ಕನ್ನಡಿಗರ ನೆಚ್ಚಿನ ಮನರಂಜನಾ ವಾಹಿನಿಯಾದ 'ಕಲರ್ಸ್ ಕನ್ನಡ' ಹೊಸದೊಂದು ವಿನೂತನ ಕಾರ್ಯಕ್ರಮದ ಮೂಲಕ ವೀಕ್ಷಕರನ್ನು ಸೆಳೆಯಲು ರೆಡಿಯಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯವಾದ ನಂತರವೂ ಆ ಗುಂಗಿನಲ್ಲೇ ಇರುವ ವೀಕ್ಷಕರಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರವರಿ 14ರಂದು ʻಕಲರ್ಸ್ ದೊಡ್ಮನೆ ಹಬ್ಬʼ ಎಂಬ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ. ಇದರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳೇ ಪ್ರಮುಖ ಆಕರ್ಷಣೆ.
ಫೆ.14ರಂದು ಪ್ರಸಾರವಾಗಲಿರುವ ಕಾರ್ಯಕ್ರಮ
ಈ ಕಲರ್ಸ್ ದೊಡ್ಮನೆ ಹಬ್ಬ ಸಮಾರಂಭವು ಸತತ ಮೂರು ಗಂಟೆಗಳ ಕಾಲ ಪ್ರಸಾರವಾಗಲಿದ್ದು, ಫೆ.14ರ ಶನಿವಾರದಂದು ಕನ್ನಡಿಗರೆಲ್ಲಾ ಮನೆಯಲ್ಲಿಯೇ ಕುಳಿತು ನೋಡಬಹುದಾದಗಿದೆ. ಅಂದು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಲರ್ಸ್ ದೊಡ್ಮನೆ ಹಬ್ಬ ಪ್ರಸಾರವಾಗಲಿದೆ.
ಒಂದೇ ವೇದಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು
ʻಬಿಗ್ ಬಾಸ್ʼ ಕನ್ನಡ ಸೀಸನ್ 12ರ ಎಲ್ಲಾ ಸ್ಪರ್ಧಿಗಳು, ಆ ಶೋನಿಂದ ಹೊರಬಂದ ಮೇಲೆ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೆಯೊಳಗಿನ ಗಂಭೀರ ವಾತಾವರಣದ ಬದಲು ಇಲ್ಲಿ ಕೇವಲ ನಗು, ಹರಟೆ ಮತ್ತು ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ನಕ್ಕು ನಗಿಸುವ ಸಾಕಷ್ಟು ಝಲಕ್‌ಗಳು ಈ ಕಲರ್ಸ್ ದೊಡ್ಮನೆ ಹಬ್ಬದ ಹೈಲೈಟ್.
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
ಭಾಗ್ಯಲಕ್ಷ್ಮೀ ಸೀರಿಯಲ್ ನಟಿ ಹಾಗೂ ನಿರೂಪಕಿ ಸುಷ್ಮಾ ರಾವ್ ತಮ್ಮ ಎಂದಿನ ಲವಲವಿಕೆಯ ನಿರೂಪಣೆಯಿಂದ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳ ಗುಟ್ಟುಗಳನ್ನು ಹೊರಹಾಕುವಲ್ಲಿ ಸುಷ್ಮಾ ಅವರ ಚಾತುರ್ಯ ಇಲ್ಲಿ ಹೈಲೈಟ್ ಆಗಿದೆ.
ಗಿಲ್ಲಿ ನಟನ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್
ಈ ಕಾರ್ಯಕ್ರಮದಲ್ಲಿ ಕೇವಲ ಹಾಡು-ಕುಣಿತ ಅಷ್ಟೇ ಅಲ್ಲದೆ, ಬಿಗ್ ಬಾಸ್ ಮನೆಯ ಟಾಸ್ಕ್‌ಗಳನ್ನು ನೆನಪಿಸುವಂತಹ ತಮಾಷೆಯ ಗೇಮ್‌ಗಳನ್ನು ಸುಷ್ಮಾ ಅವರು ಆಡಿಸಿ ರಂಜಿಸಿದ್ದಾರೆ. ಇದು ಸ್ಪರ್ಧಿಗಳ ನಡುವಿನ ಹಳೆಯ ಕಾಲೆಳೆಯುವ ಗುಣವನ್ನು ಮತ್ತೆ ನೆನಪಿಸಲಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದವರೆಂದರೆ, ಅದು ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ. ಇದೀಗ ಇದೇ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಗಿಲ್ಲಿ ಅಭಿಮಾನಿಗಳಿಗಾಗಿಯೇ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅವರ ಬಿಗ್ ಬಾಸ್ ಜರ್ನಿಯನ್ನು ಸಂಭ್ರಮಿಸುವ ಜೊತೆಗೆ, ಫ್ಯಾನ್ಸ್ ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳು ವೇದಿಕೆ ಮೇಲೆ ತಮ್ಮಿಷ್ಟದ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಬಿಗ್ ಬಾಸ್ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಿಗ್ ಬಾಸ್ ಶೋನಿಂದ ಹೊರಬಂದ ಮೇಲೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನೂ ಕೂಡ ಈ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಇದೆಲ್ಲ ಮನರಂಜನೆಯ ರಸದೌತಣವನ್ನು ಸವಿಯಲು ಕಲರ್ಸ್ ದೊಡ್ಮನೆ ಹಬ್ಬ ಕಾರ್ಯಕ್ರಮ ವೀಕ್ಷಿಸಬೇಕಿದೆ.