ನಟ ರಣವೀರ್ ಸಿಂಗ್ ಅವರ ವಿರುದ್ಧ ಹೊರಡಿಸಿದ್ದ ಅಸಹಕಾರ ನಿರ್ದೇಶನವನ್ನು (Non-cooperation directive) 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್' (FWICE) ಬುಧವಾರ (ಜೂನ್ 3) ಅಧಿಕೃತವಾಗಿ ಹಿಂಪಡೆದಿದೆ. ಫೆಡರೇಶನ್ ತಮ್ಮ ವಿರುದ್ಧ ಹೊರಡಿಸಿದ್ದ ಅಸಹಕಾರ ನಿರ್ದೇಶನವನ್ನು ಪ್ರಶ್ನಿಸಿ, ರಣವೀರ್ ಸಿಂಗ್ ಕೋರ್ಟ್ ಮೊರೆ ಹೋಗಿದ್ದರು. ಅದಾದ ಮೇಲೆ ಈ ಬೆಳವಣಿಗೆ ನಡೆದಿದೆ.
ಕಾನೂನಿನ ಚೌಕಟ್ಟಿನಲ್ಲೇ ಪ್ರತಿಕ್ರಿಯೆ
ವಿರುದ್ಧದ ಅಸಹಕಾರ ನಿರ್ದೇಶನವನ್ನು ಹಿಂಪಡೆದ ಮೇಲೆ ರಣವೀರ್ ಸಿಂಗ್ ಅವರು ಕಳುಹಿಸಿರುವ ಕಾನೂನು ನೋಟಿಸ್‌ಗೆ ತಾವು ಕಾನೂನಾತ್ಮಕವಾಗಿಯೇ ಉತ್ತರಿಸುವುದಾಗಿ ಫೆಡರೇಶನ್ ದೃಢಪಡಿಸಿದೆ. ಜೂನ್ 3 ರಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ FWICE ಸದಸ್ಯರು, "ನಾವು ಆ ಕಾನೂನಿನ ನೋಟಿಸ್‌ಗೆ ಕಾನೂನಿನ ಚೌಕಟ್ಟಿನಲ್ಲೇ ಪ್ರತಿಕ್ರಿಯೆ ನೀಡಲಿದ್ದೇವೆ" ಎಂದು ತಿಳಿಸಿದ್ದಾರೆ.
'ಡಾನ್ 3' ವಿವಾದ: ʻನಟ ರಣವೀರ್ ಸಿಂಗ್‌ರನ್ನು ಬ್ಯಾನ್ ಮಾಡಿಲ್ಲ, ಆದ್ರೆ..ʼ; FWICE ಕೊಟ್ಟ ಸ್ಪಷ್ಟನೆ ಏನು?
ಮನವಿಗಳನ್ನು ಪುರಸ್ಕರಿಸಿದ FWICE
ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ FWICE ಅಧ್ಯಕ್ಷ ಬಿ.ಎನ್. ತಿವಾರಿ ಅವರು, "ಚಿತ್ರರಂಗದ ಪ್ರಮುಖ ಸಂಸ್ಥೆಗಳಾದ ಸಿನಿ ಅಂಡ್ ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ ಮತ್ತು ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಮಂಡಳಿಗಳಿಂದ ಬಂದ ವಿನಂತಿಗಳನ್ನು ಪುರಸ್ಕರಿಸಿ ಈ ಅಸಹಕಾರ ನಿರ್ದೇಶನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ" ಎಂದು ಹೇಳಿದ್ದಾರೆ.
"ಈ ವಿಷಯಕ್ಕೆ ಸಂಬಂಧಿಸಿದಂತೆ ತಾವು ಚಿತ್ರರಂಗದ ಹಲವು ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಎಲ್ಲಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ 'ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ' ಹೊರಡಿಸಿದ್ದ ಪ್ರಕಟಣೆಯನ್ನು ಉಲ್ಲೇಖಿಸಿದ ಅವರು, ಎಲ್ಲರ ಹಿತಾಸಕ್ತಿಗಳನ್ನು ಕಾಯ್ದುಕೊಂಡು ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಕರೆ ನೀಡಲಾಗಿತ್ತು" ಎಂದು ತಿವಾರಿ ತಿಳಿಸಿದ್ದಾರೆ.
ಯಾರೂ ಗೆದ್ದಿಲ್ಲ ಅಥವಾ ಸೋತಿಲ್ಲ
"ಇಂಪಾ, ಪ್ರೊಡ್ಯೂಸರ್ಸ್ ಗಿಲ್ಡ್ ಮತ್ತು ಚಿಂಟಾ ಸಂಸ್ಥೆಗಳ ವಿನಂತಿಯ ಮೇರೆಗೆ ನಾವು ನಮ್ಮ ಅಸಹಕಾರ ನಿರ್ದೇಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯುತ್ತಿದ್ದೇವೆ. ನಾವೆಲ್ಲರೂ ನಿರ್ಮಾಪಕರ ಮಂಡಳಿಯೊಂದಿಗೆ ಒಟ್ಟಿಗೆ ಕುಳಿತು, ಇತ್ತ ನಿರ್ಮಾಪಕರು - ನಿರ್ದೇಶಕರಿಗಾಗಲಿ ಅಥವಾ ಅತ್ತ ನಟನಿಗಾಗಲಿ ಯಾವುದೇ ತೊಂದರೆಯಾಗದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಮಗೆ ಸೂಚಿಸಲಾಗಿದೆ. ಈ ವಿಷಯದಲ್ಲಿ ಯಾರೂ ಗೆದ್ದಿಲ್ಲ ಅಥವಾ ಸೋತಿಲ್ಲ" ಎಂದು ಬಿ.ಎನ್. ತಿವಾರಿ ಹೇಳಿದ್ದಾರೆ.
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಕ್ಷಮೆಯಾಚಿಸಿದ ನಟ ರಣವೀರ್ ಸಿಂಗ್
ರಣವೀರ್ ನೀಡಿರುವ ಕೊಡುಗೆಯನ್ನು ಗೌರವಿಸುತ್ತೇವೆ
ಮತ್ತೊಂದೆಡೆ, FWICE ಮುಖ್ಯ ಸಲಹೆಗಾರರಾದ ಅಶೋಕ್ ಪಂಡಿತ್ ಅವರು, ಯಾವುದೇ ಕಲಾವಿದರ ಮೇಲೆ ನಿಷೇಧ ಹೇರುವ ಅಧಿಕಾರ ಫೆಡರೇಶನ್‌ಗೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳು "ನಿಷೇಧ" ಎಂಬ ಪದವನ್ನು ಬಳಸದಂತೆ ವಿನಂತಿಸಿದ ಅವರು, FWICE ಕೇವಲ ತನ್ನ ಸದಸ್ಯರಿಗೆ ನಿರ್ದಿಷ್ಟ ವ್ಯಕ್ತಿಯೊಂದಿಗೆ ಕೆಲಸ ಮಾಡದಂತೆ ಸಲಹೆ ನೀಡಬಹುದೇ ಹೊರತು, ಯಾರೂ ತಮ್ಮ ವೃತ್ತಿಯನ್ನು ಮುಂದುವರಿಸದಂತೆ ತಡೆಯಲು ಸಾಧ್ಯವಿಲ್ಲ ಎಂದು ಒತ್ತಿಹೇಳಿದ್ದಾರೆ. "ನಾವು ರಣವೀರ್ ಸಿಂಗ್ ಮತ್ತು ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ಗೌರವಿಸುತ್ತೇವೆ. ಈ ಸಮಸ್ಯೆಯು ಮಾತುಕತೆಯ ಮೂಲಕವೇ ಬಗೆಹರಿಯಬೇಕೆಂದು ನಾವು ಬಯಸುತ್ತೇವೆ" ಎಂದು ಅಶೋಕ್ ಪಂಡಿತ್ ಹೇಳಿದ್ದಾರೆ.