ಬೆಂಗಳೂರು, ಅ. 30: ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಿಸಿರುವ 'ಕಾಂತಾರ ಚಾಪ್ಟರ್ 1' (Kantara Chapter 1) ಚಿತ್ರ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಕಿಂಗ್ ಎನಿಸಿಕೊಂಡಿದೆ. ಹಲವು ದಾಖಲೆಗಳನ್ನು ಬರೆದು, ಭಾರತದಾದ್ಯಂತ ತನ್ನ ಅಬ್ಬರವನ್ನು ಮುಂದುವರಿಸಿದೆ. ಅಕ್ಟೋಬರ್ 2ರಂದು ತೆರೆಕಂಡ ಈ ಚಿತ್ರ ಬರೀ ಕರ್ನಾಟಕದಲ್ಲಿಯೇ 250 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅಲ್ಲದೆ ಜಾಗತಿಕವಾಗಿ 850 ಕೋಟಿ ರೂ. ದೋಚಿಕೊಂಡು ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಸಿನಿಮಾ ಎನಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದೀಗ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ವಿಶೇಷ ಕೊಡುಗೆ ಘೋಷಿಸಿದೆ.
'ಕಾಂತಾರ ಚಾಪ್ಟರ್ 1' ಸಿನಿಮಾದ ಟಿಕೆಟ್ ದರಗಳನ್ನು ಗಣನೀಯವಾಗಿ ಇಳಿಸಲಾಗಿದೆ. ಅಕ್ಟೋಬರ್ 31ರಿಂದ ಇದು ಜಾರಿಗೆ ಬರಲಿದೆ. ಅದರಂತೆ ಸಿಂಗಲ್ ಸ್ಕ್ರೀನ್‌ನ ಟಿಕೆಟ್ ದರ 99 ರೂ. ಮತ್ತು ಮಲ್ಟಿಪ್ಲೆಕ್ಸ್ ಟಿಕೆಟ್ ದರ 150 ರೂ. ನಿಗದಿಪಡಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Kantara: Chapter 1: ʼಕಾಂತಾರʼ ಸಿನಿಮಾ ಸೆಟ್‌ನಲ್ಲಿ ಒಂದೇ ಬಾರಿಗೆ 2 ಸಾವಿರ ಕಲಾವಿದರು ಹೇಗಿರುತ್ತಿದ್ದರು? ಸಹನಟರು ಈ ಬಗ್ಗೆ ಏನಂದ್ರು?
2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ತನ್ನ ಮಣ್ಣಿನ ಕಥೆ, ಅದ್ಭುತ ದೃಶ್ಯ ವೈಭವ ಹಾಗೂ ಕಲಾವಿದರ ಅತ್ಯುತ್ತಮ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದಿದೆ. ರಿಲೀಸ್ ಆಗಿ 28 ದಿನ ಕಳೆದಿದ್ದು, ಈಗಲೂ ಹಲವು ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
'ಕಾಂತಾರ ಚಾಪ್ಟರ್ 1' ಚಿತ್ರದ ಸ್ಪಾನಿಷ್ ಆವೃತ್ತಿಯ ಟ್ರೈಲರ್:
ನಾಳೆ ಸ್ಪಾನಿಷ್, ಇಂಗ್ಲಿಷ್ ಆವೃತ್ತಿ ಬಿಡುಗಡೆ
ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಿ ಮೋಡಿ ಮಾಡಿರುವ ʼಕಾಂತಾರ ಚಾಪ್ಟರ್ 1' ಇದೀಗ ವಿದೇಶ ಭಾಷೆಗಳಿಗೂ ವಿಸ್ತರಿಸಿದೆ. ಇಂಗ್ಲಿಷ್ ಮತ್ತು ಸ್ಪಾನಿಷ್ ಆವೃತ್ತಿ ಅಕ್ಟೋಬರ್ 31ರಂದು ತೆರೆಗೆ ಬರಲಿದೆ. ಆ ಮೂಲಕ ತುಳನಾಡ ಸಂಸ್ಕೃತಿ, ದೇಸಿ ಆಚಾರ-ವಿಚಾರ ಜಾಗತಿಕ ಪ್ರೇಕ್ಷಕರ ಬಳಿ ತಲುಪಲಿದೆ.
1 ಸಾವಿರ ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ
ಸದ್ಯ ಚಿತ್ರ 850 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದ್ದು, ಇಂಗ್ಲಿಷ್, ಸ್ಪಾನಿಷ್ ಡಬ್ ರಿಲೀಸ್ ಆದ ಬಳಿಕ 1 ಸಾವಿರ ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಈ ಮಧ್ಯೆ ಚಿತ್ರದ ಒಟಿಟಿ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಅಕ್ಟೋಬರ್ 31ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗಲಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ವೀಕ್ಷಿಸಬಹುದು. ಅದಾಗ್ಯೂ ಹಿಂದಿ ಆವೃತ್ತಿಯ ಒಟಿಟಿ ರಿಲೀಸ್ ಡೇಟ್ ಇನ್ನೂ ಘೋಷಿಸಿಲ್ಲ.
ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ಮೊದಲ ಬಾರಿಗೆ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದು, ಮುಖ್ಯ ಪಾತ್ರಗಳಲ್ಲಿ ಜಯರಾಮ್, ಗುಲ್ಸನ್ ದೇವಯ್ಯ, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ ಮತ್ತಿತರರು ನಟಿಸಿದ್ದಾರೆ.