Javara Movie: ʻದುನಿಯಾʼ ವಿಜಯ್ ಹಿರಿಯ ಪುತ್ರಿಯ ಹೊಸ ಸಿನಿಮಾ ಘೋಷಣೆ; ರಿತನ್ಯಾ ಎದುರು ರುದ್ರನಾಗಿ ಮಿಂಚಲಿದ್ದಾರೆ ನಟ ರಿಷಿ
Rithanya Vijay New Movie Javara: ದುನಿಯಾ ವಿಜಯ್ ಅವರ ಹಿರಿಯ ಪುತ್ರಿ ರಿತನ್ಯಾ ಅಧಿಕೃತವಾಗಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಜವರ ಚಿತ್ರದಲ್ಲಿ ರಿತನ್ಯಾ 'ಭೂಮಿ' ಎಂಬ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಲ್ಲಿ ರಿಷಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
-
ʻದುನಿಯಾʼ ವಿಜಯ್ ಅವರ ಹಿರಿಯ ಪುತ್ರಿ ರಿತನ್ಯಾ ಅವರು ಸ್ಯಾಂಡಲ್‌ವುಡ್‌ಗೆ ಅಧಿಕೃತವಾಗಿ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಮೊದಲು ತಂದೆಯ ʻಲ್ಯಾಂಡ್ ಲಾರ್ಡ್ʼ ಸಿನಿಮಾದಲ್ಲಿ ರಿತನ್ಯಾ ನಟಿಸಿದ್ದರೂ ನಾಯಕಿಯಾಗಿ ʻಜವರʼ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಹೀರೋ ಆಗಿ ಅಪರೇಷ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಭೂಮಿ ಎನ್ನುವ ಪಾತ್ರದಲ್ಲಿ ರಿತನ್ಯಾ ಕಾಣಿಸಿಕೊಳ್ಳುತ್ತಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿನಿಯಾಗಿ ರಿತನ್ಯಾ
ʻಜವರʼ ಸಿನಿಮಾದಲ್ಲಿ ರಿತನ್ಯಾ ವಿಜಯ್ ಅವರು ವೈದ್ಯಕೀಯ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ನಾನು ಜವರ ಸಿನಿಮಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ದೊಡ್ಡ ದೊಡ್ಡ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಜೊತೆ ನಟಿಸುತ್ತಿರುವುದು ತುಂಬಾ ಖುಷಿ ಇದೆ. ನಾನು ತುಂಬಾ ಲಕ್ಕಿ ಎನಿಸುತ್ತದೆ" ಎಂದು ರಿತನ್ಯಾ ವಿಜಯ್ ಹೇಳಿದ್ದಾರೆ.
ʻಜವರʼ ಸಿನಿಮಾಕ್ಕೆ ಪ್ರದೀಪ್ ದಳವಾಯ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ʻಯಲಾ ಕುನ್ನಿʼ ಎಂಬ ಸಿನಿಮಾವನ್ನು ಮಾಡಿದ್ದಾರೆ. ಇನ್ನು, ಚಿದಾವೃಷಭ ಅವರು ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ʻಜವರʼ ಸಿನಿಮಾದ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿಅದ್ದೂರಿಯಾಗಿ ನೆರವೇರಿದೆ. ಸ್ಮಶಾನದಲ್ಲಿ ಶವಗಳನ್ನು ಹೂಳುವ ಕೆಲಸ ಮಾಡುತ್ತಿರುವ ನೀಲಮ್ಮ ಎಂಬುವವರು ಜವರ ಸಿನಿಮಾಗೆ ಕ್ಲಾಪ್ ಮಾಡಿದ್ದು ವಿಶೇಷ.
ರಂಗಾಯಣ ರಘು ನಟನೆ
ಜವರ ಚಿತ್ರದ ವಿಶೇಷ ಪಾತ್ರಗಳಲ್ಲಿ ಹಿರಿಯ ನಟ ರಂಗಾಯಣ ರಘು ಮತ್ತು ನಟಿ ಶ್ರುತಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. "ನಾನು ಈ ಸಿನಿಮಾದಲ್ಲಿ ಗೌರಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಶ್ರುತಿ ಅವರ ಜೊತೆ ಮತ್ತೆ ನಟಿಸುತ್ತಿದ್ದೀನಿ. ಪಾತ್ರ ತುಂಬಾ ಅದ್ಭುತವಾಗಿದೆ. ಈ ಸಿನಿಮಾದಲ್ಲಿ ನಾನು ಇರುವ ಜಾಗ ತುಂಬಾ ಪ್ರಶಾಂತವಾಗಿರುತ್ತದೆ. ಶಿವ ಇರುವ ಜಾಗವದು. ಅಂಥ ಅದ್ಭುತ ಪಾತ್ರದಲ್ಲಿ ನಟಿಸುತ್ತಿದ್ದೇನೆ" ಎನ್ನುತ್ತಾರೆ ರಂಗಾಯಣ ರಘು. ರಾಯಲ್ ಮೀನಾಕ್ಷಿ ಎನ್ನುವ ಪಾತ್ರದಲ್ಲಿ ನಟಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. "ನನ್ನ ಪಾತ್ರದ ಬಗ್ಗೆ ತುಂಬಾ ಖುಷಿ ಇದೆ, ಕಥೆ ಕೂಡ ತುಂಬಾ ಚೆನ್ನಾಗಿದೆ. ಬದುಕೆಲ್ಲಾ ಮುಗಿದ ಮೇಲೆ ಹೊರಡುವ ಜಾಗದಲ್ಲಿ ಇರ್ತೀನಿ" ಎಂದು ಶ್ರುತಿ ಹೇಳಿದರು.
ಲ್ಯಾಂಡ್ ಲಾರ್ಡ್ ದುನಿಯಾ ವಿಜಯ್ ಜತೆಯಾದ ʼಡೇರ್ ಡೆವಿಲ್ ಹೀರೋʼ
"ಈ ಸಿನಿಮಾಕ್ಕೆ ನಿರ್ದೇಶನದ ಜೊತೆಗೆ ಸಂಭಾಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಸಿನಿಮಾದ ಕಥೆಗೆ ನಟಿ ಶ್ರುತಿ ಮತ್ತು ರಂಗಾಯಣ ರಘು ಅವರು ತುಂಬಾ ಅವಶ್ಯಕತೆ ಇತ್ತು. ಪಾತ್ರ ತುಂಬಾ ಚೆನ್ನಾಗಿದೆ. ರಿತನ್ಯಾ ಅವರು ತುಂಬಾ ಚೆನ್ನಾಗಿ ನಟಿಸುತ್ತಾರೆ. ಅದನ್ನ ನೋಡಿ ದುನಿಯಾ ವಿಜಯ್ ಅವರಿಗೆ ಕಥೆ ಹೇಳಿದೆ. ಅವರಿಗೆ ಇಷ್ಟ ಆಯ್ತು ʻಮಗಳಿಗೆ ಓಕೆ ಆಗಬೇಕುʼ ಅಂತ ಹೇಳಿದರು. ಬಳಿಕ ರಿತನ್ಯಾ ಕೂಡ ಕಥೆ ಕೇಳಿ ಒಪ್ಪಿಕೊಂಡರು. ರಿಷಿ ತುಂಬಾ ಒಳ್ಳೆಯ ಕಲಾವಿದ" ಎನ್ನುತ್ತಾರೆ ನಿರ್ದೇಶಕ ಪ್ರದೀಪ್. ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಹಾಲೇಶ್ ಛಾಯಾಗ್ರಹಣ ಮಾಡುತ್ತಿದ್ದಾರೆ.