Obsession: ಬಜೆಟ್ 7 ಕೋಟಿ, ಕಲೆಕ್ಷನ್ 1 ಸಾವಿರ ಕೋಟಿ! ಚಿತ್ರ ನಿರ್ಮಾಣಕ್ಕೆ ಸುಖಾಸುಮ್ಮನೆ ಹಣ ವ್ಯಯ ಮಾಡೋರಿಗೆ ಈ ಹಾರರ್ ಸಿನಿಮಾ ಒಂದೊಳ್ಳೆ ಪಾಠ!
26 ವರ್ಷದ ಯೂಟ್ಯೂಬರ್ ಕರ್ರಿ ಬೇಕರ್ ನಿರ್ದೇಶನದ 'ಒಬ್ಸೆಷನ್' ಹಾರರ್ ಸಿನಿಮಾ ಕೇವಲ 7+ ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗಿ ಮೂರೇ ವಾರಗಳಲ್ಲಿ ಜಾಗತಿಕವಾಗಿ 1030+ ಕೋಟಿ ರೂ. ಗಳಿಸಿ ಇತಿಹಾಸ ಸೃಷ್ಟಿಸಿದೆ. ಅಮೆರಿಕ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಗ್ ಬಜೆಟ್ ಚಿತ್ರಗಳ ಪೈಪೋಟಿ ನಡುವೆಯೂ ಈ ಚಿತ್ರ ಧೂಳೆಬ್ಬಿಸಿದೆ.
-
26 ವರ್ಷದ ಯೂಟ್ಯೂಬರ್ ಕರ್ರಿ ಬೇಕರ್ ನಿರ್ದೇಶಿಸಿರುವ ಚಿತ್ರ ‘ಒಬ್ಸೆಷನ್’ (Obsession) 2026ರ ಅತ್ಯಂತ ಯಶಸ್ವಿ ಸಿನಿಮಾವಾಗಿ ಹೊರಹೊಮ್ಮಿದೆ. ಕೇವಲ 7.50 ಲಕ್ಷ ಡಾಲರ್ (ಸುಮಾರು 7.13 ಕೋಟಿ ರೂ.) ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ಬಿಡುಗಡೆಯಾದ (ಮೇ 15) ಮೂರೇ ವಾರಗಳಲ್ಲಿ ತನ್ನ ಬಜೆಟ್‌ಗಿಂತ ಹಲವು ಪಟ್ಟು ಹೆಚ್ಚು ಗಳಿಕೆ ಮಾಡಿದೆ. ಸದ್ಯ ಇದು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 1030+ ಕೋಟಿ ರೂಪಾಯಿ ಕೊಳ್ಳೆಹೊಡೆದಿದೆ!
ಅಮೆರಿಕ ಬಾಕ್ಸ್ ಆಫೀಸ್‌ನಲ್ಲಿ ‘ಒಬ್ಸೆಷನ್’ ದರ್ಬಾರ್
‘ಒಬ್ಸೆಷನ್’ ಚಿತ್ರವು ಕಳೆದ ವರ್ಷ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (TIFF) ಮೇಳದ ‘ಮಿಡ್‌ನೈಟ್ ಮ್ಯಾಡ್ನೆಸ್’ ವಿಭಾಗದಲ್ಲಿ ಪ್ರದರ್ಶನಗೊಂಡು ಭಾರಿ ಮೆಚ್ಚುಗೆ ಪಡೆದಿತ್ತು. ಆನಂತರ ಕೇವಲ ಒಂದು ತಿಂಗಳಲ್ಲೇ ‘ಫೋಕಸ್ ಫೀಚರ್ಸ್’ ಸಂಸ್ಥೆಯು ಇದನ್ನು 14 ರಿಂದ 15 ಮಿಲಿಯನ್ ಡಾಲರ್ (140 ಕೋಟಿ ರೂ.) ನೀಡಿ ಖರೀದಿಸಿತ್ತು. ಸಿನಿಮಾ ಮೇಳದ ಇತಿಹಾಸದಲ್ಲೇ ಹಾರರ್ ಶೈಲಿಯ ಸಿನಿಮಾವೊಂದಕ್ಕೆ ಸಿಕ್ಕ ಅತ್ಯಂತ ಗರಿಷ್ಠ ಮೊತ್ತ ಇದಾಗಿದೆ. ಈ ವರ್ಷ ಮೇ 15 ರಂದು ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದಾಗ, ಅಮೆರಿಕ ಮತ್ತು ಕೆನಡಾದಲ್ಲಿ ಮೊದಲ ವಾರಾಂತ್ಯಕ್ಕೆ 8 ರಿಂದ 10 ಮಿಲಿಯನ್ ಡಾಲರ್ (95 ಕೋಟಿ ರೂ.) ಗಳಿಸಬಹುದು ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದರು.
ಮೊದಲ ವಾರಾಂತ್ಯಕ್ಕೆ 163 ಕೋಟಿ ರೂ. ಕಮಾಯಿ
ಆದರೆ, ಎಲ್ಲರ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಈ ಸಿನಿಮಾ ಮೊದಲ ದಿನವೇ 7 ಮಿಲಿಯನ್ ಡಾಲರ್ (65+ ಕೋಟಿ ರೂ.) ಲೂಟಿ ಮಾಡಿತು. ಮೊದಲ ವಾರಾಂತ್ಯ ಮುಗಿಯುವಷ್ಟರಲ್ಲಿ 17.2 ಮಿಲಿಯನ್ ಡಾಲರ್ (163+ ಕೋಟಿ ರೂ.) ಗಳಿಸಿ, ಆ ವಾರದ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು. ಮೈಕಲ್ ಜಾಕ್ಸನ್ ಬಯೋಪಿಕ್ ‘ಮೈಕಲ್’ ಹಾಗೂ ಮೆರಿಲ್ ಸ್ಟ್ರೀಪ್, ಆನ್ನೆ ಹ್ಯಾಥ್‌ವೇ ನಟನೆಯ ‘ದಿ ಡೆವಿಲ್ ವೇರ್ಸ್ ಪ್ರಾಡಾ 2’ ನಂತಹ ಬಿಗ್ ಬಜೆಟ್ ಸಿನಿಮಾಗಳ ಪೈಪೋಟಿಯ ನಡುವೆಯೂ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ನಿಂತಿತು.
Dhurandhar Box Office Collection: ಭಾನುವಾರ ‘ಧುರಂಧರ್’ ಭರ್ಜರಿ ಕಲೆಕ್ಷನ್! 350 ಕೋಟಿಗೂ ಹೆಚ್ಚು ಬಾಚಿದ ಮೂವಿ
ಭಾರತದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದ ‘ಒಬ್ಸೆಷನ್’
ಅಮೆರಿಕದಲ್ಲಿ ಬಿಡುಗಡೆಯಾದ ಎರಡು ವಾರಗಳ ಬಳಿಕ ‘ಯುನಿವರ್ಸಲ್ ಪಿಕ್ಚರ್ಸ್’ ಮೂಲಕ ಭಾರತದಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ ಇಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶುಕ್ರವಾರ 859 ಶೋಗಳಿಂದ 1.75 ಕೋಟಿ ರೂ. ಗಳಿಸಿತ್ತು. ಶನಿವಾರದಂದು ಕಲೆಕ್ಷನ್ ಮತ್ತಷ್ಟು ಹೆಚ್ಚಾಗಿದ್ದು, 1151 ಶೋಗಳಿಂದ 2.75 ಕೋಟಿ ರೂ. ಗಳಿಕೆ ಆಗಿತ್ತು. ಈ ಚಿತ್ರದ ಮೇಲಿರುವ ಕ್ರೇಜ್ ನೋಡಿದರೆ ಭಾನುವಾರ (ಮೂರನೇ ದಿನ) ಈ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
2007ರಲ್ಲಿ ಬಿಡುಗಡೆಯಾಗಿದ್ದ ಒರೆನ್ ಪೆಲಿ ಅವರ ‘ಪ್ಯಾರಾನಾರ್ಮಲ್ ಆಕ್ಟಿವಿಟಿ’ ಚಿತ್ರದ ನಂತರ, ತನ್ನ ಬಜೆಟ್‌ಗಿಂತ 10 ಪಟ್ಟು ಅಧಿಕ ಕಮಾಯಿ ಮಾಡಿದ ಮೊದಲ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಅಬ್ಸೆಷನ್’ ಪಾತ್ರವಾಗಿದೆ. ಅಂದು 15,000 ಡಾಲರ್ ಬಜೆಟ್‌ನಲ್ಲಿ ಬಂದಿದ್ದ ಪ್ಯಾರಾನಾರ್ಮಲ್ ಆಕ್ಟಿವಿಟಿ ಸಿನಿಮಾ ಬರೋಬ್ಬರಿ 194.20 ಮಿಲಿಯನ್ ಡಾಲರ್ ಗಳಿಸಿತ್ತು.
ಒಬ್ಸೆಷನ್ ಬಗೆ ಕಮಾಲ್ ಆರ್ ಖಾನ್ ಟ್ವೀಟ್
It’s a very small film #obsession, which is made with a small budget of ₹7.00cr. It’s a Hollywood’s biggest success story of 2026. This horror film is made by a 26year old YouTuber! But it has clicked at the box office and collected ₹1000Cr+ worldwide till now.👌 pic.twitter.com/Gbtl9p5Hc8
— KRK (@kamaalrkhan) May 31, 2026
ಯಾರು ಈ ಕರ್ರಿ ಬೇಕರ್?
ಇಂಡೆ ನವರೇಟೆ ಮತ್ತು ಮೈಕಲ್ ಜಾನ್ಸ್ಟನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಯಶಸ್ವಿಯಾಗಲು ಮುಖ್ಯ ಕಾರಣ ಪ್ರೇಕ್ಷಕರ ಬಾಯಿಮಾತಿನ ಪ್ರಚಾರ. ಇದನ್ನು ನೋಡಿದವರಲ್ಲಿ ಶೇ. 75 ರಷ್ಟು ಮಂದಿ 18 ರಿಂದ 34 ವರ್ಷದ ಯುವಕರಾಗಿದ್ದಾರೆ. 26 ವರ್ಷದ ಯೂಟ್ಯೂಬರ್ ಕರ್ರಿ ಬೇಕರ್ ಅವರ ನಿರ್ದೇಶನದ ಶೈಲಿ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಕರ್ರಿ ಬೇಕರ್ ಮೊದಲು ತಮ್ಮ ಸ್ನೇಹಿತ ಕೂಪರ್ ಟಾಮ್ಲಿನ್ಸನ್ ಜೊತೆ ಸೇರಿ ʻದ್ಯಾಟ್ಸ್ ಎ ಬ್ಯಾಡ್ ಐಡಿಯಾʼ ಎಂಬ ಕಾಮಿಡಿ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಿದ್ಧಿ ಪಡೆದಿದ್ದರು.
‘ದಿ ಟೆಕ್ಸಾಸ್ ಚೈನ್ಸಾ ಮ್ಯಾಸಕರ್’ ಚಿತ್ರದಿಂದ ಪ್ರೇರಿತರಾಗಿದ್ದ ಇವರು, ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯ ದಿನಗಳಲ್ಲೇ ಯೂಟ್ಯೂಬ್ ಅನ್ನೇ ತಮ್ಮ ಫಿಲ್ಮ್ ಸ್ಕೂಲ್ ಮಾಡಿಕೊಂಡಿದ್ದರು. ಇವರು ಕೇವಲ 800 ಡಾಲರ್ (ಸುಮಾರು 67 ಸಾವಿರ ರೂ.) ಬಜೆಟ್‌ನಲ್ಲಿ ನಿರ್ದೇಶಿಸಿದ್ದ ಮೊದಲ ಫೌಂಡ್-ಫೂಟೇಜ್ ಹಾರರ್ ಚಿತ್ರ ‘ಮಿಲ್ಕ್ ಅಂಡ್ ಸೀರಿಯಲ್’ ಯೂಟ್ಯೂಬ್‌ನಲ್ಲಿ ಉಚಿತವಾಗಿ ಬಿಡುಗಡೆಯಾಗಿ ಭಾರಿ ವೈರಲ್ ಆಗಿತ್ತು. ಪ್ರಸ್ತುತ ಕರ್ರಿ ಬೇಕರ್ ಅವರು ತಮ್ಮ ನಿರ್ದೇಶನದ ಮುಂದಿನ ಸಿನಿಮಾ ‘ಎನಿಥಿಂಗ್ ಬಟ್ ಘೋಸ್ಟ್ಸ್’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಅನವಶ್ಯಕವಾಗಿ ಖರ್ಚು ಮಾಡುವವರಿಗೆ ಪಾಠವಾದ ಸಿನಿಮಾ
ಸದ್ಯ ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಕ್ರೇಜ್ ಚಿತ್ರೋದ್ಯಮದವರ ನೆತ್ತಿಗೇರಿದೆ. ಉತ್ತಮ ಸಿನಿಮಾ ಮಾಡುವುದರ ಬದಲು, ಎಲ್ಲರಿಗೂ 500, 1000 ಕೋಟಿ ರೂ. ಕಲೆಕ್ಷನ್ ಮಾಡುವ ಸಿನಿಮಾಗಳನ್ನು ನಿರ್ಮಾಣ ಮಾಡುವ ಹುಚ್ಚು ಹೆಚ್ಚಾಗಿದೆ. ಅದಕ್ಕಾಗಿಯೇ ಸಿನಿಮಾಗಳಿಗೂ ಎಗ್ಗುಸಿಗ್ಗಿಲ್ಲದೇ ಖರ್ಚು ಮಾಡುತ್ತಿದ್ದಾರೆ. ಆದರೆ ಅಂತಿಮವಾಗಿ ನಿರ್ಮಾಪಕರು ಲಾಭಕ್ಕಿಂತ ನಷ್ಟವನ್ನೇ ಹೆಚ್ಚು ನೋಡುತ್ತಿದ್ದಾರೆ. ಅಂಥವರಿಗೆ ‘ಅಬ್ಸೆಷನ್’ ಸಿನಿಮಾ ಒಂದು ಪಾಠವಾಗಲಿದೆ. ಉತ್ತಮ ಕಡಿಮೆ ಬಜೆಟ್ ಇದ್ದರೂ, ಉತ್ತಮ ಕಂಟೆಂಟ್ ಇದ್ದರೆ, ಸಾವಿರ ಕೋಟಿ ರೂ. ಕ್ಲಬ್‌ಗೆ ಸೇರುವುದು ದೊಡ್ಡ ವಿಚಾರವಲ್ಲ ಎಂಬುದನ್ನು ಸಾಬೀತು ಮಾಡಿದೆ.