ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಚಿತ್ರದ ಗುಳಿಗಾ ಗುಳಿಗಾ ಎಂಬ ಹಾಡು ಈಚೆಗೆ ರಿಲೀಸ್ ಆಗಿ, ಭಾರಿ ಸದ್ದು ಮಾಡಿತ್ತು. ಆದರೆ ಈ ಹಾಡಿನಿಂದ ಗುಳಿಗ ದೈವಕ್ಕೆ ಅಪಚಾರವಾಗಿದೆ ಎಂಬ ಮಾತುಳು ಕೇಳಿಬಂದಿದ್ದವಂತೆ. ಆ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಈ ಹಾಡು ಗುಳಿಗ ದೈವಕ್ಕೆ ಸಂತೋಷ ನೀಡಿದೆ ಎಂಬ ವಿಚಾರವನ್ನು ಹಂಚಿಕೊಂಡಿದೆ.
ಜ್ಯೋತಿಷ್ಯ ವಿಧ್ವಾನ್ ವರುಣ್ ಭಟ್ ಅವರಲ್ಲಿ ಪ್ರಶ್ನೆ
ʻಕೊರಗಜ್ಜʼ ಚಿತ್ರಕ್ಕಾಗಿ ಜಾವೆದ್ ಆಲಿ ಮತ್ತು ಸುಧೀರ್ ಅತ್ತಾವರ್ ಹಾಡಿದ್ದ, ಗೋಪಿ ಸುಂದರ್ ಸಂಗೀತ ನೀಡಿದ್ದ ಮತ್ತು ಸುಧೀರ್ ಅತ್ತಾವರ್ ಸಾಹಿತ್ಯ ಬರೆದಿದ್ದ ಗುಳಿಗಾ ಗುಳಿಗಾ ಹಾಡಿನ ಅಬ್ಬರ ದೇಶದೆಲ್ಲೆಡೆ ಹಬ್ಬಿ ಹವಾ ಎಬ್ಬಿಸುತ್ತಿರುವಂತೆಯೇ, ಭಯಂಕರ ಉಗ್ರ ರೂಪದ ಕಾರಣಿಕದ ʻಗುಳಿಗದೈವʼ ಈ ಹಾಡಿನಿಂದ ಕ್ರೋಧ ಗೊಂಡಿರಬಹುದೇ ಅಥವಾ ದೈವಕ್ಕೆ ಅಪಚಾರಾಗಿರಬಹುದೇ ಎಂಬ ಎಂಬ ಸಂಶಯ ಮೂಡಿತ್ತು. ಆ ಹಿನ್ನೆಲೆಯಲ್ಲಿ ನಿರ್ದೇಶಕ ಸುಧೀರ್ ಅತ್ತಾವರ್ ಅವರು ಕೇರಳದ ತ್ರಿಶೂರ್‌ನಲ್ಲಿರುವ ಮಂಗಳೂರು ಮೂಲದ ಪ್ರಸಿದ್ಧ ಜ್ಯೋತಿಷ್ಯ ವಿದ್ವಾನ್ ವರುಣ್ ಭಟ್ ಅವರಲ್ಲಿ ಪ್ರಶ್ನೆ ಇಟ್ಟಿದ್ದಾರೆ.
ಕೊರಗಜ್ಜನಿಗೂ ಖುಷಿ ಇದೆ
ಸುಧೀರ್ ಅತ್ತಾವರ್ ಅವರು ಕೇಳಿದ ಪ್ರಶ್ನೆಗೆ ಚಿಂತನ ಮಂತನ ನಡೆಸಿ, ವ್ರಶ್ಚಿಕ ರಾಶಿ, ಒಂಭತ್ತರಲ್ಲಿ ಗುರು, ಐದರಲ್ಲಿ ಗುಳಿಗ, ಶನಿ ಎಲ್ಲಾ ಇರುವುದರಿಂದ ಗುಳಿಗನಿಗೆ ಸಂಪೂರ್ಣ ತ್ರಪ್ತಿ, ಸಂತೋಷ ಎಲ್ಲಾ ಇದೆ. ಕೊರಗಜ್ಜನಿಗೂ ಸಂತೋಷವಿದೆ, ದೇವರ ಆಶಿರ್ವಾದವೂ ಇದೆ" ಎಂಬ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ.
ʻಗುಳಿಗಾ ಗುಳಿಗಾʼ ಹಾಡಿನ ಬಗ್ಗೆ
"ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆಕೂಡ ಜೋರಾಗಿ ಸಾಗುತ್ತಿದೆ. ಇನ್ನು ಕೆಲವು ವಿಕೃತ ಮನಸ್ಥಿತಿಯವರಂತೂ ನಿರ್ದೇಶಕರಿಗೆ ಸೇರಿ ಚಿತ್ರತಂಡಕ್ಕೆ ಉರಿ ಶಾಪಹಾಕುವ ಕಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಗುಳಿಗ ದೈವವೇ ರಕ್ತ ಕಾರಿ ಸಾಯಿಸುತ್ತದೆ ಎಂಬಿತ್ಯಾದಿ ವಿಕೃತ ಮನಸ್ಸಿನಿಂದ, ಮತ್ಸರದಿಂದ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ" ಎಂದು ಚಿತ್ರತಂಡ ಹೇಳಿಕೊಂಡಿದೆ.
ಪ್ರಶ್ನೆಯ ಮೂಲಕ ಜ್ಯೋತಿಷ್ಯದಲ್ಲಿ ಗುಳಿಗನಿಗೆ ತೃಪ್ತಿ ಇರುವ ವಿಚಾರ ಕೇಳಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಾಗೂ ಸಕ್ಸಸ್ ಫಿಲ್ಮ್ಸ್ ನ ವಿದ್ಯಾಧರ್ ಶೆಟ್ಟಿ ಹರ್ಷಗೊಂಡಿದ್ದಾರೆ. ಅನಗತ್ಯವಾದ ಕೆಟ್ಟ ಕಮೆಂಟ್ ಹಾಕಿ ಕಿರಿ ಕಿರಿ ಮಾಡದೆ, ಚಿತ್ರದ ಯಶಸ್ಸಿಗೆ ಸಹಕರಿಸಬೇಕೆಂದು ಕೂಡ ನಿರ್ಮಾಪಕರು ಮನವಿ ಮಾಡಿದ್ದಾರೆ. ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ʻಕೊರಗಜ್ಜʼ ಚಿತ್ರವು ಜನವರಿ ವೇಳೆಗೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.