ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಕಾಗೆ ಬಂಗಾರ’ ಲೋಕಕ್ಕೆ ಸ್ವಾಗತ; ʻದುನಿಯಾʼ ಸೂರಿ ನಿರ್ದೇಶನದಲ್ಲಿ ಜೋಡಿಯಾದ ಸೂರ್ಯ ಪ್ರಖ್ಯಾತ್‌ - ರಿ‌ತನ್ಯಾ ವಿಜ‌ಯ ಕುಮಾರ್

Kaage Bangara Movie: ‘ಕಾಗೆ ಬಂಗಾರ’ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕುತೂಹಲ ಕೆರಳಿಸಿದೆ. ನಿರ್ದೇಶಕ ದುನಿಯಾ ಸೂರಿ ತಮ್ಮ ವಿಶಿಷ್ಟ ಸಿನಿಮೀಯ ಸರಣಿಯ ಸೀಕ್ವೆಲ್ ಮೂಲಕ ಮತ್ತೊಮ್ಮೆ ರಕ್ತಸಿಕ್ತ ವಾಸ್ತವ ಹಾಗೂ ಭ್ರಮೆಯ ನಡುವಿನ ಸಂಘರ್ಷವನ್ನು ತೆರೆದಿಟ್ಟಿದ್ದಾರೆ. ಸೂರ್ಯ ಪ್ರಖ್ಯಾತ್ ಹಾಗೂ ದುನಿಯಾ ವಿಜಯ್ ಪುತ್ರಿ ರಿತನ್ಯಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ನಿರ್ದೇಶಕ ʻದುನಿಯಾʼ ಸೂರಿ ಅವರ ಬಹುನಿರೀಕ್ಷಿತ ‘ಕಾಗೆ ಬಂಗಾರ’ ಚಿತ್ರದ ಫಸ್ಟ್ ಲುಕ್ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಯುವ ಪ್ರತಿಭೆಗಳಾದ ಸೂರ್ಯ ಪ್ರಖ್ಯಾತ್ ಹಾಗೂ ರಿತನ್ಯ ವಿಜಯಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ‌ ಈ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಟ್ರಿಲಜಿಯ ಮುಂದುವರಿದ ಭಾಗ

‘ದುನಿಯಾ’, ‘ಜಾಕಿ’, ‘ಕೆಂಡಸಂಪಿಗೆ’, ‘ಟಗರು’, ‘ಪಾಪ್‌ಕಾರ್ನ್ ಮಂಕಿ ಟೈಗರ್’ ಮುಂತಾದ ಚಿತ್ರಗಳ ಮೂಲಕ ರಾ ಹಾಗೂ ನೈಜ ನಿರೂಪಣೆಗೆ ಹೆಸರಾಗಿರುವ ಸೂರಿ, ಇದೀಗ ತಮ್ಮದೇ ಆದ ಸಿನಿಮೀಯ ಜಗತ್ತನ್ನು (Cinematic Universe) ಮತ್ತಷ್ಟು ವಿಸ್ತರಿಸಿದ್ದಾರೆ. ‘ಕಾಗೆ ಬಂಗಾರ’ ಚಿತ್ರವು ‘ಕೆಂಡಸಂಪಿಗೆ’ ಮತ್ತು ‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರಗಳ ಸೀಕ್ವೆಲ್ ಆಗಿದ್ದು, ಸೂರಿ ಅವರ ಜನಪ್ರಿಯ ಟ್ರಿಲಜಿಯ ಮುಂದಿನ ಅಧ್ಯಾಯವಾಗಿ ತೆರೆಗೆ ಬರಲಿದೆ. ಇದು ಹಿಂದಿನ ಘಟನೆಗಳನ್ನು ಹೇಳುವ ‘ಪ್ರೀಕ್ವೆಲ್’ ಅಲ್ಲ, ಬದಲಿಗೆ ಮುಂದುವರಿಸುವ ಪಕ್ಕಾ ಸೀಕ್ವೆಲ್ ಎಂದು ತಂಡ ಸ್ಪಷ್ಟಪಡಿಸಿದೆ.

ಶೀರ್ಷಿಕೆಯ ಗುಟ್ಟು ಬಿಚ್ಚಿಟ್ಟ ಸೂರಿ

ಚಿತ್ರದ ಶೀರ್ಷಿಕೆಯ ಕುರಿತು ಮಾತನಾಡಿರುವ ನಿರ್ದೇಶಕ ಸೂರಿ, "ಕಾಗೆಬಂಗಾರ ಸತ್ಯ ಮತ್ತು ಸುಳ್ಳಿನ ನಡುವೆ ಭ್ರಮೆ ಹುಟ್ಟಿಸುವುದು" ಎಂದು ವಿವರಣೆ ನೀಡಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸೂರಿ, ಈ ಬಾರಿಯೂ ವಾಸ್ತವ ಮತ್ತು ಭ್ರಮೆಯ ನಡುವಿನ ಸಂಘರ್ಷವನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ.

ಹೊಸ ತಲೆಮಾರಿನ ಪ್ರತಿಭೆಗಳು

‘ಜೆಸಿ – ದಿ ಯೂನಿವರ್ಸಿಟಿ’ ಚಿತ್ರದ ಮೂಲಕ ಗುರುತಿಸಿಕೊಂಡಿರುವ ಸೂರ್ಯ ಪ್ರಖ್ಯಾತ್ ಹಾಗೂ ದುನಿಯಾ ವಿಜಯ್‌ ಅವರ ಪುತ್ರಿ ರಿತನ್ಯಾ ವಿಜಯಕುಮಾರ್ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇವರೊಂದಿಗೆ ಪ್ರಶಾಂತ್ ಸಿದ್ದಿ, ನಟೇಶ್ ಹೆಗ್ಡೆ, ನಂದಕಿಶೋರ್, ಅಶ್ವಿನ್ ಕುಮಾರ್ ಎಚ್. ಎಸ್., ಕಾರ್ತಿಕ್, ಪವನ್ ನಾಗೇಶ್, ಮಲ್ಲ, ದಿಲೀಪ್ ಮುಂತಾದವರು ನಟಿಸುತ್ತಿದ್ದಾರೆ.

ಜಿಪಿ ಫೀಚರ್ಸ್‌ ಮತ್ತು ಎಚ್‌ಆರ್‌ಜಿ ಪ್ರೊಡಕ್ಷನ್ಸ್‌ ಬ್ಯಾನರ್‌ಗಳ ಅಡಿಯಲ್ಲಿ ಹರ್ಷಿತ್ ಆರ್. ಗೌಡ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಕಥೆಯನ್ನು ಸುರೇಂದ್ರನಾಥ್ ಮತ್ತು ಅಮ್ರಿ ಕೇಸರಿ ಬರೆದಿದ್ದು, ಚಿತ್ರಕಥೆಯನ್ನು ಅಮ್ರಿ ಕೇಸರಿ, ಸುರೇಂದ್ರನಾಥ್ ರಚಿಸಿದ್ದಾರೆ. ಸಂಭಾಷಣೆಯ ಜವಾಬ್ದಾರಿಯನ್ನು ಸೂರಿ ಹಾಗೂ ಅಮ್ರಿ ಕೇಸರಿ ಹೊತ್ತಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಶೇಖರ್ ಎಸ್. (ಡಿಎಫ್‌ಡಿ) ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಚರಣ್ ರಾಜ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಧ್ರುವ ಸರ್ಜಾ ಜೊತೆಗಿನ ಹೊಸ ಸಿನಿಮಾದಿಂದ ಹೊರಬಂದ ʻದುನಿಯಾʼ ಸೂರಿ; ʻಆಕ್ಷನ್‌ ಪ್ರಿನ್ಸ್‌ʼ ಫ್ಯಾನ್ಸ್‌ಗೆ ನಿರಾಸೆ!

ಫಸ್ಟ್ ಲುಕ್ ಬಿಡುಗಡೆ ಕುರಿತು ಹರ್ಷ ವ್ಯಕ್ತಪಡಿಸಿರುವ ನಿರ್ಮಾಪಕ ಹರ್ಷಿತ್ ಆರ್. ಗೌಡ, "ಪ್ರತಿಯೊಂದು ಸಿನಿಮಾವೂ ಒಂದು ಕನಸಿನೊಂದಿಗೆ ಆರಂಭವಾಗುತ್ತದೆ. ಕೆಲವು ಕಥೆಗಳು ಒಂದೊಂದು ಫ್ರೇಮ್‌ನೊಂದಿಗೆ ತೆರೆದುಕೊಳ್ಳುತ್ತಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತವೆ. ಈಗ ಕಾಯುವಿಕೆ ಮುಗಿದಿದ್ದು, ಪ್ರೇಕ್ಷಕರನ್ನು ‘ಕಾಗೆ ಬಂಗಾರ’ದ ಜಗತ್ತಿಗೆ ಸ್ವಾಗತಿಸುತ್ತಿದ್ದೇವೆ" ಎಂದಿದ್ದಾರೆ. ರಾ ಶೈಲಿಯ ನಿರೂಪಣೆ, ವಿಶಿಷ್ಟ ಸಂಭಾಷಣೆ ಹಾಗೂ ಹೊಸ ಜೋಡಿಯ ಮುಖಾಮುಖಿಯೊಂದಿಗೆ ಮೂಡಿಬರುತ್ತಿರುವ ‘ಕಾಗೆ ಬಂಗಾರ’ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಹೊಸ ಸಂಚಲನ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ.