ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧ್ರುವ ಸರ್ಜಾ ಜೊತೆಗಿನ ಹೊಸ ಸಿನಿಮಾದಿಂದ ಹೊರಬಂದ ʻದುನಿಯಾʼ ಸೂರಿ; ʻಆಕ್ಷನ್‌ ಪ್ರಿನ್ಸ್‌ʼ ಫ್ಯಾನ್ಸ್‌ಗೆ ನಿರಾಸೆ!

Director Suri exits Dhruva Sarja film: ನಿರ್ದೇಶಕ 'ದುನಿಯಾ' ಸೂರಿ ಹಾಗೂ 'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ಸದ್ಯಕ್ಕೆ ರದ್ದಾಗಿದೆ. ಧ್ರುವ ಸರ್ಜಾ ಅಭಿನಯದ 'ಕ್ರಿಮಿನಲ್' ಸಿನಿಮಾ ಚಿತ್ರೀಕರಣ ತೀವ್ರ ವಿಳಂಬವಾಗುತ್ತಿರುವುದರಿಂದ, ಸಮಯ ಮತ್ತು ಹೂಡಿಕೆಯ ಹಿತದೃಷ್ಟಿಯಿಂದ ಸೂರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ʻಆಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಸಿನಿಮಾದಿಂದ ಹೊರಬಂದ 'ದುನಿಯಾ' ಸೂರಿ!

-

Avinash GR
Avinash GR Jul 21, 2026 4:09 PM

ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಿರ್ದೇಶಕ 'ದುನಿಯಾ' ಸೂರಿ ಹಾಗೂ 'ಆಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಮೂಡಿಬರಬೇಕಿದ್ದ ಬಹುನಿರೀಕ್ಷಿತ ಸಿನಿಮಾ ಸದ್ಯಕ್ಕೆ ಕೈಗೂಡುತ್ತಿಲ್ಲ. ಈ ಪ್ರಾಜೆಕ್ಟ್‌ನಿಂದ ನಿರ್ದೇಶಕ ಸೂರಿ ಹೊರಬಂದಿದ್ದು, ಈ ಸುದ್ದಿ ಧ್ರುವ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.

ಧ್ರುವ ಸರ್ಜಾ ಅಭಿನಯದ 'ಕ್ರಿಮಿನಲ್' ಸಿನಿಮಾವನ್ನು ನಿರ್ಮಿಸುತ್ತಿರುವ 'ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿಯೇ ಮನೀಶ್ ಶಾ ಈ ಚಿತ್ರವನ್ನು ಸಹ ನಿರ್ಮಿಸಲು ಪ್ಲಾನ್ ಮಾಡಿದ್ದರು. ಆದರೆ, ಇದೀಗ ಪ್ರಾಜೆಕ್ಟ್ ಸೆಟ್ಟೇರುತ್ತಿಲ್ಲ ಎಂಬುದನ್ನು ಸ್ವತಃ ದುನಿಯಾ ಸೂರಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

Director Suri: ಸೆಟ್ಟೇರಿತು ಸೂರಿ-ಯುವ ಸಿನಿಮಾ; ದೊಡ್ಮನೆ ಕುಡಿಗೆ ದುನಿಯಾ ವಿಜಯ್‌ ಪುತ್ರಿ ನಾಯಕಿ

ಸಿನಿಮಾ ವಿಳಂಬವೇ ನಿರ್ಧಾರಕ್ಕೆ ಕಾರಣ

"ಛಾಯಾಗ್ರಾಹಕ ಸತ್ಯ ಹೆಗಡೆ ಅವರು ನನ್ನನ್ನು ಧ್ರುವ ಸರ್ಜಾ ಅವರಿಗೆ ಪರಿಚಯಿಸಿದರು. ಅಲ್ಲಿಂದ ನಮ್ಮ ತಂಡ ಕೆಲಸ ಪ್ರಾರಂಭಿಸಿತು. ಬೌಂಡ್ ಸ್ಕ್ರಿಪ್ಟ್, ಪಾತ್ರಗಳ ಸ್ಕೆಚ್‌ನಿಂದಿಡಿದು ಬಜೆಟ್, ಶೂಟಿಂಗ್ ಶೆಡ್ಯೂಲ್ ಮತ್ತು ಪ್ಲಾನಿಂಗ್‌ವರೆಗೆ ಎಲ್ಲವನ್ನೂ ಸಿದ್ಧಪಡಿಸಿ ನಿರ್ಮಾಣ ಸಂಸ್ಥೆಗೆ ಕಳುಹಿಸಲಾಗಿತ್ತು. ಹಲವು ಸುತ್ತಿನ ಸಭೆಗಳ ನಂತರ, ನಾವು ಶೂಟಿಂಗ್ ಶುರು ಮಾಡಲು ಸಂಪೂರ್ಣ ಸಜ್ಜಾಗಿದ್ದೆವು" ಎಂದು ದುನಿಯಾ ಸೂರಿ ತಿಳಿಸಿದ್ದಾರೆ.

ಕೆಡಿ ಸಿನಿಮಾ ರಿಲೀಸ್‌ಗೂ ಮುನ್ನವೇ ಧ್ರುವ ಸರ್ಜಾ ಅವರು ʻಕ್ರಿಮಿನಲ್‌ʼ ಸಿನಿಮಾದಲ್ಲಿ ಸಕ್ರಿಯವಾಗಿದ್ದರು. ಆದರೆ, ಆ ಸಿನಿಮಾವು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆಯಂತೆ. "ಧ್ರುವ ಸರ್ಜಾ ಅವರ ಕ್ರಿಮಿನಲ್‌ ಸಿನಿಮಾವು ನಿರೀಕ್ಷಿತ ಸಮಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಒಂದು ತಂಡವಾಗಿ, ಈ ಪರಿಸ್ಥಿತಿ ನಮಗೆ ಮುಂದೆ ಸಾಗಲು ಬಿಡುತ್ತಿಲ್ಲ ಅನಿಸಿತು. ಇಲ್ಲಿ ಹಣದ ಹೂಡಿಕೆಯಿದೆ, ಸಮಯದ ಹೂಡಿಕೆಯಿದೆ, ಸಿನಿಮಾದ ವಿಳಂಬಕ್ಕೆ ನಾನು ಪದೇಪದೇ ಕಾರಣಗಳನ್ನು ನೀಡುತ್ತಿರಲು ಸಾಧ್ಯವಿಲ್ಲ. ನನ್ನ ತಂಡವನ್ನೂ ನಾನು ನೋಡಿಕೊಳ್ಳಬೇಕಿದೆ. ಹೀಗಾಗಿ ಒಂದು ಹಂತದಲ್ಲಿ ನಾನು ದೃಢ ನಿರ್ಧಾರ ತೆಗೆದುಕೊಳ್ಳಬೇಕಾಯಿತು" ಎಂದು ಸೂರಿ ತಿಳಿಸಿದ್ದಾರೆ.

ಸಮಯ ಬಂದಾಗ ಮತ್ತೆ ಶುರು

ಧ್ರುವ ಸರ್ಜಾ ಜೊತೆಗಿನ ಸಿನಿಮಾ ಸದ್ಯಕ್ಕೆ ನಿಂತಿದೆಯಾದರೂ, ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ ಎಂದು ಸೂರಿ ಸ್ಪಷ್ಟಪಡಿಸಿದ್ದಾರೆ. "ಈ ಕಥೆಯನ್ನು ಧ್ರುವ ಸರ್ಜಾ ಅವರಿಗಾಗಿಯೇ ಸಿದ್ಧಪಡಿಸಲಾಗಿದೆ. ಧ್ರುವ ಅವರಿಗೂ ನನ್ನ ಜೊತೆ ಕೆಲಸ ಮಾಡುವ ನಿಜವಾದ ಆಸಕ್ತಿಯಿದೆ. ಆದರೆ ಅವರು ಈ ಸಿನಿಮಾಗೆ ಸಂಪೂರ್ಣ ಸಮಯ ನೀಡಲು ಸಾಧ್ಯವಾದಾಗ ಮಾತ್ರ ಇದು ನಡೆಯಲಿದೆ. ಅವರು ತಮ್ಮ ಪ್ರಸ್ತುತ ಪ್ರಾಜೆಕ್ಟ್‌ಗಳನ್ನು ಮುಗಿಸಿದ ನಂತರ, ಸರಿಯಾದ ಸಮಯ ಬಂದಾಗ ನಾವು ಮತ್ತೆ ಒಂದಾಗುತ್ತೇವೆ" ಎಂದು ‘ದುನಿಯಾ’ ಸೂರಿ ಹೇಳಿದ್ದಾರೆ.

Dhruva Sarja: ದುನಿಯಾ ಸೂರಿ ನಿರ್ದೇಶನದ ಮುಂದಿನ ಚಿತ್ರಕ್ಕೆ ಧ್ರುವ ಸರ್ಜಾ ನಾಯಕ?

ಮತ್ತೆ ಮುನ್ನೆಲೆಗೆ 'ಕಾಗೆ ಬಂಗಾರ'?

ಧ್ರುವ ಸರ್ಜಾ ಸಿನಿಮಾ ಮುಂದೂಡಲ್ಪಟ್ಟ ಬೆನ್ನಲ್ಲೇ, ಸೂರಿ ತಮ್ಮ ಬಹುದಿನಗಳ ಕನಸಿನ ಯೋಜನೆಯಾದ 'ಕಾಗೆ ಬಂಗಾರ' ಚಿತ್ರವನ್ನು ಮತ್ತೆ ಕೈಗೆತ್ತಿಕೊಳ್ಳುವ ಸುಳಿವು ನೀಡಿದ್ದಾರೆ. "ನನ್ನ ಕೈಯಲ್ಲಿ ಯಾವುದೇ ಸಿನಿಮಾ ಶೂಟಿಂಗ್ ಹಂತದಲ್ಲಿ ಇಲ್ಲದಿದ್ದರೂ, ನಾನು ಸದಾ ಸಿನಿಮಾದ ಕೆಲಸಗಳಲ್ಲೇ ತೊಡಗಿರುತ್ತೇನೆ. ನಮ್ಮ ಬಳಿ ಅದ್ಭುತವಾದ ಸ್ಕ್ರಿಪ್ಟ್ ಇದೆ. ಪ್ರತಿಯೊಂದು ಅಡೆತಡೆಯೂ ಒಂದೊಳ್ಳೆಯ ಕಲಿಕೆ. ಮುಂದಿನ ಸಿನಿಮಾದ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ" ಎಂದು ಅವರು ಹೇಳಿದ್ದಾರೆ.