ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಲಿವುಡ್‌ ನಟ ಗೋವಿಂದ - ಸುನೀತಾ ಅಹುಜಾ ದಾಂಪತ್ಯ ಕಲಹಕ್ಕೆ ಬಿಗ್ ಟ್ವಿಸ್ಟ್: ವಿಚ್ಛೇದನ ಅರ್ಜಿ ವಾಪಸ್!

ನಟ ಗೋವಿಂದ - ಸುನೀತಾ ಅಹುಜಾ ದಾಂಪತ್ಯದ ಬಿರುಕು ಸುಖಾಂತ್ಯ ಕಂಡಿದ್ದು, ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಸುನೀತಾ ಅಧಿಕೃತವಾಗಿ ಹಿಂಪಡೆದಿದ್ದಾರೆ. ಪುತ್ರ ಯಶವರ್ಧನ್ ಜೊತೆ ಕೋರ್ಟ್‌ಗೆ ಹಾಜರಾಗಿ ಕೇಸ್ ವಾಪಸ್ ಪಡೆದುಕೊಂಡಿದ್ದಾರೆ.

ಬಾಲಿವುಡ್ ಹಿರಿಯ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಇವರ ವೈಮನಸ್ಸು ಯಾವ ಮಟ್ಟಕ್ಕೆ ತಲುಪಿತ್ತೆಂದರೆ, ಪತಿಯಿಂದ ವಿಚ್ಛೇದನ ಕೋರಿ ಸುನೀತಾ ಅವರು ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ಇದೀಗ ಈ ದಂಪತಿ ಬೇರೆಯಾಗುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು, ವಿಚ್ಛೇದನಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುನೀತಾ ವಾಪಸ್‌ ಪಡೆದಿದ್ದಾರೆ.

ಮಗನ ಜೊತೆಗೆ ಕೋರ್ಟ್‌ಗೆ ಬಂದ ಸುನೀತಾ

ಸುನೀತಾ ಅವರು ನ್ಯಾಯಾಲಯದಿಂದ ತಮ್ಮ ವಿಚ್ಛೇದನ ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ ಎಂದು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ದೃಢಪಡಿಸಿದ್ದಾರೆ. ಬುಧವಾರ (ಆ.19) ಮಧ್ಯಾಹ್ನ ಸುನೀತಾ ಅವರು ಪುತ್ರ ಯಶವರ್ಧನ್ ಅಹುಜಾ ಅವರೊಂದಿಗೆ ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ಭೇಟಿ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಆದರೆ, ಅವರು ಕೋರ್ಟ್‌ಗೆ ಆಗಮಿಸಿದ್ದು ಅರ್ಜಿಯನ್ನು ವಾಪಸ್‌ ಪಡೆಯಲು ಎಂಬುದನ್ನು ಮ್ಯಾನೇಜರ್‌ ಸ್ಪಷ್ಟಪಡಿಸಿದ್ದಾರೆ.

ಕಾನೂನುಬದ್ಧವಾಗಿ ಅರ್ಜಿ ವಾಪಸ್

"ಸುನೀತಾ ಅವರ ನಿರ್ಧಾರ ಬದಲಾಗಿದ್ದು, ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆಯಲು ತೀರ್ಮಾನಿಸಿದ್ದಾರೆ. ಈ ಹಿಂದೆ ಅವರೇ ಅರ್ಜಿ ಸಲ್ಲಿಸಿದ್ದರು, ಆದರೆ ಅದರ ಮೇಲೆ ಮುಂದಿನ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಅವರು ಕಾನೂನುಬದ್ಧವಾಗಿ ಪ್ರಕರಣವನ್ನು ವಾಪಸ್ ಪಡೆದಿದ್ದಾರೆ" ಎಂದು ಮ್ಯಾನೇಜರ್ ಶಶಿ ಸಿನ್ಹಾ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಸುನೀತಾ ಅವರು 2024ರ ಡಿಸೆಂಬರ್ 5ರಂದು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ವ್ಯಭಿಚಾರ ಹಾಗೂ ಕ್ರೌರ್ಯದ ಕಾರಣಗಳನ್ನು ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಆ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.

ಪತ್ನಿಗೆ ಎಚ್ಚರಿಕೆ ನೀಡಿದ್ದ ಗೋವಿಂದ

ಈ ವಿಷಯದ ಕುರಿತು ಗೋವಿಂದ ಯಾವುದೇ ಹೇಳಿಕೆ ನೀಡದಿರಲು ತೀರ್ಮಾನಿಸಿದ್ದಾರೆ ಎಂದ ಶಶಿ ಸಿನ್ಹಾ, "ಸಾರ್ವಜನಿಕವಾಗಿ ಇಬ್ಬರ ನಡುವಿನ ಜಗಳ ತೀರಾ ಕೆಟ್ಟ ಹಂತ ತಲುಪಿತ್ತು. ಸುನೀತಾ ತಮ್ಮ ಪತಿಯ ವಿರುದ್ಧ ಕೆಲವು ಅವಹೇಳನಕಾರಿ ಮಾತುಗಳನ್ನಾಡಿದ್ದರು. ಇದಕ್ಕೆ ಪ್ರತಿಯಾಗಿ ಗೋವಿಂದ ಕೂಡ ವಿಡಿಯೋ ಮೂಲಕ 'ನಿಮ್ಮ ಮಿತಿಯಲ್ಲಿ ನೀವಿರಿ' ಎಂದು ಪತ್ನಿಗೆ ಎಚ್ಚರಿಕೆ ನೀಡಿದ್ದರು. ಈ ಘಟನೆಯಿಂದ ಸುನೀತಾ ಅವರ ಹೆಸರಿಗೆ ಕಳಂಕ ಉಂಟಾಯಿತೇ ಹೊರತು ಗೋವಿಂದ ಅವರ ಜನಪ್ರಿಯತೆಗಾಗಲಿ, ಸ್ಟಾರ್‌ಡಮ್‌ಗಾಗಲಿ ಯಾವುದೇ ಧಕ್ಕೆ ಬರಲಿಲ್ಲ. ಈಗ ಎಲ್ಲವೂ ಶಾಂತಿಯುತವಾಗಿ, ಸಂತೋಷದಿಂದ ಬಗೆಹರಿಯುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದಿದ್ದಾರೆ ಶಶಿ ಸಿನ್ಹಾ.

Actor Govinda: ಬಾಲಿವುಡ್‌ನಲ್ಲಿ ಮತ್ತೊಂದು ವಿಚ್ಛೇದನ?; ದಾಂಪತ್ಯ ಜೀವನಕ್ಕೆ ಅಂತ್ಯ ಹಾಡ್ತಾರಾ ಗೋವಿಂದ-ಸುನೀತಾ?

'ಶುಗರ್ ಡ್ಯಾಡಿ' ಕಾಮೆಂಟ್‌

ಇತ್ತೀಚೆಗೆ ನಟಿ ಕೋಮಲ್ ರಾಣಿ ಸ್ವರ್ಣಕಾರ್ ಜೊತೆ ಗೋವಿಂದ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ವಿಡಿಯೋಗೆ ಸುನೀತಾ ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ತಮ್ಮ ಮಗಳ ವಯಸ್ಸಿನ ಹುಡುಗಿಯೊಂದಿಗೆ ಗೋವಿಂದ ಒಡನಾಟ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಗೋವಿಂದ ಅವರನ್ನು ಆಕೆಯ 'ಶುಗರ್ ಡ್ಯಾಡಿ' ಎಂದೂ ಕರೆದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಗೋವಿಂದ, "ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಇರಿ, ನಿಮ್ಮ ಮಿತಿಯನ್ನು ಅರಿತುಕೊಳ್ಳಿ" ಎಂದು ಪತ್ನಿಗೆ ಹೇಳಿದ್ದರು.

39 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ

ಗೋವಿಂದ ಮತ್ತು ಸುನೀತಾ ಮಾರ್ಚ್ 1987ರಲ್ಲಿ ವಿವಾಹವಾಗಿದ್ದು, ಅವರಿಗೆ ಟೀನಾ ಅಹುಜಾ ಎಂಬ ಮಗಳು ಮತ್ತು ಯಶವರ್ಧನ್ ಅಹುಜಾ ಎಂಬ ಮಗನಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಸುನೀತಾ ತಮ್ಮ ವೈವಾಹಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ ನಂತರ ಈ ಜೋಡಿಯ ಸಂಬಂಧದ ಮೇಲೆ ಎಲ್ಲರ ಗಮನ ನೆಟ್ಟಿತ್ತು.