ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ 'ಒಬ್ಸೆಷನ್' (Obsession) ಸಿನಿಮಾ ಇದೀಗ ಜಾಗತಿಕ ಮಟ್ಟದಲ್ಲಿ ಭರ್ಜರಿ ಯಶಸ್ಸನ್ನು ಕಂಡು ಹೊಸ ದಾಖಲೆ ಸೃಷ್ಟಿಸಿದೆ. ಈ ಥ್ರಿಲ್ಲರ್ ಚಿತ್ರಕ್ಕೆ ಭಾರತದಲ್ಲೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಭಾರತದಲ್ಲಿ ಈ ಚಿತ್ರಕ್ಕೆ ಸಿಕ್ಕಿರುವ ಯಶಸ್ಸಿನ ಕುರಿತು ನಿರ್ದೇಶಕ ಕರಿ ಬಾರ್ಕರ್ (Curry Barker) ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಾಕ್ಸ್ ಆಫೀಸ್ ಟ್ರ್ಯಾಕರ್ 'ಸ್ಯಾಕ್ನಿಲ್ಕ್' (Sacnilk) ವರದಿಯ ಪ್ರಕಾರ, ಈ ಸಿನಿಮಾವು ಭಾರತವೊಂದರಲ್ಲೇ ಬರೋಬ್ಬರಿ 78 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅದರಲ್ಲೂ ಕರ್ನಾಟಕದಿಂದಲೇ 20+ ಕೋಟಿ ರೂ. ಕಮಾಯಿ ಆಗಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಕಥೆಯ ಬಗ್ಗೆ ಭಾರಿ ಚರ್ಚೆಗಳು, ಫ್ಯಾನ್ ಥಿಯರಿಗಳು ಹಾಗೂ ಮೀಮ್‌ಗಳು ಹರಿದಾಡುತ್ತಿವೆ. ಭಾರತ ಸೇರಿದಂತೆ ವಿಶ್ವಾದ್ಯಂತ ವ್ಯಕ್ತವಾಗುತ್ತಿರುವ ಈ ದೊಡ್ಡಮಟ್ಟದ ಪ್ರತಿಕ್ರಿಯೆಯು ತಮಗೆ ಅಚ್ಚರಿ ತಂದಿದೆ ಎಂದು ಬಾರ್ಕರ್ ಹೇಳಿದ್ದಾರೆ.
ಇಷ್ಟು ದೊಡ್ಡ ಹಿಟ್ ಆಗುತ್ತದೆ ಅಂದುಕೊಂಡಿರಲಿಲ್ಲ
"ಭಾರತದಲ್ಲಿ ಒಬ್ಸೆಷನ್ ಸಿನಿಮಾವು ಇಷ್ಟೊಂದು ದೊಡ್ಡ ಹಿಟ್ ಆಗುತ್ತದೆ ಎಂದು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ. ನಿಜ ಹೇಳಬೇಕೆಂದರೆ, ಜಗತ್ತಿನ ಯಾವುದೇ ಮೂಲೆಯಲ್ಲೂ ಇದು ಈ ಮಟ್ಟಿಗೆ ಸದ್ದು ಮಾಡುತ್ತದೆ ಅಂದುಕೊಂಡಿರಲಿಲ್ಲ. ನಾವು ಮಾಡುವ ಸಿನಿಮಾ ಯಶಸ್ವಿಯಾಗಲಿ, ಜನರಿಗೆ ಇಷ್ಟವಾಗಲಿ ಎಂದು ಪ್ರತಿಯೊಬ್ಬರೂ ಬಯಸುವುದು ಸಹಜ.
ಆದರೆ, ಈ ಚಿತ್ರ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಗಳಿಸುತ್ತದೆ ಎಂದು ನಾನು ನಿಜಕ್ಕೂ ಊಹಿಸಿರಲಿಲ್ಲ. ನಾವು ತುಂಬಾ ಕಡಿಮೆ ಬಜೆಟ್‌ನಲ್ಲಿ, ಕಡಿಮೆ ಹಣದಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದೆವು. ಇಂದು ಈ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಕಂಡು ನನಗೇ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಕರಿ ಬಾರ್ಕರ್ ಸಂತಸ ಹಂಚಿಕೊಂಡಿದ್ದಾರೆ.
ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂ. ಲೂಟಿ!
'ಒಬ್ಸೆಷನ್' ಸಿನಿಮಾವು ವಿಶ್ವಾದ್ಯಂತ ಬರೋಬ್ಬರಿ 200 ಮಿಲಿಯನ್ ಡಾಲರ್ ಗಳಿಕೆ ದಾಟುವ ಮೂಲಕ 'ಫೋಕಸ್ ಫೀಚರ್ಸ್' (Focus Features) ಸ್ಟುಡಿಯೋದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಾರ್ವಕಾಲಿಕ ದಾಖಲೆ ಬರೆದಿದೆ. 'ಬಾಕ್ಸ್ ಆಫೀಸ್ ಮೊಜೊ' ನೀಡಿರುವ ಮಾಹಿತಿ ಪ್ರಕಾರ, ಮೇ 15 ರಂದು ಅಮೆರಿಕಾದಲ್ಲಿ ಬಿಡುಗಡೆಯಾದ ಈ ಚಿತ್ರ, ಕೇವಲ 26 ದಿನಗಳಲ್ಲಿ ವಿಶ್ವಾದ್ಯಂತ 234,501,640 ಡಾಲರ್ (ಸುಮಾರು 2240 ಕೋಟಿ ರೂಪಾಯಿ) ಕಮಾಯಿ ಮಾಡಿದೆಯಂತೆ. ಅಂದಹಾಗೆ, ಈ ಸಿನಿಮಾದ ಬಜೆಟ್ ಬರೀ 7 ಕೋಟಿ ರೂ. ಮಾತ್ರ!
ಐತಿಹಾಸಿಕ ದಾಖಲೆ ಬರೆದ 'ಒಬ್ಸೆಷನ್'
ಅಮೆರಿಕಾದ ಗಲ್ಲಾಪೆಟ್ಟಿಗೆಯಲ್ಲೇ 161 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಜೊತೆಗೆ ಮೂಲಕ ಹಾರರ್ ಶೈಲಿಯ ಸಿನಿಮಾಗಳ ಇತಿಹಾಸದಲ್ಲೇ ನಾಲ್ಕನೇ ವಾರಾಂತ್ಯದಲ್ಲಿ ಅತ್ಯುತ್ತಮ ಕಲೆಕ್ಷನ್ ಕಾಯ್ದುಕೊಂಡ ಮತ್ತು ಈ ಜಾನರ್‌ನಲ್ಲಿ ಭಾರಿ ಮೊತ್ತ ಗಳಿಸಿದ ಮೊದಲ ಸಿನಿಮಾ ಎಂಬ ಐತಿಹಾಸಿಕ ದಾಖಲೆಯನ್ನು 'ಒಬ್ಸೆಷನ್' ಬರೆದಿದೆ.