ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮತ್ತೆ ಬರ್ತಿದೆ ಜೀ ಕನ್ನಡದ ಜನಪ್ರಿಯ 'ಜೋಡಿ ನಂ.1' ಶೋ; ಜಡ್ಜ್‌ ಟೀಮ್‌ಗೆ ʻಅಮೃತಧಾರೆʼ ಭೂಮಿ - ಗೌತಮ್ ಎಂಟ್ರಿ

ಜೋಡಿ ನಂ.1 ರಿಯಾಲಿಟಿ ಶೋ ಏಪ್ರಿಲ್ 4ರಿಂದ ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ಸಂಚಲನ ಮೂಡಿಸಲಿದೆ. ಅಮೃತಧಾರೆ ಖ್ಯಾತಿಯ ಛಾಯಾ ಸಿಂಗ್, ರಾಜೇಶ್ ನಟರಂಗ, ಲವ್ಲೀ ಸ್ಟಾರ್ ಪ್ರೇಮ್ ಮತ್ತು ಮಾಳವಿಕಾ ಅವಿನಾಶ್ ತೀರ್ಪುಗಾರರಾಗಿ ಆಗಮಿಸುತ್ತಿದ್ದಾರೆ. ಹಿರಿಯ ಮತ್ತು ಕಿರಿಯ ದಂಪತಿಗಳ ನಡುವಿನ ಹೊಂದಾಣಿಕೆ, ಪ್ರೀತಿ ಮತ್ತು ಸವಾಲುಗಳ ಪರೀಕ್ಷೆಯೇ ಈ ಶೋನ ಜೀವಾಳ.

'ಜೋಡಿ ನಂ.1' ಶೋನಲ್ಲಿ ʻಅಮೃತಧಾರೆʼ ಸೀರಿಯಲ್‌ನ ಭೂಮಿ - ಗೌತಮ್ ಜಡ್ಜ್!

-

Avinash GR
Avinash GR Apr 1, 2026 6:56 PM

ಜೀ ಕನ್ನಡ ವಾಹಿನಿಯು ತನ್ನ ವಾರಾಂತ್ಯದ ಮನರಂಜನೆಯನ್ನು ಇನ್ನಷ್ಟು ಹೆಚ್ಚಿಸಲು ರೆಡಿಯಾಗಿದೆ. ಹೊಸ ನಾನ್-ಫಿಕ್ಷನ್ ಶೋ ಜೋಡಿ ನಂ.1 ಏಪ್ರಿಲ್ 4ರಿಂದ ರಾತ್ರಿ 9 ಗಂಟೆಗೆ ಶುರುವಾಗಲಿದೆ. ಜನಪ್ರಿಯ ಹಿರಿತೆರೆ ಮತ್ತು ಕಿರುತೆರೆ ಜೋಡಿಗಳು ತೆರೆಯ ಹಿಂದೆ ಹೇಗೆ ಇರ್ತಾರೆ? ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಎಂಬುದನ್ನು ಈ ರಿಯಾಲಿಟಿ ಶೋ ಮೂಲಕ ಜನರ ಮುಂದಿಡಲು ಜೀ ಕನ್ನಡ ವಾಹಿನಿಯು ರೆಡಿಯಾಗಿದೆ.

ಅನುಭವಸ್ಥ ಮತ್ತು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳನ್ನು ಒಳಗೊಂಡ ಈ ಶೋನಲ್ಲಿ, ಮನರಂಜನೆ, ಭಾವನೆಗಳು ಮತ್ತು ನಮ್ಮ ಜೀವನಕ್ಕೆ ಹತ್ತಿರವಾದ ಕ್ಷಣಗಳು ಕಾಣಸಿಗಲಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ ಎಂದು ಜೀ ಕನ್ನಡ ವಾಹಿನಿಯು ಹೇಳಿಕೊಂಡಿದೆ.

ಜೀ ಕನ್ನಡ ವಾಹಿನಿಯಲ್ಲಿ ʻ45ʼ ಸಿನಿಮಾದ ಮೊದಲ ಪ್ರೀಮಿಯರ್; ಒಟ್ಟಿಗೆ ರಂಜಿಸಲಿದ್ದಾರೆ ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿ

ಅತ್ಯುತ್ತಮ ತೀರ್ಪುಗಾರರ ಬಳಗ

ಜೋಡಿ ನಂ.1 ಶೋನ ದೊಡ್ಡ ಹೈಲೈಟ್‌ ಎಂದರೆ, ಅದ ಅತ್ಯುತ್ತಮ ತೀರ್ಪುಗಾರರ ಬಳಗ. ಖ್ಯಾತ ನಟಿ, ನಿರೂಪಕಿ ಮತ್ತು ರಾಜಕಾರಣಿ ಮಾಳವಿಕಾ ಅವಿನಾಶ್, ಕಿರುತೆರೆಯ ಎಲ್ಲರ ಅಚ್ಚುಮೆಚ್ಚಿನ ಜೋಡಿ ಅಮೃತಧಾರೆಯ ಭೂಮಿ-ಗೌತಮ್ ಅಲಿಯಾಸ್ ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ, ಸ್ಯಾಂಡಲ್‌ವುಡ್‌ನ ಲವ್ಲೀ ಸ್ಟಾರ್‌ ನೆನಪಿರಲಿ ಪ್ರೇಮ್ ಈ ಶೋನಲ್ಲಿ ತೀರ್ಪುಗಾರಾಗಿರಲಿದ್ದು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ತಮ್ಮ ಅಪಾರ ಅನುಭವ ಮತ್ತು ವಿಭಿನ್ನ ವ್ಯಕ್ತಿತ್ವಗಳೊಂದಿಗೆ, ತೀರ್ಪುಗಾರರು ಕೇವಲ ತೀರ್ಪು ನೀಡುವುದಷ್ಟೇ ಅಲ್ಲ, ಉಪಯುಕ್ತ ಸಲಹೆಗಳು, ಸಂಬಂಧಗಳ ಬಗ್ಗೆ ತಮ್ಮ ಅಭಿಪ್ರಾಯಗಳು ಮತ್ತು ಹಾಸ್ಯಭರಿತ ಕ್ಷಣಗಳನ್ನೂ ಹಂಚಿಕೊಳ್ಳುತ್ತಾರೆ. ಇದರಿಂದ ವೀಕ್ಷಕರಿಗೆ ಈ ಶೋ ಇನ್ನಷ್ಟು ಹತ್ತಿರವಾಗುತ್ತದೆ.

Zee Kannada Serial: ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು! ಅಂತ್ಯ ಹಾಡೋ ಸೀರಿಯಲ್‌ಗಳು ಯಾವವು?

ಎಲ್ಲರ ಅಚ್ಚುಮೆಚ್ಚಿನ, ನಕ್ಕು ನಗಿಸುವುದಕ್ಕೆ ಮನೆಮಾತಾದ ಕುರಿ ಪ್ರತಾಪ್ ಮತ್ತು ಶ್ವೇತಾ ಚೆಂಗಪ್ಪ ಅವರು ಈ ಶೋವನ್ನು ನಿರೂಪಣೆ ಮಾಡಲಿದ್ದಾರೆ. ಇವರ ಕಾಮಿಡಿ ಟೈಮಿಂಗ್ ಮತ್ತು ಉತ್ಸಾಹಭರಿತ ಮಾತುಗಳು ಪ್ರತಿ ಎಪಿಸೋಡ್‌ಗೂ ಹೊಸ ಎನರ್ಜಿ ಮತ್ತು ಮನರಂಜನೆಯನ್ನು ನೀಡುತ್ತವೆ.

ಜೋಡಿ ನಂ.1 ಶೋನಲ್ಲಿ ಯಾರೆಲ್ಲಾ ಭಾಗಿಯಾಗಲಿದ್ದಾರೆ?

ಈ ಶೋನಲ್ಲಿ ತಮ್ಮದೇ ಆದ ವೃತ್ತಿರಂಗದಲ್ಲಿ ಹೆಸರು ಮಾಡಿದ ಹಿರಿಯ ಮತ್ತು ಇತ್ತೀಚಿಗೆ ಮದುವೆಯಾದ ಜೋಡಿಗಳು ಭಾಗವಹಿಸಲಿದ್ದಾರೆ.

ರುದ್ರ ಮಾಸ್ಟರ್ – ನಿರೀಕ್ಷಾ

ರಜನಿ-ಅರುಣ್ ಗೌಡ

ಧನರಾಜ್ – ಪ್ರಜ್ಞಾ

ಬಾಳು ಬೆಳಗುಂದಿ – ಮಾಲಾಶ್ರೀ

ನಯನಾ ನಾಗರಾಜ್ – ಸುಹಾಸ್

ಮಿಮಿಕ್ರಿ ಗೋಪಿ – ಉಷಾರಾಣಿ

ಜಗ್ಗಪ್ಪ – ಸುಶ್ಮಿತಾ

ಕೋಟೆ ಪ್ರಭಾಕರ್ – ಮಾಲತಿ

ಗೀತಾ ಭಾರತೀ ಭಟ್ – ರಾಜಾರಾಮ್ ಭಟ್

ಅಭಿಲಾಷ್ – ಅಪೂರ್ವ

ಪ್ರತಿ ಜೋಡಿಯೂ ತಮ್ಮ ಸಂಗಾತಿಯನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ, ಹೊಂದಾಣಿಕೆ ಮತ್ತು ಭಾವನಾತ್ಮಕ ಬಂಧವನ್ನು ಪರೀಕ್ಷಿಸುವ ವಿವಿಧ ಟಾಸ್ಕ್‌ಗಳಲ್ಲಿ ಭಾಗವಹಿಸುತ್ತಾರೆ. ಇದು ವೀಕ್ಷಕರಿಗೆ ಎಮೋಷನಲ್ ಆಗಿ ಹತ್ತಿರವಾಗಲಿದೆ.

ಅದ್ಭುತ ಪರ್ಫಾರ್ಮೆನ್ಸ್, ಸಕ್ಕತ್ ಟಾಸ್ಕ್‌ಗಳು ಮತ್ತು ಪ್ರೀತಿಯ ಕ್ಷಣಗಳ ಸಂಗಮವೇ ಈ 'ಜೋಡಿ ನಂ.1'. ಇದರಲ್ಲಿ ದಂಪತಿಗಳ ನಡುವಿನ ಪ್ರೀತಿ, ನಂಬಿಕೆ ಮತ್ತು ಹೊಂದಾಣಿಕೆಯನ್ನು ಪರೀಕ್ಷಿಸುವ ಆಕರ್ಷಕ ಗೇಮ್‌ಗಳ ಜೊತೆಗೆ ಅದ್ಭುತ ಡಾನ್ಸ್ ಮತ್ತು ಸ್ಕಿಟ್‌ಗಳೂ ಇರುತ್ತವೆ. ಜೋಡಿಗಳು ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ತೋರಿಸುವ ರಾಪಿಡ್-ಫೈರ್ ಗೇಮ್‌ಗಳು ಮತ್ತು ಸವಾಲುಗಳು ಈ ಶೋನ ಹೈಲೈಟ್ ಎಂದು ಜೀ ಕನ್ನಡ ವಾಹಿನಿಯು ಹೇಳಿಕೊಂಡಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ 'ಜೋಡಿ ನಂ.1' ಶೋ ಪ್ರಸಾರವಾಗಲಿದೆ.