ನಟಿ ಗೀತಾ ಭಾರತಿ ಭಟ್ ಅವರು ತಮ್ಮ ಪತಿ ಪತಿ ರಾಜಾರಾಮ್ ಭಟ್ ಜೊತೆ ಜೀ ಕನ್ನಡ ವಾಹಿನಿಯ ‘ಜೋಡಿ ನಂ 1’ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಇತ್ತೀಚೆಗೆ ನಡೆದ ‘ಫೇಸ್ ಯುವರ್ ಪಾರ್ಟ್ನರ್’ ಸುತ್ತು ವೀಕ್ಷಕರ ಗಮನಸೆಳೆದಿದೆ. ದಂಪತಿಗಳು ತಮ್ಮ ಮನಸ್ಸಿನಲ್ಲಿರುವ ನೋವು, ಅಸಮಾಧಾನ ಹಾಗೂ ಪ್ರಶ್ನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕಾಗಿದ್ದ ಈ ಸುತ್ತಿನಲ್ಲಿ, ಕಿರುತೆರೆ ನಟಿ ಗೀತಾ ಭಾರತಿ ಭಟ್ ಹಾಗೂ ಅವರ ಪತಿ ರಾಜಾರಾಮ್ ಭಟ್ ಭಾಗಿಯಾಗಿದ್ದರು. ಅವರ ಆರೋಪ-ಪ್ರತ್ಯಾರೋಪಗಳು ಹೇಗಿದ್ದವು? ಮುಂದೆ ಓದಿ.
ಕಾರ್ಯಕ್ರಮದ ಆರಂಭದಲ್ಲೇ ಪತ್ನಿಯ ಬಗ್ಗೆ ಮಾತನಾಡಿದ ರಾಜಾರಾಮ್ ಭಟ್, "ಈ ಶೋಗೆ ಬಂದಾಗ ನನಗೆ ಮೊದಲು ಇದೊಂದು ಕೌನ್ಸಿಲಿಂಗ್ ಸೆಂಟರ್‌ನಂತೆ ಕಾಣಿಸಿತ್ತು, ಈಗ ರಿಹ್ಯಾಬ್ ಸೆಂಟರ್ ತರಹ ಅನಿಸುತ್ತಿದೆ. ನನಗಿಂತ ಹೆಚ್ಚಾಗಿ ಗೀತಾಗೆ ಈ ಶೋನ ಅವಶ್ಯಕತೆ ಇತ್ತು" ಎಂದರು. ಈ ಮಾತು ಗೀತಾ ಅವರ ಬೇಸರಕ್ಕೆ ಕಾರಣವಾಯಿತು.
ಮತ್ತೆ ಬರ್ತಿದೆ ಜೀ ಕನ್ನಡದ ಜನಪ್ರಿಯ 'ಜೋಡಿ ನಂ.1' ಶೋ; ಜಡ್ಜ್ ಟೀಮ್‌ಗೆ ʻಅಮೃತಧಾರೆʼ ಭೂಮಿ - ಗೌತಮ್ ಎಂಟ್ರಿ
ವೇದಿಕೆಯಲ್ಲೇ ಗೀತಾ ಕೇಳಿದ ಪ್ರಶ್ನೆಗಳ ಸುರಿಮಳೆ
ಪತಿಯ ಮಾತಿಗೆ ನೇರವಾಗಿಯೇ ಪ್ರಶ್ನೆ ಮಾಡಿದ ಗೀತಾ, "ನಿಮ್ಮ ಭಾವನೆಗಳಿಗೆ ಮಾತ್ರ ಇಲ್ಲಿ ಬೆಲೆ ಇದೆ. ನಾನೇನಾದರೂ ಮಾತನಾಡಿದರೆ ‘ಹೆಚ್ಚು ಮಾತನಾಡಬೇಡ’ ಎನ್ನುತ್ತೀರಿ. ನನ್ನ ಭಾವನೆಗಳನ್ನು ಹೇಳಿಕೊಂಡರೆ ‘ಡ್ರಾಮಾ ಮಾಡುತ್ತಿದ್ದಾಳೆ, ದೂರುತ್ತಿದ್ದಾಳೆ’ ಎಂದು ಹೇಳುತ್ತೀರಿ. ನನಗೊಂದು ನ್ಯಾಯ, ನಿಮಗೊಂದು ನ್ಯಾಯ ಏಕೆ?" ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ರಾಜಾರಾಮ್, "ನೀನು ಓವರ್ ಥಿಂಕ್ ಮಾಡುವುದನ್ನು ನಿಲ್ಲಿಸಬೇಕು. ನಾನು ಕೊಡುವ ಸಲಹೆಗಳನ್ನು ನೆಗೆಟಿವ್ ಆಗಿ ತೆಗೆದುಕೊಳ್ಳಬೇಡ" ಎಂದು ಹೆಂಡತಿಗೆ ಕಿವಿಮಾತು ಹೇಳಿದರು.
ಸಂವಹನದ ಕೊರತೆಯೇ ದೊಡ್ಡ ಸಮಸ್ಯೆ
ದಾಂಪತ್ಯದಲ್ಲಿ ಕಮ್ಯೂನಿಕೇಷನ್ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ ಗೀತಾ, "ಯಾವುದೇ ಸಮಸ್ಯೆಯಾದಾಗ ನೀವು ಮಾತನಾಡಿ ಮುಗಿಸಿ, 10 ನಿಮಿಷದ ನಂತರ ಏನೂ ನಡೆದಿಲ್ಲ ಎನ್ನುವಂತೆ ಇರುತ್ತೀರಿ. ಆದರೆ ಆ ಸಮಸ್ಯೆಗೆ ಅಲ್ಲೇ ಒಂದು ಪೂರ್ಣವಿರಾಮ ಬೀಳದಿದ್ದರೆ ನನ್ನ ತಲೆಯಲ್ಲಿ ಅದು ಮತ್ತೆ ಮತ್ತೆ ಓಡುತ್ತಿರುತ್ತದೆ. ನಾನು ಹೇಳುವುದನ್ನು ಕೇವಲ ಆಲಿಸಿ, ವಾದದಲ್ಲಿ ಗೆಲ್ಲಲು ಕೌಂಟರ್ ಕೊಡಬೇಡಿ. ಸಂವಹನ ಸರಿಯಾಗಿದ್ದರೆ ಯಾವುದೇ ತಪ್ಪು ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ" ಎಂದರು. ರಾಜಾರಾಮ್ ಸಹ ಇದನ್ನು ಒಪ್ಪಿಕೊಂಡು, ತಮ್ಮ ಕೋಪ ಕಡಿಮೆ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕು ಎಂದು ಭರವಸೆ ನೀಡಿದರು.
ಬಿಕ್ಕಿ ಬಿಕ್ಕಿ ಅಳುವಾಗ ಗೇಲಿ ಮಾಡಬೇಡಿ
ತಮ್ಮ ಬಾಲ್ಯದ ಕಹಿ ನೆನಪು ಹಾಗೂ ಇತ್ತೀಚಿನ ಪ್ಯಾನಿಕ್ ಅಟ್ಯಾಕ್ ಕುರಿತು ಮಾತನಾಡುತ್ತಾ ಗೀತಾ ಕಣ್ಣೀರಿಟ್ಟರು. "ನಾನು ತುಂಬಾ ದುಃಖದಲ್ಲಿದ್ದಾಗ, ಬಿಕ್ಕಿ ಬಿಕ್ಕಿ ಅಳುತ್ತಿರುವಾಗ ನೀವು ಅದನ್ನು ಅಣಕಿಸಿ ಗೇಲಿ ಮಾಡಿದ್ದೀರಾ. ಅದು ನನಗೆ ತುಂಬಾ ಹರ್ಟ್ ಮಾಡಿದೆ. ಅಂತಹ ಸಮಯದಲ್ಲಿ ನನ್ನನ್ನು ಸಮಾಧಾನ ಮಾಡಿ" ಎಂದರು. ಅದಕ್ಕೆ ರಾಜಾರಾಮ್, "ನಾನು ಸಮಾಧಾನ ಮಾಡಲು ಬಂದಾಗ ನೀನು ನನ್ನ ಕೈ ಬಿಡಿಸಿಕೊಳ್ಳುತ್ತೀಯಾ. ಹಾಗೆ ಮಾಡಿದರೆ 3 ಬಾರಿ ಪ್ರಯತ್ನಿಸಬಹುದು, 4ನೇ ಬಾರಿ ಕಷ್ಟವಾಗುತ್ತದೆ" ಎಂದಾಗ, ಗೀತಾ ಗರಂ ಆಗಿ "ನಾನು ಹತ್ತು ಬಾರಿ ಕೈ ಕಿತ್ತುಕೊಂಡರೂ, ನೀವು 11ನೇ ಬಾರಿಯೂ ನನ್ನ ಕೈ ಹಿಡಿಯಬೇಕು. ನಾನು ನಿಮ್ಮ ಹೆಂಡತಿ" ಎಂದು ಖಡಕ್ ಆಗಿ ಉತ್ತರಿಸಿದರು.
ಜೋಡಿ ನಂ. 1 ಕುರಿತ ಪೋಸ್ಟ್
ಮಾಳವಿಕಾ ಅವಿನಾಶ್ ಸಲಹೆ
ನಂತರ ರಾಜಾರಾಮ್ ಭಟ್ ಮಾತನಾಡಿ, "ಕೋಪದ ಭರದಲ್ಲಿ ಮಾತು ಮೀರಿ ‘ಯೋಗ್ಯತೆ ಇಲ್ಲ, ಕಳ್ಳ’ ಎಂಬಂತಹ ಅವಮಾನಿಸುವ ಮಾತುಗಳನ್ನಾಡಬೇಡ" ಎಂದು ವಿನಂತಿಸಿದರು. ಪತಿಯ ಮಾತಿನಲ್ಲಿದ್ದ ಸತ್ಯವನ್ನು ಒಪ್ಪಿಕೊಂಡ ಗೀತಾ, ವೇದಿಕೆಯ ಮೇಲೆಯೇ ಪತಿಗೆ ಕ್ಷಮೆಯಾಚಿಸಿದರು.
ದಂಪತಿಗಳ ಇಡೀ ವಾದ-ಪ್ರತಿವಾದಗಳನ್ನು ಆಲಿಸಿದ ತೀರ್ಪುಗಾರ್ತಿ, ಹಿರಿಯ ನಟಿ ಮಾಳವಿಕಾ ಅವಿನಾಶ್ ಅವರು ಇಬ್ಬರಿಗೂ ಅತ್ಯಮೂಲ್ಯ ಸಲಹೆ ನೀಡಿದರು. ರಾಜಾರಾಮ್ ಅವರಿಗೆ "ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಿ" ಎಂದು ಹೇಳಿದ ಅವರು, ಗೀತಾಗೆ "ನೀವು ಅಳುವುದನ್ನು ಕಡಿಮೆ ಮಾಡಿ" ಎಂದು ದಾಂಪತ್ಯದ ಸೂತ್ರವನ್ನು ಹೇಳಿಕೊಟ್ಟರು.