'ಡಾನ್ 3' ವಿವಾದ: ʻನಟ ರಣವೀರ್ ಸಿಂಗ್‌ರನ್ನು ಬ್ಯಾನ್ ಮಾಡಿಲ್ಲ, ಆದ್ರೆ..ʼ; FWICE ಕೊಟ್ಟ ಸ್ಪಷ್ಟನೆ ಏನು?
'ಡಾನ್ 3' ಚಿತ್ರದಿಂದ ನಟ ರಣವೀರ್ ಸಿಂಗ್ ಹೊರನಡೆದಿದ್ದಕ್ಕಾಗಿ ಅವರ ಮೇಲೆ ಚಿತ್ರರಂಗದಿಂದ ನಿಷೇಧ ಹೇರಲಾಗಿದೆ ಎಂಬ ವದಂತಿಗಳನ್ನು FWICE ತಳ್ಳಿಹಾಕಿದೆ. ಸಂಸ್ಥೆಯ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಸ್ಪಷ್ಟನೆ ನೀಡಿ, ತಮಗೆ ಬ್ಯಾನ್ ಮಾಡುವ ಅಧಿಕಾರವಿಲ್ಲದ ಕಾರಣ ಕೇವಲ 'ಅಸಹಕಾರ' ನಿರ್ದೇಶನ ಹೊರಡಿಸಿದ್ದೇವೆ ತಿಳಿಸಿದ್ದಾರೆ.
-
'ಡಾನ್ 3' ಚಿತ್ರದಿಂದ ಹೊರನಡೆದಿದ್ದಕ್ಕಾಗಿ ನಟ ರಣವೀರ್ ಸಿಂಗ್ ಅವರನ್ನು 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್' (FWICE) ಸಂಸ್ಥೆಯು ಚಿತ್ರರಂಗದಿಂದ ಬ್ಯಾನ್ ಮಾಡಿದೆ ಎಂಬ ಚರ್ಚೆ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ. ಆದರೆ, ಅಸಲಿಗೆ ರಣವೀರ್ ಸಿಂಗ್ ಅವರನ್ನು ಬ್ಯಾನ್ ಮಾಡಿಲ್ಲ, ಇಲ್ಲಿ ಚರ್ಚೆಯ ಹಾದಿತಪ್ಪಿದೆ ಎಂದು ಫೆಡರೇಶನ್ ಹೇಳಿದೆ.
ಹೌದು, ರಣವೀರ್ ವಿರುದ್ಧ ಅಸಹಕಾರ (Non-Cooperation) ನಿರ್ದೇಶನವನ್ನು ಹೊರಡಿಸಿದೆ ವಿನಃ ಚಿತ್ರರಂಗದಿಂದ ಬ್ಯಾನ್ ಮಾಡಿಲ್ಲ! ಎಲ್ಲೆಡೆ 'ಬ್ಯಾನ್' ಎಂದು ವರದಿಯಾದ ಬೆನ್ನಲ್ಲೇ, ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಸ್ವತಃ ಮುಂದೆ ಬಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
Ranveer Singh: ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ ‘ಧುರಂಧರ್’ ಸಿನಿಮಾ; ಯಾವಾಗ?
ಬ್ಯಾನ್ ಅಲ್ಲ, ಅಸಹಕಾರ!
ಈ ಕುರಿತು ಮಂಗಳವಾರ ಮಾತನಾಡಿದ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಸಂಸ್ಥೆಯ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ನಿರಾಕರಿಸಿದ್ದಾರೆ. "ಯಾರ ಮೇಲೂ ನಿಷೇಧ ಹೇರುವ ಅಧಿಕಾರ ತಮ್ಮ ಸಂಸ್ಥೆಗೆ ಇಲ್ಲ. ಮೊದಲನೆಯದಾಗಿ ಇಡೀ ಚರ್ಚೆಯೇ ತಪ್ಪು ಹಾದಿ ಹಿಡಿದಿದೆ. ಇದು ನಿಷೇಧವಲ್ಲ. ನಾವು ಯಾವುದೇ ನ್ಯಾಯಾಲಯವಲ್ಲ, ಯಾರನ್ನೂ ಬ್ಯಾನ್ ಮಾಡಲು ನಮಗೆ ಸಾಧ್ಯವಿಲ್ಲ. ಹಾಗಾಗಿ ನಾವು ಕೇವಲ ಅಸಹಕಾರದ ಆದೇಶವನ್ನು ಹೊರಡಿಸಿದ್ದೇವೆ" ಎಂದು ಅಶೋಕ್ ಪಂಡಿತ್ ಸ್ಪಷ್ಟನೆ ನೀಡಿದ್ದಾರೆ.
ಈ ಆದೇಶದ ಅರ್ಥವೇನೆಂದರೆ, FWICE ನೊಂದಿಗೆ ಸಂಯೋಜನೆಗೊಂಡಿರುವ 30 ವಿವಿಧ ವಿಭಾಗಗಳ (ಕ್ರಾಫ್ಟ್ಸ್) ಚಲನಚಿತ್ರ ಕಾರ್ಮಿಕರು ಮತ್ತು ತಾಂತ್ರಿಕ ವರ್ಗದವರು ರಣವೀರ್ ಸಿಂಗ್ ಅವರೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸಲಿದ್ದಾರೆ. "30 ವಿಭಾಗಗಳಿಗೆ ಸೇರಿದ ಎಲ್ಲಾ FWICE ಸದಸ್ಯರು ರಣವೀರ್ ಸಿಂಗ್ ಜೊತೆ ಕೆಲಸ ಮಾಡುವುದಿಲ್ಲ. ಆದರೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ಆಯಾ ವೈಯಕ್ತಿಕ ಸದಸ್ಯರಿಗೆ ಬಿಟ್ಟಿದ್ದು" ಎಂದು ಅಶೋಕ್ ಪಂಡಿತ್ ಹೇಳಿದ್ದಾರೆ.
ಇದು ಬಲವಂತದ ನಿಷೇಧವಲ್ಲ!
"ಈ ಕ್ರಮವನ್ನು ಕಾನೂನು ನಿರ್ಬಂಧಕ್ಕಿಂತ ಹೆಚ್ಚಾಗಿ ಕಾರ್ಮಿಕ ಸಂಘಟನೆಯ ಕರೆಯಾಗಿ ರೂಪಿಸಲಾಗಿದೆ ಮತ್ತು ಸದಸ್ಯರ ಮಟ್ಟದಲ್ಲಿ ಇದರಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದೆ. FWICE ಕೇವಲ ಮಾರ್ಗಸೂಚಿಯನ್ನು ನೀಡಿದೆಯೇ ಹೊರತು ಬಲವಂತದ ನಿಷೇಧವನ್ನಲ್ಲ. ಈ ವಿಷಯವು ಚಿತ್ರರಂಗದಲ್ಲಿ ಮತ್ತೊಂದು ಆಳವಾದ ಕಳಕಳಿಯನ್ನು ಪ್ರತಿಬಿಂಬಿಸುತ್ತದೆ. ಈ ಸಮಸ್ಯೆಯು ಬಗೆಹರಿಯದೆ ಉಳಿದರೆ, ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿಗಳು ಮರುಕಳಿಸಿ ಚಿತ್ರರಂಗಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ" ಎಂದು ಅವರು ಹೇಳಿದ್ದಾರೆ.
"ನಟ ರಣವೀರ್ ಸಿಂಗ್ ಮತ್ತು ನಿರ್ಮಾಪಕರು ಮತ್ತು ಫೆಡರೇಶನ್ ಒಟ್ಟಾಗಿ ಚರ್ಚೆ ನಡೆಸುವ ಮೂಲಕ ಈ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬಹುದು. 'ಡಾನ್ 3' ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರು ಕೇಳುತ್ತಿದ್ದಾರೆ ಎನ್ನಲಾದ 45 ಕೋಟಿ ರೂಪಾಯಿಗಳ ನಷ್ಟ ಪರಿಹಾರದ ಮೊತ್ತದ ಬಗ್ಗೆಯೂ ಸಂಧಾನಕ್ಕೆ ಅವಕಾಶವಿದೆ. ಒಂದು ವೇಳೆ ನೀವು 45 ಕೋಟಿ ಅಲ್ಲ ಎಂದರೆ, ನಾವು 30 ಕೋಟಿ ಅಥವಾ ಅದಕ್ಕೆ ಒಪ್ಪುವ ಮೊತ್ತದ ಬಗ್ಗೆ ಮಾತುಕತೆ ನಡೆಸಬಹುದು" ಎಂದು ಅಶೋಕ್ ಪಂಡಿತ್ ಅವರು ಹೇಳಿದ್ದಾರೆ.