ಹೈದರಾಬಾದ್: ರೊಮ್ಯಾಂಟಿಕ್, ಕ್ಲಾಸ್ ಸಿನಿಮಾಗಳ ಮೂಲಕ ಟಾಲಿವುಡ್‌ನಲ್ಲಿ ಗುರುತಿಸಿಕೊಂಡ ನ್ಯಾಚುರಲ್ ಸ್ಟಾರ್ ಎನಿಸಿಕೊಂಡಿರುವ ನಾನಿ (Actor Nani) ಸದ್ಯ ಮಾಸ್ ಅವತಾರ ತಾಳಿದ್ದಾರೆ. ಮುಂಬರುವ ʼಹಿಟ್ 3ʼ (HIT: The Third Case) ಸಿನಿಮಾದಲ್ಲಿ ಅವರು ಇದುವರೆಗೆ ಕಂಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆ. 24ರಂದು ನಾನಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಚ್ಚಿ ಬೀಳಿಸುವ ಚಿತ್ರದ ಟೀಸರ್ ರಿಲೀಸ್ ಆಗಿದೆ. ತೆಲುಗಿನ ಜತೆಗೆ ವಿವಿಧ ಭಾಷೆಗಳಲ್ಲಿಯೂ ಈ ಚಿತ್ರದ ತೆರೆ ಕಾಣಲಿದ್ದು, ಅವರಿಗೆ ನಾಯಕಿಯಾಗಿ ಸ್ಯಾಂಡಲ್‌ವುಡ್ ನಟಿ, ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ.
ಸೀರಿಯಲ್ ಕಿಲ್ಲರ್‌ನ ಹಿಡಿಯಲು ನಡೆಯುವ ತನಿಖೆಯೇ ಈ ಸಿನಿಮಾದ ಕಥೆ. ಅರ್ಜುನ್ ಸರ್ಕಾರ್ ಆಗಿ ಮಾಸ್ ಅವತಾರದಲ್ಲಿ ನಾನಿ ಅಬ್ಬರಿಸಿದ್ದಾರೆ. 'ಹಿಟ್ 3` - ಇದು ʼಹಿಟ್ʼ ಫ್ರಾಂಚೈಸಿಯಿಂದ ಬರುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಶೈಲೇಶ್ ಕೊಲನು ನಿರ್ದೇಶಿಸುತ್ತಿದ್ದಾರೆ. ʼಹಿಟ್ʼ ಮೊದಲನೇ ಭಾಗದಲ್ಲಿ ವಿಶ್ವಕ್ ಸೇನ್ ನಾಯಕನಾಗಿ ನಟಿಸಿದ್ದಾರೆ. ʼಹಿಟ್ 2ʼರಲ್ಲಿ ಅಡವಿಶೇಷು ಅಭಿನಯಿಸಿದ್ದಾರೆ. ಇದೀಗ 3ನೇ ಫ್ರಾಂಚೈಸಿಯಲ್ಲಿ ನಾನಿ ಸಖತ್ ರಡಗ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗು ಜತೆಗೆ ಕನ್ನಡ, ತಮಿಳು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಟೀಸರ್ ರಿಲೀಸ್ ಮಾಡಲಾಗಿದೆ. ನಾನಿಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಗಮನ ಸೆಳೆದಿದ್ದಾರೆ. ಪ್ರಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು, ಮಿಕ್ಕಿ ಜೆ. ಮೇಯರ್ ಸಂಗೀತ, ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಹಾಗೂ ಕಾರ್ತಿಕ್ ಶ್ರೀನಿವಾಸ್ ಸಂಕಲನ ʼಹಿಟ್ 3ʼ ಚಿತ್ರಕ್ಕಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಮೇ 1ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.
ವಿವಿಧ ಪ್ರಾಜೆಕ್ಟ್‌ಗಳಲ್ಲಿ ನಾನಿ ಬ್ಯುಸಿ
ಸದ್ಯ ನಾನಿ ʼಹಿಟ್ 3ʼ ಚಿತ್ರದ ಜತೆಗೆ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಶ್ರೀಕಾಂತ್ ಒಡೆಲಾ ಆ್ಯಕ್ಷನ್ ಹೇಳುತ್ತಿರುವ ʼದಿ ಪಾರಡೈಸ್ʼ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಬಿಗ್ ಅಪ್‌ಡೇಟ್ ಮಾ. 3ರಂದು ಹೊರ ಬೀಳಲಿದೆ. ಇದರ ಜತೆಗೆ ಸುಜಿತ್ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಇದರ ಟೈಟಲ್ ಇನ್ನಷ್ಟೇ ಫಿಕ್ಸ್ ಆಗಬೇಕಿದೆ.
ಈ ಸುದ್ದಿಯನ್ನೂ ಓದಿ: Actress Sreenidhi Shetty: ಈಶ ಗ್ರಾಮೋತ್ಸವಕ್ಕೆ ಸಾಕ್ಷಿಯಾದ ಕೆಜಿಎಫ್ ಸಿನಿಮಾ ನಟಿ ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿ ಕೈಯಲ್ಲಿದೆ ಹಲವು ಚಿತ್ರ
ಅಳೆದು ತೂಗಿ ಚಿತ್ರಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಶ್ರೀನಿಧಿ ಶೆಟ್ಟಿ ಸದ್ಯ ವಿವಿಧ ಪ್ರಾಜೆಕ್ಟ್‌ಗಳಲ್ಲಿ ನಿರತರಾಗಿದ್ದಾರೆ. ಸಿದ್ದು ಜೊನ್ನಾಲಗಡ್ಡ ಅವರ ʼತೆಲುಸ ಕದಾʼ ಚಿತ್ರದಲ್ಲಿ ಶ್ರೀನಿಧಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೀರಜ ಕೊನ ಇದನ್ನು ನಿರ್ದೇಶಿಸುತ್ತಿದ್ದಾರೆ. ಇದರೊಂದಿಗೆ ರಜನಿಕಾಂತ್ ಅವರ ʼಜೈಲರ್ 2ʼ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ರಜನಿಕಾಂತ್ ಮಗಳ ಪಾತ್ರಕ್ಕೆ ಅವರು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬೀಳಬೇಕಿದೆ. ಮಾತ್ರವಲ್ಲ ಶ್ರೀನಿಧಿ ಶೆಟ್ಟಿ ಅವರು ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.