ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ, ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಕಲಾವಿದ ಡಾ. ರಾಜ್‌ಕುಮಾರ್ ಅವರು ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ ಸರಿಯಾಗಿ 20 ವರ್ಷಗಳಾಗಿವೆ. 2006ರ ಏಪ್ರಿಲ್ 12ರ ಬುಧವಾರ ಮಧ್ಯಾಹ್ನ ಅಣ್ಣಾವ್ರು ಇಹಲೋಕ ತ್ಯಜಿಸಿದಾಗ ಇಡೀ ನಾಡೇ ಕಂಬನಿ ಮಿಡಿದಿತ್ತು. ಅವರಿಲ್ಲದೆ ಎರಡು ದಶಕಗಳೇ ಕಳೆದಿದ್ದರೂ, ಅವರ ಆದರ್ಶಗಳು ಮತ್ತು ಸ್ಮರಣೀಯ ಪಾತ್ರಗಳ ಮೂಲಕ ಅವರು ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿರುವ ಅವರ ಪುಣ್ಯಭೂಮಿಗೆ ಇಂದಿಗೂ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ, ಅವರ ಸ್ಮಾರಕಕ್ಕೆ ನಮನ ಸಲ್ಲಿಸುತ್ತಿರುವುದೇ ಅವರ ಮೇಲಿರುವ ಗಾಢವಾದ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿ ಆಗಿದೆ. ಇಂದು ಅವರ ಪುಣ್ಯಸ್ಮರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೆನಪು ಮಾಡಿಕೊಂಡಿದ್ದಾರೆ. ನಾಡಿನ ಹಿತಕ್ಕಾಗಿ ಶ್ರಮಿಸಿದ ಅಣ್ಣಾವ್ರನ್ನು ಸ್ಮರಿಸಿಕೊಂಡಿದ್ದಾರೆ.
Dr Rajkumar ಜೊತೆಗಿನ ಅಪರೂಪದ ಫೋಟೋ ಶೇರ್ ಮಾಡಿದ ಜಗ್ಗೇಶ್; 'ಈ ಚಿತ್ರ ನೋಡಿ ಭಾವುಕನಾಗಿಬಿಟ್ಟೆ' ಎಂದ ನವರಸ ನಾಯಕ
ರಾಜಣ್ಣ ಅಪ್ಪಟ ಕನ್ನಡಿಗ- ಸಿಎಂ
"ಕನ್ನಡ ಮತ್ತು ಕನ್ನಡಿಗರ ಬಗೆಗೆ ರಾಜ್‌ಕುಮಾರ್ ಅವರಿಗಿದ್ದ ಪ್ರೀತಿ - ಅಭಿಮಾನಕ್ಕೆ ಅವರೇ ಸಾಟಿ. ನೆಲ, ಜಲ, ಭಾಷೆಗೆ ಸಂಬಂಧಿಸಿದ ವಿಚಾರದಲ್ಲಿ ಅನ್ಯಾಯವಾದಾಗಲೆಲ್ಲ ಅದರ ವಿರುದ್ಧ ದನಿಯೆತ್ತಿ, ಹೋರಾಟದ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದ ಅಪ್ಪಟ ಕನ್ನಡಿಗನಾಗಿದ್ದರು. ಹಲವು ದಶಕಗಳಿಂದ ರಾಜ್‌ಕುಮಾರ್ ಮತ್ತವರ ಕುಟುಂಬದ ಜೊತೆ ನನಗೆ ಒಡನಾಟವಿದೆ. ಪ್ರತಿ ಬಾರಿ ಎದುರು ಸಿಕ್ಕಾಗಲೂ "ಓಹೋಹೊ ನಮ್ ಕಾಡಿನವರು" ಎಂದು ಬಿಗಿದಪ್ಪಿಕೊಳ್ಳುತ್ತಿದ್ದ ರಾಜಣ್ಣನ ಅಕ್ಕರೆ, ಮಮತೆ ಕಂಡು ಅವರೆಡೆಗಿನ ಪ್ರೀತಿ - ಗೌರವ ಮತ್ತೆ ಮತ್ತೆ ಹೆಚ್ಚುತ್ತಿತ್ತು. ನಟನಾಗಿ, ಗಾಯಕನಾಗಿ, ಓರ್ವ ಕನ್ನಡದ ಕಟ್ಟಾಳುವಾಗಿ ರಾಜಣ್ಣ ನಮ್ಮೆಲ್ಲರ ಎದೆಯಲ್ಲಿ ಅಮರ. ಅವರ ಪುಣ್ಯಸ್ಮರಣೆಯಂದು ನನ್ನ ಅಭಿಮಾನಪೂರ್ವಕ ನಮನಗಳು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಟ್ವೀಟ್
Dr Rajkumar Birthday: ಇಂದು ವರನಟ ಡಾ. ರಾಜ್ ಜನ್ಮದಿನ, ʼಗಂಧದ ಗುಡಿʼ ರಿರಿಲೀಸ್
ಭಾಷೆಯ ಹಿತಕ್ಕಾಗಿ ಶ್ರಮಿಸಿದ ಬಂಗಾರದ ಮನುಷ್ಯ- ಡಿಸಿಎಂ
"ನಟಸಾರ್ವಭೌಮ, ಕನ್ನಡ ಕಲಾಲೋಕದ ಧ್ರುವತಾರೆ, ಪದ್ಮಭೂಷಣ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ನಾಡಿನ ನೆಲ-ಜಲ ಮತ್ತು ಭಾಷೆಯ ಹಿತಕ್ಕಾಗಿ ಶ್ರಮಿಸಿದ ಬಂಗಾರದ ಮನುಷ್ಯ ಅಣ್ಣಾವ್ರು ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ದಶಕಗಳ ಕಾಲ ವೈವಿಧ್ಯಮಯ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಅವರ ಕಲಾ ಸೇವೆ ಅನನ್ಯವಾದುದು. ಈ ನಾಡಿಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ" ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರ ಟ್ವೀಟ್
ಮಹಾನ್ ಮಾನವತಾವಾದಿ ಡಾ.ರಾಜಕುಮಾರ್ - ಎಚ್‌ಡಿಕೆ
"ಕನ್ನಡ ಚಿತ್ರರಂಗದ ಮೇರುನಟರು, ನಟ ಸಾರ್ವಭೌಮರು, ನಟನೆಯನ್ನೇ ಉಸಿರನ್ನಾಗಿಸಿಕೊಂಡು ಅದನ್ನೇ ಸಮಾಜ ಸುಧಾರಣೆಯ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದ ಮಹಾನ್ ಮಾನವತಾವಾದಿ ಡಾ.ರಾಜಕುಮಾರ್ ಅವರು. ಅಣ್ಣಾವ್ರ ಪುಣ್ಯಸ್ಮರಣೆಯ ಈ ದಿನದಂದು ಆ ಚೇತನಕ್ಕೆ ನನ್ನ ಭಾವಪೂರ್ಣ ನಮನಗಳನ್ನು ಸಮರ್ಪಿಸುತ್ತೇನೆ" ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ.
ಅಣ್ಣಾವ್ರು ಕನ್ನಡದ ಅಸ್ಮಿತೆ- ಬಿವೈವಿ
"ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಆ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳು. ಕನ್ನಡದ ಅಸ್ಮಿತೆ, ನಾಡಿನ ಸಾಂಸ್ಕೃತಿಕ ಲೋಕದ ಧ್ರುವತಾರೆ 'ಅಣ್ಣಾವ್ರ' ಸ್ಮರಣೆ ಕನ್ನಡಿಗರ ಪಾಲಿಗೆ ಎಂದಿಗೂ ಚೈತನ್ಯದಾಯಕ. ಕಲಾ ಸಾಧನೆಯ ಜೊತೆಗೆ ಸರಳತೆ, ವಿನಯವಂತಿಕೆ ಹಾಗೂ ಬದುಕಿನ ಮೌಲ್ಯಗಳ ಮೂಲಕವೂ ಅವರು ನಾಡಿಗೆ ದಾರಿದೀಪವಾಗಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.