ (KVN Productions) ಸಾಧ್ಯವಾಗಲೇ ಇಲ್ಲ. ಇದೀಗ ಇದೇ ಬ್ಯಾನರ್‌ನ ಮತ್ತೊಂದು ಸಿನಿಮಾಕ್ಕೂ ಸೆನ್ಸಾರ್ ಕಡೆಯಿಂದ ಸಮಸ್ಯೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಹೌದು, ಜನ ನಾಯಗನ್ ಬಳಿಕ ಈಗ ಕೆಡಿ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಆಗಿದೆಯಂತೆ!
ರಿವೈಸಿಂಗ್ ಕಮಿಟಿಗೆ ‘ಕೆಡಿ’ ಸಿನಿಮಾ
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ‘ಕೆಡಿ’ ಸಿನಿಮಾವನ್ನು (KD Movie) ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದಾರೆ. ಮುಖ್ಯಭೂಮಿಕೆಯಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ಇದ್ದಾರೆ. ಏಪ್ರಿಲ್ 30ರಂದು ಈ ಚಿತ್ರವನ್ನು ರಿಲೀಸ್ ಮಾಡುವುದಾಗಿ ಜೋಗಿ ಪ್ರೇಮ್ ಆಗಲೇ ಘೋಷಣೆ ಮಾಡಿದ್ದಾರೆ. ಇನ್ನೇನು ರಿಲೀಸ್‌ಗೆ 17 ದಿನಗಳು ಬಾಕಿ ಇರುವಾಗ, ಸೆನ್ಸಾರ್ ಕಡೆಯಿಂದ ನಮಗೆ ಸಮಸ್ಯೆ ಆಗುತ್ತಿದೆ ಎಂದು ಚಿತ್ರತಂಡ ಆರೋಪ ಮಾಡ್ತಿದೆ. ಅಷ್ಟಕ್ಕೂ ಆಗಿರುವುದೇ ಏನೆಂದರೆ, ಚಿತ್ರತಂಡದ ಗಮನಕ್ಕೂ ಬಾರದಂತೆ ಈ ಸಿನಿಮಾವನ್ನು ಸೆನ್ಸಾರ್ ಮಂಡಳಿಯು ರಿವೈಸಿಂಗ್ ಕಮಿಟಿಗೆ ಕಳುಹಿಸಿದೆಯಂತೆ!
KD-The Devil Movie: ಸೆರಗಿನ ತಂಟೆಗೆ ಹೋದ ʻಕೆಡಿʼ ಟೀಮ್; ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದೇನು?
ಕೆಡಿ ಚಿತ್ರಕ್ಕೆ ಸಿಕ್ಕಿಲ್ಲ ಪ್ರಮಾಣ ಪತ್ರ
ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ, ‘ಕೆಡಿ’ ಸಿನಿಮಾವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ಸದಸ್ಯರು ಈಗಾಗಲೇ ವೀಕ್ಷಣೆ ಮಾಡಿದ್ದಾರಂತೆ. ಚಿತ್ರದಲ್ಲಿ ಸಾಕಷ್ಟು ರಕ್ತಪಾತ ಇದೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಲು ರೆಡಿ ಆಗಿತ್ತು. ಜೊತೆಗೆ ಹಾಡಿನ ಸಾಹಿತ್ಯದಲ್ಲಿಯೂ ಕೆಲ ಬದಲಾವಣೆಗೆ ಸೂಚನೆ ನೀಡಿತ್ತು. ಇದಕ್ಕೆಲ್ಲಾ ಕೆಡಿ ಚಿತ್ರತಂಡದ ಕಡೆಯಿಂದ ಒಪ್ಪಿಗೆ ಸಿಕ್ಕಿತ್ತು. ಸೆನ್ಸಾರ್ ಮಂಡಳಿ ಹೇಳಿದ್ದಕ್ಕೆಲ್ಲಾ ಒಪ್ಪಿಂಕೊಂಡರೂ, ಅಂತಿಮವಾಗಿ ಕೆಡಿಗೆ ಪ್ರಮಾಣಪತ್ರ ಸಿಕ್ಕಿಲ್ಲ!
ಕೆವಿಎನ್ ಪ್ರೊಡಕ್ಷನ್ಸ್‌ಗೆ ಮಾಹಿತಿ ನೀಡಿಲ್ಲ
‘ಎ’ ಪ್ರಮಾಣಪತ್ರ ನೀಡುತ್ತೇವೆ ಎಂದು ಒಪ್ಪಿಕೊಂಡಿದ್ದ ಪ್ರಾದೇಶಿಕ ಸೆನ್ಸಾರ್ ಮಂಡಳಿಯು, ಇದೀಗ ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ ಹಾಗೂ ರಿವೈಸಿಂಗ್ ಕಮಿಟಿಗೆ ಕೆಡಿ ಸಿನಿಮಾವನ್ನು ವೀಕ್ಷಣೆ ಮಾಡುವಂತೆ ಕಳುಹಿಸಿದೆ. ಈ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಅವರಿಗಾಗಲೀ, ಕೆವಿಎನ್ ಪ್ರೊಡಕ್ಷನ್ಸ್ ತಂಡಕ್ಕಾಗಲಿ ಮಾಹಿತಿ ನೀಡಿಲ್ಲ. ತಮ್ಮ ‘ಕೆಡಿ’ ಚಿತ್ರವು ರಿವೈಸಿಂಗ್ ಕಮಿಟಿಗೆ ಹೋಗಿರುವ ಬಗ್ಗೆ ಮಾಹಿತಿ ಇಲ್ಲ. ಇದು ಕೆಡಿ ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ. ಸೆನ್ಸಾರ್ ಮಂಡಳಿಯು ನಿಯಮ ಉಲ್ಲಂಘಿಸಿದೆ ಎಂದು ಕೆಡಿ ಚಿತ್ರತಂಡ ಆರೋಪ ಮಾಡಿದೆ.
ʻಜನ ನಾಯಗನ್ʼ ಸೆನ್ಸಾರ್ ಸಮಸ್ಯೆ, ರಿಲೀಸ್‌ಗೂ ಮುನ್ನವೇ ಲೀಕ್‌ನಂತಹ ಸಂಕಷ್ಟಗಳನ್ನು ಕಂಡಿದ್ದ ಕೆವಿಎನ್ ಪ್ರೊಡಕ್ಷನ್ಸ್‌ನ ಮತ್ತೊಂದು ಸಿನಿಮಾ ಕೆಡಿಗೂ ಇದೇ ಥರದ ಸಮಸ್ಯೆ ಎದುರಾಗಿರುವುದು ನಿಜಕ್ಕೂ ಬೇಸರದ ವಿಚಾರ.