ʻದಿಲೀಪಾ.. ಯಾಕೋ ನೀನು ಮೌನವಾದೆ?ʼ; ಅಗಲಿದ ಗೆಳೆಯನನ್ನ ನೆನೆದು ಕಣ್ಣೀರಾದ ದಶಕದ ಸ್ನೇಹಿತರು
ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಅವರ 25 ವರ್ಷಗಳ ಸುದೀರ್ಘ ಗೆಳೆಯರ ಬಳಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ರಂಗಭೂಮಿಯ ದಿನಗಳಿಂದ ಹಿಡಿದು ಯಶಸ್ವಿ ನಿರ್ಮಾಪಕನಾಗುವವರೆಗೆ ಜೊತೆಗಿದ್ದ ಕೆ.ಎಂ. ಚೈತನ್ಯ, ಅನುಶ್ರೀ ಮತ್ತು ಶ್ರುತಿ ನಾಯ್ಡು ಅಂತಹ ಆಪ್ತರು ದಿಲೀಪ್ ಅವರ ಪ್ರತಿಭೆಯನ್ನು ಸ್ಮರಿಸಿದ್ದಾರೆ.
-
ನಟ, ನಿರ್ಮಾಪಕ ದಿಲೀಪ್ ರಾಜ್ ಅವರು ಹಲವು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದರು. ನಟರಾಗಿಯೂ ಸಾಕಷ್ಟು ಉತ್ತಮ ಸಿನಿಮಾಗಳನ್ನ ನೀಡಿದ್ದರು. ತಮ್ಮ ಪ್ರತಿಭೆ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಇವರು, ಸಿನಿಮಾ ತಾಂತ್ರಿಕತೆ, ಬರಹ ಮತ್ತು ನೃತ್ಯದಲ್ಲೂ ಪರಿಣತಿ ಹೊಂದಿದ್ದರು. ದಿಲೀಪ್ ಅಗಲಿಕೆ ಅವರ ಆಪ್ತ ಸ್ನೇಹಿತರನ್ನು ಭಾವುಕರನ್ನಾಗಿಸಿದೆ. ದಿಲೀಪ್ ಅವರ 25 ವರ್ಷಕ್ಕೂ ಹೆಚ್ಚಿನ ಸ್ನೇಹಿತರು ಈ ಸಂದರ್ಭದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ʻಆ ದಿನಗಳುʼ ಖ್ಯಾತಿಯ ನಿರ್ದೇಶಕ ಕೆ ಎಂ ಚೈತನ್ಯ ಹೇಳಿದ್ದೇನು?
"ಗೆಳೆಯ, ನಟ ದಿಲೀಪ್ ರಾಜ್ ಸುಮಾರು 25 ವರ್ಷಕ್ಕೂ ಹಿಂದಿನ ಪರಿಚಯ. 1997ರಲ್ಲಿ ನಾನು `ವಾಸಾಂಶಿ ಜೀರ್ಣಾನಿ' ಎಂಬ ನಾಟಕ ನಿರ್ದೇಶಿಸಿದ್ದೆ. ಪ್ರದರ್ಶನದ ಹಿಂದಿನ ದಿನ ಒಂದು ರಸ್ತೆ ಅಪಘಾತದಲ್ಲಿ ಆ ನಾಟಕದ ಮುಖ್ಯ ಪಾತ್ರದಲ್ಲಿದ್ದ ಅರುಣ ಎಂಬ ನಟ ತೀರಿಕೊಂಡ. ಇಡೀ ತಂಡ ಆಘಾತ, ದುಃಖದಲ್ಲಿ ಮುಳುಗಿತ್ತು. ಎರಡು ತಿಂಗಳುಗಳ ನಂತರ ಮತ್ತೆ ಆ ನಾಟಕ ಕೈಗೊಂಡೆವು. ಆಗ ಅರುಣನ ಜಾಗ ತುಂಬಿದ್ದು ದಿಲೀಪ್. ಹವ್ಯಾಸಿ ರಂಗಭೂಮಿಯಲ್ಲಿ ಆ ಪಾತ್ರ ದಿಲೀಪನ ಮೊದಲ ಪ್ರಮುಖ ಪಾತ್ರವಾಗಿತ್ತು. 2005ರಲ್ಲಿ ಈಟಿವಿ ವಾಹಿನಿಗೆ ನಾನು ʻಕಿಚ್ಚುʼ ಎಂಬ ಧಾರಾವಾಹಿ ನಿರ್ಮಿಸಿ, ನಿರ್ದೇಶನ ಮಾಡಿದಾಗ, ಆ ಧಾರಾವಾಹಿಯ ಮುಖ್ಯ ಪಾತ್ರ ನಿರ್ವಹಿಸಿದ್ದು ದಿಲೀಪ್"
ಕೆ ಎಂ ಚೈತನ್ಯ ಅವರು ಹಂಚಿಕೊಂಡ ಪೋಸ್ಟ್
"ನನ್ನ ʻಆ ದಿನಗಳುʼ ಸಿನಿಮಾಗೆ ಚೇತನ್ ನಟಿಸಿದ ಪಾತ್ರಕ್ಕೆ ದಿಲೀಪ್ ತನ್ನ ಧ್ವನಿ ನೀಡಿ ಸಹಾಯ ಮಾಡಿದರು. ಮುಂದೆ ನಾನು ʻಸೂರ್ಯಕಾಂತಿʼ ಸಿನಿಮಾ ನಿರ್ದೇಶಿಸಿದಾಗ ಅದರಲ್ಲಿ ʻಎದೆಯ ಬಾಗಿಲು ತಟ್ಟದೆ..ʼ ಹಾಡಿಗೆ ನೃತ್ಯ ಸಂಯೋಜನೆಯಲ್ಲಿ ಸಹಾಯ ಮಾಡಿದರು. ಸ್ಪುರದ್ರೂಪಿ, ಹಸನ್ಮುಖಿ, ಬಹಳ ಪ್ರತಿಭಾವಂತ ಕಲಾವಿದ ದಿಲೀಪ್ ರಾಜ್ ಈಗ ನಮ್ಮನ್ನು ಅಗಲಿದ್ದಾರೆ. ಇನ್ನೂ ಸಣ್ಣ ವಯಸ್ಸು. ಅವರ ಪ್ರತಿಭೆಗೆ ಇನ್ನೂ ಹೆಚ್ಚು ಅವಕಾಶಗಳು ಅವರಿಗೆ ಸಿಗಬೇಕಿತ್ತು" ಎಂದು ಆ ದಿನಗಳು ಸಿನಿಮಾ ಖ್ಯಾತಿ ನಿರ್ದೇಶಕ ಕೆ ಎಂ ಚೈತನ್ಯ ಹೇಳಿದ್ದಾರೆ.
ರಂಗಭೂಮಿ ಸ್ನೇಹಿತೆಯ ಮಾತು
"ಆ 90ರ ದಶಕ... ಕಾಲೇಜಿನ ಪ್ರತಿಸ್ಪರ್ಧಿ ತಂಡಗಳಲ್ಲಿದ್ದ ದಿನಗಳಿಂದ ಹಿಡಿದು, 'ನಟರಂಗ' ನಾಟಕಗಳಲ್ಲಿ ಜೊತೆಯಾಗಿ ನಟಿಸುವವರೆಗೆ, ಆನಂತರ ನನ್ನ 'ಭ್ರಮರಿ' ನೃತ್ಯ ಸಂಸ್ಥೆಯಲ್ಲಿ ನೀನು ಭಾಗವಾಗುವವರೆಗೆ... ಲೆಕ್ಕವಿಲ್ಲದಷ್ಟು ಗಂಟೆಗಳ ತಾಲೀಮು, ಆ ಪ್ರಾಂಕ್‌ಗಳು (ತಮಾಷೆಗಳು), ಆ ಅದಮ್ಯ ಚೈತನ್ಯ, ಪ್ರದರ್ಶನಗಳು... ಓಹ್! ಪುಟ್ಟ ಜ್ಯೋ ಪ್ರಜ್ಞೆ ತಪ್ಪಿ ಬಿದ್ದಾಗ ನೀನು ಆಕೆಯನ್ನು ಹೊತ್ತುಕೊಂಡಿದ್ದು, ಸೆಟ್ ಕೆಲಸದ ವೇಳೆ ಚಲಪತಿಯನ್ನು ಪೀಡಿಸಲು ನೀನು ಮಾಡುತ್ತಿದ್ದ ಪ್ರಯತ್ನಗಳು, 'ಸಿರಿಸಂಪಿಗೆ'ಯ ಆ ಏಕಪಾತ್ರಾಭಿನಯವನ್ನು ನೀನು ಅದ್ಭುತವಾಗಿ ನಿಭಾಯಿಸಿದ್ದು... ನಮ್ಮ ಈ ಪಯಣ ನಿಜಕ್ಕೂ ಅವಿಸ್ಮರಣೀಯ. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ದಿಲೀಪಾ, ನಾವು ಮತ್ತೆ ಭೇಟಿಯಾಗುವವರೆಗೂ..." ಎಂದು ಸ್ನೇಹ ಕಣ್ಣಪ್ಪ ಹೇಳಿದ್ದಾರೆ.
ಸ್ನೇಹಾ ಕಪ್ಪಣ್ಣ ಅವರ ಪೋಸ್ಟ್
ಹೆಲೋ ಎಂದರೆ, ನೀನೇ ಇಲ್ಲ!
ದಿಲೀಪ್ ಅವರಿಗೆ ಹಲವು ವರ್ಷಗಳಿಂದ ಸ್ನೇಹಿತೆಯಾಗಿರುವ ನಟಿ, ನಿರೂಪಕಿ ಅನುಶ್ರೀ, "ಹಲೋ ಎಂದ ಕರೆಯೇ ನೆನಪಿಲ್ಲ… ಕಾಲ್ ಮಾಡಿದಾಗೆಲ್ಲ ಸಿಗದೇ ಇರೋ ನೆಪ ಎಲ್ಲಾ.. ಫೋನ್ ಮಾಡಿ ಬಾಯಿ ತುಂಬಾ ಬೈತಿದ್ದ ನೀನು ಯಾಕೋ ಮೌನವಾದೆ.. ಕ್ಷಮಿಸು ಗೆಳೆಯ ಕಡೆಗೂ ನಾವೆಲ್ಲ ಸೇರಲು ಆಗಲೇ ಇಲ್ಲ.. ಈಗ ನಾವೆಲ್ಲ ನಿನ್ನ ಮನೆಯಲ್ಲಿ ಸೇರಿದ್ದೀವಿ.. ಆದ್ರೆ.. ನೀನೇ ಇಲ್ಲ" ಎಂದು ಹೇಳಿಕೊಂಡಿದ್ದಾರೆ.
3 ಆಸ್ಪತ್ರೆಗಳಿಗೆ ಹೋದರೂ ಉಳಿಯಲಿಲ್ಲ ದಿಲೀಪ್ ರಾಜ್ ಜೀವ; ಪ್ರತಿಭಾವಂತ ನಟನ ಆ ಕೊನೆಯ ಕ್ಷಣಗಳು ಹೇಗಿದ್ದವು?
ದಿಲೀಪ್‌ರನ್ನು ನೆನೆದ ನಿರ್ಮಾಪಕಿ ಶ್ರುತಿ ನಾಯ್ಡು
"ದಿಲೀಪ.. ನಾವು ಕಲಾವಿದರು ತಕ್ಕ ಮಟ್ಟಿಗೆ ಒಳ್ಳೆಯ ಹೆಸರು ಹಣ ಮಾಡಿದವರು.. ನಿರ್ದೇಶಕ, ನಿರ್ಮಾಪಕರು ಯಾಕೆ ಆಗಬೇಕು? ಏನೋ ಹುರುಪು, ಹುಚ್ಚು.. ನಾವೂ ಎಷ್ಟೋ ಹೊಸ ಕಲಾವಿದರನ್ನ ಪರಿಚಯಿಸಬೇಕು, ಎಷ್ಟೋ ಮಂದಿ ತಂತ್ರಜ್ಞರಿಗೆ ಕೆಲಸ ಕೊಡಬೇಕು, ಎಷ್ಷೋ ಹಿರಿಯ ಕಲಾವಿದರಿಗೆ ಒಂದು ಆಶಾದೀಪವಾಗಬೇಕು.. ಅವರೆಲ್ಲರೂ ನಮ್ಮನ್ನ ಜೀವನ ಪೂರ್ತಿ ನೆನೆದು, ಹರಸಿ ಒಂದಷ್ಷು ಮಂದಿ ಮುಂದೆ ಹಾಡಿ ಹೊಗಳಬೇಕು. ಧಾರಾವಾಹಿ ಎಷ್ಟು ಸುದೀರ್ಘವಾಗಿ ನಡೆಯತ್ತೋ ಅಷ್ಷು ದಿವಸ ಅವರು ಮತ್ತು ನಾವು ಎಲ್ರೂ ಒಂದು ಸುಂದರ ಬದುಕು ಕಟ್ಟಿಕೊಳ್ಳಬಹುದು ಅನ್ನೋ ಆಸೆ ಭರವಸೆಯಲ್ಲಿ ನಮ್ಮ ಓಟ.. ಒತ್ತಡ.. ಮಾನಸಿಕ ದೈಹಿಕವಾಗಿ ಎಷ್ಟೇ ಶ್ರಮವಾದರೂ ಅದನ್ನು ತೆಗೆದುಕೊಳ್ಳಲ್ಲು ಸೈ.." ಎಂದು ನಿರ್ಮಾಪಕಿ, ನಟಿ ಶ್ರುತಿ ನಾಯ್ಡು ತಿಳಿಸಿದ್ದಾರೆ.
ಶ್ರುತಿ ನಾಯ್ಡು ಪೋಸ್ಟ್
ಇವರೆಲ್ಲರೂ ದಿಲೀಪ್ ಅವರು ರಂಗಭೂಮಿಯ ದಿನಗಳಿಂದ ಸೀರಿಯಲ್‌ಗೆ ಎಂಟ್ರಿಕೊಟ್ಟು, ಅಲ್ಲಿಂದ ಸಿನಿಮಾರಂಗಕ್ಕೆ ಕಾಲಿಟ್ಟ ದಿನಗಳಿಂದಲೂ ಜೊತೆಗೆ ಇರುವವಂತಹವರು. ದಿಲೀಪ್ ಅವರು ಬದುಕಿನಲ್ಲಿ ಎಷ್ಟೇ ಎತ್ತರಕ್ಕೇರಿದರೂ, ಎಷ್ಟೇ ಬ್ಯುಸಿ ಇದ್ದರೂ, ತಮ್ಮ ಆರಂಭದ ದಿನಗಳ ಸ್ನೇಹಿತರನ್ನು ಮರೆತಿರಲಿಲ್ಲ. ಅವರೆಲ್ಲರೊಂದಿಗೂ ಅದೇ ಸ್ನೇಹ-ಸಂಬಂಧವನ್ನು ಮುಂದುವರಿಸಿಕೊಂಡು ಬಂದಿದ್ದರು.