‘ಸೂಪರ್ ಸ್ಟಾರ್’ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಮತ್ತೊಮ್ಮೆ ತಮ್ಮ ಚಾಕಚಕ್ಯತೆಯನ್ನು ಸಾಬೀತುಪಡಿಸಿದ್ದಾರೆ. ರಜನಿಕಾಂತ್ ಅವರೊಂದಿಗೆ ಸತತ ಎರಡು ಹಿಟ್ ನೀಡಿದ ಬೆನ್ನಲ್ಲೇ, ನೆಲ್ಸನ್ ಅವರ ಮುಂದಿನ ಸಿನಿಮಾದ ಕುರಿತು ಚಿತ್ರರಂಗದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ಈಗಾಗಲೇ ರಜನಿಕಾಂತ್ ಮತ್ತು ಕಮಲ್ ಹಾಸನ್ ಕಾಂಬಿನೇಷನ್ನ ಬಹುತಾರಾಗಣದ ಚಿತ್ರವನ್ನು ನೆಲ್ಸನ್ ನಿರ್ದೇಶಿಸಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಇದರ ನಡುವೆಯೇ, ಟಾಲಿವುಡ್ನ ‘ಮ್ಯಾನ್ ಆಫ್ ಮಾಸಸ್’ ಜೂನಿಯರ್ ಎನ್ಟಿಆರ್ ಜೊತೆಗೂ ನೆಲ್ಸನ್ ಕೈಜೋಡಿಸುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸಖತ್ ಬ್ಯುಸಿ ಇರುವ ಎನ್ಟಿಆರ್
ಪ್ರಸ್ತುತ ಜೂನಿಯರ್ ಎನ್ಟಿಆರ್ ಸಾಲು ಸಾಲು ಬೃಹತ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಅವರು, ಇದರ ಬೆನ್ನಲ್ಲೇ ತ್ರಿವಿಕ್ರಮ್ ಶ್ರೀನಿವಾಸ್ ಸಾರಥ್ಯದಲ್ಲಿ ‘ಗಾಡ್ ಆಫ್ ವಾರ್’ ಎಂಬ ಪೌರಾಣಿಕ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಜೊತೆಗೆ ಕೊರಟಾಲ ಶಿವ ಅವರೊಂದಿಗೆ ‘ದೇವರ 2’ ಚಿತ್ರವೂ ಬಾಕಿ ಉಳಿದಿದೆ. ಇಷ್ಟೆಲ್ಲಾ ಬ್ಯುಸಿ ಶೆಡ್ಯೂಲ್ ನಡುವೆಯೂ, ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಎನ್ಟಿಆರ್, ನೆಲ್ಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಕಾಂಬಿನೇಷನ್ನಲ್ಲಿ ಬಿಗ್ ಬಜೆಟ್ ಸಿನಿಮಾವೊಂದು ಸಿದ್ಧವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಹಿಂದೆ ಸ್ವತಃ ಎನ್ಟಿಆರ್ ಕೂಡ ಕಾರ್ಯಕ್ರಮವೊಂದರಲ್ಲಿ ಈ ಪ್ರಾಜೆಕ್ಟ್ ಬಗ್ಗೆ ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದರು.
Jailer 2 Movie: ಮತ್ತೊಮ್ಮೆ ಆ್ಯಕ್ಷನ್ ಅವತಾರದಲ್ಲಿ ರಜನಿಕಾಂತ್; 'ಜೈಲರ್ 2' ಚಿತ್ರದ ಟೀಸರ್ ಔಟ್
ನಿರ್ಮಾಪಕರಿಂದ ಸಿಕ್ತು ಸ್ಪಷ್ಟನೆ
‘ಜೈಲರ್ 2’ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ಸಿತಾರಾ ಎಂಟರ್ಟೈನ್ಮೆಂಟ್ಸ್ ಭರ್ಜರಿಯಾಗಿ ರಿಲೀಸ್ ಮಾಡಿದ್ದು, ಅಲ್ಲಿಯೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಯಶಸ್ಸಿನ ಬೆನ್ನಲ್ಲೇ ಚಿತ್ರದ ವಿತರಕ ಹಾಗೂ ನಿರ್ಮಾಪಕ ಸೂರ್ಯದೇವರ ನಾಗವಂಶಿ ಅವರಿಗೆ ನೆಲ್ಸನ್-ತಾರಕ್ ಕಾಂಬಿನೇಷನ್ ಚಿತ್ರದ ಕುರಿತು ನೇರ ಪ್ರಶ್ನೆ ಎದುರಾಗಿದೆ. ಅದಕ್ಕೆ ಸ್ಪಷ್ಟನೆ ನೀಡಿರುವ ನಾಗವಂಶಿ, "ಎನ್ಟಿಆರ್, ನೆಲ್ಸನ್ ಮತ್ತು ಅನಿರುದ್ಧ್ ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎಂಬುದು ಇಡೀ ಜಗತ್ತಿಗೇ ತಿಳಿದಿರುವ ವಿಚಾರ. ನಾನೇನಾದರೂ ಆತುರಪಟ್ಟು ಅಧಿಕೃತವಾಗಿ ಘೋಷಿಸಿದರೆ ಎನ್ಟಿಆರ್ ನನಗೆ ಹೊಡೆಯುತ್ತಾರಷ್ಟೇ! ಹೀಗಾಗಿ ಸೂಕ್ತ ಸಮಯದಲ್ಲಿ ಅವರೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ. ‘ಗಾಡ್ ಆಫ್ ವಾರ್’ ಚಿತ್ರ ಯಾವಾಗ ಆರಂಭವಾಗಲಿದೆ ಎಂಬುದನ್ನು ನೋಡಿಕೊಂಡು, ತಾರಕ್ ಅವರು ನೆಲ್ಸನ್ ಸಿನಿಮಾ ಶೆಡ್ಯೂಲ್ ಪ್ಲಾನ್ ಮಾಡಲಿದ್ದಾರೆ" ಎಂದು ಹೇಳಿದ್ದಾರೆ.
ಡಾರ್ಕ್ ಕಾಮಿಡಿ ಮತ್ತು ಗ್ರಿಪ್ಪಿಂಗ್ ಆ್ಯಕ್ಷನ್ ಥ್ರಿಲ್ಲರ್ಗಳ ಮೂಲಕ ತಮ್ಮದೇ ವಿಶಿಷ್ಟ ಶೈಲಿ ರೂಪಿಸಿಕೊಂಡಿರುವ ನೆಲ್ಸನ್, ಈ ಹಿಂದೆ ‘ಕೋಲಮಾವು ಕೋಕಿಲ’, ‘ಡಾಕ್ಟರ್’, ‘ಬೀಸ್ಟ್’, ‘ಜೈಲರ್’ ಹಾಗೂ ಈಗ ‘ಜೈಲರ್ 2’ ಮೂಲಕ ಸತತ ಯಶಸ್ಸು ಕಂಡಿದ್ದಾರೆ. ಇತ್ತೀಚೆಗಷ್ಟೇ ರಜನಿ-ಕಮಲ್ ಪ್ರಾಜೆಕ್ಟ್ ಘೋಷಣೆ ಮಾಡಿರುವ ಅವರು, ಆ ಬಳಿಕ ಜೂನಿಯರ್ ಎನ್ಟಿಆರ್ ಚಿತ್ರದ ಕಡೆ ಮುಖ ಮಾಡುತ್ತಾರಾ? ಅದಕ್ಕೂ ಮುನ್ನವೇ ತಾರಕ್ ಸಿನಿಮಾ ಕೈಗೆತ್ತಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.