ಕೇವಲ 2 ಕೋಟಿ ರೂಪಾಯಿಗಳ ಸಣ್ಣ ಬಜೆಟ್ನಲ್ಲಿ ನಿರ್ಮಾಣವಾಗಿ, ವಿಶ್ವಾದ್ಯಂತ ಬರೋಬ್ಬರಿ 450 ಕೋಟಿ ರೂಪಾಯಿಗಳಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ 2026ರ ಸರ್ಪೈಸಿಂಗ್ ಬ್ಲಾಕ್ಬಸ್ಟರ್ ಚಿತ್ರವಾಗಿ ‘ಹನುಮಾನ್ ಅಂಶ್’ ಹೊರಹೊಮ್ಮಿದೆ. ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳಿಂದ ಪ್ರೇರಿತವಾದ ಈ ಸಿನಿಮಾ, ನಟ ಶೋಭಿನಾವ್ ಸತ್ಯ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದೆ.
ಆದರೆ, ಇಷ್ಟೊಂದು ದೊಡ್ಡ ಯಶಸ್ಸು ಸಿಕ್ಕರೂ ಬಾಲಿವುಡ್ನ ಯಾವುದೇ ನಿರ್ಮಾಪಕರು ಅಥವಾ ನಿರ್ದೇಶಕರು ತಮಗೆ ಕರೆ ಮಾಡಿ ತಮ್ಮ ನಟನೆಯನ್ನು ಶ್ಲಾಘಿಸಿಲ್ಲ ಎಂಬ ಅಚ್ಚರಿಯ ಸಂಗತಿಯನ್ನು ಸ್ವತಃ ನಟ ಶೋಭಿನಾವ್ ಸತ್ಯ ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಬಾಲಿವುಡ್ನಿಂದ ಯಾರೂ ಕರೆ ಮಾಡಿಲ್ಲ
"ಇಲ್ಲ, ನನಗೆ ಬಾಲಿವುಡ್ನಿಂದ ಯಾರೂ ಫೋನ್ ಮಾಡಿಲ್ಲ. ಆದರೆ ನಾನು ಜನರನ್ನು ನೇರವಾಗಿ ಭೇಟಿಯಾದಾಗ, ‘ನೀವು ಅದ್ಭುತವಾಗಿ ಕೆಲಸ ಮಾಡಿದ್ದೀರಿ, ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ಹಾರೈಸಿದ್ದಾರೆ. ಪ್ರತ್ಯೇಕವಾಗಿ ಫೋನ್ ಕರೆ ಮಾಡುವುದು ಬೇರೆ ವಿಷಯ, ಏಕೆಂದರೆ ಅದಕ್ಕಾಗಿ ಅವರು ನನ್ನ ನಂಬರ್ ಪಡೆದು ನಂತರ ಮಾತನಾಡಬೇಕಾಗುತ್ತದೆ. ಆದರೆ, ಚಿತ್ರರಂಗದ ನಿರ್ದೇಶಕರು ಮತ್ತು ಇತರರ ಮೂಲಕ ನನಗೊಂದು ವಿಷಯ ತಿಳಿದುಬಂದಿದೆ. ಅವರು ಯಾರನ್ನೋ ಭೇಟಿಯಾದಾಗ, ‘ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದು ಅವರಿಗೆ ತಿಳಿಸಿ’ ಎಂಬ ಸಂದೇಶವನ್ನು ನನಗೆ ತಲುಪಿಸಲು ಹೇಳಿದ್ದಾರಂತೆ. ಹೀಗೆ ಜನರಿಂದ ಹೃದಯಸ್ಪರ್ಶಿ ಮೆಚ್ಚುಗೆಯ ಮಾತುಗಳು ನನಗೆ ತಲುಪಿವೆ" ಎಂದು ನಟ ಶೋಭಿನಾವ್ ಸತ್ಯ ಮನಬಿಚ್ಚಿ ಮಾತನಾಡಿದ್ದಾರೆ.
ತಪ್ಪುಗಳನ್ನು ತಿದ್ದುವವರು ಯಾರೂ ಇರಲಿಲ್ಲ
ಚಿತ್ರರಂಗದಲ್ಲಿ ತಾವು ಎದುರಿಸಿದ ಆರಂಭಿಕ ಸಂಕಷ್ಟಗಳನ್ನು ನೆನಪಿಸಿಕೊಂಡ ಅವರು, "ಹಿಂದೆ ನನ್ನ ಯಾವುದೇ ಆಡಿಷನ್ಗೆ ಹೋದರೂ ನನಗೆ ಅಲ್ಲಿಂದ ಪ್ರತಿಕ್ರಿಯೆ ಸಿಗುತ್ತಿರಲಿಲ್ಲ. ನಾನು ಎಲ್ಲಿ ಸುಧಾರಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳಲೂ ಸಹ ಒಂದೇ ಒಂದು ಉತ್ತರ ಬರುತ್ತಿರಲಿಲ್ಲ. ನಾನು ನಟನಾ ಶಿಕ್ಷಕನೂ ಆಗಿದ್ದರಿಂದ, ನನ್ನ ಸುತ್ತಮುತ್ತಲಿನವರು ‘ಸರ್, ನೀವು ತುಂಬಾ ಚೆನ್ನಾಗಿ ನಟನೆ ಮಾಡಿದ್ದೀರಿ, ಆದರೆ ಅವರಿಗೆ ನಿಮ್ಮ ಸಾಮರ್ಥ್ಯ ಅರ್ಥವಾಗುತ್ತಿಲ್ಲ’ ಎನ್ನುತ್ತಿದ್ದರು. ನನ್ನ ವಿದ್ಯಾರ್ಥಿಗಳಾಗಿದ್ದರು ಸಹಜವಾಗಿಯೇ ನನ್ನನ್ನು ಹೊಗಳುತ್ತಿದ್ದರು. ಆದರೆ ನನ್ನ ತಪ್ಪುಗಳನ್ನು ತಿದ್ದುವವರು ಯಾರೂ ಇರಲಿಲ್ಲ" ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.
ಶಾರುಖ್ ಖಾನ್ ನೆನಪಾಗಿದ್ದೇಕೆ?
ತಮಗೆ ನಟನಾಗುವ ಯಾವುದೇ ಪ್ಲ್ಯಾನ್ ಇರಲಿಲ್ಲ ಎಂದಿರುವ ಸತ್ಯ, ‘ಹನುಮಾನ್ ಅಂಶ್’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಬಂದಿದ್ದಾಗಿ ತಿಳಿಸಿದ್ದಾರೆ. ತಮ್ಮ ವೃತ್ತಿಜೀವನದ ಈ ಅನಿರೀಕ್ಷಿತ ತಿರುವನ್ನು ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ಆರಂಭಿಕ ದಿನಗಳಿಗೆ ಹೋಲಿಸಿರುವ ಅವರು, "ಶಾರುಖ್ ಖಾನ್ ಅವರ ಕಥೆಯೂ ಹೀಗೆಯೇ ಇದೆ. ಅವರು ‘ಫೌಜಿ’ ಧಾರಾವಾಹಿಯಲ್ಲಿ ಒಂದು ಸಣ್ಣ ಪಾತ್ರ ಮಾಡುತ್ತಿದ್ದರು. ಅದರಲ್ಲಿ ನಾಯಕನಾಗಿ ನಟಿಸಬೇಕಿದ್ದ ನಿರ್ದೇಶಕರ ಮಗನಿಗೆ ಬೇರೆ ಪ್ರಾಜೆಕ್ಟ್ ಸಿಕ್ಕಿದ್ದರಿಂದ, ಶಾರುಖ್ ಅವರನ್ನು ‘ಫೌಜಿ’ಯ ನಾಯಕನನ್ನಾಗಿ ಮಾಡಲಾಯಿತು. ಕೆಲವೊಮ್ಮೆ ಬದಲಾವಣೆಗಳು ಆಕಸ್ಮಿಕವಾಗಿ ನಡೆಯುತ್ತವೆ. ನನ್ನ ವಿಷಯದಲ್ಲೂ ಅದೇ ಆಯಿತು. ನಾನು ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ, ಆಗ ನಿರ್ದೇಶಕ ವಿಶಾಲ್ ಚತುರ್ವೇದಿ ನೀನೇ ಈ ಚಿತ್ರದ ಹೀರೋ ಎಂದು ನನಗೆ ಹೇಳಿದರು" ಎಂದು ವಿವರಿಸಿದ್ದಾರೆ.
ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ‘ಹನುಮಾನ್ ಅಂಶ್’
"ಆರಂಭದಲ್ಲಿ ನಟನೆ ಬಗ್ಗೆ ಯೋಚಿಸದಿದ್ದರೂ, ಈ ಸಿನಿಮಾ ನನ್ನ ಆರಾಧ್ಯ ದೈವ ನೀಮ್ ಕರೋಲಿ ಬಾಬಾ ಅವರ ಕುರಿತಾಗಿದ್ದರಿಂದ ನಾನು ತಕ್ಷಣವೇ ನಟಿಸಲು ‘ಸರಿ’ ಎಂದು ಒಪ್ಪಿಕೊಂಡೆ" ಎಂದು ನಟ ಸತ್ಯ ತಿಳಿಸಿದ್ದಾರೆ. ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಕಳೆದ ಆಗಸ್ಟ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಇದೀಗ ನವೆಂಬರ್ 27ರಿಂದ ಈ ಚಿತ್ರವು 'ಸೋನಿ ಲಿವ್' ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.