ಬರೋಬ್ಬರಿ 250 ದಿನಗಳ ಶೂಟಿಂಗ್, 10 ಕೋಟಿ ರೂ. ವೆಚ್ಚದಲ್ಲಿ ಅರಮನೆ ಸೆಟ್; ʼಕಾಂತಾರ: ಚಾಪ್ಟರ್ 1' ಚಿತ್ರಕ್ಕಾಗಿ ರಿಷಬ್ ಆ್ಯಂಡ್ ಟೀಂನ ಪರಿಶ್ರಮ ಹೇಗಿತ್ತು?
Kantara: Chapter 1 Trailer: ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್ 1ʼ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಹೊಂಬಾಳೆ ಫಿಲ್ಮ್ಸ್‌ನ ಅದ್ಧೂರಿ ಬಜೆಟ್‌ನ ಈ ಚಿತ್ರದಲ್ಲಿ ರಿಷಬ್ ಸೆಟ್ಟಿ ಮತ್ತು ರುಕ್ಮಿಣಿ ವಸಂತ್ ಮಿಂಚಿದ್ದಾರೆ. ಈಗಾಗಲೇ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದ್ದು, ಚಿತ್ರತಂಡದ ಪರಿಶ್ರಮದ ಬಗ್ಗೆ ತಿಳಿದು ಬಂದಿದೆ.

-

ಬೆಂಗಳೂರು: ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತು ಕಾಯುವಂತೆ ಮಾಡಿದ ಬಹುನಿರೀಕ್ಷಿತ ʼಕಾಂತಾರ ಚಾಪ್ಟರ್ 1ʼ ಚಿತ್ರದ ಟ್ರೈಲರ್ (Kantara: Chapter 1 Trailer) ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೇ ಹೊತ್ತಲ್ಲಿ ಕೋಟಿ ಕೋಟಿ ವೀಕ್ಷಣೆ ಕಂಡು ಸ್ಯಾಂಡಲ್‌ವುಡ್‌ನ ಛಾಪನ್ನು ಜಾಗತಿಕ ಮಟ್ಟಕ್ಕೆ ಮತ್ತೊಮ್ಮೆ ಕೊಂಡೊಯ್ದಿದೆ. ಕೆಲವು ದಿನಗಳ ಹಿಂದೆ ಮೇಕಿಂಗ್ ವಿಡಿಯೊವನ್ನು ರಿಲೀಸ್ ಮಾಡಿ ಪ್ರೇಕ್ಷಕರಿಗೆ ಚಿತ್ರತಂಡದ ಪರಿಶ್ರಮದ ಝಲಕ್ ತೋರಿಸಲಾಗಿತ್ತು. ಇದೀಗ ರಿಷಬ್ ಶೆಟ್ಟಿ (Rishab Shetty) ಆ್ಯಂಡ್ ಟೀಂ ಈ ಚಿತ್ರಕ್ಕಾಗಿ 3 ವರ್ಷ ಯಾವ ರೀತಿ ಸಿದ್ಧತೆ ಮಾಡಿಕೊಂಡಿತ್ತು, ಯಾವ ರೀತಿ ಕಾರ್ಯ ನಿರ್ವಹಿಸಿತ್ತು ಎನ್ನುವ ವಿವರ ಒಂದೊಂದಾಗಿ ಹೊರ ಬೀಳುತ್ತಿದೆ.
2022ರಲ್ಲಿ ಸದ್ದಿಲ್ಲದೆ ಬಂದ ʼಕಾಂತಾರʼ ಬಾಕ್ಸ್ ಆಫೀಸ್‌ನಲ್ಲಿ ಹೊಸದೊಂದು ದಾಖಲೆ ಬರೆಯುವ ಜತೆಗೆ ವಿಮರ್ಶಕರಿಂದಲೂ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಈ ಚಿತ್ರ ಯಶಸ್ಸಾದ ಬೆನ್ನಲ್ಲೇ ರಿಷಬ್ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಆಗಿ ʼಕಾಂತಾರ ಚಾಪ್ಟರ್ 1ʼ ಘೋಷಿಸಿದ್ದರು. ಆದರೆ ತಾವು ನಿರ್ದೇಶಿಸಿ, ನಟಿಸುವುದನ್ನು ಬಿಟ್ಟರೆ ಬೇರೆ ಯಾವೆಲ್ಲ ಕಲಾವಿದರು ಅಭಿನಯಿಸುತ್ತಿದ್ದಾರೆ ಎನ್ನುವ ರಹಸ್ಯವನ್ನು ಬಹಿರಂಗಪಡಿಸಿರಲಿಲ್ಲ. ಜತೆಗೆ ಶೂಟಿಂಗ್ ಸ್ಥಳದ ಚಿಕ್ಕ ಮಾಹಿತಿಯೂ ಹೊರ ಬಿದ್ದಿರಲಿಲ್ಲ. ಅದಾದ ಬಳಿಕ ಚಿತ್ರತಂಡ ಮೇಕಿಂಗ್ ವಿಡಿಯೊ ಹಂಚಿಕೊಂಡಿತ್ತು.
ʼಕಾಂತಾರ ಚಾಪ್ಟರ್ 1ʼ ಚಿತ್ರದ ಟ್ರೈಲರ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Kantara Chapter 1 Trailer: ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ʼಕಾಂತಾರ ಚಾಪ್ಟರ್ 1ʼ ಟ್ರೈಲರ್; ರಿಲೀಸ್ ಕೆಲ ಹೊತ್ತಲ್ಲೇ 4 ಕೋಟಿ ವ್ಯೂವ್ಸ್
ಸುಮಾರು 250ಕ್ಕೂ ಹೆಚ್ಚು ದಿನಗಳ ಕಾಲ ʼಕಾಂತಾರ ಚಾಪ್ಟರ್ 1ʼ ಚಿತ್ರದ ಶೂಟಿಂಗ್ ನಡೆದಿದೆ. ಜತೆಗೆ ಕನ್ನಡದ ಅತೀ ದೊಡ್ಡಮೇಕಿಂಗ್ ಸಿನಿಮಾ ಎನಿಸಿಕೊಂಡಿದೆ. ಕನಸಿನ ʼಕಾಂತಾರʼದ ಸಾಕಾರಕ್ಕಾಗಿ ರಿಷಬ್ ಬೆವರಿನ ಜತೆ ರಕ್ತವನ್ನು ಹರಿಸಿದ್ದಾರೆ ಎಂದಿದೆ ಚಿತ್ರತಂಡದ ಮೂಲಗಳು. ವಿಶೇಷ ಎಂದರೆ ರಿಷಬ್ ಕೆರಿಯರ್‌ನ ಅತೀ ದೊಡ್ಡ ಬಜೆಟ್‌ನ ಚಿತ್ರ ಇದು ಎನ್ನುವುದು ಮತ್ತೊಂದು ವಿಶೇಷ.
ʼಕಾಂತಾರʼ ಪ್ರೀಕ್ವೆಲ್‌ಗಾಗಿ ಪ್ರತಿದಿನ 1,000-1,200ಕ್ಕೂ ಹೆಚ್ಚು ಜನರು ಕೆಲಸ ಮಾಡಿದ್ದಾರೆ. ಇನ್ನು ಯುದ್ಧ ಮತ್ತು ಬಂದರು ದೃಶ್ಯಕ್ಕಾಗಿ ತಿಂಗಳುಗಟ್ಟಲೆ ಶೂಟಿಂಗ್ ನಡೆಸಲಾಗಿದೆ. ಚಿತ್ರಕ್ಕಾಗಿ ದೇಶದ ಎರಡನೇ ಅತೀ ದೊಡ್ಡ ಎಸಿ ಫ್ಲೋರ್ ಕೂಡ ಹಾಕಲಾಗಿತ್ತು. ಅಲ್ಲದೆ 120 ಅಡಿ ಉದ್ದ, 220 ಅಡಿ ಅಗಲದಲ್ಲಿ ಬಾಂಗ್ರ ಅರಮನೆಯನ್ನು ನಿರ್ಮಿಸಲಾಗಿತ್ತು.
ಅರಮನೆ ಸೆಟ್‌ಗೆ 10 ಕೋಟಿ ರೂ. ಖರ್ಚು
ಹೊಂಬಾಳೆ ಫಿಲ್ಮ್ಸ್ ಅದ್ಧೂರಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿದ್ದು, ಅರಮನೆ ಪೂರ್ತಿ ಎಸಿ ಫ್ಲೋರ್ ಸೆಟ್ ಹಾಕಲಾಗಿತ್ತು. ಈ ಅರಮನೆ ಸೆಟ್‌ಗಾಗಿ ಬರೋಬ್ಬರಿ 10 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಶತಮಾನಗಳ ಹಿಂದಿನ, ರಾಜಾಡಳಿತದ ಕಾಲಘಟ್ಟದಲ್ಲಿ ಕಥೆ ಸಾಗುವುದಿಂದ ಕಲಾವಿದರ ಉಡುಗೆ-ತೊಡುಗೆಯನ್ನು ಕೂಡ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಚಿತ್ರದ ಕಾಸ್ಟ್ಯೂಮ್‌ಗಾಗಿ ಸೆಟ್‌ನಲ್ಲಿ ಪ್ರತಿದಿನ 40 ಟೈಲರ್, 30 ವಸ್ತ್ರ ವಿನ್ಯಾಸಕರು ಕೆಲಸ ಮಾಡುತ್ತಿದ್ದರು.
ಇನ್ನು ಶೂಟಿಂಗ್ ಸೆಟ್‌ನಲ್ಲಿ ಊಟದ ವ್ಯವಸ್ಥೆಗಾಗಿ ಪ್ರತಿದಿನ 50 ಭಟ್ರು ಹಾಗೂ 70ಕ್ಕೂ ಹೆಚ್ಚು ಪ್ರೊಡಕ್ಷನ್ ಹುಡುಗರು ಕಾರ್ಯ ನಿರ್ವಹಿಸಿದ್ದಾರೆ. ಸೆಟ್‌ನಲ್ಲಿ ಕೆಲಸ ಮಾಡುವವರಿಗೆ 10 ಲಕ್ಷ ರೂ. ವಿಮೆಯನ್ನೂ ಮಾಡಿಸಲಾಗಿತ್ತು. ಕೊಲ್ಲೂರು, ಕುಂದಾಪುರ, ಕೆರಾಡಿ, ತೀರ್ಥಹಳ್ಳಿ ಸುತ್ತಮುತ್ತಲಿನ ಕಾಡುಗಳಲ್ಲಿ, ಗ್ರಾಮಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ನೈಜ ಕಾಡಿನಲ್ಲಿಯೇ ಚಿತ್ರೀಕರಣ ಮಾಡಿದ್ದು ವಿಶೇಷ. ಒಟ್ಟಿನಲ್ಲಿ ಚಿತ್ರವೊಂದು ದೃಶ್ಯ ಕಾವ್ಯವವಾಗಿ ಅರಳುವ ಹಿಂದೆ ಅದೆಷ್ಟೋ ಜನರ ಪರಿಶ್ರಮ, ಅವಿರತ ದುಡಿಮೆ ಇದೆ. ಅದರ ಝಲಕ್ ಟ್ರೈಲರ್‌ನಲ್ಲಿ ಗೊತ್ತಾಗಿದೆ.