ಸ್ಯಾಂಡಲ್‌ವುಡ್ ‘ಸಲಗ’ ದುನಿಯಾ ವಿಜಯ್ ಸಾರಥ್ಯದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ‘ಸಿಟಿ ಲೈಟ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ವಿನಯ್ ರಾಜ್‌ಕುಮಾರ್ ಹಾಗೂ ವಿಜಯ್ ಪುತ್ರಿ ಮೋನಿಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೇಲರ್ ಅನ್ನು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸೆಪ್ಟೆಂಬರ್ 18 ರಂದು ಬೆಳ್ಳಿತೆರೆಗೆ ಅಪ್ಪಳಿಸಲಿರುವ ಈ ಸಿನಿಮಾದ ಕಥಾಹಂದರ ಹಾಗೂ ರೋಚಕ ತಿರುವುಗಳ ಝಲಕ್ ಟ್ರೇಲರ್‌ನಲ್ಲಿ ಕಂಡಿದ್ದು, ಸಿನಿಪ್ರೇಮಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ.
ಟ್ರೇಲರ್ ನೋಡಿದರೆ ಇದು ಅಪ್ಪಟ ದುನಿಯಾ ವಿಜಯ್ ಶೈಲಿಯ ಕಚ್ಚಾ ಮಾಸ್, ಕ್ರೈಮ್ ಮತ್ತು ರಕ್ತಸಿಕ್ತ ಭೂಗತ ಲೋಕದ ಕಥೆಯೆಂಬುದು ಎದ್ದು ಕಾಣುತ್ತದೆ. ಚಾಕಲೇಟ್ ಬಾಯ್ ಲುಕ್‌ನಿಂದ ಹೊರಬಂದಿರುವ ವಿನಯ್ ರಾಜ್‌ಕುಮಾರ್ ಈ ಚಿತ್ರದಲ್ಲಿ ಎಂದೂ ಕಾಣದ ರಗಡ್ ಮಾಸ್ ಅವತಾರವೆತ್ತಿದ್ದು, ಮೊದಲ ಬಾರಿಗೆ ಕೈಯಲ್ಲಿ ಲಾಂಗ್ ಹಿಡಿದು ಅಬ್ಬರಿಸಿದ್ದಾರೆ. ಇದೇ ವೇದಿಕೆಯಲ್ಲಿ ವಿನಯ್ ಅವರಿಗೆ ‘ಸ್ಯಾಂಡಲ್ ಮಯೂರ’ ಎಂಬ ಹೊಸ ಬಿರುದನ್ನು ನೀಡಲಾಗಿದೆ.
ವಿನಯ್‌ನಲ್ಲಿ ಪ್ರತಿಭೆ ಇದೆ
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, "ಅಂಡರ್‌ವರ್ಲ್ಡ್ ಸಿನಿಮಾಗಳು ಅಂದಾಕ್ಷಣ ಶಿವಣ್ಣ ನೆನಪಾಗುತ್ತಾರೆ ಎಂದು ಜನ ಹೇಳುತ್ತಾರೆ, ಆದರೆ ಇನ್ನು ಮುಂದೆ ನನ್ನ ಜೊತೆಗೆ ವಿನಯ್ ಕೂಡ ನೆನಪಾಗುತ್ತಾನೆ. ಆತ ನನ್ನ ತಮ್ಮನ ಮಗ ಎಂಬ ಕಾರಣಕ್ಕೆ ನಾನು ಹೊಗಳುತ್ತಿಲ್ಲ, ಆತನಲ್ಲಿ ಅಪ್ರತಿಮ ಪ್ರತಿಭೆಯಿದೆ. ವಿಜಯ್ ಅವರು ‘ಸಲಗ’, ‘ಭೀಮ’ದಿಂದ ಹಿಡಿದು ತಾಂತ್ರಿಕವಾಗಿ ಶ್ರೀಮಂತ ಸಿನಿಮಾಗಳನ್ನೇ ನೀಡುತ್ತಾ ಬಂದಿದ್ದು, ಹೊಸಬರಿಗೆ ವೇದಿಕೆ ಕಲ್ಪಿಸುತ್ತಿರುವುದು ಸಂತಸ ತಂದಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗೀತಾ ಶಿವರಾಜ್‌ಕುಮಾರ್ ಅವರು ಮಾತನಾಡಿ, ಈ ಟ್ರೇಲರ್ ನೋಡಿದರೆ ಕಲ್ಟ್ ಕ್ಲಾಸಿಕ್ ‘ಓಂ’ ಚಿತ್ರದ ನೆನಪನ್ನು ಮರುಕಳಿಸುತ್ತದೆ ಎಂದರು.
ವಿನಯ್ ರಾಜ್‌ಕುಮಾರ್ ಏನಂದ್ರು?
ವೇದಿಕೆಯಲ್ಲಿ ಮಾತನಾಡಿದ ನಾಯಕ ವಿನಯ್ ರಾಜ್‌ಕುಮಾರ್, "ಹಾಡು ಮತ್ತು ಟ್ರೇಲರ್‌ಗೆ ಜನ ಈಗಾಗಲೇ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕಷ್ಟಪಟ್ಟು ಬದುಕು ಕಟ್ಟಿಕೊಳ್ಳಲು ಹೋರಾಡುವ ಪ್ರತಿಯೊಬ್ಬರ ಮೇಲೂ ಈ ಸಿನಿಮಾ ಮಾಡಿದ ನಂತರ ನನಗೆ ಗೌರವ ಇಮ್ಮಡಿಯಾಗಿದೆ" ಎಂದು ಅನುಭವ ಹಂಚಿಕೊಂಡರು. ಚೊಚ್ಚಲ ಹೆಜ್ಜೆಯಲ್ಲೇ ಮಹತ್ವದ ಜವಾಬ್ದಾರಿ ಹೊತ್ತಿರುವ ನಟಿ ಮೋನಿಷಾ, ತಮ್ಮ ಮೇಲೆ ನಂಬಿಕೆಯಿಟ್ಟು ಈ ಪಾತ್ರ ನೀಡಿದ ತಂದೆಗೆ ಧನ್ಯವಾದ ಅರ್ಪಿಸಿ, ತಂದೆಯಂತೆ ತಮಗೂ ಪ್ರೇಕ್ಷಕರ ಪ್ರೀತಿ, ಆಶೀರ್ವಾದ ಇರಲಿ ಎಂದು ಕೋರಿದರು.
ಉಮಾಶ್ರೀಗೆ ಮಹತ್ವದ ಪಾತ್ರ
ಚಿತ್ರದ ಮತ್ತೊಂದು ಬಹುದೊಡ್ಡ ಹೈಲೈಟ್ ಎಂದರೆ ಹಿರಿಯ ನಟಿ ಉಮಾಶ್ರೀ ಅವರ ರೀ-ಎಂಟ್ರಿ. ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವ ಅವರು ದುನಿಯಾ ವಿಜಯ್ ಅವರ ಒತ್ತಾಸೆಯ ಮೇರೆಗೆ ಬಣ್ಣ ಹಚ್ಚಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಉಮಾಶ್ರೀ, "ಇಷ್ಟು ದೊಡ್ಡ ಸ್ಟಾರ್ ಕುಟುಂಬದಿಂದ ಬಂದರೂ ವಿನಯ್ ಅವರಲ್ಲಿರುವ ವಿನಮ್ರತೆ ಮತ್ತು ಬದ್ಧತೆ ಅಪರೂಪದ್ದು. ಮಾಯಾನಗರಿ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬರುವ ಯುವಪೀಳಿಗೆಯ ವಾಸ್ತವ ಬದುಕನ್ನು ವಿಜಯ್ ಬಹಳ ನೈಜವಾಗಿ ಕಟ್ಟಿಕೊಟ್ಟಿದ್ದಾರೆ" ಎಂದು ಪ್ರಶಂಸಿಸಿದರು.
ಬಣ್ಣ ಹಚ್ಚಿದ ಮಾಸ್ತಿ
ಚಿತ್ರದಲ್ಲಿ ಖ್ಯಾತ ಸಂಭಾಷಣೆಕಾರ ಮಾಸ್ತಿ ಕೂಡ ನಟಿಸಿದ್ದು, ಶಿವಣ್ಣ ಅಭಿಮಾನಿ ಪುನೀತ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಹಾಗೂ ಶಿವಸೇನಾ ಅವರ ಛಾಯಾಗ್ರಹಣವಿದ್ದು, ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಬಾಕ್ಸ್ ಆಫೀಸ್‌ನಲ್ಲಿ ಹೊಸ ಸಂಚಲನ ಮೂಡಿಸುವ ಎಲ್ಲ ಭರವಸೆಗಳನ್ನು ನೀಡಿದೆ.