ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻ‌ವರನಟʼ ಡಾ. ರಾಜ್‌ಕುಮಾರ್ ಜನ್ಮದಿನದಂದು ಅಪ್ಪು ಅಭಿಮಾನಿಯ ʻಪುನೀತ್ ನಿವಾಸʼ ರಿಲೀಸ್‌

Puneeth Nivasa Movie: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಎಸ್. ಮೋಹನ್ ಅವರ ನಿರ್ಮಾಣದಲ್ಲಿ ಪುನೀತ್‌ ನಿವಾಸ ಸಿನಿಮಾ ಸಿದ್ಧವಾಗಿದೆ. ಅನಾಥ ಕೂಲಿ ಕಾರ್ಮಿಕನೊಬ್ಬ ತನ್ನ ಕಷ್ಟದ ಹಣದಿಂದ ಕಟ್ಟುವ ಕನಸಿನ ಮನೆಯೇ ಈ ಚಿತ್ರದ ಕಥಾಹಂದರ. ಡಾ. ರಾಜ್‌ಕುಮಾರ್ ಅವರ ಜನ್ಮದಿನವಾದ ಏಪ್ರಿಲ್ 24ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ.

ಅಣ್ಣಾವ್ರ ಜನ್ಮದಿನದಂದು ಅಪ್ಪು ಅಭಿಮಾನಿಯ 'ಪುನೀತ್ ನಿವಾಸ' ರಿಲೀಸ್

-

Avinash GR
Avinash GR Mar 31, 2026 8:19 PM

ʻಪವರ್‌ ಸ್ಟಾರ್‌ʼ ಡಾ. ಪುನೀತ್‌ ರಾಜ್‌ಕುಮಾರ್‌ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾಗಿದ್ದರೂ, ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿದ್ದಾರೆ. ಪುನೀತ್ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದೇ ಹಾದಿಯಲ್ಲಿ ಸಾಗುತ್ತಿದೆ. ಇದೀಗ ಅವರ ಅಭಿಮಾನಿಯೊಬ್ಬರು ʻಪುನೀತ್‌ ನಿವಾಸʼ ಎಂಬ ಸಿನಿಮಾ ಮಾಡಿದ್ದಾರೆ. ವಿಶೇಷವೆಂದರೆ, ಪುನೀತ್‌ ಜೊತೆಗಿನ ಕನೆಕ್ಷನ್‌ ಅನ್ನು ಈ ಚಿತ್ರ ಹೊಂದಿದೆಯಂತೆ. ಅಲ್ಲದೆ, ʻ‌ವರನಟʼ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದೇ (ಏ.24) ʻಪುನೀತ್‌ ನಿವಾಸʼ ಚಿತ್ರ ತೆರೆಕಾಣಲಿದೆ.

ಪುನೀತ್‌ ಅಭಿಮಾನಿಯಿಂದಲೇ ಸಿನಿಮಾ ನಿರ್ಮಾಣ

ಪುನೀತ್ ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿಯಾದ ಎಸ್. ಮೋಹನ್ ಅವರು ಶ್ರೀಪಂಚಮಿ ಸಿನಿ ಕ್ರಿಯೇಷನ್ಸ್ ಮೂಲಕ ʻಪುನೀತ್‌ ನಿವಾಸʼ ಚಿತ್ರವನ್ನು ನಿರ್ಮಾಣ ಮಾಡಿದ್ದು, ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಕನ್ನಡ ರಾಜು ಅವರು ಇಡೀ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

21 ವರ್ಷಗಳ ಬಳಿಕ 'ಆಕಾಶ್' ಸಿನಿಮಾ ರೀ-ರಿಲೀಸ್; ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ನಮ್ರತಾ ಗೌಡ ಏನಂದ್ರು ನೋಡಿ

ಈ ಚಿತ್ರದ ಕಥೆ ಏನು?

ಪುನೀತ್ ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿ ಮಲ್ಲು, ಓರ್ವ ಅನಾಥ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ. ಅಲ್ಲಿಯೇ ಆತ ತನ್ನ ಮಾಲೀಕನ ಮನೆಯನ್ನು ಮಾರಾಟ ಮಾಡಿಸಿಕೊಡುತ್ತಾನೆ. ಆಗ ಮಲ್ಲುಗೆ ಮಾಲೀಕನ ಕಡೆಯಿಂದ 5 ಲಕ್ಷ ರೂ. ಹಣ ಕಮೀಷನ್ ರೂಪದಲ್ಲಿ ಸಿಗುತ್ತದೆ. ಆ ದುಡ್ಡಿನಿಂದ ಮಲ್ಲು ತನ್ನ ಕನಸಿನ ಪುನೀತ್ ನಿವಾಸವನ್ನು ನಿರ್ಮಾಣ ಮಾಡುತ್ತಾನೆ. ನಂತರ ಆ ನಿವಾಸದ ಒಳಗೆ ಆತನಿಗೆ ಪುನೀತ್ ರಾಜ್‌ಕುಮಾರ್‌ ಅವರೇ ಕಾಣಿಸುತ್ತಾರಂತೆ! ಅದು ಹೇಗೆ? "ಅದನ್ನು ಚಿತ್ರಮಂದಿರದಲ್ಲಿ ನೋಡಬೇಕು" ಎನ್ನುತ್ತದೆ ಚಿತ್ರತಂಡ.

ಚಿತ್ರೀಕರಣಕ್ಕಾಗಿ ನಿಜವಾದ ಮನೆಯೇ ನಿರ್ಮಾಣ

"ಡಾ. ರಾಜ್‌ಕುಮಾರ್, ಪುನೀತ್ ಅವರ ಆದರ್ಶಗಳಿಂದ ನಾನು ಪ್ರೇರಿತನಾದವನು. ಈ ಶೀರ್ಷಿಕೆಗಾಗಿಯೇ 50 ಕಥೆಗಳನ್ನು ಮಾಡಿಕೊಂಡಿದ್ದೆವು. ಕೊನೆಗೆ ಈ ಕಥೆ ಸೂಕ್ತ ಎಂದು ಫೈನಲ್ ಮಾಡಿದ್ದೇವೆ. ಹಣ ಕೂಡಿಟ್ಟುಕೊಂಡಿದ್ದ ಒಬ್ಬ ಬಡ ಹುಡುಗ ಕೊನೆಗೆ ತನ್ನ ಕನಸಿನ ಮನೆಯನ್ನು ಹೇಗೆ ನಿರ್ಮಿಸುತ್ತಾನೆ ಅನ್ನೋದೆ ಕಥಾಹಂದರ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಅಭಿಜಿತ್ ಕಾಣಿಸಿಕೊಂಡಿದ್ದಾರೆ" ಎಂದು ಮಾಹಿತಿ ನೀಡುತ್ತಾರೆ ನಿರ್ಮಾಪಕ ಎಸ್‌. ಮೋಹನ್. ಅಂದಹಾಗೆ, ಚಿತ್ರೀಕರಣಕ್ಕಾಗಿ ನಿಜವಾದ ಮನೆಯನ್ನೇ ಕಟ್ಟಲಾಗಿದೆಯಂತೆ.

ಯಾರೆಲ್ಲಾ ನಟಿಸಿದ್ದಾರೆ?

ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಕಾಣಿಸಿಕೊಂಡಿದ್ದು, ಶಂಕರ್ ಭಟ್, ಗಂಡಸಿ ಸದಾನಂದಸ್ವಾಮಿ, ಕರಿಸುಬ್ಬು, ಶ್ರೇಯಸ್, ಐಶ್ವರ್ಯಾ, ಎಂ. ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ರೇಖಾ ದಾಸ್, ಗಣೇಶ್‌ ರಾವ್ ಕೇಸರಕರ್ ಮುಂತಾದವರು ನಟಿಸಿದ್ದಾರೆ. ಸಂಗೀತ ಸಂಯೋಜನೆಯನ್ನು ಎಂ. ಎನ್. ಕೃಪಾಕರ್ ಮಾಡಿದ್ದಾರೆ.