ನವದೆಹಲಿ: ಜನಪ್ರಿಯ ರಿಯಾಲಿಟಿ ಶೋ ನಲ್ಲಿ ಒಂದಾದ ಬಿಗ್ ಬಾಸ್ ಕಳೆದ ಅನೇಕ ವರ್ಷದಿಂದಲೂ ಬಹುದೊಡ್ಡ ಪ್ರೇಕ್ಷಕರನ್ನು ಹೊಂದಿದ್ದು ಟಿಆರ್ ಪಿ ನಲ್ಲೂ ಅಗ್ರಗಣ್ಯ ಸ್ಥಾನ ಪಡೆಯುತ್ತಲೆ ಇದೆ. ಅಂತೆಯೇ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 12 ರಿಯಾಲಿಟಿ ಶೋ (Bigg Boss 12 Kannada) ಇತ್ತೀಚೆಗಷ್ಟೇ ಅದ್ದೂರಿಯಾಗಿ ಆರಂಭ ಕಂಡುಕೊಂಡಿದೆ. ಕಿಚ್ಚ ಸುದೀಪ್ (Kichcha Sudeep) ಅವರು ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ಮೊದಲ ವಾರ ಪೂರ್ಣಗೊಳಿಸಿದ್ದಷ್ಟೇ ಈಗಲೇ ಅದಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಯಿಂದ ಬಿಗ್ ಬಾಸ್ ಕಾರ್ಯಕ್ರಮ ನಡೆಸಲು ಬೇಕಾದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಹೀಗಾಗಿ ಬಿಗ್ ಬಾಸ್ ಕಾರ್ಯಕ್ರಮ ನಡೆಸುತ್ತಿದ್ದ ಜಾಲಿವುಡ್ ಸ್ಟುಡಿಯೋದಲ್ಲಿ ಇರುವವರನ್ನೆಲ್ಲ ಖಾಲಿ ಮಾಡಿ ಬೀಗ ಹಾಕಲಾಗಿದೆ. ರಾಮನಗರ ತಹಶೀಲ್ದರ್ ತೇಜಸ್ವಿನಿ ಅವರ ಜೊತೆ ಅಧಿಕಾರಿ ಗಳು ತೆರಳಿ ಬಿಗ್ ಬಾಸ್ ಕಾರ್ಯಕ್ರಮ ನಡೆಸದಂತೆ ಸ್ಟೂಡಿಯೋಗೆ ಬೀಗ ಹಾಕಿದ್ದಾರೆ. ಈ ಮೂಲಕ ಇಷ್ಟು ದೊಡ್ಡ ಮನೆ ನಿರ್ಮಾಣ ಮಾಡಲು ಹಾಗೂ ಆ ಸೆಟ್ ಮಾಡಲು ಎಷ್ಟೆಲ್ಲ ಖರ್ಚಾಗಬಹುದು ಎಂಬ ಚರ್ಚೆಯೊಂದು ಸೋಶಿಯಲ್ ಮಿಡಿಯಾದಲ್ಲಿ ನಡೆಯುತ್ತಿದೆ.
ಬಿಗ್‌ಬಾಸ್ ಸೀಸನ್ 12 ಅನ್ನು ದಸರಾ ಹಬ್ಬದ ಸಂದರ್ಭದಲ್ಲಿ ಆರಂಭ ಮಾಡಿದ್ದ ಕಾರಣ ಅದೇ ಥೀಂ ಇಟ್ಟುಕೊಂಡು ಮನೆಯಲ್ಲಿ ಕೂಡ ಸೆಟಪ್ ಮಾಡಿದ್ದರು. ಮೈಸೂರು ಅರಮನೆ ಶೈಲಿಯಲ್ಲಿ ಬಿಗ್ ಬಾಸ್ ಮನೆ ಬಹಳ ಸುಂದರವಾಗಿ ಕಂಗೊಳಿಸಿತ್ತು. ಅದರ ಜೊತೆಗೆ ನಮ್ಮ ರಾಜ್ಯದ ಸಾಂಸ್ಕೃ ತಿಕ ಪರಂಪರೆ, ಯಕ್ಷಗಾನ, ದಸರಾ ಆನೆ, ಡೊಳ್ಳು ಕುಣಿತ, ಹಂಪಿ ಕಲ್ಲಿನ ರಥ, ಜಾನಪದ ಕಲೆ ಇತ್ಯಾದಿಗಳು ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೈಲೆಟ್ ಆಗಿತ್ತು. ಇಷ್ಟೆಲ್ಲ ಅದ್ಧೂರಿ ಸೆಟ್ ಅಪ್ ಮಾಡುವ ಜೊತೆಗೆ ಪ್ರತಿದಿನ ನೂರಾರು ಜನ ತೆರೆ ಮರೆಯಲ್ಲೂ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಬಿಗ್ ಬಾಸ್ ಮನೆ ನಿರ್ಮಿಸಲು ಎಷ್ಟು ಖರ್ಚಾಗುತ್ತೆ ಎಂದು ತಿಳಿದರೆ ನಿಮಗೂ ಶಾಖ್ ಆಗಬಹುದು.
ಬಿಗ್ ಬಾಸ್ ಕಾರ್ಯಕ್ರಮ ತೆರೆ ಮೇಲೆ ಬರುವಾಗ ಸ್ಪರ್ಧಿಗಳು ಮತ್ತು ಕಿಚ್ಚ ಸುದೀಪ್ ಮಾತ್ರವೇ ನಮಗೆ ಕಾಣುತ್ತಾರೆ. ಆದರೆ ತೆರೆ ಮರೆಯಲ್ಲಿ ಸ್ಪರ್ಧಿಗಳ ಚಲನವಲನ, ಬೇಕು ಬೇಡ ಎಲ್ಲವನ್ನು ನಿರ್ವಹಿಸಲು ಸಾವಿರಾರು ಜನರು ನಿತ್ಯ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಆಯೋಜಕರು ಕೂಡ ಈ ಶೋ ನಡೆಸಲು ಕೋಟಿ ಕೋಟಿ ಹಣ ಹೂಡಿಕೆ ಮಾಡುತ್ತಾರೆ. ಸೆಟ್ ನಿರ್ಮಾಣಕ್ಕೆ 5 ಕೋಟಿ ರೂ.ಗೂ ಅಧಿಕ ವೆಚ್ಚ ತಗುಲುತ್ತದೆ ಎಂದು ಹೇಳಲಾಗುತ್ತಿದೆ
ಬಿಗ್‌ಬಾಸ್ ಮನೆ ಸೆಟ್ ಅನ್ನು ನಿರ್ಮಾಣ ಮಾಡಲು ಅಂದಾಜು 2 ಎಕರೆ ಜಾಗ ಬೇಕು. ಸ್ಪರ್ಧಿಗಳು ಉಳಿದುಕೊಳ್ಳುವ ವ್ಯವಸ್ಥೆಯಿಂದ ಹಿಡಿದು ತಂತ್ರಜ್ಞಾನ ತಂಡದ ತನಕವು ಎಲ್ಲ ಕೆಲಸ ಕಾರ್ಯ ಅಲ್ಲೇ ನಡೆಯಬೇಕು. ಸೆಟ್ ಪ್ರಾಪರ್ಟಿ, ವೇತನ, ಕಾಸ್ಟ್ಯೂಂ, ಹೀಗೆ ನಾನಾತರನಾಗಿ ಕೂಡ ಕೋಟ್ಯಾಂತರ ಹಣ ವ್ಯಯಿಸಬೇಕಾಗುತ್ತದೆ. ಇಷ್ಟೆಲ್ಲ ದೊಡ್ಡ ಮಟ್ಟಿಗೆ ವ್ಯವಸ್ಥೆ ಮಾಡಿದ್ದರೂ ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ಸಂಕಷ್ಟ ಎದುರಾಗುವಂತಾಗಿದೆ.
ಇದನ್ನೂ ಓದಿ:Bigg Boss Kannada 12: ಬಿಗ್‌ಬಾಸ್‌ಗೂ ನನಗೂ ಸಂಬಂಧವಿಲ್ಲ, ಉಲ್ಲಂಘನೆ ಸರಿಮಾಡಲು ಅವಕಾಶ ಕೊಡಿ: ಡಿಕೆ ಶಿವಕುಮಾರ್
ಬಿಗ್ ಬಾಸ್ ಕಾರ್ಯಕ್ರಮ ಅದ್ಧೂರಿ ಸೆಟಪ್‌ನಲ್ಲಿ ದೊಡ್ಡ ಬಜೆಟ್ ನಲ್ಲಿ ನಡೆಯುವ ರಿಯಾಲಿಟಿ ಶೋವಾಗಿದೆ. ಆದರೆ ಇಷ್ಟೆಲ್ಲ ಖರ್ಚು ವೆಚ್ಚ ಮಾಡಿದರೂ ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಆರೋಪ ಹೊರಿಸಿ ನೋಟಿಸ್ ನೀಡಿದೆ. ಆದರೆ ಅದಕ್ಕೆ ಬಿಗ್ ಬಾಸ್ ಕಾರ್ಯಕ್ರಮ ನಡೆಸುವ ಮ್ಯಾನೇಜ್‌ಮೆಂಟ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಹೀಗಾಗಿ ಅಧಿಕಾರಿಗಳು ಶೋ ನಡೆಯುವ ಸ್ಥಳಕ್ಕೆ ಬಂದು ಬಿಗ್‌ಬಾಸ್ ಮನೆಯಿಂದ ಸ್ಪರ್ಧಿಗಳು, ತಂತ್ರಜ್ಞರು, ಸಿಬ್ಬಂದಿ ಎಲ್ಲರನ್ನು ಹೊರಗೆ ಕಳಿಸುವಂತೆ ಸೂಚಿಸಿದ್ದಾರೆ. ಬಳಿಕ ಗೇಟ್ ಬಂದ್ ಮಾಡಿ ಬೀಗ ಹಾಕಿದ್ದಾರೆ. ಒಳಗೆ ಬಿಗ್‌ಬಾಸ್ ಮನೆ ಸೆಟ್‌ನಲ್ಲಿ ಇದ್ದವರನ್ನು ಆಯೋಜಕರು ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ. ಇದೇ ರೆಸಾರ್ಟ್‌ನಲ್ಲಿ ಬಿಗ್‌ಬಾಸ್ ಸ್ಪರ್ಧೆ ಸದ್ಯಕ್ಕೆ ಮುಂದುವರಿಯಲಿದೆ. ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಸಿಕ್ಕರೆ ಜಾಲಿವುಡ್ ಸ್ಟುಡಿಯೋದಲ್ಲಿ ಪುನಃ ಕಾರ್ಯಕ್ರಮ ನಡೆಸುವ ಸಾಧ್ಯತೆ ಇದೆ.