ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Duniya Vijay: 'ಪ್ರೀತಿ ಅಪರೂಪ, ಕಳ್ಕೋಬೇಡಿ..'; 'ಸಿಟಿ ಲೈಟ್ಸ್‌' ಬೆಳಕಿನಲ್ಲಿ ಪ್ರೇಮಗೀತೆಗೆ ಹೆಜ್ಜೆ ಹಾಕಿದ ವಿನಯ್‌ ರಾಜ್‌ಕುಮಾರ್‌ - ಮೋನಿಷಾ!

ದುನಿಯಾ ವಿಜಯ್ ನಿರ್ದೇಶನದ ಮೂರನೇ ಚಿತ್ರ ʻಸಿಟಿ ಲೈಟ್ಸ್‌ʼ ಸೆಪ್ಟೆಂಬರ್ 18ರಂದು ರಿಲೀಸ್ ಆಗಲಿದೆ. ಚಿತ್ರದ ನಾಲ್ಕನೇ ಪ್ರೇಮಗೀತೆಯನ್ನು ಯುವ ನಟರು ಬಿಡುಗಡೆ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಮತ್ತು ಮೋನಿಷಾ ನಟನೆಯ ಈ ಚಿತ್ರದ ಹಾಡಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ನಾಗಾರ್ಜುನ ಶರ್ಮಾ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

City Lights Movie: ʻಪ್ರೀತಿ ಅಪರೂಪ, ಕಳ್ಕೋಬೇಡಿ' ಎಂದ ʻದುನಿಯಾʼ ವಿಜಯ್

-

Avinash GR
Avinash GR Aug 25, 2026 7:48 PM

'ಸಲಗ' ಹಾಗೂ 'ಭೀಮ' ಚಿತ್ರಗಳ ಯಶಸ್ಸಿನ ಬಳಿಕ ಸ್ಯಾಂಡಲ್‌ವುಡ್‌ನ 'ಸಲಗ' ಖ್ಯಾತಿಯ ದುನಿಯಾ ವಿಜಯ್ ಕುಮಾರ್ ನಿರ್ದೇಶನದ ಮೂರನೇ ಚಿತ್ರ 'ಸಿಟಿ ಲೈಟ್ಸ್' ಸೆಪ್ಟೆಂಬರ್ 18ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ 4ನೇ ಹಾಡು ಬಿಡುಗಡೆಯಾಗಿದ್ದು, ಪ್ರೀತಿಯ ಕುರಿತಾದ ಈ ಗೀತೆ ಎಲ್ಲರ ಗಮನ ಸೆಳೆದಿದೆ. ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡ ನೈಜ ಜೋಡಿಗಳ ಹಿನ್ನೆಲೆಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.

ಪ್ರೀತಿ ಅಪರೂಪ ಅದನ್ನು ಕಳೆದುಕೊಳ್ಳಬೇಡಿ

‘ಅವರಿವರ ಮಾತು ಕೇಳಿ ಪ್ರೀತಿ ಕಳೆದುಕೊಳ್ಳಬೇಡಿ.. ಪ್ರೀತಿ ಅಪರೂಪ ಅದನ್ನು ಕಳೆದುಕೊಳ್ಳಬೇಡಿ.... ಇವನ ಕಂಡ್ರೆ ಅವಳು ಫಿದಾ.. ಇವಳ ಕಂಡ್ರೆ ಅವನು ಫಿದಾ..’ ಎನ್ನುವ ಸಾಲುಗಳುಳ್ಳ ಈ ಹಾಡನ್ನು ಯುವ ಕಲಾವಿದರಾದ ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ ಹಾಗೂ ಸುಧಾಕರ್ ಗೌಡ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ವಿಜಯ್ ಕುಮಾರ್ ನಿರ್ದೇಶನದ 'ಸಿಟಿ ಲೈಟ್ಸ್' ಚಿತ್ರದ ಈ ಗೀತೆಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕ ಅಂತೋಣಿ ದಾಸ್ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಸಿದ್ದು ಮೂಲಿಮನಿ ಹೇಳಿದ್ದೇನು?

ಹಾಡು ಬಿಡುಗಡೆ ಮಾಡಿ ಮಾತನಾಡಿದ ಯುವ ನಟ ಸಿದ್ದು ಮೂಲಿಮನಿ, "ಹಾಡು ತುಂಬಾ ಮುದ್ದಾಗಿ ಮೂಡಿಬಂದಿದೆ. ಹಾಡು ನೋಡುವಾಗ ನನ್ನ ಪತ್ನಿ ನೆನಪಾದರು. ಚಿತ್ರದ 'ಕಂದಮ್ಮ' ಹಾಡು ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ನಮ್ಮ ಕಾರ್ಯಕ್ರಮಗಳಲ್ಲಿ ನಮ್ಮನ್ನೇ ಗುರುತಿಸುವುದಿಲ್ಲ, ಆದರೆ ಇಂತಹ ದೊಡ್ಡ ವೇದಿಕೆಯಲ್ಲಿ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು" ಎಂದರು.

ಯುವ ಕಲಾವಿದರೇ ಚಿತ್ರರಂಗವನ್ನು ಮುನ್ನಡೆಸುವುದು

ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, "ಯುವ ಕಲಾವಿದರೇ ಮುಂದಿನ ದಿನಗಳಲ್ಲಿ ಚಿತ್ರರಂಗವನ್ನು ಮುನ್ನಡೆಸುವವರು. ನಿಮ್ಮ ಜೊತೆ ನಾವೂ ಬರುತ್ತಿದ್ದೇವೆ, ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗಿ. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡ ನೈಜ ಜೋಡಿಗಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ, ಅವರೇ ನಮಗೆ ಸ್ಫೂರ್ತಿ. ತಂದೆ-ತಾಯಿ ಕಣ್ಣಿಗೆ ಕಾಣುವ ದೇವರು, ಹೀಗಾಗಿಯೇ ಹಾಡಿನಲ್ಲಿ ಅಪ್ಪ-ಅಮ್ಮನ ಫೋಟೋ ಕೂಡ ಹಾಕಿದ್ದೇನೆ" ಎಂದರು.

ಇದು ಹೆಣ್ಣುಮಕ್ಕಳಿಗೆ ಗೌರವ ತರುವಂತಹ ಸಿನಿಮಾ

"ಸಿನಿಮಾ ಮತ್ತು ಸಂಗೀತ ಎಂದಿಗೂ ಮೋಸ ಮಾಡುವುದಿಲ್ಲ. ಹೀಗಾಗಿ ಕಷ್ಟಪಟ್ಟು ಸಿನಿಮಾ ಮಾಡುತ್ತಿದ್ದೇನೆ. ಬೆಂಗಳೂರಿಗೆ ಬಂದು ಜೀವನ ರೂಪಿಸಿಕೊಂಡ ನೈಜ ಜೋಡಿಗಳನ್ನು ಹುಡುಕಿ ಹುಡುಕಿ ಅವರ ಫೋಟೋ ತೆಗೆದು ಈ ಹಾಡಿಗೆ ಬಳಸಿಕೊಳ್ಳಲಾಗಿದೆ. ಆದರೆ ಈ ಹಾಡು ಸಿನಿಮಾದಲ್ಲಿ ಇರುವುದಿಲ್ಲ, ಕೇವಲ ಯೂಟ್ಯೂಬ್‌ನಲ್ಲಿ ಮಾತ್ರ ಲಭ್ಯವಿರಲಿದೆ. 'ಸಲಗ', 'ಭೀಮ' ಚಿತ್ರಗಳಂತೆಯೇ ಇಡೀ ತಂಡ ಶ್ರಮವಹಿಸಿದೆ. ಚಿತ್ರದ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇವೆ. ಇದು ಹೆಣ್ಣುಮಕ್ಕಳಿಗೆ ಗೌರವ ತರುವಂತಹ ಸಿನಿಮಾ" ಎಂದು ದುನಿಯಾ ವಿಜಯ್‌ ತಿಳಿಸಿದರು.

Duniya Vijay: ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್​​ಡೇಟ್!

ನಾನು ಸ್ಟಾರ್ ಅಲ್ಲ, ನಾನೊಬ್ಬ ಕೆಲಸಗಾರ

"ನಾನು ನನ್ನನ್ನು ಸ್ಟಾರ್ ಅಂದುಕೊಂಡಿಲ್ಲ, ನಾನೊಬ್ಬ ಕೆಲಸಗಾರ. ಒಂದು ದಿನ ಪ್ರಶಸ್ತಿ ಬರುತ್ತದೆ, ಅದನ್ನು ಸ್ವೀಕರಿಸಿ ಮತ್ತೆ ಮುಂದಿನ ಕೆಲಸ ಮಾಡಬೇಕು; ನಾನು ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ. ಸತ್ಯವನ್ನು ಸತ್ಯವಾಗಿಯೇ ತೆರೆಮೇಲೆ ತರುವುದು ಸವಾಲಿನ ಕೆಲಸ. ಚಿತ್ರದ್ದು ಇನ್ನೊಂದು ಹಾಡು ಬಾಕಿ ಇದ್ದು, ಎಲ್ಲರ ಸಹಕಾರ ಅಗತ್ಯ. ವಿನಯ್ ರಾಜ್‌ಕುಮಾರ್ ಅತ್ಯುತ್ತಮ ನಟ, ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ" ಎಂದರು ವಿಜಯ್.

ವಿನಯ್‌ ರಾಜ್‌ಕುಮಾರ್‌ ಏನಂದ್ರು?

ನಾಯಕ ನಟ ವಿನಯ್ ರಾಜ್‌ಕುಮಾರ್ ಮಾತನಾಡಿ, "ಈ ಹಾಡನ್ನು ಮೊದಲು ಅಮ್ಮನಿಗೆ ಕೇಳಿಸಿದೆ, ಅವರು ತುಂಬಾ ಖುಷಿಪಟ್ಟರು. 'ಸಿಟಿ ಲೈಟ್ಸ್' ಚಿತ್ರದ ಈ ಹಾಡು ಪ್ರೀತಿಯ ಆಳವನ್ನು ಸುಂದರವಾಗಿ ಕಟ್ಟಿಕೊಟ್ಟಿದೆ. ಪ್ರತಿಯೊಂದು ಜೋಡಿಯೂ ತಮ್ಮದೇ ಆದ ಪ್ರಪಂಚವನ್ನು ಸೃಷ್ಟಿಸಿಕೊಂಡಿರುತ್ತಾರೆ. ವಿಜಯ್ ಕುಮಾರ್ ಅವರ ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಪ್ರೀತಿಗೆ ಒಂದೇ ರೀತಿಯ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ, ಪ್ರೀತಿಗೆ ಸಮಯ ಕೊಡುವುದು ಮುಖ್ಯ. ಚಿತ್ರೀಕರಣ ಸಾಗಿದಂತೆ ಸಿನಿಮಾ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ" ಎಂದು ಹೇಳಿದರು.